Actor Sridhar: ಮತ್ತೆ ಬಣ್ಣ ಹಚ್ಚುತ್ತೇನೆ ಎಂದು ನೆನಪಿನ ಪುಟಕ್ಕೆ ಸಂದ ಶ್ರೀಧರ್; ವಿಶ್ವವಾಣಿ ಮುಂದೆ ವೇದನೆ ಬಿಚ್ಚಿಟ್ಟಿದ್ದ ನಟ
Actor Sridhar: ವಧು, ಪಾರು ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದ, ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ನಟ ಶ್ರೀಧರ್ ನಿಧನಕ್ಕೆ ಚಿತ್ರರಂಗದ ಹಲವರು ಮತ್ತು ಅವರ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅನಾರೋಗ್ಯಕ್ಕೆ ಈಡಾದಾಗ ತಮ್ಮ ನೆನಪಿನ ಬುತ್ತಿಯಿಂದ ಹಲವನ್ನು ಅವರು ʼವಿಶ್ವವಾಣಿʼ ಜೊತೆ ಹಂಚಿಕೊಂಡಿದ್ದರು.

ನಟ ಶ್ರೀಧರ್

ಬೆಂಗಳೂರು: ಪಾರು, ವಧು ಇತ್ಯಾದಿ ಧಾರಾವಾಹಿಗಳಲ್ಲಿ (Vadhu serial, Paru Serial)ನಟಿಸಿದ್ದ, ‘ಮ್ಯಾಕ್ಸ್’ ಚಿತ್ರದಲ್ಲಿ (Max film) ಅಭಿನಯಿಸಿ ಗಮನ ಸೆಳೆದಿದ್ದ ಜನಪ್ರಿಯ ಕಿರುತೆರೆ ನಟ ಶ್ರೀಧರ್ (Actor Sridhar) ಅವರು ಇನ್ನಿಲ್ಲ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಂಗಳೂರಿನ (Bengaluru) ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಒಂದು ತಿಂಗಳ ಹಿಂದೆ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು.
‘ವಧು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಶ್ರೀಧರ್ ಅವರು ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದರು. ಇನ್‌ಫೆಕ್ಷನ್‌ನಿಂದ ನಟ ತೀವ್ರ ಅಸ್ವಸ್ಥರಾಗಿದ್ದರು. ಹೆಬ್ಬಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಸೇರಿಸಲಾಗಿದ್ದು, ಅವರ ತಾಯಿ ನೋಡಿಕೊಳ್ಳುತ್ತಿದ್ದರು. ಕಿರುತೆರೆಯ ಕೆಲವು ಗೆಳೆಯರು ಸಹ ಸಹಾಯ ಮಾಡಿದ್ದರು.
ವಧು, ಪಾರು ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಅವರು ನಟಿಸಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ಅವರು ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಹಲವರು ಮತ್ತು ಅವರ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಶ್ರೀಧರ್‌ಗೆ ಏನಾಗಿತ್ತು?
ದೇಹದಲ್ಲಿ ವಿಟಮಿನ್ ಕೊರತೆ ಮತ್ತು ಇನ್‌ಫೆಕ್ಷನ್‌ನಿಂದಾಗಿ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದರು. ಶ್ರೀಧರ್ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಾದಾಗ ಅವರ ಅಮ್ಮ ಬಂದಿದ್ದರು. ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು.
ಅಕ್ಟೋಬರ್‌ನಲ್ಲೇ ಆರೋಗ್ಯ ಸಮಸ್ಯೆ ಎದುರಾಗಿತ್ತು. ವಿಟಮಿನ್, ಪ್ರೋಟಿನ್ ವಿಪರೀತ ಕಡಿಮೆ ಆಗಿತ್ತು. ಮೊದಲು ಜ್ವರ ಬಂತು, ಆಮೇಲೆ ಕಫ ಆಗಿದೆ ಅಂತ ಡಾಕ್ಟರ್‌ಗೆ ತೋರಿಸಿದೆ. ಆದರೂ ಕಡಿಮೆ ಆಗಲಿಲ್ಲ. ಆಗ ಕಾಲೆಲ್ಲಾ ಊದಿಕೊಳ್ಳುತ್ತಿತ್ತು. ಅದರಲ್ಲೇ ನಾನು ವಧು, ಸಿಂಧೂ ಭೈರವಿ ಶೂಟಿಂಗ್‌ಗೆ ಹೋಗ್ತಿದ್ದೆ. ನಂತರ ನನಗೆ ತುಂಬಾ ಸುಸ್ತು ಆಗೋಕೆ ಶುರುವಾಯ್ತು ಎಂದು ಶ್ರೀಧರ್ ಹೇಳಿಕೊಂಡಿದ್ದರು.

ನನ್ನ ಸ್ನೇಹಿತರೊಬ್ಬರು ಆರ್ಯುವೇದಿಕ್ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ಆ ವೈದ್ಯರು ನನಗೆ 20 ದಿನಗಳ ಪಥ್ಯ ಮಾಡಲು ಹೇಳಿದರು. ಆನಂತರ ಇಡೀ ದೇಹ ಊದಿಕೊಂಡಿತು. ಅವರು ಅದೇನು ಔಷಧ ಕೊಟ್ಟರೋ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು ಎಂದು ಶ್ರೀಧರ್ ಹೇಳಿಕೊಂಡಿದ್ದರು.
"ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾನು 15 ದಿವಸ ಇದ್ದೆ. ಯಾವುದೇ ಟ್ರೀಟ್‌ಮೆಂಟ್ ಕೊಡಲಿಲ್ಲ. ಆನಂತರ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರು. ನನಗೆ ಯಾವ ಕೆಟ್ಟ ಅಭ್ಯಾಸವೂ ಇರಲಿಲ್ಲ. ಆದರೂ ಹೀಗ್ಯಾಕಾಯ್ತೋ ಗೊತ್ತಿಲ್ಲ" ಎಂದು ಶ್ರೀಧರ್ ದುಃಖ ತೋಡಿಕೊಂಡಿದ್ದರು.
ತಮ್ಮ ಜೀವನದ ಕಹಿ ಸತ್ಯವನ್ನು ಅವರು ವಿಶ್ವವಾಣಿ ಪ್ರತಿನಿಧಿ ಜತೆ ತೆರೆದಿಟ್ಟಿದ್ದರು. ‘‘30 ವರ್ಷ ಆದಮೇಲೆ ಅಮ್ಮ ನನ್ನನ್ನು ನೋಡಲು ಬಂದಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಮ್ಮಂದಿರು ಬಂದು ಹೋಗುತ್ತಿದ್ದಾರೆ, ಮಾತನಾಡಿಸುತ್ತಿದ್ದಾರೆ. ಜ್ವರ, ನೆಗಡಿ, ಕೆಮ್ಮು ಆತರಹ ಇದೆಲ್ಲಾ ಏನೂ ಬರುವುದಿಲ್ಲ ನನಗೆ. ಚಿಕ್ಕ ವಯಸ್ಸಿನಿಂದ ಸಂಬಂಧಗಳನ್ನು ಕಳೆದುಕೊಂಡು, ಆರ್ಥಿಕವಾಗಿ ನಷ್ಟ ಹೊಂದಿ, ಸಾಂಸಾರಿಕವಾಗಿ ದೂರವಾಗಿ, ಎಲ್ಲಾ ಅನುಭವಿಸಿಬಿಟ್ಟೆ’’ ಎಂದು ಹೇಳಿದ್ದರು.
‘‘ಮನೆಯಲ್ಲಿ ತುಂಬಾ ಕಷ್ಟ ಇತ್ತು. ನನಗೆ 22 ವರ್ಷ ವಯಸ್ಸಿದ್ದಾಗ ನಾನು ಆರ್ಟಿಸ್ಟ್ ಆಗಬೇಕು ಅಂತ ಮನೆಯಿಂದ ಹೊರ ಬಂದೆ. 30 ವರ್ಷ ಆದಮೇಲೆ ನನ್ನನ್ನು ನೋಡಲು ಅಮ್ಮ ಮತ್ತು ತಮ್ಮಂದಿರು ಈಗ ಬಂದಿದ್ದಾರೆ. ಸಂಪಾದನೆ ಇರಲಿಲ್ಲ, ನಾನು ಆರನೇ ತರಗತಿಯಲ್ಲಿದ್ದಾಗಲೇ ನನ್ನ ತಂದೆ ತೀರಿಕೊಂಡರು. ನಾವು ಬೀದಿಗೆ ಬಂದುಬಿಟ್ಟಿದ್ದೆವು. ಅಮ್ಮ ಕೆಲಸ ಮಾಡಿಕೊಂಡು ಒಂದು ಚಿಕ್ಕ ಮನೆಯಲ್ಲಿ ನಮ್ಮನ್ನೆಲ್ಲಾ ಸಾಕುತ್ತಿದ್ದರು. ಜೀವನದಲ್ಲಿ ಬದುಕಬೇಕು ಅನ್ನೋದಿತ್ತು ನನಗೆ. ಆ ಆಸೆ ಈಗಿನ್ನೂ ಜಾಸ್ತಿಯಾಗಿದೆ. ನಾನು ಖಂಡಿವಾಗಿಯೂ ರೆಡಿಯಾಗಿ ಹಳೆಯ ಶ್ರೀಧರ್ ಆಗಿ ಬರುತ್ತೇನೆ. ಈ ವರ್ಷಕ್ಕೆ 50 ವರ್ಷ ತುಂಬುತ್ತದೆ ನನಗೆ. ಐವತ್ತು ವರ್ಷ ಬರೀ ಕಷ್ಟಗಳನ್ನೇ ನೋಡಿದ್ದೇನೆ’’ ಎಂದು ಶ್ರೀಧರ್ ಹೇಳಿಕೊಂಡಿದ್ದರು.
‘ಈಗ ಚೇತರಿಸಿಕೊಳ್ಳುತ್ತಿದ್ದೀನಿ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನನ್ನು ಕೇಳುವವರು ಯಾರಿದ್ದಾರೆ ಅಂದುಕೊಂಡಿದ್ದೆ. ದೇವರ ರೂಪದಲ್ಲಿ ದೇವರು ತುಂಬಾ ಜನರನ್ನು ಕಳುಹಿಸಿದ್ದಾನೆ. ನನಗೆ ಮನುಷ್ಯರ ಮೇಲೆ ನಂಬಿಕೆ ಇರಲಿಲ್ಲ. ನಾನು ನಂಬೋದೆ ದೇವರನ್ನ, ಆದರೆ ಅವರು ಮನುಷ್ಯರಲ್ಲ ದೇವರ ರೂಪದಲ್ಲಿ ಬಂದು ಸಹಾಯ ಮಾಡುತ್ತಿದ್ದಾರೆ. ದಿನಕ್ಕೆ ಈಗ 15 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಇಲ್ಲಿಯವರೆಗೂ ಲಕ್ಷಾಂತರ ರೂಪಾಯಿ ಖರ್ಚಾಗಿದೆ’’ ಎಂದು ಹೇಳಿದ್ದರು.
ಇದನ್ನೂ ಓದಿ: Actor Sridhara: ಮ್ಯಾಕ್ಸ್ ಚಿತ್ರದಲ್ಲಿ ನಟಿಸಿದ್ದ ನಟ ಶ್ರೀಧರ ಇನ್ನಿಲ್ಲ