Chalavadi Narayanaswamy: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಹನ್ನೊಂದು ಯುವ ಮಕ್ಕಳ ಸಾವಿಗೆ ಕಾರಣ ನೇರವಾಗಿ ರಾಜ್ಯ ಸರ್ಕಾರವೇ ಹೊರಬೇಕಾಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನೇರ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.


ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿಯ ಸಾವಿನ ಜವಾಬ್ದಾರಿ ನೇರವಾಗಿ ರಾಜ್ಯ ಸರ್ಕಾರವೇ ಹೊರಬೇಕಾಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನೇರ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ. ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಂಭ್ರಮಾಚರಣೆ ಮಾಡಬೇಕಾಗಿದ್ದದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯವರು, ಇವರು ಯಾಕೆ ಮಾಡಬೇಕಾಗಿತ್ತು ಎಂದು ಪ್ರಶ್ನಿಸಿದರು.
ಇಂತಹ ದುರ್ಘಟನೆಯಲ್ಲಿ ಮಡಿದವರಿಗೆ ಸರ್ಕಾರ ಕೇವಲ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವುದು ಸರಿಯಲ್ಲ, ರೌಡಿಗಳು ಮತ್ತು ದೇಶದ್ರೋಹಿಗಳಿಗೆ 25 ಲಕ್ಷ ರೂ. ಕೊಡುತ್ತಾರೆ. ಅದೇ ರಾಜ್ಯ ಸರ್ಕಾರವೇ ಹೊಣೆಯಾಗಿರುವ ದುರ್ಘಟನೆಯಲ್ಲಿ ಮಡಿದವರಿಗೆ 10 ಲಕ್ಷ ರೂ. ಘೋಷಣೆ ಮಾಡಿರುವುದು ನಾಚಿಕೆಗೇಡಿನ ಸಂಗತಿ, ಜನರ ಪ್ರಾಣಕ್ಕೆ ಬೆಲೆಯಿಲ್ಲವೇ ಎಂದು ಅವರು ಖಂಡಿಸಿದರು.
ಕ್ರಿಕೆಟ್ ಟೀಮ್ನಲ್ಲಿ 11 ಜನ ಆಟ ಆಡುತ್ತಾರೆ ಹಾಗೆಯೇ ನಿನ್ನೆದಿನ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಮೃತಪಟ್ಟಿದ್ದಾರೆ. ಅಲ್ಲಿ ಹನ್ನೊಂದು ಜನರು ಆಡಿದರು, ಇಲ್ಲಿ ಹನ್ನೊಂದು ಜನರನ್ನು ಬಲಿ ಪಡೆದಿರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ತಾವು ಕಾರಣವೆಲ್ಲವೆಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನೂ ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಡುತ್ತಾರೆ. ತಿಥಿ ಕಾರ್ಯಗಳನ್ನೂ ಮಾಡುವ ಸರ್ಕಾರಕ್ಕೆ ಸದರಿ ಸನ್ಮಾನ ಕಾರ್ಯಕ್ರಮವನ್ನು ಅಲ್ಲಿ ಮಾಡಲು ಏನು ತೊಂದರೆಯಾಗಿತ್ತು? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಎಲ್ಲದಕ್ಕೂ ವಿರೋಧ ಪಕ್ಷದ ನಾಯಕರು ಕಾರಣವೆಂದು ದೂರುವ ಮುಖ್ಯಮಂತ್ರಿ ಇದಕ್ಕೆಲ್ಲ ಆರ್.ಎಸ್.ಎಸ್. ಮತ್ತು ಬಿಜೆಪಿಯವರು, ವಿಜಯೇಂದ್ರ, ಆಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿನೇ ಕಾರಣವೆಂದು ಯಾಕೆ ಹೇಳುತ್ತಿಲ್ಲವೆಂದು ಛೇಡಿಸಿದರು. ಕಾಲ್ತುಳಿತ ಘಟನೆಯ ಬಗ್ಗೆ ಸ್ವಯಂಪ್ರೇರಿತ ಕೇಸ್ ದಾಖಲಿಸಿ, ನ್ಯಾಯಾಂಗ ತನಿಖೆಯಾಗಬೇಕು ಮತ್ತು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | ಬೆಂಗಳೂರು ಕಾಲ್ತುಳಿಕ್ಕೆ ಡಿಕೆಶಿ ಕಾರಣ; ಅವರನ್ನು ಸಚಿವ ಸಂಪುಟದಿಂದ ಹೊರ ಹಾಕಿ: ಎಚ್ಡಿಕೆ ಆಗ್ರಹ
ತಮಗಿರುವ ಮಾಹಿತಿಯ ಪ್ರಕಾರ ಅಪರಾಹ್ನ 3.45 ಗಂಟೆಗೆ ಮೊದಲ ಸಾವಾಗಿದೆ. ವಿಧಾನ ಸೌಧದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು, ಕ್ರಿಕೆಟ್ ಕ್ರೀಡಾಪಟುಗಳು ಸುಮಾರು 4ರಿಂದ 5 ಗಂಟೆಗೆ ಆಗಮಿಸಿದರು. ವಿಧಾನಸೌಧದ ಎಲ್ಲ ಕಡೆಯೂ ಜನರು ತುಂಬಿದ್ದರು. ಸನ್ಮಾನ ಮುಗಿಯುವಷ್ಟರಲ್ಲಿ ಸುಮಾರು 7ರಿಂದ 8 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹರಿದಾಡಿತು. ಇಷ್ಟೆಲ್ಲ ಆದರೂ ಮುಖ್ಯಮಂತ್ರಿ ಜನಾರ್ದನ ಹೋಟೆಲಿಗೆ ತೆರಳಿ ದೋಸೆ ತಿಂದಿದ್ದಾರೆ. ಸೂತಕದ ಮನೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಯಾರೆಂಬಂತಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.