ಚೆನ್ನರಾಯಪಟ್ಟಣ ಭೂಮಿ ಹೋರಾಟಕ್ಕೆ ಐತಿಹಾಸಿಕ ಗೆಲುವು : ಸರಕಾರಕ್ಕೆ ಅಭಿನಂದನೆಗಳ ಮಹಾಪೂರ
ರಾಜ್ಯದ ಜನಪರ ರೈತಪರ ಚಳವಳಿಗಳ ವಿವಿಧ ಮುಖಂಡರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿತ್ತು.ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಚೆನ್ನರಾಯ ಪಟ್ಟಣ ಹೋಬಳಿಯ ೧೭೭೭ ಎಕರೆ ಭೂಮಿಗೆ ಸಂಬಂಧಿಸಿದಂತೆ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಯಿಂದ ಹಿಂದೆ ಸರಿಯುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದಿರುವುದು ರೈತಾಪಿ ವರ್ಗಗಳ ಪಾಲಿಗೆ ಐತಿಹಾಸಿಕ ಗೆಲುವಿನ ತೀರ್ಮಾನವಾಗಿದೆ


ಸಿಹಿಹಂಚಿ ಸಂಭ್ರಮಾಚರಣೆ ಮಾಡಿದ ಜನಪರ ಚಳವಳಿಗಳ ಸಂಗಾತಿಗಳು
ಜನಚಳವಳಿಗಳ ಐಕ್ಯತೆ ಚಿರಾಯುವಾಗಲಿ ಎಂದು ಸಂಘಟನೆಗಳ ಘೋಷಣೆ
ಮುನಿರಾಜು ಎಂ ಅರಿಕೆರೆ
ದೇವನಹಳ್ಳಿ : ಚನ್ನರಾಯಪಟ್ಟಣ ಹೋಬಳಿಯ 1777 ಎಕರೆಗಳ ಭೂಮಿ ಸ್ವಾಧೀನ ಮಾಡುವುದಿಲ್ಲ ಎಂದು ಮುಖ್ಯಂತ್ರಿಗಳು ಘೋಷಣೆ ಮಾಡುವ ಮೂಲಕ 1198 ದಿನಗಳಿಂದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನಡೆಸಿಕೊಂಡು ಬಂದಿದ್ದ ಸುಧೀರ್ಘ ಹೋರಾಟಕ್ಕೆ ಅಂತಿಮ ತೆರೆ ಬಿದ್ದಿದೆ.
ಬೆಂಗಳೂರಿನ ವಿಧಾನ ಸೌಧದಲ್ಲಿ ಮಂಗಳವಾರ ಚೆನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು, ರಾಜ್ಯದ ಜನಪರ ರೈತಪರ ಚಳವಳಿಗಳ ವಿವಿಧ ಮುಖಂಡರೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯು ಐತಿಹಾಸಿಕವಾಗಿ ಮಹತ್ವ ಪಡೆದು ಕೊಂಡಿತ್ತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಚೆನ್ನರಾಯಪಟ್ಟಣ ಹೋಬಳಿಯ 1777 ಎಕರೆ ಭೂಮಿಗೆ ಸಂಬಂಧಿಸಿದಂತೆ ಸರಕಾರ ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದಿರುವುದು ರೈತಾಪಿ ವರ್ಗಗಳ ಪಾಲಿಗೆ ಐತಿಹಾಸಿಕ ಗೆಲುವಿನ ತೀರ್ಮಾನವಾಗಿದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪರಿಸ್ಥಿತಿ ಅರಿವು
ರಾಜ್ಯದ ಉದ್ದಗಲಕ್ಕೂ ಜನಪರ ಚಳವಳಿಗಳ ಸಂಗಾತಿಗಳು, ರೈತಪರ ಮುಖಂಡರು ಸಿಹಿಹಂಚಿ ಸಂಭ್ರಮಾಚರಣೆ ಮಾಡಿದ್ದು ಈ ವಿಜಯ ಸಾಂಘಿಕ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ ಸಕಾಲದಲ್ಲಿ ರೈತಪರ ತೀರ್ಮಾನ ಕೈಗೊಂಡ ಸರಕಾರ ಮತ್ತು ಮುಖ್ಯಮಂತ್ರಿಗಳ ನಡೆಯನ್ನೂ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಜು.೧೪ರ ಸೋಮವಾರದ ಜಿಲ್ಲಾ ನೋಟದಲ್ಲಿ ವಿಶ್ವವಾಣಿ ದಿನಪತ್ರಿಕೆ ಸಹ 1195 ದಿನಗಳ ನಿರಂತರ ಧರಣಿ ಅಂತ್ಯ ಸಾಧ್ಯತೆ!ಮುಖ್ಯಮಂತ್ರಿ ಸಭೆಯ ಮೇಲಿದೆ ಎಲ್ಲರ ಚಿತ್ತ,ಭೂಹೋರಾಟಕ್ಕೆ ನಾಳೆಯ ಸಭೆ ಕ್ಲೈಮ್ಯಾಕ್ಸ್ ಎಂಬ ತಲೆಬರಹ ನೀಡಿ ಸುದ್ದಿ ಪ್ರಸಾರ ಮಾಡಿತ್ತು.

ಅದರಂತೆ ಜು.೧೫ರಂದು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ವಾಗಿ ಕೈಬಿಟ್ಟಿದ್ದೇವೆ.
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿ ಪಡಿಸಿದ ಜಮೀನು ನೀಡಲಾಗುವುದು.
ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದು ವರೆಸಿಕೊಂಡು ಹೋಗಬಹುದಾಗಿದೆ.

ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗು ತ್ತದೆ.
೧೭೭೭ ಎಕರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶವಿದ್ದು ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು.
ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತ ರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟ ಪಡಿಸಿದ್ದಾರೆ.
ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ.
ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಕೈಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಸರ್ಕಾರ ರೈತಪರವಾಗಿದ್ದು, ಅವರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಘೋಷಿಸಿರುವುದು ಹೋರಾಟಕ್ಕೆ ಸಂದ ಜಯವಾಗಿದೆ.ಮುಖ್ಯಮಂತ್ರಿಗಳ ಸಭೆಯ ತೀರ್ಮಾನವಿಶ್ವವಾಣಿ ಪತ್ರಿಕೆಯ ಮೌಲಿಕವಾದ ವರದಿಗೆ ಸಿಕ್ಕ ಪ್ರತಿಫಲವಾಗಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ.
ದೇವನಹಳ್ಳಿ, ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಜಯ.
ಬಲವಂತದ ಭೂಸ್ವಾಧೀನದ ವಿರುದ್ಧ ಅಲ್ಲಿನ ಪ್ರದೇಶದ ರೈತರು, ಎಡ, ರೈತ, ಕಾರ್ಮಿಕ, ದಲಿತ ಸಂಘಟನೆಗಳು & ಜನಪರರು ದೀರ್ಘ ಕಾಲದಿಂದ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಹೋರಾಟಗಾರರೊಂದಿಗೆ ಸಭೆ ನಡೆಸಿ, ಸರ್ಕಾರದಿಂದ ಭೂ ಸ್ವಾಧೀನ ಕೈ ಬಿಡಲಾಗುವುದೆಂದು ಘೋಷಿಸಿದ್ದಾರೆ. ಇದು ಐಕ್ಯ ಚಳುವಳಿಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಗೆಲುವು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೋರಾಟಗಾರರು ಬರೆದುಕೊಂಡಿದ್ದಾರೆ.
*
ಜನಪರ ಚಳವಳಿಗಳು ಸರಿಯಾದ ದಿಕ್ಕಿನಲ್ಲಿ ಸಾಗಬೇಕು,ನಮ್ಮನ್ನಾಳುವ ವ್ಯವಸ್ಥೆ ಮತ್ತು ಕಾರ್ಪೊರೇಟ್ ಶಕ್ತಿಗಳು ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಾಗೆಲ್ಲಾ ಬಾಬಾ ಸಾಹೇಬರ ಹೋರಾಟವನ್ನು ಸ್ಮರಿಸಬೇಕು. ಆ ಮೂಲಕ ನೊಂದ ಜೀವಗಳಿಗೆ ಸಾಂತ್ವಾನ ಹೇಳಬೇಕು.ಆಗ ಮಾತ್ರ ಜನಚಳವಳಿಗಳ ನೇತಾರನನ್ನು ನೊಂದಜನ ನಂಬುತ್ತಾರೆ.ಕೈಹಿಡಿದು ನಡೆಸುತ್ತಾರೆ ಎಂಬುದಕ್ಕೆ ಚನ್ನರಾಯಪಟ್ಟಣ ಭೂಮಿ ಹೋರಾಟ ಜ್ವಲಂತ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ದಿನಕ್ಕಾಗಿ ನಾವು 1198 ದಿನಗಳ ಕಾಲ ಶಬರಿ ಕಾದಂತೆ ಕಾದಿದ್ದೇವೆ. ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
-ಕಾರೆಹಳ್ಳಿ ಶ್ರೀನಿವಾಸ್.ಚೆನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕರು.