Janardhan Reddy: ಚಂಚಲಗೂಡದಿಂದ ಪರಪ್ಪನ ಅಗ್ರಹಾರ ಜೈಲಿಗೆ ಜನಾರ್ದನ ರೆಡ್ಡಿ ಶಿಫ್ಟ್
Janardhan Reddy: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಪೊಲೀಸರು ರೆಡ್ಡಿಯನ್ನು ಬಂಧಿಸಿ ಹೈದರಾಬಾದ್‌ನ ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಿದ್ದರು. ಇದೀಗ ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಆದೇಶಿಸಿದೆ.


ಬೆಂಗಳೂರು: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ (Illegal Mining Case) ಬಂಧನವಾಗಿರುವ ಶಾಸಕ ಜನಾರ್ದನ ರೆಡ್ಡಿ (Janardhan Reddy) ಹೈದರಾಬಾದ್‌ನ ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರವಾಗಲಿದ್ದಾರೆ. ಇಂದು ಬಾಡಿ ವಾರಂಟ್ ಮೇಲೆ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ್ ಭಟ್ ಅವರು ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ಪ್ರಕಟಿಸಿ ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿಕೆ ಮಾಡಿದರು.
ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿ ಎಲ್ಲಾ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದ್ದು ಖುದ್ದು ಹಾಜರಾತಿಗೆ ಕೋರ್ಟ್ ಸೂಚಿಸಿದ್ದರಿಂದ ರೆಡ್ಡಿ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು.
ಏನಿದು ಕೇಸ್?
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ವಿಧಿಸಿದ ನಂತರ ಪೊಲೀಸರು ರೆಡ್ಡಿಯನ್ನು ಬಂಧಿಸಿ ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಿದ್ದರು. ಈ ಮೂಲಕ 10 ವರ್ಷಗಳ ಬಳಿಕ ಮತ್ತೆ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದಾರೆ.
ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತ್ತು. ರೆಡ್ಡಿ ಜತೆಗೆ ಒಎಂಸಿ ಕಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ಆಪ್ತ ಎಂ.ಅಲಿಖಾನ್, ಗಣಿ ಇಲಾಖೆ ಮಾಜಿ ಅಧಿಕಾರಿ ವಿ.ಡಿ.ರಾಜಗೋಪಾಲ್ ದೋಷಿಗಳು ಎಂದು ಹೇಳಿದೆ. ಕೋರ್ಟ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಹಾಗೂ ಒಎಂಸಿ ಗಣಿ ಕಂಪನಿಗೆ 2 ಲಕ್ಷ ರೂ. ದಂಡ ವಿಧಿಸಿದೆ.
ಅತ್ಯಾಚಾರ ಪ್ರಕರಣ; ನಟ ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನುಗೆ (Madenuru Manu) ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಎರಡು ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಬಳಿಕ ಪೊಲೀಸರು ಮಡೆನೂರು ಮನುವನ್ನು 3ನೇ ಎಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸಹನಟಿಯಾಗಿದ್ದ ಯುವತಿ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡು, ಮಡೆನೂರು ಮನುವನ್ನು ಬಂಧಿಸಿದ್ದರು. ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೇ ಕಿರುತೆರೆ ನಟನಿಗೆ ಸಂಕಷ್ಟ ಎದುರಾಗಿದೆ.
ಈ ಸುದ್ದಿಯನ್ನೂ ಓದಿ |The Code of Civil Procedure: ಸಿವಿಲ್ ಪ್ರಕರಣಗಳಿಗೆ 2 ವರ್ಷದೊಳಗೆ ಸಿಗಲಿದೆ ಮುಕ್ತಿ; ಮಹತ್ವದ ಮಸೂದೆಗೆ ರಾಷ್ಟ್ರಪತಿ ಅಂಕಿತ
ಪೊಲೀಸರ ವಶದಲ್ಲಿದ್ದ ಮನುವಿನ ವಿಚಾರಣೆ ನಡೆಸಿ ಮನು ಇದ್ದ ಮನೆ, ಸಂತ್ರಸ್ತೆ ಇದ್ದ ಮನೆ, ಕೆಲ ರೆಸಾರ್ಟ್ಗಳು ಇತ್ಯಾದಿಗಳ ಕಡೆ ಕರೆದೊಯ್ದು ಸ್ಥಳ ಮಹಜರನ್ನು ಪೊಲೀಸರು ಕಳೆದ ಎರಡು ದಿನಗಳಲ್ಲಿ ಮಾಡಿದ್ದರು. ತನಿಖೆ ಮುಗಿದ ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಮನುಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹೀಗಾಗಿ ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ.