Puneeth Kerehalli: ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ; ಮೈಸೂರಿನಲ್ಲಿ ಎಫ್‌ಐಆರ್ ದಾಖಲು
Puneeth Kerehalli: ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಟ್ಸ್‌ಆ್ಯಪ್ ಕಾಲ್ ಹಾಗೂ ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.


ಮೈಸೂರು: ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿ ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ 'NEXT YOU WILL KILL' ಎಂದು ಬರೆದು ಜೀವ ಬೆದರಿಕೆ ಹಾಕಿದ್ದ ಆರೋಪಿಯು, ವಾಟ್ಸ್ ಆ್ಯಪ್ ಕಾಲ್ ಹಾಗೂ ವಿಡಿಯೋ ಕಾಲ್ ಮೂಲಕವೂ ನಿರಂತರವಾಗಿ ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ.
ಜೀವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕ್ರಮಕ್ಕಾಗಿ ಕಳೆದೆರಡು ದಿನಗಳ ಹಿಂದೆ ದೂರು ದಾಖಲಿಸಲು ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿದ್ದೆ. ಆದರೆ, ಠಾಣೆಯಲ್ಲಿ ತಕ್ಷಣ ದೂರು ದಾಖಲಿಸಿಕೊಳ್ಳದೇ, 'ಇನ್ಸ್ಪೆಕ್ಟರ್ ಬರುತ್ತಾರೆ, ಕಾಯಿರಿ' ಎಂದು ಎರಡು ಗಂಟೆಗೂ ಹೆಚ್ಚು ಕಾಯಿಸಿದ್ದಾರೆ ಎಂದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಪುನೀತ್ ಕೆರೆಹಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದರು. 'ಹಿಂದೂಗಳಿಗೊಂದು ಕಾನೂನು, ಮುಸ್ಲಿಮರಿಗೊಂದು ಕಾನೂನು ಇದೆಯಾ? ಪೊಲೀಸರಿಗೆ ಯಾಕಿಷ್ಟು ಭಯ? ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂದು ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದರು. ಇದೀಗ ನ್ಯಾಯಾಲಯದ ಅನುಮತಿಯೊಂದಿಗೆ ಅಕ್ರಮ್ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Baloch Liberation Army: ಪಾಕಿಸ್ತಾನದ 14 ಸೈನಿಕರ ಹತ್ಯೆ ಮಾಡಿದ ಬಲೂಚ್ ಲಿಬರೇಷನ್ ಆರ್ಮಿ; ವಿಡಿಯೊ ರಿಲೀಸ್
ಕರ್ನಲ್ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿ ಎಂಬ ಫೇಕ್ ಪೋಸ್ಟ್; ಎಫ್‌ಐಆರ್ ದಾಖಲು

ಬೆಳಗಾವಿ: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಅವರ ಪತಿ ಮನೆ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಸೂಚನೆ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ 353(2), 192 ಸೆಕ್ಷನ್ ಅಡಿಯಲ್ಲಿ ಆರೋಪಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಬಗ್ಗೆ ಇತ್ತೀಚೆಗ ಪ್ರತಿಕ್ರಿಯಿಸಿದ್ದ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು, ಫೇಕ್ ಪೋಸ್ಟ್ ಮಾಡಿದ್ದ ಆರೋಪಿ ಅನೀಸ್ ಉದ್ದೀನ್, ಕೆನಡಾದ ಕೊಲಂಬಿಯಾ ನಿವಾಸಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದರು. 'ಎಕ್ಸ್‌ನ ವೆರಿಫೈಡ್ ಖಾತೆಯಿಂದ ಹರಡಲಾದ ಈ ಸುಳ್ಳು ಸುದ್ದಿಯನ್ನು ಬೆಳಗಾವಿ ಪೊಲೀಸರ ಸಾಮಾಜಿಕ ಜಾಲತಾಣ ತಂಡವು ಗಮನಿಸಿ, ನನ್ನ ಗಮನಕ್ಕೆ ತಂದಿದ್ದರು. ನಾನು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, ತಕ್ಷಣವೇ ಈ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ದೆ. ನನ್ನ ಕಾಮೆಂಟ್ ನೋಡಿದ ಆತ ಕೂಡಲೇ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎಂದು ಎಸ್‌ಪಿ ಗುಳೇದ್ ಹೇಳಿದ್ದರು.
ನಂತರ, ಬೆಳಗಾವಿ ಪೊಲೀಸರು ಎಕ್ಸ್‌ನ ಮುಖ್ಯ ಕಚೇರಿಗೆ ಈ ಬಗ್ಗೆ ಮಾಹಿತಿ ಕೋರಿದಾಗ, ಈ ಸುಳ್ಳು ಸುದ್ದಿಯನ್ನು ಹರಡಿದವನು ಕೊಲಂಬಿಯಾ ಪ್ರಜೆ ಅನೀಸ್ ಉದ್ದೀನ್ ಎಂಬುದು ಸಾಬೀತಾಯಿತು ಎಂದು ತಿಳಿಸಿದ್ದರು.
ಈ ಘಟನೆಯ ಬೆನ್ನಲ್ಲೇ, ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ. 'ಕರ್ನಲ್ ಸೋಫಿಯಾ ಖುರೇಷಿ ಇಂದು ಭಾರತದ ಪ್ರತಿ ಮನೆಗೆ ಚಿರಪರಿಚಿತರಾಗಿದ್ದಾರೆ. ಆದ್ದರಿಂದ, ಅವರ ಕುಟುಂಬಸ್ಥರಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದಿದ್ದರು.
ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್ ಸಿಂದೂರ್ ಬಗ್ಗೆ ಅಪಪ್ರಚಾರ- ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್ ಖಾತೆ ಬ್ಲಾಕ್!
ಈ ಸುಳ್ಳು ಸುದ್ದಿಯನ್ನು ಖಂಡಿಸಿರುವ ಬೆಳಗಾವಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜನತೆಗೆ ಮನವಿ ಮಾಡಿದ್ದರು.