Actress Hania Aamir: ಬ್ಯಾನ್ ನಡುವೆಯೇ ಪಂಜಾಬಿ ಸಿನಿಮಾದಲ್ಲಿ ಪಾಕ್ ನಟಿಗೆ ಚಾನ್ಸ್? ಶೂಟಿಂಗ್ ಸೆಟ್ನ ಫೋಟೋಸ್ ವೈರಲ್
ಸರ್ದಾರ್ ಜಿ, ಸರ್ದಾರ್ ಜಿ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿ ಅಭಿಮಾನಿಗಳ ಮನಗೆದ್ದ ನಟ ದಿಲ್ಜಿತ್ ದೋಸಾಂಜ್ ಇದೀಗ ಸರ್ದಾರ್ ಜಿ 3 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ನಟ ತಮ್ಮ ಮುಂಬರುವ ಸರ್ದಾರ್ ಜಿ 3 ಚಿತ್ರದ ಶೂಟಿಂಗ್ ದೃಶ್ಯದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಗಳಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಕೂಡ ಕಾಣಿಸಿಕೊಂಡಿದ್ದಾರೆ ಎಂಬ ಚರ್ಚೆ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಉಂಟಾಗಿದೆ.



ಎಪ್ರಿಲ್ 22ರಂದು ಜಮ್ಮು - ಕಾಶ್ಮೀರದ ಪಹಲ್ಗಾಮ್ನ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು ಇಡೀ ದೇಶಕ್ಕೆ ದೊಡ್ಡ ಆಘಾತವುಂಟಾಗಿತ್ತು. ದಾಳಿಯಿಂದ 26 ಜನರು ಸ್ಥಳದಲ್ಲಿ ಮೃತರಾಗಿದ್ದರು. ಹೀಗಾಗಿ ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಅನೇಕ ನಿಯಮ ಸಹ ರೂಪಿಸಿತ್ತು. ಅಂತೆಯೇ ಪಾಕ್ ಕಲಾವಿದರಿಗೆ, ಸಿನಿಮಾ ತಾರೆಯರಿಗೆ ಅವಕಾಶ ನಿರಾಕರಣೆ ಕೂಡ ಮಾಡಲಾಗಿದೆ. ಹಾಗಿದ್ದರೂ ಸರ್ದಾರ್ ಜಿ 3 ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಪಾಕಿಸ್ತಾನದ ನಟಿ ಹನಿಯಾ ಆಮಿರ್ ಕಾಣಿಸಿಕೊಂಡಿದ್ದು, ಹೇಗೆ ಎಂಬ ಗಾಸಿಪ್ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ವೈರಲ್ ಆದ ಫೋಟೊವೊಂದರಲ್ಲಿ ನಟ ದಿಲ್ಜಿತ್ ದೋಸಾಂಜ್ ಅವರ ಜೊತೆ ಅನೇಕ ನಟಿಯರು ಡಿನ್ನರ್ ಟೇಬಲ್ ಸುತ್ತ ಭಾಗಿಯಾಗಿದ್ದಾರೆ. ಅದರಲ್ಲಿ ನಟಿ ಹನಿಯಾ ಅವರನ್ನೇ ಹೋಲುವಂತೆ ಕಲಾವಿದರೊಬ್ಬರಿದ್ದು ಅದು ಪಾಕ್ ನಟಿ ಹನಿಯಾ ಎಂದೇ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಉಂಟಾಗಿದೆ.

ಇನ್ನೊಂದು ಫೋಟೊದಲ್ಲಿ ನಟ ದಿಲ್ಜಿತ್ ದೋಸಾಂಜ್ ಪರ್ವತ ಶಿಖರಗಳ ನಡುವೆ ನಟಿಯೊಬ್ಬರ ಜೊತೆಗೆ ನಿಂತಿರುವ ದೃಶ್ಯ ವನ್ನು ಕಾಣಬಹುದು. ಬಹುತೇಕರು ಇದು ನಟಿ ಹನಿಯಾ ಎಂದು ಕಮೆಂಟ್ ಮಾಡಿದ್ದಾರೆ.

ಪಂಜಾಬ್ ನಟ ದಿಲ್ಜಿತ್ ದೋಸಾಂಜ್ ಮತ್ತು ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಇಬ್ಬರು ಕೂಡ ಸರ್ದಾರ್ ಜಿ 3 ಸಿನಿಮಾದಲ್ಲಿ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ವೈಮನಸ್ಸುಗಳಿದ್ದ ಕಾರಣಕ್ಕೆ ಪಾಕ್ ಪ್ರಜೆಗಳನ್ನು ಅಲ್ಲಿನ ಕಲಾವಿದರನ್ನು ಕೂಡ ವಾಪಾಸ್ಸು ತೆರಳುವಂತೆ ಸಹ ಕೇಂದ್ರ ಸರಕಾರ ಸೂಚಿಸಲಾಗಿದೆ. ಅಂತೆಯೇ ನಟಿ ಹನಿಯಾ ಅವರು ಕೂಡ ತಮ್ಮ ಶೂಟಿಂಗ್ ಕೆಲಸ ಎಲ್ಲ ಬಿಟ್ಟು ತಮ್ಮ ದೇಶಕ್ಕೆ ವಾಪಾಸಾಗಿದ್ದರು.

ಭಾರತೀಯ ಚಲನಚಿತ್ರೋದ್ಯಮ ಹಾಗೂ ಕೇಂದ್ರ ಸರಕಾರದ ನಿರ್ಣಯದಂತೆ ನಟಿ ಹನಿಯಾ ಅವರು ಸರ್ದಾರ್ ಜಿ ಸಿನಿಮಾ ತಂಡದಿಂದ ಹೊರಗುಳಿದ ಬಳಿಕ ಖ್ಯಾತ ನಟಿ ನೀರು ಬಾಜ್ವಾ ಅವರು ಈ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ನಡುವೆ ನಟಿ ಹನಿಯಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಸರ್ದಾರ್ ಜಿ 3 ಸಿನಿಮಾ ಇದೇ ಜೂನ್ 27 ರಂದು ಬಿಡುಗಡೆಯಾಗಲಿದೆ.