Bengaluru News: ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆಂಗಳೂರಿನ ಉದ್ಯಮಿಗೆ ಬೆದರಿಕೆ; ನಾಲ್ವರು ಅರೆಸ್ಟ್
Bengaluru News: ಉದ್ಯಮಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿಗಳು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರ ಹೆಸರಿನಲ್ಲಿ ಬೆದರಿಸಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಉದ್ಯಮಿಯ ಪುತ್ರ ನೀಡಿದ ದೂರಿನನ್ವಯ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಉದ್ಯಮಿಗೆ ಬೆದರಿಕೆ ಕರೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ (Bengaluru News) ಮೊಹಮ್ಮದ್ ರಫೀಕ್, ಉತ್ತರ ಪ್ರದೇಶ ಮೂಲದ ಶಿಶುಪಾಲ್ ಸಿಂಗ್, ವಂಶ್ ಸಚ್ ದೇವ್ ಹಾಗೂ ಅಮಿತ್ ಚೌಧರಿ ಬಂಧಿತರು. ಆರೋಪಿಗಳಿಂದ ಒಂದು ಕಾರು, ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉದ್ಯಮಿಯೊಬ್ಬರಿಗೆ ಜುಲೈ 8ರಂದು ರಾತ್ರಿ ಕರೆ ಮಾಡಿದ್ದ ಆರೋಪಿಗಳು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರ ಹೆಸರಿನಲ್ಲಿ ಬೆದರಿಸಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ' ಹಣ ನೀಡದಿದ್ದರೆ ನಿನ್ನ ಮಗನನ್ನು ಕಿಡ್ನ್ಯಾಪ್ ಮಾಡುತ್ತೇವೆ' ಎಂದು ಬೆದರಿಸಿದ್ದರು. ಉದ್ಯಮಿಯ ಪುತ್ರ ನೀಡಿದ ದೂರಿನನ್ವಯ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಸಿಸಿಬಿಯ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಿದ್ದರು. ಅದರಂತೆ ಪ್ರಕರಣದ ತನಿಖೆ ಕೈಗೊಂಡ ತಂಡ ಜೆ.ಸಿ ರಸ್ತೆಯಲ್ಲಿ ಕಾರ್ ಸೌಂಡ್ ಆಕ್ಸೆಸರೀಸ್‌ಗಳನ್ನ ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ರಫೀಕ್‌ನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿಯನ್ವಯ ಉತ್ತರ ಪ್ರದೇಶದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಷ್ಣೋಯ್ ಗ್ಯಾಂಗ್‌ಗೂ ಇವರಿಗೂ ಯಾವುದೇ ಸಂಬಂಧವಿಲ್ಲ:
ಪ್ರಕರಣವೊಂದರಲ್ಲಿ ದೆಹಲಿ ಪೊಲೀಸರಿಂದ ಬಂಧನವಾಗಿದ್ದ ಮೊಹಮ್ಮದ್ ರಫೀಕ್, ಕೆಲಕಾಲ ತಿಹಾರ್ ಜೈಲಿನಲ್ಲಿ ಕಳೆದಿದ್ದ. ಆ ಸಂದರ್ಭದಲ್ಲಿ ಉತ್ತರ ಪ್ರದೇಶ ಮೂಲದ ಉಳಿದ ಮೂವರು ಆರೋಪಿಗಳ ಪರಿಚಯವಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Kalaburagi News: ಮನೆಗೆ ನುಗ್ಗಿ ದರೋಡೆ: 4 ಜನ ಅಂತಾರಾಜ್ಯ ದರೋಡೆಕೋರರ ಬಂಧನ
ಪ್ರತೀಕಾರಕ್ಕಾಗಿ ಕೃತ್ಯ
ಪ್ರಕರಣದ ದೂರುದಾರ ಉದ್ಯಮಿ ಹಾಗೂ ಇತರೆ ಮೂವರು ವ್ಯಕ್ತಿಗಳು ಸೇರಿ, ತನಗೆ ಸೈಟ್ ಹಾಗೂ ಕಾರು ಅಕ್ಸೆಸರೀಸ್‌ಗಳಲ್ಲಿನ ವ್ಯವಹಾರದಲ್ಲಿ ಮೋಸ ಮಾಡಿದ್ದರು. ಆದ್ದರಿಂದ ಬೆದರಿಕೆವೊಡ್ಡಿ ಹಣ ವಸೂಲಿ ಮಾಡುವ ದುರುದ್ದೇಶದಿಂದ ಉತ್ತರ ಪ್ರದೇಶದ ಇನ್ನೂ ಮೂವರು ಆರೋಪಿಗಳನ್ನು ಕರೆಸಿಕೊಂಡು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳು ಕೃತ್ಯ ಎಸಗಲು ಪಿಸ್ತೂಲ್ ಮತ್ತು ಗುಂಡುಗಳೊಂದಿಗೆ ಬೆಂಗಳೂರಿಗೆ ಬಂದಿದ್ದೆವೆಂದು ತಿಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವಶಪಡಿಸಿಕೊಳ್ಳುವುದು ಬಾಕಿ ಇದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.