Titanic Disaster: ಟೈಟಾನಿಕ್ ದುರಂತದಲ್ಲಿ ಬದುಕುಳಿದವರ ಪತ್ರ 3.4 ಕೋಟಿ ರೂ.ಗೆ ಹರಾಜು
ಟೈಟಾನಿಕ್ ಹಡಗು ದುರಂತದಲ್ಲಿ ಬದುಕುಳಿದವರು ಬರೆದ ಪತ್ರವು ಇಂಗ್ಲೆಂಡ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಟೈಟಾನಿಕ್ ಮುಳುಗುವ ಕೆಲವು ದಿನಗಳ ಮೊದಲು ಈ ಪತ್ರವನ್ನು ಕರ್ನಲ್ ಆರ್ಚಿಬಾಲ್ಡ್ ಗ್ರೇಸಿ ಎಂಬವರು 1912ರ ಏಪ್ರಿಲ್ 10ರಂದು ಸೌತಾಂಪ್ಟನ್‌ನಿಂದ ಬರೆದಿದ್ದರು. ಈ ಪತ್ರವನ್ನು ಹೆನ್ರಿ ಆಲ್ಡ್ರಿಡ್ಜ್ & ಸನ್ ಸಂಸ್ಥೆ ಹರಾಜು ಮಾಡಿದ್ದು, ಇದನ್ನು ಅಮೆರಿಕದ ಖಾಸಗಿ ಸಂಗ್ರಾಹಕರೊಬ್ಬರು ಖರೀದಿ ಮಾಡಿದ್ದಾರೆ.


ಲಂಡನ್: ಟೈಟಾನಿಕ್ ಹಡಗು (Titanic disaster) ದುರಂತದಲ್ಲಿ ಬದುಕುಳಿದವರಲ್ಲಿ (Titanic Survivors) ಒಬ್ಬರು ಬರೆದ ಪತ್ರವು ಇಗ್ಲೆಂಡ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಟೈಟಾನಿಕ್ ಮುಳುಗುವ ಕೆಲವು ದಿನಗಳ ಮೊದಲು ಈ ಪತ್ರವನ್ನು ಕರ್ನಲ್ ಆರ್ಚಿಬಾಲ್ಡ್ ಗ್ರೇಸಿ (Colonel Archibald Gracie) ಬರೆದಿದ್ದರು. ಇದನ್ನು 1912ರ ಏಪ್ರಿಲ್ 10ರಂದು ಸೌತಾಂಪ್ಟನ್‌ನಿಂದ ಬರೆಯಲಾಗಿತ್ತು. ಈ ಪತ್ರವನ್ನು ಹೆನ್ರಿ ಆಲ್ಡ್ರಿಡ್ಜ್ & ಸನ್ ಸಂಸ್ಥೆ ಹರಾಜು ಹಾಕಿದೆ. "ಮ್ಯೂಸಿಯಂ ಗ್ರೇಡ್" ಎಂದು ಕರೆಯಲಾಗುವ ಈ ಪತ್ರವನ್ನು ಅಮೆರಿಕದ ಖಾಸಗಿ ಸಂಗ್ರಾಹಕರೊಬ್ಬರು ಖರೀದಿ ಮಾಡಿದ್ದಾರೆ.
ಟೈಟಾನಿಕ್ ಹಡಗು ದುರಂತದಲ್ಲಿ ಬದುಕುಳಿದವರಲ್ಲಿ ಒಬ್ಬರು ಬರೆದ ಪತ್ರವು 3,99,000 ಡಾಲರ್ ಅಂದರೆ ಸರಿಸುಮಾರು 3.4 ಕೋಟಿ ರೂ. ಗೆ ಮಾರಾಟವಾಗಿದೆ. ಹೆನ್ರಿ ಆಲ್ಡ್ರಿಡ್ಜ್ & ಸನ್ ಸಂಸ್ಥೆ ಈ ಪತ್ರವನ್ನು ಹರಾಜು ಮಾಡಿದ್ದು, ಹೆಚ್ಚು ಸ್ಪರ್ಧಾತ್ಮಕ ಬಿಡ್ಡಿಂಗ್‌ನಲ್ಲಿ ಯುಎಸ್‌ನ ಖಾಸಗಿ ಸಂಗ್ರಾಹಕ ಅದನ್ನು ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಗ್ಲೆಂಡ್‌ನ ವಿಲ್ಟ್‌ಶೈರ್‌ನಲ್ಲಿರುವ ಹರಾಜು ಸಂಸ್ಥೆ ಶನಿವಾರ ಈ ಪತ್ರದ ಮಾರಾಟವನ್ನು ದೃಢಪಡಿಸಿದೆ.
ಉತ್ತರ ಅಟ್ಲಾಂಟಿಕ್‌ನ ಹಿಮಾವೃತ ನೀರಿನಲ್ಲಿ 1,500ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿದ್ದ ಟೈಟಾನಿಕ್ ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಮುಳುಗುವ ಕೆಲವು ದಿನಗಳ ಮೊದಲು ಕರ್ನಲ್ ಆರ್ಚಿಬಾಲ್ಡ್ ಗ್ರೇಸಿ ಎಂಬವರು ಈ ಪತ್ರವನ್ನು ಬರೆದಿದ್ದರು. ಇದನ್ನು 1912ರ ಏಪ್ರಿಲ್ 10ರಂದು ಸೌತಾಂಪ್ಟನ್‌ನಿಂದ ಬರೆಯಲಾಗಿತ್ತು.
ಹಡಗಿನಲ್ಲಿ ಪ್ರಥಮ ದರ್ಜೆ ಪ್ರಯಾಣಿಕರಾಗಿದ್ದ ಗ್ರೇಸಿ ಅವರು ಹಡಗು ಐರ್ಲೆಂಡ್‌ನ ಕ್ವೀನ್ಸ್‌ಟೌನ್ ಅಂದರೆ ಈಗಿನ ಕಾರ್ಕ್‌ಗೆ ಹೋಗುತ್ತಿದ್ದಾಗ ಪತ್ರವನ್ನು ಮೇಲ್ ಮೂಲಕ ಕಳುಹಿಸಿದ್ದರು. ಟೈಟಾನಿಕ್ ಹಡಗು ದುರಂತದಲ್ಲಿ ಸುಮಾರು 1,500 ಮಂದಿ ಸಾವನ್ನಪ್ಪಿದ್ದರು.
54 ವರ್ಷ ವಯಸ್ಸಿನವರಾಗಿದ್ದ ಗ್ರೇಸಿ ಅವರು ಈ ಪತ್ರದಲ್ಲಿ ಹಡಗು ಪ್ರಯಾಣದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದರು. ಇದು ಉತ್ತಮ ಹಡಗು. ಆದರೆ ನಾನು ಅದರ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬರುವ ಮೊದಲು ನನ್ನ ಪ್ರಯಾಣದ ಅಂತ್ಯದ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದರು.
ಟೈಟಾನಿಕ್ ಹಡಗು 1912ರ ಏಪ್ರಿಲ್ 15ರಂದು ಮುಂಜಾನೆ ಮುಳುಗಿತ್ತು. ಈ ದುರಂತದಲ್ಲಿ ಬದುಕುಳಿದ ಗ್ರೇಸಿ ಅವರು ಮೃತಪಟ್ಟ ಬಳಿಕ 1913ರಲ್ಲಿ ಪ್ರಕಟವಾದ 'ದಿ ಟ್ರೂತ್ ಎಬೌಟ್ ದಿ ಟೈಟಾನಿಕ್' ಎಂಬ ತಮ್ಮ ಪುಸ್ತಕದಲ್ಲಿ ತಾವು ಬದುಕಿ ಬಂದದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
ಹಡಗು ಮುಳುಗಿದ ಅನಂತರ ಅವರು ಹೆಪ್ಪುಗಟ್ಟಿದ್ದ ಸಾಗರಕ್ಕೆ ಹಾರಿ ಈಜಿದರು. ಅಲ್ಲಿ ಹಾದುಹೋಗುತ್ತಿದ್ದ ಲೈಫ್ ಬೋಟ್‌ನಲ್ಲಿದ್ದ ಇತರ ಪ್ರಯಾಣಿಕರು ಅವರನ್ನು ರಕ್ಷಿಸಿದರು ಎಂಬುದಾಗಿ ಅವರು ಹೇಳಿದ್ದಾರೆ.
ಟೈಟಾನಿಕ್ ಹಡಗು ದುರಂತದಿಂದ ಅವರು ಬದುಕುಳಿದಿದ್ದರೂ ಬಳಿಕ ಅವರು ಅನೇಕ ದೈಹಿಕ ತೊಂದರೆಗಳನ್ನು ಎದುರಿಸುತ್ತಲೇ ಇದ್ದರು. ಈ ದುರಂತದಲ್ಲಿ ಬದುಕುಳಿದವರಲ್ಲಿ ಮೊದಲು ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಿಕೊಂಡ ಗ್ರೇಸಿ ಅವರು 1912ರ ಡಿಸೆಂಬರ್‌ನಲ್ಲಿ ನಿಧನರಾದರು.
ಇದನ್ನೂ ಓದಿ: Flood alert: ಏಕಾಏಕಿ ಝೇಲಂ ನದಿ ನೀರು ಬಿಟ್ಟ ಭಾರತ ; ನೀರಿಗಾಗಿ ಅಂಗಲಾಚುತ್ತಿದ್ದ ಪಾಕಿಸ್ತಾನದಲ್ಲಿ ಪ್ರವಾಹ
ಟೈಟಾನಿಕ್ ದುರಂತದ ಸಮಯದಲ್ಲಿ ಗ್ರೇಸಿ ಅವರು ಯುರೋಪ್ ಪ್ರವಾಸ ಮುಗಿಸಿ ನ್ಯೂಯಾರ್ಕ್‌ಗೆ ಹಿಂತಿರುಗುತ್ತಿದ್ದರು. ಗ್ರೇಸಿಯ ತಂದೆ ಅಮೆರಿಕನ್ ಅಂತರ್ಯುದ್ಧದ ಸಮಯದಲ್ಲಿ ಒಕ್ಕೂಟದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಮುತ್ತಜ್ಜ ಗ್ರೇಸಿ ಮ್ಯಾನ್ಷನ್ ಅನ್ನು ನಿರ್ಮಿಸಿದ್ದರು. ಇದು ಇಂದಿಗೂ ನ್ಯೂಯಾರ್ಕ್ ನಗರದ ಮೇಯರ್ ಅವರ ಅಧಿಕೃತ ನಿವಾಸವಾಗಿದೆ.
ಗ್ರೇಸಿಯವರು ಸಾವಿಗೂ ಮುನ್ನ ಕೊನೆಯದಾಗಿ ನಾವು ಅವರೆಲ್ಲರನ್ನೂ ದೋಣಿಗಳಿಗೆ ಸೇರಿಸಬೇಕು ಎಂದು ಹೇಳಿದ್ದರು ಎನ್ನಲಾಗಿದೆ.