Vishwavani Editorial: ಈ ಅಕ್ರಮವು ಸಕ್ರಮ ಆಗದಿರಲಿ
ಅಕ್ರಮ ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡದೆ, ತಮ್ಮ ವೋಟ್ ಬ್ಯಾಂಕ್ ರಾಜಕಾರಣದ ತಳಹದಿ ಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲೆಂದು ಇವರಿಗೆ ವಾಮಮಾರ್ಗದಲ್ಲಿ ವಿಳಾಸದ ಪುರಾವೆಯನ್ನು ದಕ್ಕಿಸಿಕೊಡಲಾಗುತ್ತಿದೆ ಎಂಬುದೂ ಆಗಾಗ ಕಿವಿಗೆ ಅಪ್ಪಳಿಸುವ ಆರೋಪ. ಇದು ಒಂದೊಮ್ಮೆ ನಿಜವಾ ಗಿದ್ದಲ್ಲಿ, ಇಂಥ ಪರಿಪಾಠಗಳಿಗೆ ಆದಷ್ಟು ಬೇಗ ತಿಲಾಂಜಲಿ ನೀಡಬೇಕಾದ್ದು ಇಂಥ ಆಶ್ರಯದಾತರ ಆದ್ಯಕರ್ತವ್ಯವಾಗಬೇಕು.


ಬಿಹಾರ ವಿಧಾನಸಭೆಗೆ ಈ ವರ್ಷದ ಅಕ್ಟೋಬರ್-ನವೆಂಬರ್ ಸುಮಾರಿಗೆ ಚುನಾವಣೆ ನಡೆಯ ಲಿರುವ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಮುಂದಾದಾಗ ನೇಪಾಳ, ಬಾಂಗ್ಲಾ ಮತ್ತು ಮ್ಯಾನ್ಮಾರ್ ದೇಶಗಳ ಪ್ರಜೆಗಳ ಹೆಸರು ಗಣನೀಯ ಸಂಖ್ಯೆಯಲ್ಲಿ ಪತ್ತೆಯಾಗಿರು ವುದು ವರದಿಯಾಗಿದೆ.
ಇದು ನಿಜಕ್ಕೂ ಆಘಾತಕಾರಿ ಸಂಗತಿಯೇ ಸರಿ. ಈ ಅನ್ಯದೇಶಿಗರು ತಮ್ಮದಲ್ಲದ ದೇಶದಲ್ಲಿ ಹೀಗೆ ನೆಲೆಸುವುದಕ್ಕೆ ಸಾಧ್ಯವಾಗಿದ್ದಾರೂ ಹೇಗೆ? ಅಂಥದೊಂದು ಧಾರ್ಷ್ಟ್ಯವನ್ನು ಅವರಲ್ಲಿ ತುಂಬಿದ ಅಂಶವಾದರೂ ಯಾವುದು? ಅದರ ಹಿಂದಿರುವ ಶಕ್ತಿಗಳು ಯಾರು? ಎಂಬೆಲ್ಲ ಪ್ರಶ್ನೆಗಳು ಈ ಸಂದರ್ಭದಲ್ಲಿ ಉದ್ಭವಿಸುವುದು ಸಹಜವೇ. ಪಶ್ಚಿಮ ಬಂಗಾಳ ರಾಜ್ಯದ ಗಡಿಭಾಗವು ಅಕ್ರಮ ನುಸುಳುಕೋರರ ಪಾಲಿಗೆ ‘ಮಹಾದ್ವಾರ’ವೇ ಆಗಿಬಿಟ್ಟಿವೆ ಎಂಬ ಮಾತು ಆಗಾಗ ಕೇಳಿಬರುವುದಿದೆ (ಇದು ಸಾಕಷ್ಟು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲೂ ಕಾಣಬರುತ್ತಿದ್ದ ವಸ್ತುಸ್ಥಿತಿಯಾಗಿದ್ದು ಈಗ ತಹಬಂದಿಗೆ ಬಂದಿದೆ ಎನ್ನಿ).
ಇದನ್ನೂ ಓದಿ: Vishwavani Editorial: ಹೃದಯಾಘಾತ: ಆತಂಕ ಬೇಡ
ಆದರೆ ಅಕ್ರಮ ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡದೆ, ತಮ್ಮ ವೋಟ್ ಬ್ಯಾಂಕ್ ರಾಜಕಾರಣದ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲೆಂದು ಇವರಿಗೆ ವಾಮಮಾರ್ಗದಲ್ಲಿ ವಿಳಾಸದ ಪುರಾವೆಯನ್ನು ದಕ್ಕಿಸಿಕೊಡಲಾಗುತ್ತಿದೆ ಎಂಬುದೂ ಆಗಾಗ ಕಿವಿಗೆ ಅಪ್ಪಳಿಸುವ ಆರೋಪ. ಇದು ಒಂದೊಮ್ಮೆ ನಿಜವಾಗಿದ್ದಲ್ಲಿ, ಇಂಥ ಪರಿಪಾಠಗಳಿಗೆ ಆದಷ್ಟು ಬೇಗ ತಿಲಾಂಜಲಿ ನೀಡಬೇಕಾದ್ದು ಇಂಥ ಆಶ್ರಯದಾತರ ಆದ್ಯಕರ್ತವ್ಯವಾಗಬೇಕು.
ಅಕ್ರಮ ನುಸುಳುಕೋರರಿಂದ ಇಂಥ ‘ಆಶ್ರಯದಾತ’ರಿಗೆ ತಾತ್ಪೂರ್ತಿಕ ಪ್ರಯೋಜನ ದಕ್ಕಿರ ಬಹುದು; ಆದರೆ ಅದು ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗಳಿಗೆ ಸಂಚಕಾರ ತರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರಪಂಚದ ವಿವಿಧೆಡೆಗಳಲ್ಲಿ ‘ಭೂರಾಜಕೀಯ’ ಎಂಬುದು ದಿನಕ್ಕೊಂದು ಹೊಸ ಆಯಾಮವನ್ನು ದಕ್ಕಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಎಚ್ಚರದಲ್ಲಿ ನಾವು ಇರಬೇಕಾದ ಅಗತ್ಯವಿದೆ.