ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Xi Jinping: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇಪಥ್ಯಕ್ಕೆ ಸರಿಯುತ್ತಿದ್ದಾರೆಯೇ?! ಬ್ರಿಕ್ಸ್‌ ಶೃಂಗಕ್ಕೂ ಗೈರು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇಪಥ್ಯಕ್ಕೆ ಸರಿಯುತ್ತಿದ್ದಾರೆಯೇ?! ಹೀಗೊಂದು ಪ್ರಶ್ನೆ ಜಗತ್ತನ್ನು ಕಾಡಲು ಆರಂಭವಾಗಿದೆ. ಯಾಕೆಂದರೆ ಮೇ 21 ಮತ್ತು ಜೂನ್‌ 5ರ ನಡುವೆ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಚೀನಾದಂಥ ದಿಗ್ಗಜ ದೇಶದ ಅಧ್ಯಕ್ಷರೇ ಹೀಗೆ ನಾಪತ್ತೆಯಾಗಿದ್ದು ಸಹಜವಾಗಿ ಅನುಮಾನ ಮೂಡಿಸಿದೆ. ಈ ಬಗ್ಗೆ ಇಲ್ಲಿದೆ ವಿವರ.

ನೇಪಥ್ಯಕ್ಕೆ ಸರಿದ್ರಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌?

ಕ್ಸಿ ಜಿನ್‌ಪಿಂಗ್‌.

Profile Ramesh B Jul 2, 2025 8:31 PM

ಬೀಜಿಂಗ್‌: ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಮೇ 21 ಮತ್ತು ಜೂನ್‌ 5ರ ನಡುವೆ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಯಾವುದೇ ದೇಶದ ಅಧ್ಯಕ್ಷ, ಪ್ರಧಾನಿ ಹುದ್ದೆಯಲ್ಲಿ ಇರುವವರು ನಿಂತರೂ, ಕುಂತರೂ ಸುದ್ದಿಯಾಗುತ್ತದೆ. ಏಕೆಂದರೆ ಅವರು ಸಾರ್ವಜನಿಕ ಜೀವನದಲ್ಲಿ ಇರುವವರು. ಒಂದು ದಿನವೂ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ. ಹೀಗಿರುವಾಗ ಎರಡು ವಾರಗಳ ಕಾಲ ಹೊರಗಡೆ ಎಲ್ಲೂ ಕಾಣಿಸಿಕೊಳ್ಳದಿದ್ದರೆ? ಅದೂ ಚೀನಾದಂಥ ದಿಗ್ಗಜ ದೇಶದ ಅಧ್ಯಕ್ಷರೇ ಹೀಗೆ ನಾಪತ್ತೆಯಾದರೆ ಜಗತ್ತಿನ ಗಮನ ಸೆಳೆಯದೆ ಇರಲು ಸಾಧ್ಯವೇ? ಸಂಶಯ ಮೂಡುವುದು ಸಹಜ.

ಬ್ರೆಜಿಲ್‌ನಲ್ಲಿ ಇದೇ ಜುಲೈ 6-7ರಂದು ನಡೆಯಲಿರುವ ಬ್ರಿಕ್ಸ್‌ ಶೃಂಗ ಸಮಾವೇಶಕ್ಕೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಗೈರು ಹಾಜರಾಗುತ್ತಿದ್ದಾರೆ. ಅವರ ಬದಲಿಗೆ ಅಲ್ಲಿನ ಪ್ರಧಾನಿ ಲಿ ಕಿಯಾಂಗ್‌ ಆಗಮಿಸಲಿದ್ದಾರೆ. 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ರಿಕ್ಸ್‌ ಶೃಂಗ ಸಮಾವೇಶದಿಂದ ಜಿನ್‌ಪಿಂಗ್‌ ದೂರ ಉಳಿಯುತ್ತಿದ್ದಾರೆ.

ಹೀಗಾಗಿ ಅಧ್ಯಕ್ಷರ ಮಿಸ್ಸಿಂಗ್‌ ಬಗ್ಗೆ ಗುಸುಗುಸು ಚರ್ಚೆ ಶುರುವಾಗಿದೆ. ಚೀನಾ ಕಮ್ಯುನಿಸ್ಟ್‌ ಪಾರ್ಟಿಯಲ್ಲಿ ಕ್ಸಿ ಜಿನ್‌ ಪಿಂಗ್‌ ಪ್ರಭಾವ ಕಡಿಮೆಯಾಗುತ್ತಿದೆಯೇ? ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು, ಅಥವಾ ನೇಪಥ್ಯಕ್ಕೆ ಸರಿಸಲು ಯತ್ನ ನಡೆಯುತ್ತಿದೆಯೇ ಎಂಬ ವದಂತಿ ಹರಡಿದೆ.



ಸಿಎನ್‌ಎನ್-ನ್ಯೂಸ್‌ 18 ಈ ಬಗ್ಗೆ ವರದಿ ಮಾಡಿದೆ. ಚೈನೀಸ್‌ ಡೈಲಿ ಕೂಡ ಕ್ಸು ಜಿನ್‌ ಪಿಂಗ್‌ ಬಹಿರಂಗವಾಗಿ ಕಾಣಿಸದಿರುವುದರ ಬಗ್ಗೆ ವರದಿ ಮಾಡಿದೆ. ಚೀನಾದ ಇಂಟಲಿಜೆನ್ಸ್‌ ಮೂಲಗಳು ಕ್ಸಿ ಜಿನ್‌ಪಿಂಗ್‌ ಕುರಿತ ವದಂತಿಗಳನ್ನು ಅಲ್ಲಗಳೆದಿವೆ. ಚೀನಾದ ಚರಿತ್ರೆಯಲ್ಲಿ ಪ್ರಮುಖ ನಾಯಕರನ್ನು ನೇಪಥ್ಯಕ್ಕೆ ಸರಿಸುವುದು ಹೊಸತೇನಲ್ಲ ಎಂಬಂತೆ ಇಂಟಲಿಜೆನ್ಸ್‌ ಮೂಲಗಳು ತಿಳಿಸಿವೆ. ಹೀಗಿದ್ದರೂ, ಜಿನ್‌ ಪಿಂಗ್‌ ಅವರನ್ನು ಕಮ್ಯುನಿಸ್ಟ್‌ ಪಕ್ಷ ಮೂಲೆಗುಂಪಾಗಿಸುತ್ತಿದೆಯೇ? ಅಧಿಕಾರದ ಚುಕ್ಕಾಣಿ ಹಸ್ತಾಂತರವಾಗಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಚೈನೀಸ್‌ ಕಮ್ಯುನಿಸ್ಟ್‌ ಪಾರ್ಟಿ ಈ ಹಿಂದೆ ಮೂವರು ಪ್ರಮುಖ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಕೆಲವರ ಅಧಿಕಾರಗಳನ್ನು ಮೊಟಕುಗೊಳಿಸಿದ ಬಳಿಕ ಪದವಿಗಳಿಂದ ಕಿತ್ತು ಹಾಕಿತ್ತು. ಚೀನಾದ ಕಮ್ಯುನಿಸ್ಟ್‌ ಪಕ್ಷದ ನಡವಳಿಕೆಯೇ ಹಾಗಿರುತ್ತದೆ. ಮೊದಲಿಗೆ ನಾಯಕರನ್ನು ಮೂಲೆಗುಂಪಾಗಿಸುತ್ತದೆ. ಅಧಿಕಾರ ಬಲವನ್ನು ದುರ್ಬಲಗೊಳಿಸುತ್ತದೆ. ಆಗ ಮತ್ತೊಬ್ಬ ನಾಯಕ ಬರುತ್ತಾನೆ. ಅಧಿಕಾರ ಬದಲಾವಣೆಯಾಗುತ್ತದೆ. ಈ ಹಿಂದೆ ವಿದೇಶಾಂಗ ಸಚಿವ ಕಿನ್‌ ಗಾಂಗ್‌ ಮತ್ತು ರಕ್ಷಣಾ ಮಂತ್ರಿ ಲಿ ಶಾಂಗ್‌ ಫು ಅವರು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಬಳಿಕ ಅವರನ್ನು ಅಧಿಕಾರದಿಂದ ಇಳಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Pakistani Artist: ಪಾಕ್ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಭಾರತದಲ್ಲಿ ಮತ್ತೆ ಆಕ್ಟೀವ್‌!

ಈಗ ನಿಜವಾದ ಅಧಿಕಾರವು ಸೆಂಟ್ರಲ್‌ ಮಿಲಿಟರಿ ಕಮಿಶನ್‌ನ ಚೇರ್ಮನ್‌ ಆಗಿರುವ ಜನರಲ್‌ ಜಾಂಗ್‌ ಯುಕ್ಸಿಯಾ ಬಳಿ ಇದೆ. ಸಿಸಿಪಿಯ ಹೂ ಜಿಂಟಾವೊ ಬಣದ ಹಿರಿಯರ ಬೆಂಬಲ ಯುಕ್ಸಿಯಾಗೆ ಇದೆ ಎಂದು ವರದಿಯಾಗಿದೆ.

ಕ್ಸಿ ಜಿನ್‌ಪಿಂಗ್‌ ಅವರು ಬಲ ಕಳೆದುಕೊಂಡಿರುವಂತೆ ಕಾಣಿಸುತ್ತಿರುವುದೇಕೆ? ಕ್ಸಿ ಜಿನ್‌ ಪಿಂಗ್‌ ಅವರ ಹೇಳಿಕೆಗಳನ್ನು ಬೇರೆ ಯಾರೋ ನೀಡುತ್ತಿದ್ದಾರೆ. ಪೀಪಲ್ಸ್‌ ಡೈಲಿ ಪತ್ರಿಕೆಯಲ್ಲಿ ಈ ಹಿಂದೆ ಪ್ರತಿ ದಿನ ಅವರ ಫೋಟೊಗಳು ರಾರಾಜಿಸುತ್ತಿದ್ದವು. ಈಗ ಹೆಡ್‌ ಲೈನ್‌ನಲ್ಲಿ ಅಧ್ಯಕ್ಷರಿಲ್ಲ. ಜೂನ್‌ ಮೊದಲ ವಾರ ಮತ್ತೆ ಕ್ಸಿ ಜಿನ್‌ ಪಿಂಗ್‌ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ, ದಣಿದಂತೆ ಕಾಣುತ್ತಿದ್ದರು. ಮತ್ತೊಂದು ಕಡೆ ವಾಂಗ್‌ ಯಾಂಗ್‌ ಎಂಬ ಹೊಸ ಮುಖ ಸುದ್ದಿಯಲ್ಲಿದೆ. ಇವರೇ ಕ್ಸಿ ಜಿನ್‌ ಪಿಂಗ್‌ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ ಎಂಬ ವದಂತಿ ಹರಡಿದೆ.

ಮೊದಲನೆಯದಾಗಿ ಕ್ಸಿ ಜಿನ್‌ ಪಿಂಗ್‌ ಸೈದ್ಧಾಂತಿಕವಾಗಿ ದುರ್ಬಲವಾಗಿದ್ದಾರೆ. ಈ ನಡುವೆ ಚೀನಾದ ಆರ್ಥಿಕತೆಯೂ ಸವಾಲುಗಳನ್ನು ಎದುರಿಸುತ್ತಿದೆ. ಅವರ ರಿಯಲ್‌ ಎಸ್ಟೇಟ್‌ ವಹಿವಾಟು ಮಂದಗತಿಯಲ್ಲಿದೆ. ಟ್ರಂಪ್‌ ಅವರ ವಾಣಿಜ್ಯ ಸಂಘರ್ಷವೂ ನಕಾರಾತ್ಮಕ ಪ್ರಭಾವ ಬೀರಿದೆ. ಸೆಮಿಕಂಡಕ್ಟರ್‌ ಸೆಕ್ಟರ್‌ಗೆ ಬೇಕಾದಷ್ಟು ಫಂಡ್‌ ಸಿಗುತ್ತಿಲ್ಲ. ಅಲ್ಲಿನ 15% ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಚೀನಾದ ಸಾಲ 50 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕ್ಸಿ ಜಿನ್‌ ಪಿಂಗ್‌ ಅಧ್ಯಕ್ಷತೆಯಲ್ಲಿ ಚೀನಾ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಬ್ಬಂಟಿಯಾಗುತ್ತಿದೆ. ಸ್ನೇಹಿತರಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಚೀನಾದ ಘನತೆಯನ್ನು ಉಳಿಸಬೇಕಿದ್ದರೆ ಕ್ಸಿ ಜಿನ್‌ ಪಿಂಗ್‌ ಅವರನ್ನು ಬದಲಾಯಿಸುವುದು ಮುಖ್ಯ ಎಂದು ಕಮ್ಯುನಿಸ್ಟ್‌ ಪಕ್ಷದಲ್ಲಿನ ಹಿರಿಯರು ಅಭಿಪ್ರಾಯಪಡುತ್ತಿದ್ದಾರೆ ಎಂದು ವರದಿಯಾಗಿದೆ. ತನ್ನ ಆಂತರಿಕ ಸಮಸ್ಯೆಗಳನ್ನು, ಅಸ್ಥಿರತೆಗಳನ್ನು ಮುಚ್ಚಿ ಹಾಕುವ ಯತ್ನವಾಗಿ ಚೀನಾವು ವಿದೇಶಗಳ ಜತೆಗೆ ಸಂಘರ್ಷಕ್ಕಿಳಿಯುವುದು ಚಾಳಿಯಾಗಿದೆ. ಮುಖ್ಯವಾಗಿ ಭಾರತದ ವಿರುದ್ಧ ಮಸಲತ್ತು ನಡೆಸುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶ, ಲಡಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಲು ಹೊಂಚು ಹಾಕಬಹುದು. ಸೈಬರ್‌ ದಾಳಿ ಮಾಡಬಹುದು ಎಂದು ನ್ಯೂಸ್‌ 18 ವರದಿ ಮಾಡಿದೆ.

ಹೀಗಿದ್ದರೂ, ಭಾರತ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಬಲವಾಗಿದೆ. ಮಿಲಿಟರಿ ಮತ್ತು ರಾಜತಾಂತ್ರಿಕ ವಿಚಾರದಲ್ಲಿ ಬಲಾಢ್ಯವಾಗಿದೆ. ಆದ್ದರಿಂದ ಚೀನಾ ಕಡೆಯಿಂದ ಸಂಭವನೀಯ ಬೆದರಿಕೆಯನ್ನು ಸಮರ್ಥವಾಗಿ ಮಟ್ಟಹಾಕುವ ಸಾಮರ್ಥ್ಯ ಭಾರತಕ್ಕಿದೆ. ಜತೆಗೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಅನ್ನು ಒಳಗೊಂಡಿರುವ ಕ್ವಾಡ್‌ ಒಕ್ಕೂಟವೂ ಚೀನಾದ ಬೆದರಿಕೆಗಳನ್ನು ಎದುರಿಸಲು ಸಜ್ಜಾಗಿವೆ. ಭಾರತಕ್ಕೆ ಈಗಾಗಲೇ ಕ್ವಾಡ್‌ ಬೆಂಬಲದ ರಕ್ಷೆ ಇದೆ.