ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gig Workers Bill: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿ 3 ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರ ಅಂಕಿತ

Gig Workers Bill: ರಾಜ್ಯದಲ್ಲಿ ಸದ್ಯ ವಿಧಾನಮಂಡಲ ಅಧಿವೇಶನ ಇಲ್ಲದೇ ಇರುವುದರಿಂದ ಮಹತ್ವದ ಮೂರು ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರ ಒಪ್ಪಿಗೆ ದೊರೆತಿದೆ.

ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿ 3 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

Profile Prabhakara R May 27, 2025 10:17 PM

ಬೆಂಗಳೂರು: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸುಗ್ರೀವಾಜ್ಞೆ, ಸಿವಿಲ್ ಸೇವೆಗಳ ತಿದ್ದುಪಡಿ ಸುಗ್ರೀವಾಜ್ಞೆ, ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಮಂಗಳವಾರ ಸಹಿ ಹಾಕಿದ್ದಾರೆ. ಸದ್ಯ ವಿಧಾನಮಂಡಲ ಅಧಿವೇಶನ ಇಲ್ಲದೇ ಇರುವುದರಿಂದ ಈ ಮೂರು ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು, ಇದಕ್ಕೆ ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದೆ. ಈ ಕಾಯ್ದೆಗಳ ಜಾರಿಗೆ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಇ-ಕಾಮರ್ಸ್‌ ಹಾಗೂ ಫುಡ್‌ ಡೆಲಿವರಿ ಕಂಪನಿಗಳ ಡೆಲಿವರಿ ಬಾಯ್ಸ್‌ಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಈ ಸುಗ್ರೀವಾಜ್ಞೆ ರೂಪಿಸಿದೆ. ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷದಷ್ಟಿದೆ. ಆದರೆ ಇವರಿಗೆ ಅಪಘಾತ ಪರಿಹಾರ ಸೇರಿ ಯಾವುದೇ ಸರ್ಕಾರಿ ಸೌಲಭ್ಯಗಳು ಇಲ್ಲ. ಅಪಘಾತ ಅಥವಾ ಮರಣ ಸಮಯದಲ್ಲಿ ಅವರನ್ನು ಅವಲಂಬಿಸಿದವರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ - 2024 ಅನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.

ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ( ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ ಜಾರಿಗೆ ತರುವ ಮೂಲಕ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ಭವಿಷ್ಯ ನಿಧಿ, ವಸತಿ ಸೌಲಭ್ಯ ಈ ರೀತಿಯಲ್ಲಿ ಹಂತ ಹಂತವಾಗಿ ಒದಗಿಸಲು ನಿರ್ಧಾರ ಮಾಡಲಾಗಿದೆ.

ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ. 15 ವರ್ಗಾವಣೆ

ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲು ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಸುಗ್ರಿವಾಜ್ಞೆ ಅವಕಾಶ ಕಲ್ಪಿಸಲಿದೆ.

ಗ್ರಾಮೀಣ ಪ್ರದೇಶದಲ್ಲಿ ನಿಗದಿಪಡಿಸಿದಷ್ಟು ಕರ್ತವ್ಯವನ್ನು ಸಲ್ಲಿಸದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಹುದ್ದೆಗೇ ವರ್ಗಾವಣೆ ಮಾಡಬೇಕು. ವಿಶೇಷ ತಜ್ಞ ವೈದ್ಯರು, ಹಿರಿಯ ವಿಶೇಷ ತಜ್ಞ ವೈದ್ಯರನ್ನು ಅವರು ಹೊಂದಿರುವ ವಿಶೇಷ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಗುರುತಿಸಿದ ಹುದ್ದೆಗೆ ವರ್ಗಾವಣೆ ಮಾಡಬೇಕು. ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ 15ರಷ್ಟು ವರ್ಗಾವಣೆ ಹಾಗೂ ಮಹತ್ವದ ಖಾಲಿ ಹುದ್ದೆಗಳಿಗೆ ರಾಜ್ಯ ಸರ್ಕಾರವು ಕೌನ್ಸೆಲಿಂಗ್‌ ಇಲ್ಲದೆಯೂ ನಿಯೋಜಿಸಲು ಈ ಸುಗ್ರೀವಾಜ್ಞೆಯ ಮೂಲಕ ಅವಕಾಶ ನೀಡಲಾಗಿದೆ.

ಕಡ್ಡಾಯ ಗ್ರಾಮೀಣ ಸೇವಾ ನಿಯಮ ಸಡಿಲ

ಗ್ರಾಮೀಣ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನಗರ ಪ್ರದೇಶಗಳಲ್ಲಿನ ಹುದ್ದೆಗಳಿಗೆ ಎಂಬಿಬಿಎಸ್‌ ಪದವೀಧರರನ್ನು ನೇಮಿಸಲು 'ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಸುಗ್ರೀವಾಜ್ಞೆ' ಅವಕಾಶ ಕಲ್ಪಿಸಲಿದೆ. ಅಲ್ಲದೆ, ಸರ್ಕಾರಿ ಕೋಟಾದಡಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಆದ್ಯತೆಯಲ್ಲಿ ತುಂಬಲು ಮತ್ತು ಉಳಿದ ಖಾಲಿ ಹುದ್ದೆಗಳಿಗೆ ಸಾಂಸ್ಥಿಕ ಕೋಟಾದಡಿ ಓದಿದ ವಿದ್ಯಾರ್ಥಿಗಳಿಂದ ತುಂಬಲು ಹಾಗೂ ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ಕೂಡಾ ಅವಕಾಶ ನೀಡಲಿದೆ.

ಈ ಸುದ್ದಿಯನ್ನೂ ಓದಿ | The Code of Civil Procedure: ಸಿವಿಲ್‌ ಪ್ರಕರಣಗಳಿಗೆ 2 ವರ್ಷದೊಳಗೆ ಸಿಗಲಿದೆ ಮುಕ್ತಿ; ಮಹತ್ವದ ಮಸೂದೆಗೆ ರಾಷ್ಟ್ರಪತಿ ಅಂಕಿತ

ಸ್ನಾತಕೋತ್ತರ ಪದವೀಧರರನ್ನು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲು ಹಾಗೂ ಒಂದು ವರ್ಷದ ಕಡ್ಡಾಯ ಸೇವೆಯನ್ನು ತಪ್ಪದೇ ಮಾಡುವುದಾಗಿ ಹಾಗೂ ತಪ್ಪಿದರೆ ಅದಕ್ಕೆ ಸಂಬಂಧಪಟ್ಟ ದಂಡ ಪಾವತಿಸಲು ಮತ್ತು ಅದರ ಪರಿಣಾಮಗಳನ್ನು ಎದುರಿಸಲು ಒಪ್ಪಂದ ಪತ್ರ ಬರೆದು ಕೊಟ್ಟ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು ಸೂಪ‌ರ್ ಸ್ಪೆಷಾಲಿಟಿ ಕೋರ್ಸ್ ಓದಲು ನಿರಕ್ಷೇಪಣಾ ಪತ್ರ ನೀಡುವ ಪ್ರಸ್ತಾವವೂ ಅದರಲ್ಲಿದೆ.