Viral News: ಭಯ ಹುಟ್ಟಿಸಿದ ನಾಗ-ನಾಗಿಣಿ ಕಥೆ: ಗಂಡನನ್ನು ಹಿಂಬಾಲಿಸಿದ ಹಾವನ್ನು ಕೊಂದ ಹೆಂಡತಿ, ಮತ್ತೊಂದು ಹಾವು ಪ್ರತ್ಯಕ್ಷ
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಲಿನಗರ್ ಕೆಂಜ್ರಾ ಗ್ರಾಮದಲ್ಲಿ ಬಾಲಿವುಡ್ ಸಿನಿಮಾ ಮಾದರಿಯ ರೋಚಕ ಘಟನೆ ನಡೆದಿದ್ದು, ಹಾವಿನ ಪ್ರತೀಕಾರದ ಕಥೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಘಟನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್ (Firozabad) ಜಿಲ್ಲೆಯ ಅಲಿನಗರ್ ಕೆಂಜ್ರಾ ಗ್ರಾಮದಲ್ಲಿ ಬಾಲಿವುಡ್ (Bollywood) ಸಿನಿಮಾ ಮಾದರಿಯ ರೋಚಕ ಘಟನೆ ನಡೆದಿದ್ದು, ಹಾವಿನ ಪ್ರತೀಕಾರದ (Snake Revenge) ಕಥೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಭಾನುವಾರ, ಮಹೇಶ್ ನಿಷಾದ್ ಎಂಬುವವರ ಮಗ ಶಿವಂ ನಿಷಾದ್, ಹೊಲದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದಾನೆ. ಹಾವು ಕಂಡು ಭಯದಿಂದ ಮನೆಗೆ ಓಡಿ ಹೋಗಿದ್ದಾನೆ. ಆದರೆ ಗ್ರಾಮಸ್ಥರ ಪ್ರಕಾರ, ಆ ಹಾವು ಅವನನ್ನು ಹಿಂಬಾಲಿಸಿ ಮನೆಗೆ ಬಂದಿದೆ. ಹಾಸಿಗೆಯ ಮೇಲೆ ಮಲಗಿದ್ದ ಶಿವಂ ಕೈ ಮತ್ತು ಕಾಲಿಗೆ ಮೂರು ಬಾರಿ ಹಾವು ಕಚ್ಚಿದೆ. ಶಿವಂನ ಪತ್ನಿ ಗುಡಿಯಾ ಆ ಹಾವನ್ನು ಕೊಂದು, ಗಂಡನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.
ಕೆಲ ಗಂಟೆಗಳ ಬಳಿಕ ಕುಟುಂಬದವರು ಮನೆಗೆ ವಾಪಸ್ ಬಂದಾಗ ಸತ್ತ ಹಾವಿನ ಪಕ್ಕದಲ್ಲಿ ಮತ್ತೊಂದು ಹಾವು ಕಂಡುಬಂದಿದ್ದು, ಅದನ್ನು ಹೆಣ್ಣು ಎಂದು ಶಂಕಿಸಲಾಗಿದೆ. ಸುರುಳಿ ಆಕಾರದಲ್ಲಿ ಸುತ್ತಿಕೊಂಡಿದ ಇನ್ನೊಂದು ಹಾವನ್ನು ಕಂಡು ಎಲ್ಲರು ದಿಗ್ಭ್ರಮೆಗೊಂಡಿದ್ದಾರೆ. ಮತ್ತೊಂದು ದಾಳಿಯ ಭಯದಿಂದ ಗುಡಿಯಾ ಆ ಹಾವನ್ನೂ ಕೊಂದಿದ್ದಾಳೆ. ನನ್ನ ಗಂಡನ ಸುರಕ್ಷತೆಗಾಗಿ ಹೀಗೆ ಮಾಡಿದೆ ಎಂದು ಆಕೆ ಹೇಳಿದ್ದಾಳೆ.
ಈ ಸುದ್ದಿಯನ್ನು ಓದಿ: Viral Video: ಮಗನ ಜತೆ ಸಖತ್ ಆಗಿ ಹೆಜ್ಜೆ ಹಾಕಿದ ತಾಯಿ; ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದೇಕೆ?
ಶಿವಂನ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಅವರನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಚಿಕಿತ್ಸೆಗೆ ಸಹಾಯವಾಗಲಿ ಎಂದು ಕುಟುಂಬವು ಹಾವಿನ ಫೋಟೋವನ್ನೂ ತಂದಿತ್ತು.
ಸ್ಥಳಕ್ಕೆ ಎರಡನೇ ಹಾವು ಬಂದಿರುವುದು ಸಿನಿಮಾದಲ್ಲಿ ಕಂಡ 'ನಾಗ-ನಾಗಿಣಿ’ ಜಾನಪದ ಕಥೆಯಂತಹ ಪ್ರತೀಕಾರದ ಶಂಕೆಯನ್ನು ಗ್ರಾಮಸ್ಥರಲ್ಲಿ ಹುಟ್ಟುಹಾಕಿದೆ. ಈ ವಿಚಿತ್ರ ಘಟನೆಯಿಂದ ಗ್ರಾಮದಲ್ಲಿ ಭಯ ಮತ್ತು ಕುತೂಹಲ ಮಿಶ್ರಿತ ವಾತಾವರಣ ನಿರ್ಮಾಣವಾಗಿದೆ. ಜನರು ಈ ಘಟನೆಯನ್ನು ಚರ್ಚಿಸುತ್ತಿದ್ದು, ಸ್ಥಳೀಯ ಆಡಳಿತವು ಗಂಭೀರವಾಗಿ ಪರಿಗಣಿಸಿದೆ.