ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾನ್‌ಸ್ಟೇಬಲ್‌ಗಳ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಕಾಂಗ್ರೆಸ್‌ ಶಾಸಕಿಯ ಪುತ್ರ; ವಿಡಿಯೊ ಇಲ್ಲಿದೆ

ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಇಬ್ಬರು ಪೊಲೀಸರ ಮೇಲೆ ವಾಹನ ಹರಿಸಿ ಪಾರಾರಿಯಾಗಲು ಯತ್ನಿಸಿದ್ದ ಕಾಂಗ್ರೆಸ್ ಶಾಸಕಿಯ ಪುತ್ರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪುಷ್ಪರಾಜ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.

ಕಾನ್‌ಸ್ಟೇಬಲ್‌ಗಳ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಶಾಸಕಿಯ ಪುತ್ರ

Profile Ramesh B Jul 16, 2025 2:55 PM

ಭೋಪಾಲ್‌: ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಇಬ್ಬರು ಪೊಲೀಸರ ಮೇಲೆ ವಾಹನ ಹರಿಸಿ ಪಾರಾರಿಯಾಗಲು ಯತ್ನಿಸಿದ್ದ ಕಾಂಗ್ರೆಸ್ ಶಾಸಕಿಯ ಪುತ್ರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಜೋಬತ್‌ನ ಕಾಂಗ್ರೆಸ್ ಶಾಸಕಿ ಸೇನಾ ಪಟೇಲ್ (Sena Patel) ಪುತ್ರ ಪುಷ್ಪರಾಜ್‌ ಸಿಂಗ್‌ (Pushpraj Singh) ಸದ್ಯ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

ಅಲಿರಾಜ್‌ಪುರ ಬಸ್ ನಿಲ್ದಾಣದ ಬಳಿ ನೋಂದಣಿ ಫಲಕವಿಲ್ಲದೆ ವೇಗವಾಗಿ ಚಲಿಸುತ್ತಿದ್ದ ಎಸ್‌ಯುವಿಯನ್ನು ತಡೆಯಲು ಇಬ್ಬರು ಕಾನ್‌ಸ್ಟೆಬಲ್‌ಗಳು ಪ್ರಯತ್ನಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ ಈ ಹಿಂದೆ ವೈರಲ್‌ ಆಗಿತ್ತು. ಎಸ್‌ಯುವಿಯನ್ನು ಚಲಾಯಿಸುತ್ತಿದ್ದ ಪುಷ್ಪರಾಜ್‌ ಸಿಂಗ್‌ ವೇಗವನ್ನು ಹೆಚ್ಚಿಸಿ ಪೊಲೀಸರಿಗೆ ಗುದ್ದಲು ಯತ್ನಿಸಿದ್ದ. ಇದು ಕೂಡ ವಿಡಿಯೊದಲ್ಲಿ ಕಂಡು ಬಂದಿತ್ತು.

ಈ ವೇಳೆ ಇಬ್ಬರು ಕಾನ್‌ಸ್ಟೆಬಲ್‌ಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ವೇಗವಾಗಿ ಸಾಗಿದ್ದ ಕಾರು ಬಳಿಕ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಕಾನ್‌ಸ್ಟೆಬಲ್‌ ಪೈಕಿ ರಾಕೇಶ್ ಗುಜಾರಿಯಾ ಗಾಯಗೊಂಡಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನ್‌ಸ್ಟೆಬಲ್‌ಗಳ ಹೇಳಿಕೆಯ ಆದಾರದ ಮೇಲೆ ಪುಷ್ಪರಾಜ್‌ ಸಿಂಗ್‌ನನ್ನು ಗುರುತಿಸಲಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Byrathi Basavaraj: ರೌಡಿಶೀಟರ್‌ ಕೊಲೆ ಕೇಸ್‌; ಬಂಧನ ಭೀತಿಯಿಂದ ಕೋರ್ಟ್‌ ಮೊರೆ ಹೋದ ಶಾಸಕ ಭೈರತಿ ಬಸವರಾಜ್

ಅಲಿರಾಜ್‌ಪುರ ಕೊತ್ವಾಲಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಪುಷ್ಪರಾಜ್‌ ಸಿಂಗ್‌ಗಿಗಾ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ʼʼಗಸ್ತು ತಿರುಗುತ್ತಿದ್ದ ಕಾನ್‌ಸ್ಟೆಬಲ್‌ಗಳು ನಿಲ್ಲಿಸಲು ಸೂಚಿಸಿದರೂ ಕಿವಿಗೊಡದ ಆರೋಪಿ ಉದ್ದೇಶಪೂರ್ವಕವಾಗಿ ಅವರ ಮೇಲೆ ಕಾರು ಹರಿಸಲು ಪ್ರಯತ್ನಿಸಿದ್ದಾನೆʼʼ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ವ್ಯಾಸ್ ಹೇಳಿದ್ದಾರೆ. ಆತನನ್ನು ಬಂಧಿಸಲು ಡಿಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಆರೋಪಿ ಮನೆಯವರಿಂದ ಹೈಡ್ರಾಮ

ಇದೇ ವೇಳೆ ಎಫ್‌ಐಆರ್‌ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆರೋಪಿಯ ತಂದೆ, ಶಾಸಕಿ ಸೇನಾ ಪಟೇಲ್ ಅವರ ಪತಿ ಮಹೇಶ್ ಪಟೇಲ್ ಪತ್ರಿಕಾಗೋಷ್ಠಿ ನಡೆಸಿ, ರಾಜಕೀಯ ಒತ್ತಡದಿಂದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದ್ದಾರೆ. "ಇದು ಸಣ್ಣ ಅಪಘಾತ. ಆದರೆ ಇದನ್ನು ಕೊಲೆ ಯತ್ನ ಎಂದು ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ನಾವು ಹೈಕೋರ್ಟ್‌ಗೆ ಹೋಗುತ್ತೇವೆ" ಎಂದು ಅವರು ಹೇಳಿದ್ದಾರೆ.

ಆರೋಪಿಯ ತಾಯಿ ಶಾಸಕಿ ಸೇನಾ ಪಟೇಲ್ ಕೂಡ ತಮ್ಮ ಮಗನ ರಕ್ಷಣೆಗೆ ಧಾವಿಸಿ, ಪೊಲೀಸ್ ಕ್ರಮವನ್ನು "ಯೋಜಿತ ರಾಜಕೀಯ ಪಿತೂರಿ" ಎಂದು ಕರೆದಿದ್ದಾರೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ರಾಜಕೀಯ ವಿರೋಧದ ಹೊರತಾಗಿಯೂ ಸಿಸಿಟಿವಿ ದೃಶ್ಯಾವಳಿಗಳು ಪುಷ್ಪರಾಜ್‌ ಸಿಂಗ್‌ನ ಕೃತ್ಯವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ದೃಶ್ಯದಲ್ಲಿ ಎಸ್‌ಯುವಿ ಇಬ್ಬರು ಕಾನ್‌ಸ್ಟೆಬಲ್‌ಗಳ ಕಡೆಗೆ ಧಾವಿಸುತ್ತಿರುವುದನ್ನು ಕಂಡುಬಂದಿದೆ. ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ ಮತ್ತು ಕಾರು ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ತಕ್ಷಣ ಚಾಲಕ ಪರಾರಿಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.