Kadambotsava 2025: ಕದಂಬೋತ್ಸವ-2025; ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಗೆ ಚಾಲನೆ
Kadambotsava 2025: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ- 2025 ರ ಅಂಗವಾಗಿ ಶನಿವಾರ ʼಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆʼ ಯು ಮಧುಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಮಯೂರವರ್ಮ ವೇದಿಕೆಯವರೆಗೆ ಸಾಗಿತು. ವಿವಿಧ ಕಲಾಪ್ರಕಾರಗಳನ್ನೊಳಗೊಂಡ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.


ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ- 2025ರ ಅಂಗವಾಗಿ ಕಳೆದ ಎರಡು ದಿನದಿಂದ ಕ್ರೀಡಾಕೂಟ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ʼಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಮಯೂರವರ್ಮ ವೇದಿಕೆಯವರೆಗೆ ಸಾಗಿತು. ವಿವಿಧ ಕಲಾಪ್ರಕಾರಗಳನ್ನೊಳಗೊಂಡ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.
ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತ, ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಸಮವಸ್ತ್ರ ತಂಡ, ಬೇಡರ ವೇಷ, ಡೊಳ್ಳುಕುಣಿತ, ಚಂಡೆ ವಾದ್ಯ, ಅರೆವಾದ್ಯ, ಕೀಲುಕುದುರೆ, ವೀರಗಾಸೆ, ಸುಗ್ಗಿ ಕುಣಿತ, ಕೋಳಿ ನೃತ್ಯ ಜನಮನ ರಂಜಿಸಿದವು. ಮರಕಾಲು ನೃತ್ಯ, ಪಂಚವಾದ್ಯ, ಲಮಾಣಿ ನೃತ್ಯ, ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಈ ಸುದ್ದಿಯನ್ನೂ ಓದಿ | IRTC: ಏ. 15 ರಿಂದ ತತ್ಕಾಲ್ ಬುಕಿಂಗ್‌ಗೆ ಹೊಸ ನಿಮಯ ಜಾರಿ
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಕದಂಬ ಜ್ಯೋತಿಗೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ತಹಸೀಲ್ದಾರ್ ಶೈಲೇಶ ಪರಮಾನಂದ, ಡಿಡಿಪಿಐ ಬಸವರಾಜ್ ಪಿ, ತಾಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹಾಗೂ ಇತರರು ಇದ್ದರು.