ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ricky Rai Case: ಮುತ್ತಪ್ಪ ರೈ ಕೋಟೆ ಭೇದಿಸಿದ ಬುಲೆಟ್; ರಿಕ್ಕಿ ರೈ ಮೇಲೆ ಅಟ್ಯಾಕ್ ಯಾರ ಕೃತ್ಯ?

Ricky Rai Case: ಮುತ್ತಪ್ಪ ರೈ ಮನೆ ಮುಂದೇಯೇ ಗನ್‌ ಗರ್ಜಿಸಿರೋದನ್ನು ನೋಡಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಐದು ತಂಡಗಳನ್ನು ರಚಿಸಿಕೊಂಡು, ಈ ದಾಳಿ ನಡೆಸಿರೋರು ಯಾರು ಅನ್ನೋದನ್ನು ಪತ್ತೆ ಮಾಡೋಕೆ ಹೊರಟಿದ್ದಾರೆ. ಇನ್ನು ಮುತ್ತಪ್ಪ ರೈ ಎಂಬ ಪಾತಕಿಯ ಹಿನ್ನೆಲೆ ಹಾಗೂ ಅದು ಆತನ ಮಗ ರಿಕ್ಕಿ ರೈ ಕೊಲೆ ಯತ್ನದವರೆಗೂ ಬಂದಿರುವ ಕುರಿತ ವಿವರ ಇಲ್ಲಿದೆ.

2000 ಕೋಟಿ ಆಸ್ತಿಗೆ ಸುಪಾರಿ; ರಿಕ್ಕಿ ರೈ ಮೇಲೆ ಅಟ್ಯಾಕ್ ಯಾರ ಕೃತ್ಯ?

Profile Prabhakara R Apr 19, 2025 10:26 PM

ಬೆಂಗಳೂರು: ರಾಜಧಾನಿಯ ಕಟ್ಟಕೊನೆಯ ಅಂಡರ್‌ವರ್ಲ್ಡ್‌ ಡಾನ್‌ ಎನ್ನಬಹುದಾದ ಮುತ್ತಪ್ಪ ರೈ ಕಟ್ಟಿದ ಬಿಡದಿಯ ಭದ್ರವಾದ ಕೋಟೆಯಂಥ ಮನೆಯ ಮುಂದುಗಡೆಯೇ ಏಪ್ರಿಲ್‌ 18ರ ಶುಕ್ರವಾರ ರಾತ್ರಿ ಭೂಗತ ಲೋಕದ ಗನ್‌ ಗರ್ಜಿಸಿದೆ. ಕೊನೆಗಾಲದಲ್ಲಿ ಶಾಂತವಾದ ಬದುಕು ಕಟ್ಟಿಕೊಳ್ಳಲೆಂದು ಮುತ್ತಪ್ಪ ರೈ ಕಟ್ಟಿಕೊಂಡಿದ್ದ ಅರಮನೆಯಂಥ ಮನೆಯ ಮುಂದೆಯೇ ರೈ ಮಗನ ಮೇಲೆ ದುಷ್ಕರ್ಮಿಗಳು ಅಟ್ಯಾಕ್‌ ಮಾಡಿದ್ದಾರೆ. ಸುಪಾರಿ ಕಿಲ್ಲರ್ಸ್‌ ಅಂದಾಜಿನಂತೆ ರಿಕ್ಕಿ ರೈಯ ಎದೆಗೆ ಬೀಳಬೇಕಿದ್ದ ಗುಂಡು, ಅದೃಷ್ಟವಶಾತ್‌ ಮೂಗನ್ನೂ ಭುಜವನ್ನೂ ಸವರಿಕೊಂಡು ಹೋಗಿದೆ. ಮುತ್ತಪ್ಪ ರೈ ಕಟ್ಟಿದ ಕೋಟಿಗಟ್ಟಲೆ ಬೆಲೆಬಾಳುವ ಸಾಮ್ರಾಜ್ಯವನ್ನು ನಾಶ ಮಾಡುವುದು ಅಥವಾ ಅದನ್ನು ಅನುಭವಿಸೋಕೆ ರಿಕ್ಕಿ ರೈ ಇಲ್ಲದಂತೆ ಮಾಡೋದು ದುಷ್ಕರ್ಮಿಗಳ ಉದ್ದೇಶ ಆಗಿತ್ತು ಅನ್ನೋದು ಸ್ಪಷ್ಟ.

ಬೆಂಗಳೂರಿನ ಭೂಗತ ಲೋಕಕ್ಕೆ ಮೊಟ್ಟ ಮೊದಲ ಬಾರಿಗೆ ಬಂದೂಕು ಪರಿಚಯಿಸಿದವನೇ ಮುತ್ತಪ್ಪ ರೈ. ಇದಾದ ಬಳಿಕ ವೃಷಭಾವತಿಯಲ್ಲಿ ಅದೆಷ್ಟೋ ಕೊಳಚೆ ನೀರು ಹರಿದುಹೋಗಿದೆ, ಎಷ್ಟೋ ರೌಡಿಶೀಟರ್‌ಗಳು ಗೂಂಡಾಗಳು ಬೆಂಗಳೂರನ್ನು ಆಳೋದಕ್ಕೆ ಮುಂದಾಗಿದ್ದಾರೆ. ಆದ್ರೆ ಯಾರಿಗೂ ಮುತ್ತಪ್ಪ ರೈಯ ಆ ಗತ್ತು ಗೈರತ್ತು ಬರ್ಲೇ ಇಲ್ಲ.

ಇದೀಗ ಅಂಥ ಮುತ್ತಪ್ಪ ರೈ ಮನೆ ಮುಂದೇನೇ ಗನ್‌ ಗರ್ಜಿಸಿರೋದನ್ನು ನೋಡಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಐದು ತಂಡಗಳನ್ನು ರಚಿಸಿಕೊಂಡು, ಈ ದಾಳಿ ನಡೆಸಿರೋರು ಯಾರು ಅನ್ನೋದನ್ನು ಪತ್ತೆ ಮಾಡೋಕೆ ಹೊರಟಿದಾರೆ. ಯಾಕೆ ಈ ದಾಳಿ ನಡೆದಿರಬಹುದು, ಯಾರು ನಡೆಸಿರಬಹುದು, ಹೇಗೆ ಪ್ಲಾನ್‌ ಮಾಡಿದ್ರು ಎಂದೆಲ್ಲಾ ಟ್ರ್ಯಾಕ್‌ ಮಾಡ್ತಾ ಇದಾರೆ. ಪೊಲೀಸರು ಅವರ ಕೆಲಸ ಮಾಡಲಿ, ನಾವು ಮುತ್ತಪ್ಪ ರೈ ಎಂಬ ಪಾತಕಿಯ ಹಿನ್ನೆಲೆ ಹಾಗೂ ಅದು ಆತನ ಮಗ ರಿಕ್ಕಿ ರೈ ಕೊಲೆ ಯತ್ನದವರೆಗೂ ಬಂದಿರೋ ಬಗ್ಗೆ ಇನ್ನಷ್ಟು ವಿಷದವಾಗಿ ತಿಳಿದುಕೊಳ್ಳೋಣ.



ಗನ್ ಮ್ಯಾನ್‌ಗಳ ಬಿಗಿ ಭದ್ರತೆ:

ಸದಾ ಗನ್​ ಮ್ಯಾನ್​ ಇಟ್ಕೊಂಡು ಓಡಾಡುವ ರಿಕ್ಕಿ ರೈ, ಸದ್ಯ ಬೆಂಗಳೂರು ಹಾಗೂ ಸುತ್ತಮುತ್ತ ಇರುವ ಮುತ್ತಪ್ಪ ರೈಯ ಕೋಟ್ಯಂತರ ಮೌಲ್ಯದ ಆಸ್ತಿಗೆ ವಾರಸುದಾರನಾಗಿದ್ದಾನೆ. ಈತ ಮುತ್ತಪ್ಪ ರೈ ಕಿರಿಯ ಮಗ. ಮೊದಲ ಮಗ ರಾಖಿ ರೈ. ಈತ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ ಎಂಬ ವಿವರ ಗುಟ್ಟಾಗಿಡಲಾಗಿದೆ. ಆದರೆ ವಿದೇಶಗಳಲ್ಲಿ ಮುತ್ತಪ್ಪ ರೈ ಸ್ಥಾಪಿಸಿರುವ ಹಲವು ಹೋಟೆಲ್‌ ಬ್ಯುಸಿನೆಸ್‌ ನೋಡಿಕೊಳ್ತಾ ಯಾವುದೇ ಭೂಗತ ಲೋಕದ ವ್ಯವಹಾರದ ಒಡನಾಟಕ್ಕೆ ಹೋಗದೆ ನೆಮ್ಮದಿಯಾಗಿದ್ದಾನೆ ಎಂದು ಹೇಳಲಾಗ್ತಿದೆ. ರಾಖಿ ರೈ ಭಾರತಕ್ಕೆ ಬರೋದೂ ಇಲ್ಲ, ಇಲ್ಲಿನ ಆಸ್ತಿಪಾಸ್ತಿ ಕಡೆಗೆ ಯೋಚನೇನೂ ಮಾಡಲ್ಲ. ಆದ್ರೆ ಕಿರಿಯ ಮಗ ರಿಕ್ಕಿ ರೈ ಹಾಗಲ್ಲ. ಇಲ್ಲಿಯ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿಯನ್ನು ನೋಡಿಕೊಳ್ಳೋ ರಿಕ್ಕಿ, ಬೆಂಗಳೂರಿನ ಸದಾಶಿವನಗರದಲ್ಲಿ ಇನ್ನೊಂದು ಮನೆಯನ್ನೂ ಹೊಂದಿದ್ದಾನೆ.

ಹೆಚ್ಚಾಗಿ ವಿದೇಶದಲ್ಲಿರೋ ರಿಕ್ಕಿ, ರಷ್ಯನ್‌ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಆದರೆ ಆಕೆಯ ಫೋಟೋ ಕೂಡ ಲಭ್ಯವಿಲ್ಲ‌ ಎನ್ನುವಷ್ಡು ರಹಸ್ಯ ಕಾಪಾಡಿದ್ದಾನೆ. ಫ್ಯಾಮಿಲಿ ಸಮೇತ ಬಂದಾಗ ಬಿಡದಿಯಲ್ಲಿರೋ ಭದ್ರವಾದ ಮನೆಯಲ್ಲಿರೋ ರಿಕ್ಕಿ, ಒಬ್ಬನೇ ಬಂದಾಗ ಸದಾಶಿವನಗರದ ಮನೆಯಲ್ಲಿರ್ತಾನೆ. ಅಲ್ಲಿ ಆತನಿಗೊಂದು ಆಫೀಸ್ ಕೂಡ ಇದೆ.‌

ರಿಕ್ಕಿಯನ್ನು ಟಾರ್ಗೆಟ್ ಮಾಡಿದ್ದು ಯಾರು?:

ಈ ಸಲ ಬಿಡದಿಯ ಮನೆಯನ್ನು ರಿನೋವೇಟ್‌ ಮಾಡಲಾಗ್ತಿದ್ದು, ಅದನ್ನು ನೋಡಿಕೊಂಡು ಹೋಗೋಣ ಅಂತ ಬಂದ ಸಮಯ ನೋಡಿಕೊಂಡು ಸ್ಕೆಚ್‌ ಹಾಕಲಾಗಿದೆ. ಹಾಗಾದ್ರೆ ರಿಕ್ಕಿ ರೈ ಮೇಲೆ ಕಣ್ಣಿಟ್ಟಿರೋರು ಯಾರು? ರಿಕ್ಕಿ ರೈ ಪ್ರಾಣ ಹೋದ್ರೆ ಲಾಭ ಯಾರಿಗೆ?

ಇದೀಗ ಪೊಲೀಸರ ಅನುಮಾನ ಮೂಡಿರೋದು ಮುತ್ತಪ್ಪ ರೈ ಎರಡನೇ ಹೆಂಡತಿ ಅನುರಾಧ ಮೇಲೆ. ಅನುರಾಧ ಸೇರಿದ ಹಾಗೆ ನಾಲ್ಕು ಮಂದಿಯ ಮೇಲೆ ಪೊಲೀಸರು ಎಫ್‌ಐಆರ್‌ ಕೂಡ ಹಾಕಿದಾರೆ. ಕಾರು ಚಾಲಕ ಬಸವರಾಜ್ ನೀಡಿದ ದೂರು ಆಧರಿಸಿ A1 ರಾಕೇಶ್ ಮಲ್ಲಿ, A2 ಅನುರಾಧಾ, A3 ನಿತೇಶ್ ಶೆಟ್ಟಿ ಹಾಗೂ A4 ವೈದ್ಯನಾಥನ್ ಎಂಬವರ ವಿರುದ್ಧ ಬಿಎನ್​ಎಸ್ 109,3(5) ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್​ ದಾಖಲಾಗಿದೆ.

ಇದರಲ್ಲಿ ಅನುರಾಧಾ ಅವರು ಮುತ್ತಪ್ಪ ರೈಯ ಎರಡನೇ ಪತ್ನಿ. ಇದರ ನಡುವೆ ಮುತ್ತಪ್ಪ ರೈ ಬಲಗೈ ಬಂಟನಾಗಿದ್ದ ಮಿಥುನ್‌ ರೈ ಎಂಬಾತನ ಮೇಲೆ ಕೂಡ ಪೊಲೀಸರ ಅನುಮಾನದ ರೇಡಾರ್‌ ಹರಿದಿದೆ. ವರ್ಷಗಳ ಕಾಲ ಮುತ್ತಪ್ಪ ರೈ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡಿದ್ದ ಮಿಥುನ್ ರೈ, ಆಸ್ತಿ ವಿಚಾರದಲ್ಲಿ ಉಂಟಾದ ಕಿರಿಕ್‌ನಿಂದಾಗಿ ಆತನಿಂದ ದೂರವಾಗಿದ್ದರು.

ಮುತ್ತಪ್ಪ ರೈದು 2000 ಕೋಟಿಯ ಆಸ್ತಿ:

ಮುತ್ತಪ್ಪ ರೈಯ 2000 ಕೋಟಿ ರೂಪಾಯಿಯ ಆಸ್ತಿಪಾಸ್ತಿಯೇ ಈ ಗುಂಡಿನ ದಾಳಿಗೆ ಕಾರಣವಾಗಿರುವ ಶಂಕೆ ಇದೆ. ಮುತ್ತಪ್ಪ ರೈ ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದ. ಈಗ ಈ ಬ್ಯುಸಿನೆಸ್‌ ಅನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾನೆ.

ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಶುರುವಾಗಿತ್ತು. ರೈಯ ಮೊದಲ ಪತ್ನಿಯ ಮಕ್ಕಳು ಹಾಗೂ 2ನೇ ಪತ್ನಿಯ ನಡುವೆ ಆಸ್ತಿ ವಿಚಾರಕ್ಕೆ ತಗಾದೆಯಿತ್ತು. ಹೀಗಾಗಿ ಆಸ್ತಿ ಭಾಗದ ವಿಚಾರವಾಗಿ ಕುಟುಂಬ ಕೋರ್ಟ್ ‌ಮೆಟ್ಟಿಲೇರಿತ್ತು. ಮುತ್ತಪ್ಪ ರೈ ಸಾವಿಗೂ ಮುನ್ನ, ಇಬ್ಬರು ಮಕ್ಕಳು, ಸಹೋದರನ ಮಗ, 2ನೇ ಪತ್ನಿ, ಮನೆ ಕೆಲಸಗಾರರು ಸೇರಿ ಎಲ್ಲರಿಗೂ ಆಸ್ತಿ ಭಾಗ ಮಾಡಿ ವಿಲ್​ ಬರೆಸಿದ್ದರು. ಆದ್ರೆ ಯಾರಿಗೂ ಸಂಪೂರ್ಣ ಸಮಾಧಾನ ಆಗಿರಲಿಲ್ಲವಾದ ಕಾರಣ ವೈಮನಸ್ಸು ಮುಂದುವರಿದಿತ್ತು.

ಯಾರು ಈ ಮುತ್ತಪ್ಪ?:

ಹಾಗಾದ್ರೆ ಇಷ್ಟೆಲ್ಲಾ ಆಸ್ತಿ ಮಾಡಿಟ್ಟಿರೋ ಮುತ್ತಪ್ಪ ರೈಯ ಹಿನ್ನೆಲೆಯಾದ್ರೂ ಏನು? ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಮಧ್ಯಮ ವರ್ಗದ ಬಂಟ ಸಮುದಾಯದ ಒಂದು ಫ್ಯಾಮಿಲಿಯಲ್ಲಿ ಜನಿಸಿದವ ಮುತ್ತಪ್ಪ ರೈ. ವೆಲ್‌ ಎಜುಕೇಟೆಡ್‌ ಅನ್ನಬಹುದಾದ ವ್ಯಕ್ತಿತ್ವ. ಭೂಗತ ಲೋಕಕ್ಕೆ ಕಾಲಿಟ್ಟದ್ದೇ ಆಕಸ್ಮಿಕ. ಕಾಮರ್ಸ್‌ ಪದವೀಧರನಾದ ಮುತ್ತಪ್ಪ ರೈ, ನಂತರ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ಮಾಡ್ತಾ ಇದ್ದ. ಆದ್ರೆ ಚೆಕ್‌ ವ್ಯವಹಾರಕ್ಕೆ ಸಂಬಂಧಿಸಿ ತನಗೆ ಆದ ಒಂದು ಮೋಸದಿಂದಾಗಿ ಕೆಲಸ ಕಳೆದುಕೊಂಡರು. ನತರ ಬೆಂಗಳೂರಿಗೆ ಬಂದು ಇಲ್ಲಿ ಹೋಟೆಲ್‌ ವ್ಯವಹಾರ, ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಿದ. ಈ ಹೋಟೆಲ್‌ಗೆ ಆಗಿನ ಬೆಂಗಳೂರಿನ ಭೂಗತ ದೊರೆ ಜಯರಾಜ್‌ ಕಡೆಯವರು ಹಫ್ತಾ ವಸೂಲಿ ಮಾಡ್ತಾ ಕಿರುಕುಳ ಕೊಡ್ತಾ ಇದ್ರು. ಇದನ್ನು ಮಟ್ಟ ಹಾಕೋದಕ್ಕೆ ಜಯರಾಜ್‌ನನ್ನು ಕೊಲೆ ಮಾಡೋ ಸ್ಕೆಚ್‌ ಹಾಕಿದ ಮುತ್ತಪ್ಪ ರೈ, ಆಗಷ್ಟೇ ಬೆಂಗಳೂರಿನ ಭೂಗತ ಲೋಕದಲ್ಲಿ ಸ್ಥಾನ ಪಡೆಯೋಕೆ ಪ್ರಯತ್ನಿಸುತ್ತಿದ್ದ ಇನ್ನೂ ಕೆಲವರನ್ನು ಸೇರಿಸಿಕೊಂಡು ಆ ಕೃತ್ಯ ಮಾಡೇ ಬಿಟ್ರು ಅನ್ನಲಾಗ್ತಿದೆ. ಆದ್ರೆ ಈ ಕೇಸು ಕೋರ್ಟ್‌ ಮುಂದೆ ಬಂದಾಗ ಮುತ್ತಪ್ಪ ರೈ ಖುಲಾಸೆ ಆದ್ರು. ಇದಾದ ಬಳಿಕ ಬೆಂಗಳೂರು ಮುತ್ತಪ್ಪ ರೈಯನ್ನು ಒಂದು ನಿಬ್ಬೆರಗಿನಿಂದ ಗಮನಿಸೋಕೆ ಶುರು ಮಾಡ್ತು.

ಮುತ್ತಪ್ಪ ರೈ ಮೇಲೂ ಗುಂಡು!:

1980ರ ದಶಕದ ಉತ್ತರಾರ್ಧದಲ್ಲಿ ರೈ ಬೆಂಗಳೂರಿನ ಭೂಗತ ಜಗತ್ತಿನ ಸಂಪರ್ಕಕ್ಕೆ ಬಂದ. 1990ರಲ್ಲಿ ಜಯರಾಜ್ ಕೊಲೆ ನಡೀತು. ಅದಕ್ಕೆ ಬಂದೂಕು ಬಳಸಲಾಯ್ತು. ಹೀಗೆ ಮೊದಲ ಬಾರಿ ಬೆಂಗಳೂರಿನ ಅಂಡರ್‌ವರ್ಲ್ಡ್‌ನಲ್ಲಿ ಗನ್‌ಗಳು ಗರ್ಜಿಸಿದವು. ಆ ಕೊಲೆ ಮುತ್ತಪ್ಪ ರೈಯನ್ನು ಮಾಫಿಯಾ ಬಾಸ್‌ನ ಸ್ಥಾನಕ್ಕೆ ಏರಿಸಿತು. ಅಲ್ಲಿಂದಾಚೆಗೆ ರೈ ಹಿಂತಿರುಗಿ ನೋಡಲಿಲ್ಲ. ಅವರ ಗ್ಯಾಂಗ್‌ನಿಂದ ಹಲವಾರು ಕೊಲೆ, ಸುಲಿಗೆ, ರಿಯಲ್‌ ಎಸ್ಟೇಟ್‌ ಡೀಲ್‌, ಬ್ಲ್ಯಾಕ್‌ಮೇಲ್ ನಡೆದವು. ಮುತ್ತಪ್ಪ ರೈ ಹಾಗೂ ಸಹಚರರ ಮೇಲೆ ಪೊಲೀಸರು ಹಲವಾರು ಕೇಸುಗಳನ್ನು ಹಾಕಿದರು. ಆದ್ರೆ ಯಾವುದೂ ಪ್ರೂವ್‌ ಆಗಲಿಲ್ಲ.

ಇದೇ ವೇಳೆಗೆ ಎದುರಾಳಿ ಗ್ಯಾಂಗ್‌ನವರು ಕೂಡ ಮುತ್ತಪ್ಪ ರೈ ಮೇಲೆ ಸ್ಕೆಚ್‌ ಹಾಕ್ತಾ ಇದ್ರು. ಅದರ ಅಂಗವಾಗಿಯೇ 1994ರಲ್ಲಿ ಮುತ್ತಪ್ಪ ರೈ ಕೋರ್ಟ್‌ಗೆ ಬಂದಾಗ ಕೋರ್ಟ್‌ ಎದುರೇ ರೈ ಮೇಲೆ ಗುಂಡಿನ ದಾಳಿ ನಡೀತು. ವಕೀಲರ ವೇಷದಲ್ಲಿ ಬಂದ ಪಾತಕಿಯೊಬ್ಬ ಐದು ಗುಂಡು ಹಾರಿಸಿದ. ಆದ್ರೆ ಪೊಲೀಸ್‌ ವ್ಯಾನ್‌ ಕೆಳಗೆ ನುಸುಳಿ ರೈ ಪಾರಾದ. ತೀವ್ರವಾಗಿ ಗಾಯಗೊಂಡ ರೈಯನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಅಲ್ಲಿಂದ ಎರಡು ವರ್ಷ ಆತ ಆಸ್ಪತ್ರೆ ಹಾಸಿಗೆ ಮೇಲಿದ್ದ.

ದೇಶ ಬಿಟ್ಟು ದುಬೈಗೆ ಪರಾರಿ!:

ಎದುರಾಳಿ ಗ್ಯಾಂಗ್‌ಗಳಿಂದ ಕೊಲೆ ಯತ್ನ, ಪೊಲೀಸರಿಂದ ನಿರಂತರ ಕೇಸುಗಳು ಹಾಗೂ ಕೋರ್ಟ್‌ಗೂ ಠಾಣೆಗೆ ಅಲೆದಾಟ ಇದೆಲ್ಲದರಿಂದ ರೋಸಿ ಹೋದ ಮುತ್ತಪ್ಪ ರೈ 1996ರಲ್ಲಿ ದೇಶ ಬಿಟ್ಟು ದುಬೈಗೆ ಪರಾರಿಯಾದ.

ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿ ಶುರು ಮಾಡಿದ. ರಷ್ಯಾ ಮುಂತಾದ ಕಡೆ ಹೋಟೆಲ್‌, ಕ್ಲಬ್‌ಗಳನ್ನಿಟ್ಟ. ಆಫ್ರಿಕಾದಲ್ಲಿ ಫಾರ್ಮಾಸ್ಯುಟಿಕಲ್‌ ಕಂಪನಿ ಶುರು ಮಾಡಿದ. ಇದೆಲ್ಲದರ ನಡುವೆ ಕರ್ನಾಟಕದಲ್ಲಿ ರಿಯಲ್‌ ಎಸ್ಟೇಟ್‌ ಡೀಲ್‌ ನಡೆದೇ ಇತ್ತು. ಇದೇ ಸಂದರ್ಭದಲ್ಲಿ ತನ್ನ ಆಪ್ತ ಶರದ್ ಶೆಟ್ಟಿ ಮೂಲಕ ಮುಂಬಯಿಯ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮುಂತಾದವರ ಪರಿಚಯ ಕೂಡ ಆಗಿತ್ತು. ಕರ್ನಾಟಕ ಪೊಲೀಸರು, ಸಿಬಿಐ, ರಾ ಮುಂತಾದ ಸಂಸ್ಥೆಗಳು ರೈಯನ್ನು ಭಾರತಕ್ಕೆ ತರಿಸಲು ತುಂಬಾ ಪ್ರಯತ್ನಪಟ್ಟರು. ಕಡೆಗೂ 2002ರಲ್ಲಿ ರೈಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಿಕೊಂಡು ಆರೆಸ್ಟ್‌ ಮಾಡಲಾಯಿತು. ಆದ್ರೆ ಚಾಣಾಕ್ಷ ರೈ, ಕೆಲವೇ ವರ್ಷಗಳಲ್ಲಿ ತನ್ನ ಮೇಲಿದ್ದ ಕೇಸುಗಳನ್ನೆಲ್ಲ ಬಹು ಸುಲಭವಾಗಿ ನಿವಾರಿಸಿಕೊಂಡು ದೋಷಮುಕ್ತನಾಗಿಬಿಟ್ಟ.

ಬಿಡದಿಯಲ್ಲಿ ಕೋಟೆ ಕಟ್ಟಿಕೊಂಡ!:

ಬೆಂಗಳೂರಿಗೆ ಬಂದ ರೈ ನಗರದ ಹೊರವಲಯದ ಬಿಡದಿಯಲ್ಲಿ ಕೋಟೆಯಂಥ ಮನೆಯೊಂದನ್ನು ಕಟ್ಟಿಕೊಂಡ. ತನ್ನ ರಕ್ಷಣೆಗಾಗಿ ಅಲ್ಲಿ ಹತ್ತಾರು ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡ. ಹತ್ತಾರು ಭಯಂಕರ ನಾಯಿಗಳನ್ನೂ ಸಾಕಿಕೊಂಡ. ನಂತರ ಭೂಗತ ಪಾತಕಿ ಎಂಬ ಇಮೇಜ್‌ ಕಳಚಿಕೊಳ್ಳೋದಕ್ಕೆ ಸಮಾಜ ಸುಧಾರಣೆಯ ಕ್ಷೇತ್ರಕ್ಕೆ ಇಳಿದ. 2008ರಲ್ಲಿ ಜಯ ಕರ್ನಾಟಕ ಎಂಬ ಸಂಘಟನೆ ಕಟ್ಟಿದ, ಕರ್ನಾಟಕದಲ್ಲಿ ಕನ್ನಡಿಗರ ಹಿತಾಸಕ್ತಿಯನ್ನು ಕಾಯುವ ಸಂಘಟನೆ ತನ್ನದು ಎಂದು ಹೇಳಿಕೊಂಡ. 2013ರಲ್ಲಿ ಮುತ್ತಪ್ಪ ರೈಯ ಮೊದಲ ಪತ್ನಿ ರೇಖಾ ರೈ ಸಿಂಗಾಪುರದಲ್ಲಿ ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ತೀರಿಕೊಂಡ. ಈತನ ಮಕ್ಕಳೇ ರಾಖಿ ರೈ ಮತ್ತು ರಿಕ್ಕಿ ರೈ.

ಈ ಸುದ್ದಿಯನ್ನೂ ಓದಿ | Ricky Rai Case: ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಮುತ್ತಪ್ಪ ರೈ ಮತ್ತೊಂದು ಮದುವೆಯಾದ!:

ಹೆಂಡತಿ ತೀರಿಕೊಂಡ ಬಳಿಕ ಐದು ವರ್ಷ ಒಂಟಿಯಾಗಿದ್ದ ಮುತ್ತಪ್ಪ ರೈ, 2018ರಲ್ಲಿ ಅನುರಾಧ ಎಂಬ ಮಹಿಳೆಯನ್ನು ಮದುವೆಯಾದ. ಸಕಲೇಶಪುರ ಮೂಲದವರಾದ ಈಕೆಗೂ ಮೊದಲೊಂದು ಮದುವೆಯಾಗಿತ್ತು. ಗಂಡನನ್ನು ಕಳೆದುಕೊಂಡಿದ್ದು, ಮೊದಲ ಗಂಡನಿಂದ ಇಬ್ಬರು ಮಕ್ಕಳಿದ್ದಾರೆ. 2020ರಲ್ಲಿ ಮುತ್ತಪ್ಪ ರೈ ತನಗೆ ಮೆದುಳಿನ ಕ್ಯಾನ್ಸರ್‌ ಆಗಿದೆ ಅಂತ ಬಹಿರಂಗಪಡಿಸಿದ. ಅದಾಗಿ ಕೆಲವೇ ತಿಂಗಳಲ್ಲಿ ಮೃತಪಟ್ಟ. ಸಾಯೋದಕ್ಕೆ ಕೆಲವೇ ತಿಂಗಳ ಮೊದಲು ತನ್ನ ಕೋಟ್ಯಂತರ ಆಸ್ತಿಯನ್ನು ವಿಲ್‌ ಮಾಡಿದ್ದ. ಆದ್ರೆ ವಿಲ್‌ನಿಂದ ಯಾರಿಗೂ ಸಮಾಧಾನವಾಗಲಿಲ್ಲ. ಮೊದಲ ಪತ್ನಿಯ ಇಬ್ಬರು ಗಂಡುಮಕ್ಕಳು, ಎರಡನೇ ಪತ್ನಿ ಹಾಗೂ ಆಕೆಯ ಇಬ್ಬರು ಮಕ್ಕಳು ಇದೀಗ ಆಸ್ತಿಗಾಗಿ ಫೈಟ್‌ ಮಾಡುತ್ತಿದ್ದಾರೆ.

ಇವರಲ್ಲಿ ರಿಕ್ಕಿ ರೈಯ ಜೀವಕ್ಕೆ ಸ್ಕೆಚ್‌ ಹಾಕಿದವರು ಯಾರು? ಅಥವಾ ಇದು ಆಸ್ತಿಯ ವಿಚಾರಕ್ಕೆ ಆಗಿರಲಿಕ್ಕಿಲ್ವಾ? ಮತ್ತೆ ಬೆಂಗಳೂರಿನ ಮಾಫಿಯಾ ಲೀಡರ್‌ಶಿಪ್‌ಗಾಗಿ ಹೊಡೆದಾಟ ಶುರುವಾಗಿದ್ಯಾ? ಈ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ಹೇಳಬೇಕಾಗಿದೆ.