Auto Fare Hike: ಬೆಂಗಳೂರಿಗರಿಗೆ ಮತ್ತೊಂದು ಶಾಕ್, ಆ.1ರಿಂದ ಆಟೋ ದರ ಏರಿಕೆ
Auto Fare Hike: ಬೆಂಗಳೂರಿನಲ್ಲಿ ಕನಿಷ್ಠ ಎರಡು ಕಿಮೀ ಆಟೋ ಪ್ರಯಾಣ ದರ 30 ರೂ.ನಿಂದ 36ರೂ.ಗೆ ಹೆಚ್ಚಳವಾಗಿದೆ. ಈ ಮೂಲಕ 6 ರೂ. ಹೆಚ್ಚಿಸಲಾಗಿದೆ. ಕನಿಷ್ಠ ಪ್ರಯಾಣ ದರ ಬಳಿಕ ಪ್ರತಿ ಕಿಮೀ.ಗೆ 15 ರೂ.ನಿಂದ 18 ರೂ.ಗೆ ಏರಿಕೆ ಮಾಡಲಾಗಿದೆ. ಕಾಯುವಿಕೆ ದರ ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ. ನಿಗದಿ ಮಾಡಲಾಗಿದೆ.


ಬೆಂಗಳೂರು: ನಮ್ಮ ಮೆಟ್ರೋ (Namma Metro) ರೈಲು ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸದ್ಯ ಎರಡು ಕಿಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರೂಪಾಯಿ ಇದೆ. ಇದೀಗ ಆ ದರವನ್ನು ಎರಡು ಕಿಮೀಗೆ 36 ರುಪಾಯಿಗೆ ಏರಿಕೆ (Auto Fare Hike) ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನೂತನ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
ಬೆಂಗಳೂರಿನಲ್ಲಿ ಕನಿಷ್ಠ ಎರಡು ಕಿಮೀ ಆಟೋ ಪ್ರಯಾಣ ದರ 30 ರೂ.ನಿಂದ 36ರೂ.ಗೆ ಹೆಚ್ಚಳವಾಗಿದೆ. ಈ ಮೂಲಕ 6 ರೂ. ಹೆಚ್ಚಿಸಲಾಗಿದೆ. ಕನಿಷ್ಠ ಪ್ರಯಾಣ ದರ ಬಳಿಕ ಪ್ರತಿ ಕಿಮೀ.ಗೆ 15 ರೂ.ನಿಂದ 18 ರೂ.ಗೆ ಏರಿಕೆ ಮಾಡಲಾಗಿದೆ. ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿದೆ. ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ. ನಿಗದಿ ಮಾಡಲಾಗಿದೆ.
ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. ಮೊದಲ 20ಕೆ.ಜಿ.ಯಿಂದ ನಂತರ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 10 ರೂ. ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ ಸೀಮಿತಗೊಳಿಸಲಾಗಿದೆ. ರಾತ್ರಿ ವೇಳೆ ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ಪಡೆಯಬಹುದು. ಇದು ರಾತ್ರಿ 10 ಗಂಟೆಯಿಂದ ನಸುಕಿನ ಜಾವ 5 ಗಂಟೆಯವರೆಗೆ ಮಾತ್ರ ಅನ್ವಯವಾಗುತ್ತದೆ.
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸರ್ಕಾರ ಸೂಚಿಸಿದ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಆದೇಶ ಇದೆ. ಅದನ್ನು ಮೀರಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆದುಕೊಂಡರೆ ಅಂತಹ ಕಂಪನಿಗಳ ವಿರುದ್ಧ ಮೊದಲು ನೋಟಿಸ್ ನೀಡಲಾಗುತ್ತದೆ. ನಂತರ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆರ್ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Karnataka weather: ಇಂದಿನ ಹವಾಮಾನ; ಬೆಂಗಳೂರು, ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸಾಧ್ಯತೆ