ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Next Dalai Lama: ದಲೈ ಲಾಮಾ ಉತ್ತರಾಧಿಕಾರಿ ಯಾರು? ಶೀಘ್ರದಲ್ಲೇ ಘೋಷಣೆ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಲೈ ಲಾಮಾ ಅವರ 91ನೇ ಹುಟ್ಟುಹಬ್ಬದ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಆಚರಣೆಯ ವೇಳೆ ದಲೈ ಲಾಮಾ ತಮ್ಮ ಉತ್ತರಾಧಿಕಾರಿಯನ್ನು ಬಹಿರಂಗಪಡಿಸಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಇದು ರಾಜಕೀಯ ನೇಮಕಾತಿ ಪ್ರಕ್ರಿಯೆಗಳಿಗಿಂತ ಭಿನ್ನವಾಗಿದ್ದು, ಹೊಸ ದಲೈ ಲಾಮಾ ಅವರ ಆಯ್ಕೆಯು ಬೌದ್ಧಧರ್ಮದ ಸಾಂಪ್ರದಾಯಿಕ ಪದ್ಧತಿ ಅನುಸಾರ ನಡೆಯುತ್ತದೆ ಎನ್ನುವುದು ವಿಶೇಷ.

ದಲೈ ಲಾಮಾ ಉತ್ತರಾಧಿಕಾರಿ ಯಾರು?

ಧರ್ಮಶಾಲಾ: ದಲೈ ಲಾಮಾ (Dalai Lama) ಅವರ 91ನೇ ಹುಟ್ಟುಹಬ್ಬದ ಭವ್ಯ ಆಚರಣೆಗೆ ಹಿಮಾಚಲ ಪ್ರದೇಶದ (Himachal Pradesh) ಧರ್ಮಶಾಲಾದಲ್ಲಿರುವ (Dharamshala) ಟಿಬೆಟಿಯನ್ನರು (Tibetan spiritual leadership) ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆಯೇ ಹೊಸ ದಲೈ ಲಾಮಾ ಅವರ ಘೋಷಣೆಯಾಗುವ ಸಾಧ್ಯತೆ ಇದೆ. ಹೊಸ ದಲೈಲಾಮ ನೇಮಕಾತಿ ಪ್ರಕ್ರಿಯೆಯು ಭಿನ್ನವಾಗಿರುತ್ತದೆ. ಇದು ಬೌದ್ಧಧರ್ಮದ ಸಾಂಪ್ರದಾಯಿಕ ಪುನರ್ಜನ್ಮ ಪ್ರಕ್ರಿಯೆಯಂತೆ ನಡೆಯುತ್ತದೆಯಾದರೂ ಇದನ್ನು ಚೀನಾ ನಿಯಂತ್ರಿಸಲು ಪ್ರಯತ್ನಿಸುತ್ತದೆ. ಮುಂದಿನ ದಲೈ ಲಾಮಾ ಅವರನ್ನು ಅನುಮೋದಿಸುವ ಹಕ್ಕನ್ನು ಅದು ಪ್ರತಿಪಾದಿಸುತ್ತಿದೆ. ಆದರೆ ಇದನ್ನು ಅನೇಕ ಟಿಬೆಟಿಯನ್ನರು ವಿರೋಧಿಸುತ್ತಾರೆ. ಯಾಕೆಂದರೆ ಇದು ತಮ್ಮ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತದೆ ಎನ್ನುತ್ತಾರೆ ಅವರು.

ಭೌಗೋಳಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿರುವ ದಲೈ ಲಾಮಾ ಅವರ ಉತ್ತರಾಧಿಕಾರವು ಕೇವಲ ಧಾರ್ಮಿಕ ವಿಷಯವಾಗಿ ಉಳಿದಿಲ್ಲ. ಇದನ್ನು ವಿಶ್ವವೇ ಗಮನಿಸುತ್ತದೆ. ಈ ನೇಮಕಾತಿ ಪ್ರಕ್ರಿಯೆಯ ವೇಳೆ ಚೀನಾವು ಭಾರತ, ಅಮೆರಿಕ ಗಮನವನ್ನು ತನ್ನತ್ತ ಸೆಳೆಯುತ್ತದೆ.

ಸುಮಾರು 66 ವರ್ಷಗಳಿಂದ ಟಿಬೆಟಿಯನ್ ಸಮುದಾಯವನ್ನು ಧರ್ಮಶಾಲಾದಿಂದ ಮುನ್ನಡೆಸಲಾಗುತ್ತಿದೆ. 1959ರ ದಂಗೆಯ ಬಳಿಕ ಭಾರತದಲ್ಲಿ ಆಶ್ರಯ ಪಡೆದ ದಲೈ ಲಾಮಾ ಇದೀಗ ತಮ್ಮ ಉತ್ತರಾಧಿಕಾರ ಯೋಜನೆಗಳ ಬಗ್ಗೆ ಹೇಳಿದ್ದಾರೆ. ಆತ್ಮಚರಿತ್ರೆ 'ವಾಯ್ಸ್ ಫಾರ್ ದಿ ವಾಯ್ಸ್‌ಲೆಸ್'ನಲ್ಲಿ ಅವರು ತಮ್ಮ 90ನೇ ಹುಟ್ಟುಹಬ್ಬದ ಸುಮಾರಿಗೆ ತಮ್ಮ ಉತ್ತರಾಧಿಕಾರಿ ಯಾರೆಂದು ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದರು.

14ನೇ ದಲೈ ಲಾಮಾ ಅವರ ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಟಿಬೆಟಿಯನ್ ಸಂಪ್ರದಾಯಿಕ ನಂಬಿಕೆ ಪ್ರಕಾರ ಹಿರಿಯ ಬೌದ್ಧ ಸನ್ಯಾಸಿಯ ಆತ್ಮವು ಮರಣದ ಬಳಿಕ ಪುನರ್ಜನ್ಮ ಪಡೆಯುತ್ತದೆ. 1935ರ ಜುಲೈ 6ರಂದು ಈಶಾನ್ಯ ಟಿಬೆಟ್‌ನಲ್ಲಿರುವ ಕೃಷಿ ಕುಟುಂಬದಲ್ಲಿ ಜನಿಸಿದ ಲಾಮೋ ಧೋಂಡಪ್ ಎರಡೇ ವರ್ಷಕ್ಕೆ 13ನೇ ದಲೈ ಲಾಮಾ ಅವರಿಗೆ ಸೇರಿದ ಆಸ್ತಿಗಳನ್ನು ಸ್ಪಷ್ಟವಾಗಿ ಗುರುತಿಸಿದಾಗ ಇದೇ ಪುನರ್ಜನ್ಮ ಎಂದು ಟಿಬೆಟಿಯನ್ ಸರ್ಕಾರ ನೇಮಿಸಿದ ಶೋಧನಾ ತಂಡವು ದೃಢಪಡಿಸಿತು.

1940ರಲ್ಲಿ ಲಾಮೋ ಧೋಂಡಪ್ ಅವರನ್ನು ಲಾಸಾದಲ್ಲಿರುವ ಪೊಟಲಾ ಅರಮನೆಗೆ ಕರೆತರಲಾಯಿತು. ಅಲ್ಲಿ ಅವರು ಟಿಬೆಟಿಯನ್ ಜನರ ಆಧ್ಯಾತ್ಮಿಕ ನಾಯಕನಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.

ದಲೈ ಲಾಮಾ 2015ರಲ್ಲಿ ಸ್ಥಾಪಿಸಿದ ಗಾಡೆನ್ ಫೋಡ್ರಾಂಗ್ ಫೌಂಡೇಶನ್ ಈ ಬಾರಿ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆಸಲಿದೆ. ದಲೈ ಲಾಮಾ ತಮ್ಮ ಉತ್ತರಾಧಿಕಾರಿ ಚೀನಾದ ಹೊರಗೆ ಜನಿಸುತ್ತಾನೆ, ರಾಜಕೀಯ ಹಸ್ತಕ್ಷೇಪದಿಂದ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತಾನೆ ಎಂದು ಹೇಳಿದ್ದಾರೆ.

ಉತ್ತರಾಧಿಕಾರಿಯ ಆಯ್ಕೆ ಹೇಗಿರುತ್ತದೆ?

ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಭಾಗವಾಗಿ ಹಿರಿಯ ಸನ್ಯಾಸಿ ಮತ್ತು ಆಧ್ಯಾತ್ಮಿಕ ನಾಯಕರು ದಲೈ ಲಾಮಾ ಅವರ ಮರಣದ ಸಮಯದಲ್ಲಿ ಸಂಭವಿಸುವ ಕನಸುಗಳು, ಧಾರ್ಮಿಕ ಶಕುನಗಳು ಆಧರಿಸಿ ಪರಿಶೀಲಿಸುತ್ತಾರೆ.

ಪುನರ್ಜನ್ಮವಾಗುವ ಸಾಧ್ಯತೆಗಳಿರುವ ಪ್ರದೇಶಗಗಳಲ್ಲಿ ಹುಡುಕಲು ತಂಡವನ್ನು ರಚಿಸಲಾಗುತ್ತದೆ. ಉತ್ತರಾಧಿಕಾರಿಯಾಗಬಹುದಾದ ಅಭ್ಯರ್ಥಿಗಳಿಗೆ ಹಿಂದಿನ ದಲೈ ಲಾಮಾ ಅವರ ವಸ್ತುಗಳನ್ನು ನೀಡಲಾಗುತ್ತದೆ. ಇವುಗಳನ್ನು ಮಗು ಸ್ಪಷ್ಟವಾಗಿ ಗುರುತಿಸಿದರೆ ಅದು ಅವರ ಪುನರ್ಜನ್ಮ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: IIT Bombay: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 14 ದಿನ ವಾಸ್ತವ್ಯ ಹೂಡಿದ್ದ ನಕಲಿ ವಿದ್ಯಾರ್ಥಿ! ಪತ್ತೆಯಾಗಿದ್ದು ಹೇಗೆ?

ಬಳಿಕ ಮಗುವಿನ ಆಧ್ಯಾತ್ಮಿಕ ಗುಣ, ನಡವಳಿಕೆಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಹಿರಿಯ ಸನ್ಯಾಸಿಗಳಿಗೆ ಈ ಮಗು ಉತ್ತರಾಧಿಕಾರಿಯಾಗಲು ಯೋಗ್ಯ ಎಂದೆಸಿದ ಬಳಿಕವೇ ಹೊಸ ದಲೈ ಲಾಮಾ ಎಂದು ಗುರುತಿಸಲಾಗುತ್ತದೆ.

ಟಿಬೆಟಿಯನ್ ಆಡಳಿತ ಹೇಗಿದೆ?

ಹೊಸ ದಲೈ ಲಾಮಾ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಧರ್ಮಶಾಲಾದಲ್ಲಿರುವ ಟಿಬೆಟಿಯನ್ ಸಂಸದೀಯ ಸಂಸ್ಥೆಯು ಆಡಳಿತವನ್ನು ನಡೆಸುತ್ತದೆ. ಬೀಜಿಂಗ್ ನಾಯಕರು ಮುಂದಿನ ದಲೈ ಲಾಮಾ ಅವರನ್ನು ಅನುಮೋದಿಸಬೇಕು ಎಂದು ಪ್ರತಿಪಾದಿಸುತ್ತದೆ. ನಾಸ್ತಿಕ ರಾಷ್ಟ್ರ ಚೀನಾಕ್ಕೆ ಆಧ್ಯಾತ್ಮಿಕ ವಿಷಯಗಳಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಟಿಬೆಟಿಯನ್ನರು ವಾದಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದಲೈ ಲಾಮಾ ಅವರನ್ನು 'ಪ್ರತ್ಯೇಕತಾವಾದಿ' ಎಂದು ಕರೆಯುವ ಬೀಜಿಂಗ್ ಚೀನಾದಲ್ಲಿ ಅವರ ಮೇಲಿನ ಭಕ್ತಿಯನ್ನು ತೀವ್ರವಾಗಿ ನಿಯಂತ್ರಿಸುತ್ತದೆ.