ಕನ್ನಡ ಸುದ್ದಿವಾಹಿನಿ ಅಂದ್ರೆ ನೀವು ಏನಂದ್ಕಂಡಿದ್ದೀದಿ
ಇದು ಪತ್ರಕರ್ತರ ‘ಜಡ್ಡು’ ಮಾತ್ರವಲ್ಲ, ನನ್ನಂಥ ಅಸಂಖ್ಯಾತ ಪತ್ರಿಕಾ ಹುಳಗಳ ಜಡ್ಡು ಕೂಡ. ಪತ್ರಿಕೆಯು ಮನೆಗೆ ಬಂದು ಬೀಳುವುದು ವಿಳಂಬವಾದರೆ ಚಡಪಡಿಕೆ, ತರಿಸುತ್ತಿರುವ ಪತ್ರಿಕೆಗಳ ಪೈಕಿ ಒಂದು ಪತ್ರಿಕೆ ಮಿಸ್ ಆದರೆ ಪತ್ರಿಕಾ ವಿತರಕನ ಮೇಲೆ ಕೋಪ, ಆ ದಿನ ಪತ್ರಿಕೆಗೆ ರಜೆಯಾದರೆ ಇಡೀ ದಿನ ಮೂಡ್ ಆಫ್, ಇದು ನನ್ನಂಥವರ ಜಡ್ಡು.


ಪ್ರತಿಸ್ಪಂದನ
ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು
ಪತ್ರಕರ್ತರಿಗೆ ಬೆಳಗ್ಗೆ ಎದ್ದ ತಕ್ಷಣ ಪತ್ರಿಕೆ ಓದದಿದ್ದರೆ ದಿನಚರಿಯಲ್ಲಿ ನಿರುತ್ಸಾಹ ತಲೆದೋರುತ್ತದೆ, ಇಡೀ ದಿನ ಪತ್ರಿಕೆ ಸಿಗದಿದ್ದರೆ ಮೂಡ್ ಆಫ್ ಆಗುತ್ತದೆ ಎಂಬ ವಾಸ್ತವವನ್ನು ಸ್ವಾನುಭವ ಕಥನದ ಮೂಲಕ ‘ನೂರೆಂಟು ವಿಶ್ವ’ ಅಂಕಣದಲ್ಲಿ (ಜು.10) ಸೊಗಸಾಗಿ ಬಣ್ಣಿಸಿದ್ದಾರೆ ವಿಶ್ವೇಶ್ವರ ಭಟ್ಟರು.
ಇದು ಪತ್ರಕರ್ತರ ‘ಜಡ್ಡು’ ಮಾತ್ರವಲ್ಲ, ನನ್ನಂಥ ಅಸಂಖ್ಯಾತ ಪತ್ರಿಕಾ ಹುಳಗಳ ಜಡ್ಡು ಕೂಡ. ಪತ್ರಿಕೆಯು ಮನೆಗೆ ಬಂದು ಬೀಳುವುದು ವಿಳಂಬವಾದರೆ ಚಡಪಡಿಕೆ, ತರಿಸುತ್ತಿರುವ ಪತ್ರಿಕೆಗಳ ಪೈಕಿ ಒಂದು ಪತ್ರಿಕೆ ಮಿಸ್ ಆದರೆ ಪತ್ರಿಕಾ ವಿತರಕನ ಮೇಲೆ ಕೋಪ, ಆ ದಿನ ಪತ್ರಿಕೆಗೆ ರಜೆಯಾದರೆ ಇಡೀ ದಿನ ಮೂಡ್ ಆಫ್, ಇದು ನನ್ನಂಥವರ ಜಡ್ಡು. ಆದರೆ, ಈ ಜಡ್ಡು ನಮಗೆಲ್ಲ ಸಕಾರಾತ್ಮಕ ಕೊಡುಗೆ ನೀಡುತ್ತದೆ!
ಇದನ್ನೂ ಓದಿ: Roopa Gururaj Column: ಶ್ರೀಕೃಷ್ಣನನ್ನು ಕೆಣಕಿ, ಅವನ ರೌದ್ರರೂಪಕ್ಕೆ ಮಂಡಿಯೂರಿದ ಭೀಷ್ಮ ಪಿತಾಮಹರು
ಹೇಗೆಂದರೆ, ದಿನಪತ್ರಿಕೆಯೊಂದು ನಮ್ಮ ಇಡೀ ದಿನದ ದಿನಚರಿಗಳಿಗೆ ಉತ್ಸಾಹ ತುಂಬುತ್ತದಲ್ಲವೇ? ಇದು ಪತ್ರಿಕೆಗಳ ಶಕ್ತಿ. ಇದೇ ಅಂಕಣಬರಹದಲ್ಲಿ ಭಟ್ಟರು ಸೀಶೆಲ್ಸ್ ದ್ವೀಪರಾಷ್ಟ್ರವನ್ನು ಉಲ್ಲೇಖಿಸಿ ಬರೆಯುತ್ತ, ಅಲ್ಲಿ ರಾಜಕಾರಣಿಗಳ ಮೇಲಾಟಗಳಾಗಲೀ, ಆರೋಪ-ಪ್ರತ್ಯಾರೋಪಗಳಾಗಲೀ, ಅಪರಾಧ- ಅಪಘಾತಗಳಾಗಲೀ, ಹಗರಣ-ಕರ್ಮಕಾಂಡಗಳಾಗಲೀ, ಪ್ರತಿಭಟನೆ-ಮುಷ್ಕರಗಳಾಗಲೀ, ಕೊಲೆ-ಸುಲಿಗೆ-ಹಿಂಸಾಚಾರಗಳಾಗಲೀ, ಭ್ರಷ್ಟಾಚಾರ ಮೊದಲಾದ ಪಿಡುಗುಗಳಾಗಲೀ ಯಾವುವೂ ಇಲ್ಲದಿರುವುದರಿಂದ, ಅಲ್ಲಿಯ ಪತ್ರಿಕೆಗಳಲ್ಲಿ ಇಂಥ ಯಾವುದೇ ಸುದ್ದಿ ಇರುವುದಿಲ್ಲ ಎಂದೂ, ಆ ದೇಶದಲ್ಲಿ ನ್ಯೂಸ್ ಚಾನೆಲ್ ಆರಂಭಿಸುವ ಕೆಲಸವನ್ನು ನಮ್ಮ ಕನ್ನಡ ಚಾನೆಲ್‌ಗಳಿಗೆ ಕೊಟ್ಟರೆ ಅವು ಒಂದೇ ವಾರದಲ್ಲಿ ಸುದ್ದಿಯ ಬರದಿಂದ ಉಪವಾಸ ಬಿದ್ದು ಬಾಗಿಲು ಹಾಕುವುದು ಗ್ಯಾರಂಟಿ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ನನ್ನ ಅಭಿಪ್ರಾಯ ಭಿನ್ನವಾಗಿದೆ. ನಮ್ಮ ಕನ್ನಡ ಸುದ್ದಿವಾಹಿನಿಗಳವರು ಅಲ್ಲಿಯೂ ಸುದ್ದಿವಾಹಿನಿಯನ್ನು ಬೊಂಬಾಟಾಗಿ ನಡೆಸುತ್ತಾರೆ ಎಂಬುದು ನನ್ನ ಖಚಿತ ಅಭಿಪ್ರಾಯ. ಹೇಗೆ ಅದು ಸಾಧ್ಯ ಎಂದಿರೋ? ಮುಂದೆ ಓದಿ. ಪೇಲವ ಸುದ್ದಿಗಳಿಗೆ ಮಸಾಲೆ ಬೆರೆಸಿ, ಜಾಣ್ಮೆಯಿಂದ ತಿರುಚಿ ರೋಚಕ ಸುದ್ದಿಗಳನ್ನಾಗಿ ಬಿತ್ತರಿಸುವುದು, ಸಾಮಾನ್ಯ ಸುದ್ದಿಗಳನ್ನು ಅತಿಯಾಗಿ ವೈಭವೀ ಕರಿಸುವುದು, ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುವುದು, ಸಿಕ್ಕಾಪಟ್ಟೆ ಗಾಸಿಪ್‌ಗಳನ್ನು ಹರಿಬಿಡುವುದು, ಭವಿಷ್ಯ-ಪ್ರಳಯ-(ಎಲ್ಲೋ ಸಂಭವಿಸುವ) ಗ್ರಹಣ ಮುಂತಾದ ವಿಷಯಗಳನ್ನು ಎತ್ತಿಕೊಂಡು ಭೀಕರ ಕೃತ್ರಿಮ ವಿಡಿಯೋಗಳನ್ನು ಹೆಣೆದು, ಭೀಕರ ಕಾರ್ಯಕ್ರಮಗಳನ್ನು ಕಡುಭೀಕರ ಫಾರ್ಮ್ಯಾಟಿನಲ್ಲಿ ಬಿತ್ತರಿಸುತ್ತ ಪ್ರತಿನಿತ್ಯ ವೀಕ್ಷಕರಲ್ಲಿ ಕುತೂಹಲ-ರೋಚಕ ಭಾವ- ಹೆದರಿಕೆ ಹುಟ್ಟಿಸುವುದು, ಅತಿ ಸಾಮಾನ್ಯ ಸಂಗತಿಗಳನ್ನು ಭಯಂಕರ ಭಾಷೆಯಲ್ಲಿ, ಭಯೋ ತ್ಪಾದಕ ಶೈಲಿಯಲ್ಲಿ, ಭಯಾನಕ ಸುದ್ದಿಗಳ ರೀತಿ ಬಿಂಬಿಸುವುದು, ಹೇಳಿದ್ದನ್ನೇ ಮತ್ತೆಮತ್ತೆ ಹೇಳುತ್ತ ವೀಕ್ಷಕರ ಬ್ರೈನ್ ವಾಶ್ ಮಾಡುವುದು, ಸಾಮಾನ್ಯ ಮಳೆ ಬಂದದ್ದನ್ನು ಮೂರು ದಿನಗಳ ಕಾಲ ಭಯಂಕರ ಬ್ರೇಕಿಂಗ್ ಸುದ್ದಿಯನ್ನಾಗಿ ಒದರುವುದು, ಅರೆಜ್ಞಾನಿ ಅರಚಪ್ಪಗಳನ್ನು ಸ್ಟುಡಿಯೋಕ್ಕೆ ಕರೆಸಿ ಡಿಬೇಟ್ ಎಂಬ ಹೆಸರಿನಲ್ಲಿ ಒಣ ವಿಷಯವೊಂದರ ಕುರಿತು ಅವರನ್ನು ಕೂಗಾಡಲು-ಜಗಳವಾಡಲು ಹಚ್ಚಿ, ನಿರೂಪಕರಾಗಿ ತಾವೂ ಅರಚಾಡುವುದು, ಯಾವ್ಯಾವ ವಿಷಯದ ಮೇಲೋ, ಯಾರ‍್ಯಾರ ಮೇಲೋ ಸುಮ್ ಸುಮ್ನೆ ಅಬ್ಬರಿಸುವುದು, ಬೊಬ್ಬಿರಿಯುವುದು, ಇಂಥ ಅಸಂಖ್ಯಾತ ಕಾರ್ಯಕ್ರಮಗಳಿಂದ ನಮ್ಮ ಸುದ್ದಿವಾಹಿನಿಗಳವರು ಸೀಶೆಲ್ಸ್ ದೇಶದಲ್ಲೂ ಜನರನ್ನು ದಿಕ್ಕು ಗೆಡಿಸುತ್ತಾರೆ, ಜನರಲ್ಲಿ ಹುಸಿ ಕುತೂಹಲ ಹುಟ್ಟಿಸುತ್ತಾರೆ.
ಹುರಿಗಾಳು ತಿನ್ನುವಂತೆ, ಗುಟ್ಕಾ ಹಾಕುವಂತೆ ಜನರು ಪದೇ ಪದೆ ಟಿವಿ-ಮೊಬೈಲ್ ಆನ್ ಮಾಡಿ ನ್ಯೂಸ್ ನೋಡುವ ಚಟಕ್ಕಿಳಿಯುವಂತೆ ಮಾಡುತ್ತಾರೆ. ಇಲ್ಲಿ ಇವರು ಮಾಡುತ್ತಿರುವುದು ಇವನ್ನೇ ಅಲ್ಲವೇ? ಈ ರೀತಿ ಜನರನ್ನು ತಮ್ಮ ಚಾನೆಲ್ಲಿಗೆ ಅಡಿಕ್ಟ್ ಆಗಿಸಿ ಟಿಆರ್‌ಪಿ ಹೆಚ್ಚಿಸಿಕೊಂಡು, ಅಲ್ಲಿಯೂ ಬೊಂಬಾಟಾಗಿ ಚಾನೆಲ್ ನಡೆಸುತ್ತಾರೆ. ಎಷ್ಟು ಪರಿಣಾಮಕಾರಿಯಾಗಿ ಈ ಕೆಲಸವನ್ನು ಮಾಡುತ್ತಾರೆಂದರೆ, ಆ ದೇಶದಲ್ಲಿ ಇಲ್ಲದಿರುವ ಎಲ್ಲ ಅಪಸವ್ಯಗಳೂ ಕ್ರಮೇಣ ಹುಟ್ಟಿಕೊಳ್ಳುವಂತೆ ಮಾಡಿಬಿಡುತ್ತಾರೆ!
ಕನ್ನಡದ ಸುದ್ದಿವಾಹಿನಿಗಳ ಈ ಚಾತುರ್ಯದ ಮುಂದೆ ವಿಶ್ವೇಶ್ವರ ಭಟ್ಟರೂ ಅಲ್ಲ, ಆ ಪರಬ್ರಹ್ಮನೂ ಅಲ್ಲ!
(ಲೇಖಕರು ಹಿರಿಯ ಸಾಹಿತಿ)