ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Movie ticket prices: ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್‌ ದರ ಜಾರಿ; ಸರ್ಕಾರ ಆದೇಶ

Movie ticket prices: ಎಲ್ಲಾ ಭಾಷಾ ಚಲನಚಿತ್ರಗಳು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿನ ಪ್ರತಿ ಪ್ರದರ್ಶನದ ಟಿಕೆಟ್‌ನ ಬೆಲೆ ಮನರಂಜನಾ ತೆರಿಗೆಯನ್ನು ಒಳಗೊಂಡಂತೆ ರೂ. 200 ಮೀರಬಾರದು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್‌ ದರ ಜಾರಿ

Profile Prabhakara R Jul 15, 2025 9:12 PM

ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್‌ ದರ (Movie ticket prices) ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದ್ದು, ಸಿನಿಮಾ ಟಿಕೆಟ್‌ ದರ 200 ರೂ. ಮೀರದಂತೆ ಆದೇಶ ಹೊರಡಿಸಲಾಗಿದೆ. ಇದರಿಂದ ರಾಜ್ಯದ ಎಲ್ಲಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ಮುಂದೆ ಟಿಕೆಟ್ ದರ ಏಕರೂಪವಾಗಿ ಇರಲಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಅಧಿವೇಶನದ ವೇಳೆ ಸಿನಿಮಾ ಟಿಕೆಟ್‌ ಏಕರೂಪ ದರ ಬಗ್ಗೆ ಮಾತನಾಡಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಏಕರೂಪದ ಟಿಕೆಟ್‌ ದರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಿದ್ದೇವೆ ಎಂದಿದ್ದರು. ಇದೀಗ ಏಕರೂಪ ದರವನ್ನು ಜಾರಿಯಾಗಿದೆ.

ಎಲ್ಲಾ ಭಾಷಾ ಚಲನಚಿತ್ರಗಳು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿನ ಪ್ರತಿ ಪ್ರದರ್ಶನದ ಟಿಕೆಟ್‌ನ ಬೆಲೆ ಮನರಂಜನಾ ತೆರಿಗೆಯನ್ನು ಒಳಗೊಂಡಂತೆ ರೂ. 200 ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1964ರ ಸೆಕ್ಷನ್ 19ರಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014 ಅನ್ನು ಮತ್ತಷ್ಟು ತಿದ್ದುಪಡಿ ರಾಜ್ಯ ಸರ್ಕಾರ ಕರಡು ರೂಪಿಸಿದೆ. ಈ ಕರಡನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ನಿಗದಿತ ಅವಧಿಯೊಳಗೆ ಇದಕ್ಕೆ ಸಂಬಂಧಿಸಿ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಯನ್ನು ಪರಿಗಣಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

2017ರಲ್ಲಿ, ಆಗಿನ ಸಿದ್ದರಾಮಯ್ಯ ಸರ್ಕಾರ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆಯನ್ನು 200 ರೂ.ಗೆ ಮಿತಿಗೊಳಿಸುವುದಾಗಿ ಘೋಷಿಸಿತ್ತು, ಆದರೆ ಆದೇಶವನ್ನು ಹೈಕೋರ್ಟ್‌ನಲ್ಲಿ ತಡೆಹಿಡಿಯಲಾಯಿತು. ಇದಾದ ನಂತರ ಸರ್ಕಾರ ಆದೇಶವನ್ನು ಹಿಂತೆಗೆದುಕೊಂಡಿತ್ತು.

ಕಳೆದ ಮಾರ್ಚ್ 6 ರಂದು ಕೌನ್ಸಿಲ್‌ನಲ್ಲಿ ಸರ್ಕಾರ ಟಿಕೆಟ್ ಬೆಲೆಗಳನ್ನು ನಿಗದಿಪಡಿಸಲು ಏಕೆ ಮಧ್ಯಪ್ರವೇಶಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಗೃಹ ಸಚಿವ ಜಿ ಪರಮೇಶ್ವರ ಅವರು, ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ಧತಿ ಜಾರಿಯಲ್ಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳ ಮಾಲೀಕರು ಚಿತ್ರಮಂದಿಗಳನ್ನು ವಾಣಿಜ್ಯ ಚಟುವಟಿಕೆಯಾಗಿ ರೂಪಿಸಿಕೊಂಡಿದ್ದಾರೆ. ಅವಶ್ಯಕವೆನಿಸಿದಲ್ಲಿ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈ ಸಂಬಂಧ ಕೂಡಲೇ ಅಗತ್ಯ ನಿಯಮಗಳನ್ನು ರೂಪಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡಲು ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು. ಇದೀಗ ಸಿನಿಮಾ ಟಿಕೆಟ್‌ ಏಕರೂಪ ದರ ಜಾರಿ ಮಾಡಲು ಆದೇಶ ಹೊರಡಿಸಲಾಗಿದೆ.