RBI: ಬಡ್ಡಿ ದರ ಇಳಿಕೆಯ ಸುಳಿವು ನೀಡಿದ ಆರ್‌ಬಿಐ; ಜಿಎಸ್‌ಟಿಯಲ್ಲಿ ಭಾರಿ ಬದಲಾವಣೆ?
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ಕಡಿಮೆಯಾದರೆ ಬಡ್ಡಿ ದರವನ್ನು ಇಳಿಕೆ ಮಾಡಲಾಗುವುದು ಎಂದು ಸುಳಿವು ನೀಡಿದ್ದಾರೆ. ಹಣದುಬ್ಬರವು ವಾರ್ಷಿಕ 3.7% ಕ್ಕಿಂತ ಕೆಳಕ್ಕಿಳಿದರೆ ಬಡ್ಡಿ ದರ ಇಳಿಕೆಗೆ ಅವಕಾಶ ಸಿಗಲಿದೆ. ಹೀಗಿದ್ದರೂ, ಇದು ಮುಂದಿನ ಡೇಟಾಗಳನ್ನು ಆಧರಿಸಿದೆ ಎಂದಿದ್ದಾರೆ.


ಮುಂಬೈ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ಕಡಿಮೆಯಾದರೆ ಬಡ್ಡಿ ದರವನ್ನು ಇಳಿಕೆ ಮಾಡಲಾಗುವುದು ಎಂದು ಸುಳಿವು ನೀಡಿದ್ದಾರೆ. ಹಣದುಬ್ಬರವು ವಾರ್ಷಿಕ 3.7% ಕ್ಕಿಂತ ಕೆಳಕ್ಕಿಳಿದರೆ ಬಡ್ಡಿ ದರ ಇಳಿಕೆಗೆ ಅವಕಾಶ ಸಿಗಲಿದೆ. ಹೀಗಿದ್ದರೂ, ಇದು ಮುಂದಿನ ಡೇಟಾಗಳನ್ನು ಆಧರಿಸಿದೆ ಎಂದಿದ್ದಾರೆ. ಸದ್ಯಕ್ಕೆ ಆರ್‌ಬಿಐನ ಮಾನಿಟರಿ ಕಮಿಟಿಯು ನ್ಯೂಟ್ರಲ್ ನಿಲುವನ್ನು ಹೊಂದಿದೆ. ಈ ನ್ಯೂಟ್ರಲ್ ನಿಲುವಿನಲ್ಲಿ ಆರ್‌ಬಿಐ ಬಡ್ಡಿ ದರವನ್ನು ಏರಿಸುವುದು ಅಥವಾ ಇಳಿಸುವ ನಿರ್ಧಾರ ಕೈಗೊಳ್ಳುವುದಿಲ್ಲ. ಕಾದು ನೋಡುತ್ತದೆ. Accommodative ನಿಲುವು ತೆಗೆದುಕೊಂಡಾಗ ಬೆಳವಣಿಗೆಯನ್ನು ಉತ್ತೇಜಿಸಲು ಬಡ್ಡಿ ದರವನ್ನು ಇಳಿಸುತ್ತದೆ.
ಕಳೆದ ಜೂನ್‌ನಲ್ಲಿ ಹಣದುಬ್ಬರವು 2.1%ಕ್ಕೆ ಇಳಿಕೆಯಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಸರಾಸರಿ 2.7% ಆಗಿದ್ದು, ಆರ್‌ಬಿಐನ ಅಂದಾಜಾಗಿದ್ದ 2.9%ಗಿಂತಲೂ ಕಡಿಮೆ ಇದೆ. ಜುಲೈಯಲ್ಲಿ ಹಣದುಬ್ಬರ 2%ಕ್ಕೆ ಇಳಿಯುವ ಅಂದಾಜಿದೆ. ಇದೀ ವರ್ಷ 3% ಸರಾಸರಿ ಇರುವ ನಿರೀಕ್ಷೆ ಇದೆ. ಆಗ ಆರ್‌ಬಿಐ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ಆರ್‌ಬಿಐ ರೆಪೊ ದರ ಇಳಿಸಿದರೆ, ಗೃಹ ಸಾಲ, ವಾಹನ ಸಾಲ, ಬಿಸಿನೆಸ್ ಸಾಲಗಳ ಬಡ್ಡಿದರಗಳು ಇಳಿಕೆಯಾಗಿ ಸಾಲಗಾರರಿಗೆ ರಿಲೀಫ್ ಸಿಗಲಿದೆ. ಇಎಂಐ ಹೊರೆ ಹಗುರವಾಗಲಿದೆ. ಹೊಸತಾಗಿ ಸಾಲ ತೆಗೆದುಕೊಳ್ಳಲು ಇದು ಸಕಾಲ. ಏಕೆಂದರೆ ಬಡ್ಡಿ ದರ ಇಳಿಮುಖವಾಗಿದೆ.
ಜಿಎಸ್‌ಟಿಯಲ್ಲಿ ಮಹತ್ವದ ಸುಧಾರಣೆ
ಒಂದು ಕಡೆ ಜಿಎಸ್‌ಟಿ ನೋಟಿಸ್ ಬಂದಿರುವುದಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ವ್ಯಾಪಾರಿಗಳು ವಿವಾದ ಸೃಷ್ಟಿಸಿದ್ದಾರೆ. ಆದರೆ ವಾಣಿಜ್ಯ ಇಲಾಖೆ ಅಧಿಕಾರಿಗಳು, 40 ಲಕ್ಷ ರುಪಾಯಿಗೂ ಹೆಚ್ಚು ವಹಿವಾಟಿಗೆ ಪದ್ಧತಿಯ ಪ್ರಕಾರ ನೋಟಿಸ್ ಕಳಿಸಲಾಗಿದೆ ಎಂದಿದ್ದಾರೆ. ಮತ್ತೊಂದು ಕಡೆ ಜಿಎಸ್‌ಟಿಯಲ್ಲಿ ಮಹತ್ವದ ಸುಧಾರಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಜಿಎಸ್‌ಟಿಯಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ. ಈ ವರದಿಯ ಪ್ರಕಾರ ಪ್ರಧಾನಮಂತ್ರಿಯವರ ಕಚೇರಿಯು ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗೆ ತಾತ್ವಿಕ ಅನುಮೋದನೆ ನೀಡಿದೆ. ಆಗಸ್ಟ್‌ನಲ್ಲಿ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾಪಗಳು ಬರುವ ಸಾಧ್ಯತೆ ಇದೆ.
ಜಿಎಸ್‌ಟಿಯಲ್ಲಿ ಈಗ ಶೂನ್ಯ, 5%, 12%, 18% ತೆರಿಗೆಯ ಸ್ಲ್ಯಾಬ್‌ಗಳು ಇವೆ. ಜತೆಗೆ ಅಮೂಲ್ಯ ಲೋಹಗಳಿಗೆ 0.25% ಮತ್ತು 3% ನ ಸ್ಲ್ಯಾಬ್ ಇದೆ. ಇದರಲ್ಲಿ 12% ಸ್ಲ್ಯಾಬ್ ಅನ್ನು ರದ್ದುಪಡಿಸುವ ಹಾಗೂ ಈ 12% ಸ್ಲ್ಯಾಬ್‌ನಲ್ಲಿರುವ ವಸ್ತುಗಳನ್ನು 5% ಅಥವಾ 18% ಸ್ಲ್ಯಾಬ್‌ಗೆ ಸ್ಥಳಾಂತರಿಸುವ ಪ್ರಸ್ತಾಪ ಇದೆ ಎಂದು ವರದಿಯಾಗಿದೆ. ಇದರ ಪರಿಣಾಮ ಹಲವು ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಕೆಯಾಗಲಿದೆ.
ಕರ್ಣಾಟಕ ಬ್ಯಾಂಕ್‌ಗೆ ಹಂಗಾಮಿ ಎಂಡಿ ನೇಮಕ
ಕರ್ಣಾಟಕ ಬ್ಯಾಂಕ್ ತನ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಥವಾ ಸಿಒಒ ಆಗಿರುವ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಮೂರು ತಿಂಗಳಿನ ಅವಧಿಗೆ ಹಂಗಾಮಿ ಎಂಡಿ ಮತ್ತು ಸಿಇಒ ಆಗಿ ನೇಮಕ ಮಾಡಿದೆ. 2025ರ ಜುಲೈ 16ರಿಂದ ಇದು ಅನ್ವಯವಾಗಲಿದೆ. ಕಾಯಂ ಎಂಡಿ ಮತ್ತು ಸಿಇಒ ಹುದ್ದೆಗೆ ಬ್ಯಾಂಕ್ ಹುಡುಕಾಟ ಮುಂದುವರಿಸಿದೆ. ಬ್ಯಾಂಕ್‌ನಲ್ಲಿ ಎಂಡಿ ಮತ್ತು ಸಿಇಒ ಆಗಿದ್ದ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು ಕಾರ್ಯಕಾರಿ ನಿರ್ದೇಶಕ ಶೇಖರ್ ರಾವ್ ನಿರ್ಗಮದ ಬಳಿಕ ಈ ನೇಮಕಾತಿ ನಡೆದಿದೆ.
ಹಾಗಾದರೆ ಯಾರಿವರು ಹೊಸ ಹಂಗಾಮಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ರಾಘವೇಂದ್ರ ಶ್ರೀನಿವಾಸ ಭಟ್? ಅವರು 38 ವರ್ಷಗಳಿಂದ ಕರ್ಣಾಟಕ ಬ್ಯಾಂಕ್‌ನಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ್ದಾರೆ. ವಿಶೇಷವೇನೆಂದರೆ, ಕರ್ಣಾಟಕ ಬ್ಯಾಂಕ್‌ನಲ್ಲಿ 1981ರಲ್ಲಿ ಕ್ಲರ್ಕ್ ಆಗಿ ಸೇರಿದ್ದ ರಾಘವೇಂದ್ರ ಶ್ರೀನಿವಾಸ ಭಟ್ ಅವರು ಹಂತ ಹಂತವಾಗಿ ಉನ್ನತ ಮಟ್ಟದ ಹುದ್ದೆಗಳನ್ನು ನಿರ್ವಹಿಸುತ್ತಾ, ತಮ್ಮ ಪರಿಶ್ರಮ, ಶ್ರದ್ಧೆಯಿಂದ ಇವತ್ತು ಎಂಡಿ ಮತ್ತು ಸಿಇಒ ಹುದ್ದೆಗೆ ನೇಮಕವಾಗಿದ್ದಾರೆ.
ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ ಪರಿಣತಿ ಗಳಿಸಿರುವ ರಾಘವೇಂದ್ರ ಶ್ರೀನಿವಾಸ ಭಟ್ ಕೃಷಿಕ ಕುಟುಂಬದಲ್ಲಿ ಬೆಳೆದವರು. ಬ್ಯಾಂಕ್‌ನಲ್ಲಿ ಎಚ್ ಆರ್, ಐಟಿ, ಡಿಜಿಟಲ್ ಬ್ಯಾಂಕಿಂಗ್, ಟ್ರೆಶರಿ & ಫೊರೆಕ್ಸ್ ಆಪರೇಷನ್ಸ್, ಇನ್ಷೂರೆನ್ಸ್, ಗ್ರಾಮೀಣ ಇಕಾನಮಿ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದರು.
ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬೋನಸ್ ಷೇರು ವಿತರಣೆ
ಖಾಸಗಿ ವಲಯದ ಮುಂಚೂಣಿಯ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ಷೇರುದಾರರಿಗೆ ವಿತರಿಸಲು ಸಜ್ಜಾಗಿದೆ. ಜುಲೈ 19ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಈ ಬಗ್ಗೆ ಸಭೆ ಸೇರಲಿದೆ. 2025-26ನೇ ಸಾಲಿಗೆ ಬೋನಸ್ ಷೇರು ಮತ್ತು ಮಧ್ಯಂತರ ಡಿವಿಡೆಂಡ್ ಘೋಷಣೆಯಾಗುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ದರದಲ್ಲಿ 23% ಏರಿಕೆಯಾಗಿದೆ. 2025ರಲ್ಲಿ ಇದುವರೆಗೆ 12% ಏರಿಕೆ ಆಗಿದೆ. ಈಗ ಷೇರಿನ ದರ 2004/- ಆಗಿದೆ. ಬೋನಸ್ ಷೇರು ಮತ್ತು ಡಿವಿಡೆಂಡ್ ವಿತರಣೆಯ ಸಲುವಾಗಿ ರೆಕಾರ್ಡ್ ಡೇಟ್ ಘೋಷಣೆಯಾಗಲಿದೆ. ಅಂದರೆ ಆ ದಿನಾಂಕದ ಒಳಗೆ ಷೇರುಗಳನ್ನು ಖರೀದಿಸಿರುವವರಿಗೆ ಬೋನಸ್ ಷೇರು, ಡಿವಿಡೆಂಡ್ ಸಿಗಲಿದೆ.
ಜಿಯೊ ಬ್ಲಾಕ್ ರಾಕ್ ಮ್ಯೂಚುವಲ್ ಫಂಡ್‌ಗೆ 4 ಇಂಡೆಕ್ಸ್ ಫಂಡ್
ಇನ್ನು ಮುಕೇಶ್ ಅಂಬಾನಿಯವರ, ಜಿಯೊ ಬ್ಲಾಕ್ ರಾಕ್ ಮ್ಯೂಚುವಲ್ ಫಂಡ್‌ಗೆ 4 ಇಂಡೆಕ್ಸ್ ಫಂಡ್‌ಗಳನ್ನು ಬಿಡುಗಡೆಗೊಳಿಸಲು ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮತಿ ನೀಡಿದೆ. ಅದು ಯಾವ್ಯಾವುದು ಎಂದು ನೋಡೋಣ.
- ಜಿಯೊ ಬ್ಲಾಕ್ ರಾಕ್ ನಿಫ್ಟಿ ಮಿಡ್‌ಕ್ಯಾಪ್ 150 ಇಂಡೆಕ್ಸ್ ಫಂಡ್
- ಜಿಯೊ ಬ್ಲಾಕ್ ರಾಕ್ ನಿಫ್ಟಿ ನೆಕ್ಸ್ಟ್ 50 ಇಂಡೆಕ್ಸ್ ಫಂಡ್
- ಜಿಯೊ ಬ್ಲಾಕ್ ರಾಕ್ ನಿಫ್ಟಿ ಸ್ಮಾಲ್ ಕ್ಯಾಪ್ 250 ಇಂಡೆಕ್ಸ್ ಫಂಡ್
- ಜಿಯೊ ಬ್ಲಾಕ್ ರಾಕ್ ನಿಫ್ಟಿ ಜಿ-ಸೆಕ್ ಇಂಡೆಕ್ಸ್ ಫಂಡ್.
ಈ ನಾಲ್ಕು ಫಂಡ್‌ಗಳಲ್ಲಿ ಮೂರು ಈಕ್ವಿಟಿ ಆಧಾರಿತ ಇಂಡೆಕ್ಸ್ ಫಂಡ್ ಆಗಿದ್ದರೆ, ಒಂದು ಡೆಟ್ ಆಧಾರಿತ ಇಂಡೆಕ್ಸ್ ಫಂಡ್ ಆಗಿದೆ. ಈ ಎಲ್ಲ ಫಂಡ್‌ಗಳಲ್ಲೂ ಕನಿಷ್ಠ ಲಂಪ್ಸಮ್ ಹೂಡಿಕೆಯ ಮೊತ್ತ 500/- ಆಗಿದೆ. ಕನಿಷ್ಠ ಸಿಪ್ ಮೊತ್ತ ಕೂಡ 500/- ಆಗಿದೆ.
ಕಾಫಿ ಡೇ ಎಂಟರ್‌ಪ್ರೈಸಸ್ ಕಂಪನಿಯ ಷೇರಿನ ದರ ಏರಿಕೆ
ಬೆಂಗಳೂರು ಮೂಲದ ಕೆಫೆ ಕಾಫಿ ಡೇ ಸರಣಿಯನ್ನು ಒಳಗೊಂಡಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಕಂಪನಿಯ ಷೇರಿನ ದರದಲ್ಲಿ ಬುಧವಾರ ಏರಿಕೆಯಾಗಿದೆ. ಬಿಎಸ್‌ಇನಲ್ಲಿ ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿತ್ತು. 40 ರುಪಾಯಿಗೆ ಏರಿಕೆಯಾಗಿತ್ತು. ಖ್ಯಾತ ಹೂಡಿಕೆದಾರರಾದ ಡೋಲಿ ಖನ್ನಾ ಅವರು ಕಾಫಿ ಡೇ ಎಂಟರ್‌ಪ್ರೈಸಸ್‌ನಲ್ಲಿ 1.55% ಷೇರುಗಳನ್ನು ಖರೀದಿಸಿದ್ದಾರೆ. ಸುಮಾರು 32 ಲಕ್ಷದ 78 ಸಾವಿರ ಷೇರುಗಳನ್ನು ತಮ್ಮದಾಗಿಸಿದ್ದಾರೆ.
ಬೆಳ್ಳಿ ದುಬಾರಿ
ಬೆಳ್ಳಿಯ ದರ ಮೊದಲ ಬಾರಿಗೆ ಪ್ರತಿ ಕೆಜಿಗೆ 1 ಲಕ್ಷದ 14 ಸಾವಿರ ರುಪಾಯಿಗೆ ಏರಿಕೆಯಾಗಿದೆ. ಉದ್ದಿಮೆ ವಲಯದಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಅಲ್ಪಾವಧಿಯಲ್ಲಿ 1,40,000/- ಹಾಗೂ 2026ರೊಳಗೆ 2 ಲಕ್ಷ ರುಪಾಯಿಗೆ ಬೆಳ್ಳಿಯ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಈ ವರ್ಷ ಬೆಳ್ಳಿಯ ದರದಲ್ಲಿ 30% ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 14 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ದರ ಏರಿದೆ.
ಕರ್ನಾಟಕ ಸರ್ಕಾರ ಎಲ್ಲ ಬಗೆಯ ಸಿನಿಮಾ ಥಿಯೇಟರ್‌ಗಳಲ್ಲಿ ಟಿಕೆಟ್ ದರಕ್ಕೆ 200/- ಗಳ ಮಿತಿಯನ್ನು ವಿಧಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಸರಣಿ ದಿಗ್ಗಜ ಸಂಸ್ಥೆಯಾದ PVR-Inox ಷೇರುಗಳ ಮೇಲೆ ಸ್ವಲ್ಪ ಒತ್ತಡ ಉಂಟಾಯಿತು. ದರ ಇಳಿಕೆ ಕಂಡಿತು.
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಗ್ರಾಹಕರು ಈ ಸುದ್ದಿಯನ್ನು ಗಮನಿಸಬೇಕು. ಬ್ಯಾಂಕ್ ಈ ವಾರ ನಿಯಮಿತ ನಿರ್ವಹಣೆಯ ಚಟುವಟಿಕೆಯನ್ನು ನಡೆಸಲಿದ್ದು, ಈ Maintennance activities ಪರಿಣಾಮ ಈ ವಾರ ಗ್ರಾಹಕರಿಗೆ ಕೆಲವು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಲ್ಲಿ ತಾತ್ಕಾಲಿಕವಾಗಿ ವ್ಯತ್ಯಯ ಉಂಟಾಗಬಹುದು. ಜುಲೈ 17, 20ರಂದು ಕೋಟಕ್ ಬ್ಯಾಂಕಿನ ನೆಟ್ ಬ್ಯಾಂಕಿಂಗ್, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಅಡಚಣೆ ಆಗಬಹುದು.
ಪೇಟಿಎಂನ ಮಾತೃ ಸಂಸ್ಥೆಯಾದ One 97 Communications ಕಂಪನಿಯ ಷೇರಿನ ದರದಲ್ಲಿ ಇವತ್ತು ಮಧ್ಯಂತರದಲ್ಲಿ 3% ಏರಿಕೆಯಾಗಿದೆ. ಪೇಟಿಎಂ ಷೇರಿನ ದರ ಕಳೆದ 6 ತಿಂಗಳಿನಲ್ಲಿ ಮೊದಲ ಬಾರಿಗೆ 1,000 ರುಪಾಯಿಗ ಗಡಿಯನ್ನು ದಾಟಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಾಂಡ್‌ಗಳ ಮೂಲಕ 20,000 ಕೋಟಿ ರುಪಾಯಿ ಸಂಗ್ರಹಿಸಲು ಉದ್ದೇಶಿಸಿದ್ದು, ಆಡಳಿತ ಮಂಡಳಿ ಅನುಮೋದಿಸಿದೆ. ರಿಟೇಲ್ ಹೂಡಿಕೆದಾರರೂ ಎಸ್‌ಬಿಐನ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಬಹುದು.
ಸಿಮೆಂಟ್ ಉತ್ಪಾದಕರಿಗೆ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ತಮ್ಮ ಲಾಭದಲ್ಲಿ 30-80% ಹೆಚ್ಚಳ ಆಗಿರುವ ನಿರೀಕ್ಷೆ ಇದೆ. ದರ ಮತ್ತು ಪ್ರಮಾಣ ಎರಡರಲ್ಲೂ ಸುಧಾರಣೆ ಆಗಿರುವುದು ಇದಕ್ಕೆ ಕಾರಣ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ವಹಿವಾಟನ್ನು ಹೊಂದಿರುವ ಸಿಮೆಂಟ್ ಉತ್ಪಾದಕ ಕಂಪನಿಗಳಿಗೆ ಹೆಚ್ಚು ಲಾಭವಾಗಿರುವ ಅಂದಾಜಿದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಪ್ರತಿ ಬ್ಯಾಗ್ ಸಿಮೆಂಟ್ ದರ 377/- ಇತ್ತು.
ಈ ಸುದ್ದಿಯನ್ನೂ ಓದಿ | LIC: ಎಲ್‌ಐಸಿ ನೂತನ ಸಿಇಒ ಮತ್ತು ಎಂಡಿಯಾಗಿ ಆರ್. ದೊರೈಸ್ವಾಮಿ ಆಯ್ಕೆ!