Monkey fever death: ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಬ್ಬ ಬಾಲಕಿ ಬಲಿ
ರಚಿತ್ ಆರೋಗ್ಯ ಚೇತರಿಸದೇ ಇದ್ದುದರಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ರಚಿತ್ ಮರಣ ಹೊಂದಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಮರಣ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಮಂಗನ ಕಾಯಿಲೆ (monkey fever) ಅಥವಾ ಕೆಎಫ್‌ಡಿ (KFD) ಕಾಯಿಲೆ ಮತ್ತೊಬ್ಬ ಬಾಲಕನನ್ನು ಬಲಿ (death) ಪಡೆದುಕೊಂಡಿದೆ. ಶಿವಮೊಗ್ಗ (Shivamogga) ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದತ್ತರಾಜಾಪುರ ಗ್ರಾಮದ 8 ವರ್ಷದ ಬಾಲಕ ರಚಿತ್ ಕೆಎಫ್‌ಡಿ ಕಾಯಿಲೆಯಿಂದ ಏ.17ರಂದು ಮೃತಪಟ್ಟಿದ್ದಾನೆ. ಈತನ ಅಕ್ಕನಿಗೂ ಕೆಎಫ್‌ಡಿ ಬಂದಿದ್ದು, ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ. ರಚಿತ್‌ಗೆ ಕಾಯಿಲೆ ಉಲ್ಬಣಿಸಿ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಏಪ್ರಿಲ್ 4ರಂದು ರಚಿತ್ ಅಕ್ಕ ರಮ್ಯಾಗೆ ಜ್ವರ ಇದ್ದುದರಿಂದ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ದಾಖಲಾಗಿ ಕೆಎಫ್‌ಡಿ ಪರೀಕ್ಷೆ ಮಾಡಿಸಿದಾಗ ಕೆಎಫ್‌ಡಿ ಪಾಸಿಟಿವ್ ಬಂದಿತ್ತು. ನಂತರ ರಚಿತ್‌ಗೂ ಸುಸ್ತು ಮತ್ತು ವಾಂತಿ ಕಂಡುಬಂದುದರಿಂದ ಏಪ್ರಿಲ್ 5ರಂದು ಜೆಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಎಫ್ ಡಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ರಮ್ಯಾ ಮತ್ತು ರಚಿತ್ ಇಬ್ಬರನ್ನೂ 6ನೇ ತಾರೀಕು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿ ಎಬಿಎಆರ್‌ಕೆ ಅಡಿ ಉಚಿತ ಚಿಕಿತ್ಸೆ ನೀಡಲಾಗಿತ್ತು. ರಮ್ಯಾ ಗುಣಮುಖಳಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಳು.
ರಚಿತ್ ಆರೋಗ್ಯ ಚೇತರಿಸದೇ ಇದ್ದುದರಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ರಚಿತ್ ಮರಣ ಹೊಂದಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಮರಣ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಕೆಎಫ್‌ಡಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ರಚಿತ್ ಚಿಕಿತ್ಸೆ ಕುರಿತು ಮಣಿಪಾಲ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು. ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ಅಧಿಕಾರಿಗಳ ಸಭೆ ಕರೆದು ಕೆಎಫ್‌ಡಿ ನಿಯಂತ್ರಣದ ಕುರಿತು ಸಲಹೆ ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ರಚಿತ್ ಚಿಕಿತ್ಸೆ ಕುರಿತು ಮಣಿಪಾಲ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: Kyasanur Forest Disease: ಮಂಗನ ಕಾಯಿಲೆಗೆ ಮತ್ತೊಂದು ಬಲಿ, ಚಿಕ್ಕಮಗಳೂರಲ್ಲಿ ಮಹಿಳೆ ಸಾವು