Rajamouli: ಅನುಷ್ಕಾ ಶೆಟ್ಟಿಗಾಗಿ ಆ ನಟನ ಜತೆ ರೊಮ್ಯಾನ್ಸ್ ಮಾಡಿದ್ದೆ ಎಂದ ನಿರ್ದೇಶಕ ರಾಜಮೌಳಿ!
ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು. ಇವರ ಸಿನಿಮಾ ಎಂದರೆ ಪ್ರೇಕ್ಷರಿಗೆ ಹೆಚ್ಚು ನಿರೀಕ್ಷೆ ಇರುತ್ತದೆ. ಇವರು ಆ್ಯಕ್ಷನ್ ಕಟ್ ಹೇಳಿರುವ ʼಬಾಹುಬಲಿʼ ಸರಣಿ, ʼಮಗಧೀರʼ, ʼಈಗʼ, ʼಮರ್ಯಾದ ರಾಮಣ್ಣʼ, ʼಆರ್ಆರ್ಆರ್ʼ ಇತ್ಯಾದಿ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಅನೇಕ ಸೆಲೆಬ್ರಿಟಿಗಳ ಸಿನಿ ಕೆರಿಯರ್ ಬದಲಾಯಿಸಿಬಿಟ್ಟಿದೆ. ಅಂತಹ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಇವರು ರಾಜಮೌಳಿ ನಿರ್ದೇಶನದ 3 ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಅನುಷ್ಕಾ ಶೆಟ್ಟಿ ಅವರಿಗಾಗಿ ರಾಜಮೌಳಿ ಒಬ್ಬ ಖ್ಯಾತ ನಟರ ಜತೆ ರೊಮ್ಯಾಂಟಿಕ್ ಆಗಿ ಅಭಿನಯಿಸಿದ್ದ ವಿಚಾರವನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Anushka Shetty and Rajamouli


ಡಿಫರೆಂಟ್ ಸ್ಟೋರಿ, ಸ್ಕ್ರೀನ್ ಪ್ಲೇ ಮೂಲಕವೇ ದೇಶದ ಗಮನ ಸೆಳೆದ ಟಾಲಿವುಡ್ ನಿರ್ದೇಶಕ ರಾಜಮೌಳಿ ಯಾವುದೇ ಕಥೆ ಕೈಗೆತ್ತಿಕೊಂಡರೂ ಆ ಪಾತ್ರಕ್ಕೆ ಒಪ್ಪುವವರನ್ನು ಆಯ್ಕೆ ಮಾಡುತ್ತಾರೆ. ಅಂತೆಯೇ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರನ್ನು ʼವಿಕ್ರಮಾರ್ಕುಡುʼ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ರೊಮ್ಯಾಂಟಿಕ್ ಸೀನ್ನ ಅಭಿನಯ ತಾನೇ ಮಾಡಬೇಕಾಯಿತು ಎಂದು ರಾಜಮೌಳಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ, ʼʼನನ್ನ ವೃತ್ತಿ ಜೀವನದಲ್ಲಿ ಅನೇಕ ನಟ ನಟಿಯರೊಂದಿಗೆ ಕೆಲಸ ಮಾಡಿದ್ದೇನೆ. ಕೆಲವರು ಒಂದು ದೃಶ್ಯ ಹೇಳಿದ ತಕ್ಷಣ ಅದನ್ನು ಅರ್ಥೈಸಿ ಕೊಳ್ಳುತ್ತಾರೆ. ಇನ್ನು ಕೆಲವೊಂದನ್ನು ನಾವು ಅಭಿನಯಿಸಿ ತೋರಿಸಿದ ಬಳಿಕ ಅವರು ಅಭಿನಯಿಸುತ್ತಾರೆ. ಆದರೆ ಎಲ್ಲ ದೃಶ್ಯಗಳನ್ನು ಹಾಗೆ ತೋರಿಸಲು ಸಾಧ್ಯವಾಗದು. ಆದರೆ ನಟಿ ಅನುಷ್ಕಾ ಪ್ರತಿ ದೃಶ್ಯವನ್ನು ಮಾಡಿ ತನಗೆ ತೋರಿಸಬೇಕೆಂದು ಮನವಿ ಮಾಡಿದ್ದರುʼʼ ಎಂದು ಹೇಳಿದ್ದಾರೆ.

ʼʼವಿಕ್ರಮಾರ್ಕುಡುʼ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ರವಿತೇಜ ಅವರೊಂದಿಗೆ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸುವಂತೆ ಅನುಷ್ಕಾ ಬಳಿ ತಿಳಿಸಿದ್ದೆ. ಆದರೆ ಅವರು ತನಗೆ ಸ್ಪಷ್ಟತೆ ಬೇಕು. ನೀವೇ ಅಭಿನಯಿಸಿ ತೋರಿಸಿ ಎಂದು ಹೇಳಿದ್ದರು. ಹೀಗಾಗಿ ರವಿತೇಜ ಜತೆ ನಾನೇ ಆ ರೋಮ್ಯಾಂಟಿಕ್ ಸೀನ್ ಮಾಡಬೇಕಾಯಿತುʼʼ ಎಂದು ರಾಜಮೌಳಿ ತಿಳಿಸಿದ್ದಾರೆ.

ʼಬಾಹುಬಲಿʼ ಭಾಗ 1 ಮತ್ತು 2ರ ಮೂಲಕ ಅನುಷ್ಕಾ ಶೆಟ್ಟಿ ತಮ್ಮ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಆ ಬಳಿಕ ಅವರಿಗೆ ಅನೇಕ ಆಫರ್ ಬರಲಾರಂಭಿಸಿದವು. ಜತೆಗೆ ಟಾಲಿವುಡ್ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಆದರೆ ಅವರು ಚೂಸಿಯಾಗಿದ್ದು, ಅಳೆದೂ ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಸದ್ಯ ರಾಜಮೌಳಿ ನಟ ಮಹೇಶ್ ಬಾಬು ಅವರೊಂದಿಗೆ ʼಎಸ್ಎಸ್ಎಂಬಿ29ʼ ಚಿತ್ರ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸದ್ಯ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.