Singer Sidhu Moose Wala: ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಬಗ್ಗೆ ಹಂತಕ ಬಿಚ್ಚಿಟ್ಟ ಆ ಭಯಾನಕ ಸಂಗತಿ ಏನು?
ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾ ಅವರ ಕೊಲೆಯ ಹಿಂದಿನ ಕಾರಣಗಳನ್ನು ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ‘ದಿ ಕಿಲ್ಲಿಂಗ್ ಕಾಲ್’ ಎಂಬ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ತೆರೆದಿಟ್ಟಿದ್ದಾನೆ. ಬಿಬಿಸಿಗೆ ಆಡಿಯೋ ರೆಕಾರ್ಡಿಂಗ್ ಮೂಲಕ ಮಾತನಾಡಿರುವ ಬ್ರಾರ್, ಮೂಸೆವಾಲಾ ಅವರ ಕೆಲಸಗಳು ಕ್ಷಮಾಪಣೆಗೆ ಅರ್ಹವಲ್ಲದ ತಪ್ಪುಗಳಾಗಿದ್ದವು. ಆತನನ್ನು ಕೊಲ್ಲದೆ ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದಿದ್ದಾನೆ.


ನವದೆಹಲಿ: ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾ (Sidhu Moose Wala) ಅವರ ಕೊಲೆಯ ಹಿಂದಿನ ಕಾರಣಗಳನ್ನು ಗ್ಯಾಂಗ್ಸ್ಟರ್ ಗೋಲ್ಡಿ (Goldy Brar) ಬ್ರಾರ್ ‘ದಿ ಕಿಲ್ಲಿಂಗ್ ಕಾಲ್’ (The Killing Call) ಎಂಬ ಬಿಬಿಸಿ ಡಾಕ್ಯುಮೆಂಟರಿಯಲ್ಲಿ (BBC Documentary) ತೆರೆದಿಟ್ಟಿದ್ದಾನೆ. ಬಿಬಿಸಿಗೆ ಆಡಿಯೋ ರೆಕಾರ್ಡಿಂಗ್ ಮೂಲಕ ಮಾತನಾಡಿರುವ ಬ್ರಾರ್, “ಮೂಸೆವಾಲಾ ಅವರ ಕೆಲಸಗಳು ಕ್ಷಮಾಪಣೆಗೆ ಅರ್ಹವಲ್ಲದ ತಪ್ಪುಗಳಾಗಿದ್ದವು. ಆತನನ್ನು ಕೊಲ್ಲದೆ ನಮಗೆ ಬೇರೆ ಆಯ್ಕೆ ಇರಲಿಲ್ಲ” ಎಂದಿದ್ದಾರೆ.
2022ರಲ್ಲಿ ಮೂಸೆ ವಾಲಾ ಅವರ ತವರೂರಿನಲ್ಲಿ ಗುಂಡಿಟ್ಟು ಕೊಲೆಯಾದ ಘಟನೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ರ ಗ್ಯಾಂಗ್ ಈ ಕೊಲೆಗೆ ಹೊಣೆಯಾಗಿತ್ತು ಎಂದು ಆಗಲೇ ಘೋಷಿಸಿತ್ತು. ಆದರೆ, ಈ ಡಾಕ್ಯುಮೆಂಟರಿಯವರೆಗೆ ಕೊಲೆಯ ಪೂರ್ಣ ಕಾರಣಗಳು ಸ್ಪಷ್ಟವಾಗಿರಲಿಲ್ಲ.
ಬ್ರಾರ್ರ ಪ್ರಕಾರ, ಮೂಸೆ ವಾಲಾ ಮತ್ತು ಬಿಷ್ಣೋಯ್ರ ನಡುವೆ ವರ್ಷಗಟ್ಟಲೆ ಸಂಪರ್ಕವಿತ್ತು. “ಲಾರೆನ್ಸ್ ಮತ್ತು ಸಿದ್ಧು ಸಂಪರ್ಕದಲ್ಲಿದ್ದರು. ಯಾರು ಪರಿಚಯಿಸಿದರು ಎಂದು ನನಗೆ ಗೊತ್ತಿಲ್ಲ, ಆದರೆ ಆತ ಲಾರೆನ್ಸ್ಗೆ ‘ಗುಡ್ ಮಾರ್ನಿಂಗ್’, ‘ಗುಡ್ ನೈಟ್’ ಸಂದೇಶಗಳನ್ನು ಕಳುಹಿಸುತ್ತಿದ್ದ,” ಎಂದು ಬ್ರಾರ್ ಬಿಬಿಸಿಗೆ ತಿಳಿಸಿದ್ದಾರೆ. ಮೂಸೆ ವಾಲಾ ಕೆನಡಾದಲ್ಲಿದ್ದಾಗಲೂ ಈ ಸಂಬಂಧವಿತ್ತು ಎಂದು ಆತ ಹೇಳಿದ್ದಾನೆ.
ಮೂಸೆ ವಾಲಾರ ಸ್ನೇಹಿತನೊಬ್ಬ ಬಿಬಿಸಿಗೆ ತಿಳಿಸಿದ ಪ್ರಕಾರ, ಬಿಷ್ಣೋಯ್ ಜೈಲಿನಿಂದ ಸಿದ್ಧು ಮೂಸೆ ವಾಲಾಗೆ ಕರೆ ಮಾಡಿ ತಾನು ಆತನ ಸಂಗೀತದ ಅಭಿಮಾನಿಯೆಂದು ಹೇಳುತ್ತಿದ್ದ. ಆದರೆ, ಈ ಸೌಹಾರ್ದ ಸಂಬಂಧ ಕಾಲಾಂತರದಲ್ಲಿ ಹದಗೆಟ್ಟಿತು. ಮೂಸೆ ವಾಲಾ ಭಾರತಕ್ಕೆ ಮರಳಿದ ನಂತರ, ಎದುರಾಳಿ ಗ್ಯಾಂಗ್ನೊಂದಿಗಿನ ಸಂಪರ್ಕವು ಆತನನ್ನು ಗುರಿಯಾಗಿಸಿತು ಎಂದು ಡಾಕ್ಯುಮೆಂಟರಿ ಸೂಚಿಸಿದೆ.
“ಆತನ ದರ್ಪದಿಂದಾಗಿ ಕೆಲವು ತಪ್ಪುಗಳಾದವು. ಇದು ಆತನಿಗೆ ಶಿಕ್ಷೆಯಾಗಿತ್ತು. ಇದು ಆತನ ಆಯ್ಕೆಯಾಗಿತ್ತು; ಆತನೋ ನಾವೋ,” ಎಂದು ಬ್ರಾರ್ ತಿಳಿಸಿದ್ದಾರೆ. ಈ ಘಟನೆಯಿಂದ ಗ್ಯಾಂಗ್ಸ್ಟರ್ಗಳು ಮತ್ತು ಕಲಾವಿದರ ನಡುವಿನ ಸಂಕೀರ್ಣ ಸಂಬಂಧಗಳ ಬಗ್ಗೆ ಚರ್ಚೆ ಆರಂಭವಾಗಿದೆ.