ಜಿತೇಶ್ ಶರ್ಮಾರ ಲಾರ್ಡ್ಸ್ ಪ್ರವೇಶವನ್ನು ತಡೆದಿದ್ದೇಕೆ? ಸ್ಪಷ್ಟನೆ ನೀಡಿದ ದಿನೇಶ್ ಕಾರ್ತಿಕ್!
ಯುವ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾಗೆ ಲಾರ್ಡ್ಸ್‌ನ ಭದ್ರತಾ ಸಿಬ್ಬಂದಿ ಮೈದಾನ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲೆಡೆ ವೈರಲ್ ಆಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಸ್ಪಷ್ಟನೆ ನೀಡಿದ್ದಾರೆ.

ಜಿತೇಶ್ ಶರ್ಮಾರ ಪ್ರವೇಶ ತಡೆದಿದ್ದ ಬಗ್ಗೆ ದಿನೇಶ್ ಕಾರ್ತಿಕ್ ಸ್ಪಷ್ಟನೆ.

ಲಂಡನ್: ಇಂಗ್ಲೆಂಡ್ ಹಾಗೂ ಭಾರತ (IND vs ENG) ನಡುವಣ ಮೂರನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಲಾರ್ಡ್ಸ್ ಅಂಗಣಕ್ಕೆ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರ ಜಿತೇಶ್ ಶರ್ಮಾರನ್ನು (Jitesh Sharma) ಭದ್ರತಾ ಸಿಬ್ಬಂದಿ ತಡೆದಿದ್ದರು. ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲೆಡೆ ವೈರಲ್ ಆಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ಅಸಲಿ ಘಟನೆ ಏನೆಂದು ಆರ್‌ಸಿಬಿ ಮೆಂಟರಿ ಸ್ಪಷ್ಟನೆ ನೀಡಿದ್ದಾರೆ.
"ಈ ಘಟನೆ ನಡೆದಿರುವುದು ಮೈದಾನದ ಮುಖ್ಯ ಪ್ರವೇಶ ದ್ವಾರದ ಬಳಿ ಅಲ್ಲ, ಮಾಧ್ಯಮ ಕೇಂದ್ರದ ಕೆಳಭಾಗದಲ್ಲಿ ನಡೆದಿದೆ. ನಾನು ಜಿತೇಶ್ ಶರ್ಮಾ ಅವರನ್ನು ಕಾಮೆಂಟರಿ ಬಾಕ್ಸ್‌ಗೆ ಕರೆದಿದ್ದೆ. ಆ ಸಮಯದಲ್ಲಿ ಅವರು ಕಾಮೆಂಟರಿ ಬಾಕ್ಸ್‌ಗೆ ಬರುವ ಸಮಯದಲ್ಲಿ ಘಟನೆ ನಡೆದಿತ್ತು, ನಂತರ ನಾನು ಹೋಗಿ ಅವರನ್ನು ಕಾಮೆಂಟರಿ ಬಾಕ್ಸ್ ಒಳಗೆ ಕರೆದುಕೊಂಡು ಬಂದೆ," ಎಂದು ದಿನೇಶ್ ಕಾರ್ತಿಕ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ENG vs IND: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಜೋ ರೂಟ್!
ಜಿತೇಶ್ ಶರ್ಮಾ ಇನ್ನೂ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಆದರೆ ಅವರು ಈಗಾಗಲೇ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 14.28ರ ಸರಾಸರಿಯಲ್ಲಿ 100 ರನ್ ಗಳಿಸಿರುವ ಜಿತೇಶ್, 147.05ರ ಸ್ಟ್ರೈಕ್ ರೇಟ್ ಹೊಂದಿದ್ದು, 2023ರ ಡಿಸೆಂಬರ್‌ನಲ್ಲಿ ರಾಯಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ 35 ರನ್ ಗಳಿಸಿದ್ದು ಅವರ ಅತ್ಯುತ್ತಮ ಇನಿಂಗ್ಸ್ ಆಗಿದೆ.
ದೇಶಿ ಕ್ರಿಕೆಟ್‌ನಲ್ಲಿ ಬರೋಡಾ ತಂಡ ಸೇರಿದ ಜಿತೇಶ ಶರ್ಮಾ
ಕಳೆದ ದೇಶಿ ಕ್ರಿಕೆಟ್ ಸೀಸನ್‌ನಲ್ಲಿ ವಿದರ್ಭ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದ ಜಿತೇಶ್ ಶರ್ಮಾ, ಮುಂದಿನ ದೇಶಿ ಕ್ರಿಕೆಟ್ ಸೀಸನ್‌ಗೆ ಬರೋಡಾ ತಂಡ ಸೇರಿಕೊಳ್ಳಲಿದ್ದಾರೆ. 31 ವರ್ಷದ ಜಿತೇಶ್ ಶರ್ಮಾಗೆ 2024–25ರ ರಣಜಿ ಟ್ರೋಫಿಯಲ್ಲಿ ಯಾವುದೇ ಪಂದ್ಯವನ್ನೂ ಆಡುವ ಅವಕಾಶವನ್ನು ಸಿಗಲಿಲ್ಲ. ವಿದರ್ಭ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್‌ಗೆ ಬ್ಯಾಕ್‌ಅಪ್ ಆಟಗಾರರಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆಯೂ ಅವರು ವಿದರ್ಭ ತಂಡವನ್ನು ಬಿಡುವ ಸೂಚನೆ ನೀಡಿದ್ದರು.
IND vs ENG: ʻತುಂಬಾ ನಿರಾಶೆಯಾಯಿತುʼ-ಭಾರತ ತಂಡವನ್ನು ಟೀಕಿಸಿದ ಸೌರವ್ ಗಂಗೂಲಿ!
ಇನ್ನು 2025ರ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿಯ ಐತಿಹಾಸಿಕ ಟ್ರೋಫಿ ಗೆಲುವಿನಲ್ಲಿ ಜಿತೇಶ್ ಶರ್ಮಾರ ಪಾತ್ರವು ಬಹುದೊಡ್ಡದಾಗಿತ್ತು. 2015–16ರಲ್ಲಿ ತಮ್ಮ ಅಧಿಕೃತ ಟಿ20 ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸಿದ ನಂತರ ಜಿತೇಶ್, ಕೇವಲ 18 ಫಸ್ಟ್ ಕ್ಲಾಸ್ ಪಂದ್ಯಗಳನ್ನಷ್ಟೇ ಆಡಿದ್ದು, 24.48 ರ ಸರಾಸರಿಯಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ ರನ್ ಗಳಿಸಿದ್ದರು. ಟಿ20 ಕ್ರಿಕೆಟ್‌ನಲ್ಲಿ ಕಡಿಮೆ ಅನುಭವವಿದ್ದರೂ, ಜಿತೇಶ್ ಗಮನಾರ್ಹ ಸಾಧನೆ ಮಾಡಿದ್ದಾರೆ.
2023ರಲ್ಲಿ ಪಂಜಾಬ್ ಕಿಂಗ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಜಿತೇಶ್ ಉತ್ತಮ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ನಂತರ ಆರ್‌ಸಿಬಿ ತಂಡದ ಪರ ಆಡಿದ ಅವರು ಲಖನೌ ಸೂಪರ್ ಜಯಂಟ್ಸ್ ವಿರುದ್ಧ 85 ರನ್‌ಗಳ ಇನಿಂಗ್ಸ್ ಆಡಿದ್ದು, ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಲು ನೆರವು ನೀಡಿದ್ದರು. ರಜತ್ ಪಾಟಿದಾರ್ ಅವರಿಗೆ ಜಿತೇಶ್ ಉಪ ನಾಯಕನಾಗಿ ಸೇವೆ ಸಲ್ಲಿಸಿದ್ದರು. ರಜತ್ ಗಾಯಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ತಂಡದ ನಾಯಕರ ಜವಾಬ್ದಾರಿಯನ್ನೂ ಜಿತೇಶ್ ಯಶಸ್ವಿಯಾಗಿ ನಿರ್ವಹಿಸಿದ್ದರು.