ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಕೋವಿಡ್: ವೃದ್ಧರು, ಕಾಯಿಲೆಯಿರುವವರಿಗೆ ಮಾಸ್ಕ್ ಕಡ್ಡಾಯ: ಸಿಎಂ ಸಿದ್ದರಾಮಯ್ಯ

CM Siddaramaiah: ವೃದ್ಧರು, ಕಾಯಿಲೆಯಿರುವವರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಕೇಂದ್ರದಿಂದ ಸೂಚನೆ ಬಂದಿಲ್ಲ. ಆದರೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕೋವಿಡ್: ವೃದ್ಧರು, ಕಾಯಿಲೆಯಿರುವವರಿಗೆ ಮಾಸ್ಕ್ ಕಡ್ಡಾಯ: ಸಿಎಂ

Profile Siddalinga Swamy May 27, 2025 2:07 PM

ಬೆಂಗಳೂರು: ಸ್ವತಂತ್ರ ಭಾರತದ ಮೊದಲನೇ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)‌ ತಿಳಿಸಿದರು. ವಿಧಾನಸೌಧದ ಪೂರ್ವ ದ್ವಾರದ ಬಳಿ ಇರುವ ಮಾಜಿ ಪ್ರಧಾನಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನೆಹರೂ ಅವರ ಪುಣ್ಯ ತಿಥಿಯನ್ನು ಸರ್ಕಾರ ಗೌರವ ಹಾಗೂ ಅಭಿಮಾನದಿಂದ ನೆರವೇರಿಸಿದೆ. ದೇಶದ ಬಡತನವನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಉದ್ಯೋಗ ಸೃಷ್ಟಿ, ಮಿಶ್ರ ಆರ್ಥಿಕತೆಯನ್ನು ದೇಶದಲ್ಲಿ ಪರಿಚಯಿಸಿದ್ದಲ್ಲದೆ ದೇಶದಲ್ಲಿ ಹಸಿರು ಕ್ರಾಂತಿಗೆ ಅಡಿಗಲ್ಲು ಹಾಕಿದರು. ಸಹಕಾರಿ ಚಳವಳಿ, ವಿಕೇಂದ್ರೀಕರಣಕ್ಕೆ ಬದ್ಧತೆಯಿಂದ ಕೆಲಸ ಮಾಡಿದರು ಎಂದು ಹೇಳಿದರು.

ನೆಹರು ಅವರು ಪ್ರಧಾನಿಗಳಾಗಿದ್ದ 17 ವರ್ಷಗಳ ಅವಧಿಯಲ್ಲಿ ಅನೇಕ ಅಣೆಕಟ್ಟು, ಸಾರ್ವಜನಿಕ ವಲಯದಲ್ಲಿ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದರು. ದೇಶ ಆರ್ಥಿಕವಾಗಿ ಸಬಲತೆಯನ್ನು ಕಂಡುಕೊಂಡಿದ್ದರೆ, ಆಹಾರದಲ್ಲಿ ಸ್ವಾವಲಂಬನೆಯನ್ನು ಕಂಡುಕೊಂಡಿದ್ದರೆ ನೆಹರೂ ಅವರು ಹಾಕಿದ ಅಡಿಪಾಯ ಕಾರಣ ಎಂದರು. ನೆಹರೂ ಅವರನ್ನು ಗೌರವದಿಂದ ಸ್ಮರಿಸುವ ಕೆಲಸವನ್ನು ಪ್ರತಿಯೊಬ್ಬ ಭಾರತೀಯನೂ ಮಾಡಬೇಕು ಎಂದರು.

ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಕೇಂದ್ರದಿಂದ ಸೂಚನೆ ಬಂದಿಲ್ಲ

ಕೋವಿಡ್ ಸಂಬಂಧಿಸಿದಂತೆ ನಿನ್ನೆ ನಡೆದ ಸಭೆಯಲ್ಲಿ ಮುನ್ನೆಚ್ಚರಿಕಾ ಬಗ್ಗೆ ಚರ್ಚಿಸಲಾಗಿದೆ. ನಾವು ಎಲ್ಲದ್ದಕ್ಕೂ ಸಿದ್ಧರಾಗಿರಬೇಕು. ವೆಂಟಿಲೇಟರ್, ಆಮ್ಲಜನಕ, ವಾರ್ಡ್‌ಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸುಮಾರು 65 ಇದ್ದ ಪ್ರಕರಣಗಳು 80 ಆಗಿವೆ. ಇದು ಗಂಭೀರವಾದ ತಳಿಯಲ್ಲ. ನೆಗಡಿ, ಕೆಮ್ಮು, ಜ್ವರ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಹಾಗೂ ವೃದ್ಧರು, ವಿವಿಧ ಕಾಯಿಲೆಗಳಿಗೆ ತುತ್ತಾಗಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಲಸಿಕೆಗಳನ್ನು. ಮುನ್ನೆಚ್ಚರಿಕಾ ಕ್ರಮವಾಗಿ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | Corona Virus: ಸರಕಾರ ಹೈ ಅಲರ್ಟ್‌, ಆಸ್ಪತ್ರೆಗಳಲ್ಲಿ ಕೋವಿಡ್‌ ಬೆಡ್‌ ಹೆಚ್ಚಳ, ಆರೋಗ್ಯ ಸಿಬ್ಬಂದಿ ರಜೆ ರದ್ದು

ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿಲ್ಲ. ಆದರೆ ವೃದ್ಧರು, ಕಾಯಿಲೆಯಿರುವವರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಕೇಂದ್ರದಿಂದ ಸೂಚನೆ ಬಂದಿಲ್ಲ. ಆದರೆ ಎಚ್ಚರಿಕೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.