ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S T Somashekar: ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್‌.ಟಿ. ಸೋಮಶೇಖರ್

S T Somashekar: ನಾನು ಕಾಂಗ್ರೆಸ್‌ ಅಥವಾ ಬಿಜೆಪಿ ಯಾರು ತಪ್ಪು ಮಾಡಿದರೂ ತಪ್ಪು ಅಂತಲೇ ಹೇಳಿದ್ದೇನೆ. ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಬಿಜೆಪಿಯಲ್ಲಿ ಮಾಡಬಾರದ್ದನ್ನು ಮಾಡಿರೋರು ಯಾರ‍್ಯಾರೋ ಇದ್ದಾರೆ. ನಮ್ಮಂತಹವರನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಕಿಡಿಕಾರಿದ್ದಾರೆ.

ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್‌.ಟಿ. ಸೋಮಶೇಖರ್

Profile Prabhakara R May 27, 2025 3:44 PM

ಬೆಂಗಳೂರು: ಬಿಜೆಪಿಯಲ್ಲಿ ಮಾಡಬಾರದ್ದನ್ನ ಮಾಡಿರೋರು ಯಾರ‍್ಯಾರೋ ಇದ್ದಾರೆ. ಆದರೆ, ನಮ್ಮಂತಹವರನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಯಶವಂತಪುರ ಕ್ಷೇತ್ರದ ಉಚ್ಚಾಟಿತ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್ (S T Somashekar) ಹೇಳಿದ್ದಾರೆ. ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು. 1% ಸಹ ಬೇಸರ, ಅಸಮಾಧಾನ ಇಲ್ಲ. ಉಚ್ಚಾಟನೆ ಮಾಡಿದ್ದು ಖುಷಿ ಇದೆ ಎಂದು ತಿಳಿಸಿದ್ದಾರೆ.

ನಾನು ಕಾಂಗ್ರೆಸ್‌ ಅಥವಾ ಬಿಜೆಪಿ ಯಾರು ತಪ್ಪು ಮಾಡಿದರೂ ತಪ್ಪು ಅಂತಲೇ ಹೇಳಿದ್ದೇನೆ. ಬಿಜೆಪಿಯಲ್ಲಿ ನನ್ನ ಪರವಾಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಬಿಜೆಪಿಯಲ್ಲಿ ಮಾಡಬಾರದ್ದನ್ನು ಮಾಡಿರೋರು ಯಾರ‍್ಯಾರೋ ಇದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವವರು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ನನ್ನ ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿದರು.

ಉಚ್ಚಾಟನೆ ಯಾಕೆ ಮಾಡಿದ್ದೀರಿ ಅಂತಾನೂ ಕೇಳೋದಿಲ್ಲ. ನಾನು ಈಗ ಫ್ರೀ ಬರ್ಡ್ ಆಗಿದ್ದೀನಿ. ಇನ್ನು ಫ್ರೀ ಬರ್ಡ್ ಆಗಿ ಓಡಾಡುತ್ತೇನೆ. ಕಾಂಗ್ರೆಸ್ ಇಲ್ಲ, ಬಿಜೆಪಿ ಇಲ್ಲ ಆರಾಮಾಗಿ ಇದ್ದೇವೆ. ಮುಂದಿನ ನಡೆ ಬಗ್ಗೆ ಈಗ ಯೋಚನೆ ಮಾಡಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕೋವಿಡ್: ವೃದ್ಧರು, ಕಾಯಿಲೆಯಿರುವವರಿಗೆ ಮಾಸ್ಕ್ ಕಡ್ಡಾಯ: ಸಿಎಂ ಸಿದ್ದರಾಮಯ್ಯ

ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್ ಉಚ್ಚಾಟನೆ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ (ST Somashekhar) ಶಿವರಾಮ್ ಹೆಬ್ಬಾರ್ (Shivaram Hebbar) ಅವರನ್ನು ಭಾರತೀಯ ಜನತಾ ಪಕ್ಷದಿಂದ (BJP) ಉಚ್ಚಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು 6 ವರ್ಷ ಉಚ್ಚಾಟನೆ (Expelled) ಮಾಡಿ ಬಿಜೆಪಿ ಹೈಕಮಾಂಡ್ (BJP High command) ಆದೇಶ ಹೊರಡಿಸಿದೆ. ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಚಾಟನೆಯ ಬೆನ್ನಿನಲ್ಲಿಯೇ, ಎಸ್‌ಟಿಎಸ್‌ ಹಾಗೂ ಹೆಬ್ಬಾರ್‌ ಅವರ ಉಚ್ಚಾಟನೆ ಯಾವಾಗ ಎಂದು ಪಕ್ಷದೊಳಗೇ ಪ್ರಶ್ನೆಗಳು ಎದ್ದಿದ್ದವು. ಪಕ್ಷದ ಹೈಕಮಾಂಡ್‌ ಈ ಬಗ್ಗೆ ಇದೀಗ ಕ್ರಮ ತೆಗೆದುಕೊಂಡಿದ್ದು, ಉಚ್ಚಾಟನೆಯ ನೋಟಿಸ್‌ ಕಳುಹಿಸಿದೆ.

ಈ ತಿಂಗಳ ಆರಂಭದಲ್ಲಿ ಈ ಕುರಿತು ಮಾತನಾಡಿದ್ದ ಪಕ್ಷದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತ ಇಬ್ಬರು ಶಾಸಕರನ್ನು ಈ ತಿಂಗಳಾಂತ್ಯಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ತಿಳಿಸಿದ್ದರು. ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ನಿರಂತರ ಪಕ್ಷ ದ್ರೋಹ ಮಾಡಿದ್ದಾರೆ. ಕಳೆದ ಲೋಕಸಭಾ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಟೀಲ್ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು.

ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ತೆರಳಿ ವರದಿ ಸಿದ್ಧಪಡಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಮತ್ತು ಅಲ್ಲಿನ ಮಂಡಳ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿಂದ ವರದಿ ಸಿದ್ದಪಡಿಸಿ ನೀಡಿದ್ದೇನೆ. ಅಲ್ಲದೇ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ ಮತ್ತು ಪೇಪರ್ ಕಟಿಂಗ್‌ಗಳನ್ನ ವರದಿಯ ಜೊತೆಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ ಎಂದಿದ್ದರು.

ಇದನ್ನೂ ಓದಿ: BY Vijayendra: ಜಾತಿ ಗಣತಿ; ಕೇಂದ್ರದ ನಿರ್ಧಾರದಿಂದ ಕಾಂಗ್ರೆಸ್ಸಿಗರಿಗೂ ಆಶ್ಚರ್ಯ ಎಂದ ವಿಜಯೇಂದ್ರ

ಎಸ್‌ಟಿಎಸ್‌ ಹಾಗೂ ಹೆಬ್ಬಾರ್‌ ಇಬ್ಬರೂ ನಿರಂತರವಾಗಿ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಇಬ್ಬರೂ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ನೀಡಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ರಾಜ್ಯ ಕಾಂಗ್ರೆಸ್‌ ಆಡಳಿತದ ಪರವಾಗಿಯೂ ಹೇಳಿಕೆಗಳನ್ನು ನೀಡಿದ್ದರು. ಇದನ್ನೆಲ್ಲ ಹೈಕಮಾಂಡ್‌ ಪರಿಗಣಿಸಿ, ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಿದೆ.