Home Minister Amit Shah: ಗೃಹ ಸಚಿವ ಅಮಿತ್ ಶಾ ಪದಚ್ಯುತಿಗೊಳಿಸಲು ಆಗ್ರಹಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ
Home Minister Amit Shah: ಗೃಹ ಸಚಿವ ಅಮಿತ್ ಶಾ ಪದಚ್ಯುತಿಗೊಳಿಸಲು ಆಗ್ರಹಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ

ಚಿಕ್ಕಬಳ್ಳಾಪುರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್(Dr B R Ambedkar) ಅವರನ್ನು ಅವಮಾನಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಸಂಪುಟದಿಂದ ಗೃಹಸಚಿವ ಅಮಿತ್ ಶಾ (Union Home Minister Amit Shah)ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಮಹಾ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಸೇನೆ ಹಾಗೂ ಪ್ರೊ.ಬಿ.ಕೃಷ್ಣಪ್ಪ ಬಣದ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಸಿದವು.
ನಗರದ ಅಂಬೇಡ್ಕರ್ ಭವನದಿಂದ ರ‍್ಯಾಲಿ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದ ಎರಡೂ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಕೆಲ ನಿಮಿಷಗಳ ವ್ಯತ್ಯಾಸದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ಮೊದಲು ಪ್ರತಿಭಟನೆ ನಡೆಸಿದ ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ಸೇನೆಯ ಮುಖಂಡರು ಪದಾಧಿಕಾರಿಗಳು ಬೆಂಬಲಿಗರು ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಡಿ.೧೮ರಂದು ರಾಜ್ಯ ಸಭೆಯಲ್ಲಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನದ ಮೇಲೆ ಗೌರವ ಮತ್ತು ನಂಬಿಕೆಯಿಲ್ಲ ಎಂಬುದರ ಸಾಕ್ಷಿಯಾಗಿವೆ ಎಂದು ದೂರಿದರು.
ಬಿಜೆಪಿ ಸದಾ ಸಂವಿಧಾನದ ವಿರುದ್ಧವಾಗಿರುವ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಶಾ ಅವರ ಹೇಳಿಕೆಗಳು ಸಂವಿಧಾನವನ್ನು ವಿರೂಪಗೊಳಿಸುವ ಬಿಜೆಪಿಯ ಹಿಡೆನ್ ಅಜೆಂಡಾ ಎಂಬುದನ್ನು ಬಹಿರಂಗಪಡಿಸಿವೆ. ಇದನ್ನು ಮಹಾನಾಯಕ ಸೇನೆ ಎಂದಿಗೂ ಸಹಿಸುವುದಿಲ್ಲ.ಕೂಡಲೇ ಅವರು ರಾಜೀನಾಮೆ ನೀಡಿ ದೇಶದ ಜನರ ಕ್ಷಮೆ ಕೋರ ಬೇಕು. ಮೇಲಾಗಿ ಇನ್ನಾದರೂ ಇಂತಹ ಚಾಳಿ ನಿಲ್ಲಿಸದಿದ್ದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಹಳ್ಳಿಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರೋಣಪ್ಪ ಮಾತನಾಡಿ ಅಮಿಷಾ ಅವರ ಸೊಕ್ಕು ಮುರಿಯುವ ಶಕ್ತಿ ಈ ದೇಶದ ಮೂಲನಿವಾಸಿಗಳಾದ ಅಂಬೇಡ್ಕರ್ ಸಂತಾನಕ್ಕೆ ಇದೆ ಎಂದು ತೋರಿಸುವ ಕಾಲ ಬಂದಿದೆ. ಅಧಿಕಾರ ಯಾವಾಗಲೂ ಶಾಶ್ವತ ಅಲ್ಲ, ಇದ್ದಾಗ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡವರಿಗೆ ಮಾತ್ರ ಸಾರ್ವಜನಿಕ ಬದುಕಿನಲ್ಲಿ ದೀರ್ಘಕಾಲ ಇರಲು ಸಾಧ್ಯ ಎಂಬುದನ್ನು ಮೋದಿ ಅರ್ಥ ಮಾಡಿಕೊಂಡು ಶಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರೊ.ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ ಅಂಬೇಡ್ಕರ್ ಅವರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಅಮಿತ್ ಶಾ ಅವರು ಈ ಘಟನೆಯನ್ನು ಬೆಳೆಯಲು ಬಿಡದೆ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದ ಅವರು ಬಿಜೆಪಿ ಸರಕಾರವು ದಲಿತರು ಮತ್ತು ಇತರೆ ವಂಚಿತ ಸಮುದಾಯಗಳನ್ನು ಅಪಮಾನಿಸುತ್ತಿದೆ. ಈಮೂಲಕ ದೇಶದಲ್ಲಿ ಅಂಬೇಡ್ಕರ್ ಅವರ ನೆನಪು ಕೂಡ ದೇಶವಾಸಿಗಳ ಮನಸ್ಸಿನಲ್ಲಿ ಇರದಂತೆ ಮಾಡುವ ಭಾಗವಾಗಿ ಅವರು ಅಂಬೇಡ್ಕರ್ ಹೆಸರು ಹೇಳುವ ಬದಲಿಗೆ ದೇವರು ಹೆಸರು ಹೇಳಿದ್ದರೆ ಸ್ವರ್ಗವಾದರೂ ಪ್ರಾಪ್ತಿಯಾಗುತ್ತಿತ್ತು ಎಂದಿದ್ದಾರೆ. ಇದನ್ನು ಸಂಘಟನೆ ಬಲವಾಗಿ ಖಂಡಿಸುತ್ತಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾವುದೇ ಪಕ್ಷವಿರಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರೆ ಅದನ್ನು ಸಹಿಸಿಕೊಂಡು ಕೂರುವ ಜಾಯಮಾನ ದಸಂಸ ಮುಖಂಡರು ಕಾರ್ಯಕರ್ತರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಬಾಬಾ ಸಾಹೇಬರಿಗೆ ಮಾಡಿರುವ ಅವಮಾನ ಅಲ್ಲ ಇಡೀ ದೇಶಕ್ಕೆ ಮಾಡಿರುವ ಅವಮಾನವಾಗಿದೆ. ಅವರು ಅಂದುಕೊAಡಿರಬಹುದು ನಾವು ಹೇಳಿದಂತೆ ಎಲ್ಲವೂ ಆಗುತ್ತದೆ ಎಂದು.ಆದರೆ ಇಡೀ ದೇಶ ಅಂಬೇಡ್ಕರ್ ಚಿಂತನೆಗಳ ಪರವಾಗಿದ್ದೇವೆ.ಇವರನ್ನು ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ದಲಿತರಿಗಿದೆ.ಈ ಹೇಳಿಕೆ ವಿರುದ್ದ ಇಡೀ ದೇಶವೇ ದಂಗೆಯೆದ್ದಿದೆ.ಸAವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ.ನೀವು ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲಿಲ್ಲ ಎಂದರೆ ರಾಜಿನಾಮೆ ಕೊಟ್ಟು ಹೊರಗೆ ನಡೆಯಿರಿ ಎಂದು ಗುಡುಗಿದರು.
ಈ ವೇಳೆ ವೆಂಕಟರಮಣಪ್ಪ, ತಿಮ್ಮರಾಜು,ಎಸ್.ಬಿ.ಮಂಜುನಾಥ್,ಜಿ.ಮೂರ್ತಿ,ಸುರೇಶ್, ಸುಜಾತಮ್ಮ, ಜ್ಯೋತಿ, ರೂಪ, ನಾಗೇಶ್, ದೇವದಾಸ್, ಮುನಿರಾಜು ಮತ್ತಿತರರು ಇದ್ದರು.