ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಸಣ್ಣ ಹೊಳೆ ದಾಟಲು ಒಂದೇ ಮರದ ಸಂಕ !

ನಮ್ಮೂರಲ್ಲಿ ಸಂಕವನ್ನು ನಿರ್ಮಿಸುವುದು ಉದ್ದನೆಯ ಮರದ ಕಾಂಡದಿಂದ. ತೋಡು ಅಥವಾ ಹಳ್ಳದ ಒಂದು ದಡದಿಂದ ಇನ್ನೊಂದು ದಡಕ್ಕೆ ಅದನ್ನು ಹಾಸಿರುತ್ತಾರೆ; ಕೆಳಗೆ ರಭಸದಿಂದ ಹರಿವ ನೀರು; ಮೇಲಿರುವ ಆ ಮರದ ಸಂಕದ ಮೇಲೆ ನಡೆದು, ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುವುದು ನಮ್ಮೂರಿನ ದಿನಚರಿಯ ಸಹಜ ಚಟುವಟಿಕೆಗಳಲ್ಲಿ ಒಂದು.

ಸಣ್ಣ ಹೊಳೆ ದಾಟಲು ಒಂದೇ ಮರದ ಸಂಕ !

ಶಶಿಧರ ಹಾಲಾಡಿ ಶಶಿಧರ ಹಾಲಾಡಿ May 30, 2025 8:03 AM

ಶಶಾಂಕಣ

ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸುವವರಿಗೆ ಒಮ್ಮೊಮ್ಮೆ ಯುನಿಕೋಡ್‌ನಿಂದ ಆಸ್ಕಿಗೆ ಪರಿವರ್ತಿಸುವ ಅನಿವಾರ್ಯತೆ ಎದುರಾಗುವುದುಂಟು. ಅದಕ್ಕಾಗಿ ಅಂತರ್ಜಾಲದಲ್ಲಿ ಹುಡುಕಿದರೆ, ‘ಸಂಕ - ಆಸ್ಕಿ ಯುನಿಕೋಡಿಗೆ ಕನ್ನಡದ ಸಂಕ’ ಎಂಬ ಜಾಲತಾಣ ದೊರಕುತ್ತದೆ; ಅರವಿಂದ್ ಎಂಬ ಹೆಸರಿನ ಕಂಪ್ಯೂಟರ್ ತಜ್ಞರು ಹಲವು ವರ್ಷಗಳ ಹಿಂದೆಯೇ, ಈ ‘ಸಂಕ’ವನ್ನು ನಿರ್ಮಿಸಿದ್ದರು: ಪದಗಳ ಫಾಂಟ್ ಪರಿವರ್ತಿಸುವ ಸಂಕ ಅದು. ಇಲ್ಲಿ ‘ಸಂಕ’ ಎಂದರೇನು ಎಂದು ಕೆಲವರಿಗಾದರೂ, ಆರಂಭದಲ್ಲಿ ಬೆರಗಾಗಿದ್ದುಂಟು.

‘ಸಂಕ’ ಎಂದರೆ, ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಲು ಅನುಕೂಲ ಮಾಡಿಕೊಡುವ ಪುಟಾಣಿ ಸೇತುವೆ ಮತ್ತು ಇದು ಪದವು ಕರಾವಳಿಯಲ್ಲಿ ಬಳಕೆಯಲ್ಲಿರುವ ಪದ. ಅದರಲ್ಲೂ ವಿಶೇಷವಾಗಿ, ಮಳೆಗಾಲದಲ್ಲಿ ಸಂಕದ ಉಪಯೋಗ ಕರಾವಳಿ ಮತ್ತು ಮಲೆನಾಡಿನಲ್ಲಿ ಅನಿವಾರ್ಯ. ನಿರಂತರ ಮಳೆ ಸುರಿಯತೊಡಗಿದರೆ, ಮನೆ ಎದುರಿನ ಪುಟ್ಟ ತೋಡನ್ನು ದಾಟಲು ಸಹ ಅಷ್ಟೇ ಪುಟ್ಟ ಸಂಕ ಬೇಕು! ದೊಡ್ಡ ತೋಡುಗಳು, ಮಳೆಗಾಲದಲ್ಲಿ ಸಣ್ಣ ಹೊಳೆಯ ಸ್ವರೂಪ ವನ್ನೇ ಪಡೆಯುತ್ತವೆ : ಆಗ ಅವುಗಳನ್ನು ದಾಟಲು, ದೊಡ್ಡ ಮರದ ಕಾಂಡದ ಸಂಕ ಬೇಕು!

ನಮ್ಮೂರಲ್ಲಿ ಸಂಕವನ್ನು ನಿರ್ಮಿಸುವುದು ಉದ್ದನೆಯ ಮರದ ಕಾಂಡದಿಂದ. ತೋಡು ಅಥವಾ ಹಳ್ಳದ ಒಂದು ದಡದಿಂದ ಇನ್ನೊಂದು ದಡಕ್ಕೆ ಅದನ್ನು ಹಾಸಿರುತ್ತಾರೆ; ಕೆಳಗೆ ರಭಸದಿಂದ ಹರಿವ ನೀರು; ಮೇಲಿರುವ ಆ ಮರದ ಸಂಕದ ಮೇಲೆ ನಡೆದು, ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುವುದು ನಮ್ಮೂರಿನ ದಿನಚರಿಯ ಸಹಜ ಚಟುವಟಿಕೆಗಳಲ್ಲಿ ಒಂದು. ಒಂದೆರಡು ಅಡಿ ಅಗಲದ ತೋಡಿನಿಂದ ಹಿಡಿದು, ಹದಿನೈದು ಇಪ್ಪತ್ತು ಅಡಿ ಅಗಲದ ಸಣ್ಣ ಹೊಳೆಗೆ (ದೊಡ್ಡ ತೋಡು) ಅಡ್ಡಲಾಗಿ ಸಹ ಇಂತಹ ಮರದ ಕಾಂಡವನ್ನು ಹಾಕುತ್ತಾರೆ; ತೋಡಿನ ಅಗಲ ತೀರಾ ಜಾಸ್ತಿ ಎನಿಸಿದಾಗ, ಹೆಚ್ಚು ಭದ್ರತೆಗಾಗಿ ಎರಡು ಮರಗಳನ್ನು ಒಟ್ಟೊಟ್ಟಿಗೆ ಎರಡೂ ದಡದ ಅಗಲಕ್ಕೆ ಮಲಗಿಸಿರುತ್ತಿದ್ದರು.

ಇದನ್ನೂ ಓದಿ: Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು !

‘ಸಂಕದ ಮೇಲಿ ನಡಿಗೆ’ ಎಂದರೆ, ಕೆಳಗೆ ಹರಿಯುತ್ತಿರುವ ನೀರಿಗೆ ಬೀಳದೇ, ಅದರ ರಭಸ ಕಂಡು ಬೆದರದೇ, ಬ್ಯಾಲೆನ್ಸ್ ಮಾಡಿಕೊಂಡು ಆ ಏಕೈಕ ಮರದ ಕಾಂಡದ ಮೇಲೆ ನಡೆಯುವುದು! ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಮಯದಲ್ಲಿ ಸಂಕಕ್ಕೂ ನನಗೂ ಅನುದಿನದ ನಂಟು. ನಮ್ಮ ಮನೆಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಗೋರಾಜೆ ಶಾಲೆಗೆ ನನ್ನದು ಪ್ರತಿ ದಿನ ಚಾರಣ : ಅದು ಒಂದು ಕಿರಿಯ ಪ್ರಾಥಮಿಕ ಶಾಲೆ.

ಮೂರು ಮತ್ತು ನಾಲ್ಕನೆಯ ತರಗತಿಯಲ್ಲಿ ನನಗೆ ಕನ್ನಡ ಕಲಿಸಿದ ಶಾಲೆ ಅದು. ಪ್ರತಿದಿನವೂ ಆ ಶಾಲೆಗೆ ಹೋಗುವಾಗ, ನಾನು ಹನ್ನೆರಡು ಬಾರಿ ಮರದ ಸಂಕವನ್ನು ದಾಟಬೇಕಿತ್ತು - ಅಂದರೆ, ಶಾಲೆಗೆ ಹೋಗುವ ದಾರಿಯಲ್ಲಿ ಮೂರು ತೋಡು (ಹಳ್ಳ)ಗಳಿದ್ದವು. ಒಂದು ದೊಡ್ಡ ತೋಡು, ಇನ್ನೆರಡು ಸಣ್ಣ ತೋಡುಗಳು. ಅವನ್ನು ದಾಟಲು ಬೆಳಗ್ಗೆ ಮೂರು ಬಾರಿ, ಮಧ್ಯಾಹ್ನ ಊಟಕ್ಕೆ ಬರುವಾಗ ಮೂರು ಬಾರಿ, ಊಟ ಮುಗಿಸಿ ಹೋಗುವಾಗ ಮೂರು ಬಾರಿ, ಸಂಜೆ ವಾಪಸ್ ಬರುವಾಗ ಮತ್ತೆ ಮೂರು ಬಾರಿ!

ನಮ್ಮ ಮನೆಯ ಎದುರಿನ ಅಗೇಡಿ ಅಂಚಿನಲ್ಲಿ ಸುಮಾರು ನೂರು ಮೀಟರ್ ನಡೆದು, ಬಲಭಾಗ ದಲ್ಲಿ ಸಿಗುವ ತೋಡಿನ ಅಂಚಿನಲ್ಲೇ, ಮುಂಡುಕನ ಹಿಂಡಲುಗಳ ಪಕ್ಕದಲ್ಲೇ ತುಸು ದೂರ ಸಾಗಿದ ನಂತರ, ಆ ತೋಡನ್ನೇ ದಾಟಿ ನಡೆಯಬೇಕಾದ ಅನಿವಾರ್ಯತೆ; ಇಲ್ಲೇ ಎದುರಾಗು ವುದು ನನ್ನ ದಾರಿಯ ಮೊದಲ ಸಂಕ. ಮಳೆಗಾಲದಲ್ಲೋ, ಈ ತೋಡಿನಲ್ಲಿ ಕೆಂಪನೆಯ ನೀರು ರಭಸವಾಗಿ ಹರಿಯುತ್ತಿತ್ತು!

Bridge R

ಒಮ್ಮೊಮ್ಮೆ ನಾಲ್ಕಾರು ದಿನ ಎಡೆಬಿಡದೆ ಮಳೆ ಸುರಿವ ಹಳ್ಳಿ ನಮ್ಮದು; ಅಂತಹ ದಿನಗಳಲ್ಲಿ ರಭಸವಾಗಿ ಹರಿಯುವ ನೀರನ್ನು ಆ ತೋಡಿನಲ್ಲಿ ನೋಡುವುದೇ ಒಂದು ವಿಶಿಷ್ಟ ಅನುಭವ; ಸುಳಿ ಸುಳಿ ಸುತ್ತುತ್ತಾ ಹರಿಯುವ ಆ ಕೆಂಪನೆಯ ನೀರನ್ನು ನೋಡುತ್ತಲೇ ಶಾಲೆಗೆ ಹೋಗುತ್ತಿದ್ದೆವು. ಆದರೆ ಈ ತೋಡು ಸಾಕಷ್ಟು ದೊಡ್ಡದು, ಮಕ್ಕಳು ಅಕಸ್ಮಾತ್ ಜಾರಿ ಬಿದ್ದರೆ ಕೊಚ್ಚಿ ಹೋಗುವಷ್ಟು ನೀರು ಒಮ್ಮೊಮ್ಮೆ ಅದರಲ್ಲಿ ಹರಿಯುತ್ತಿತ್ತು. ಆ ನೀರಿನ ರಭಸವನ್ನೇ ನೋಡುತ್ತಾ, ಸಂಕದ ಮೇಲೆ ನಡೆದರೆ ಕಾಲುಜಾರಿ ಬೀಳುವುದೇ ಸೈ.

ಆ ನೀರಿನ ಭಯದಿಂದ ದೂರಾಗಲು ಜತೆಗಾರರು ಒಂದು ಉಪಾಯ ಹೇಳಿಕೊಡುತ್ತಿದ್ದರು ನೀರನ್ನು ಕಾಂಬುಕಾಗ, ಮರದ ಸಂಕವನ್ನು ಮಾತ್ರ ಕಂಡಕಂಡ್ ನಡಿಕ್. ಆಗ ಹೆದ್ರಿಕೆ ಆತಿಲ್ಲೆ’. ನಮ್ಮ ಮನೆ ಯಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿದ್ದ ಈ ಒಂದು ಸಂಕವನ್ನು ದಾಟುವಾಗ ಕೆಳಗಿನ ತೋಡಿಗೆ ಒಮ್ಮೆ ನಾನು ಬಿದ್ದಿದ್ದೆ!

ಸುಮಾರು ಹದಿನೈದು ಅಡಿ ಅಗಲದ ತೋಡು ಅದು; ಎರಡೂ ದಡಗಳ ಆಧಾರದಿಂದ ಜೋಡಿಸಿ ರುವ ಮರದ ಸಂಕದ ಉದ್ದ ಸುಮಾರು ಇಪ್ಪತ್ತು ಅಡಿ. ಒಂದೇ ಮರ ಹಾಕಿದರೆ ದಾಟಲು ಕಷ್ಟ ವಾಗುತ್ತದೆ ಎಂದು ಎರಡು ಮರಗಳನ್ನು ಜೋಡಿಸಿದ್ದರು; ಅದರಲ್ಲೊಂದು ಮರ ಓರೆಕೋರೆ ಯಾಗಿತ್ತು. ಆಗಸ್ಟ್ ತಿಂಗಳಿನ ಒಂದು ದಿನ, ಆ ಸಂಕವನ್ನು ಬಹುಪಾಲು ದಾಟಿ, ಇನ್ನೇನು ಕೊನೆಯ ಮೂರು ಅಡಿ ಹೆಜ್ಜೆ ಹಾಕಿ ಆಚೆ ದಡ ಸೇರಬೇಕು ಎನ್ನುವಷ್ಟರಲ್ಲಿ, ಎರಡು ಮರಗಳ ನಡುವಿನ ಸಂದಿಯಲ್ಲಿ ಸಿಕ್ಕಿಕೊಂಡ ನನ್ನ ಕಾಲು ಎಡವಿತು!

ಜಾರಿ ತೋಡಿಗೆ ಬಿದ್ದೆ; ಸುಮಾರು ಆರು ಅಡಿ ಆಳ; ಹೆಚ್ಚಿನ ಏಟಾಗುವ ಸಂಭವ ಇರಲಿಲ್ಲ; ಆ ಸಮಯದಲ್ಲಿ ತೋಡಿನಲ್ಲಿ ಹೆಚ್ಚು ನೀರು ಇರಲಿಲ್ಲ - ಬಿದ್ದ ರಭಸಕ್ಕೆ ಹಾಕಿದ್ದ ಅಂಗಿ ಚಡ್ಡಿ ಒದ್ದೆಯಾಯಿತು; ಕೈಲಿದ್ದ ಪುಸ್ತಕಗಳು ನೀರಿನಲ್ಲಿ ಸ್ನಾನ ಮಾಡಿದವು. ಅದೃಷ್ಟವಶಾತ್ ಯಾವುದೇ ಏಟು ಆಗಲಿಲ್ಲ. ಆಚೆ ದಡಕ್ಕೆ ಒತ್ತಿಕೊಂಡಂತೆ ಒಂದು ಮನೆ; ಅಲ್ಲಿನ ಮಕ್ಕಳು ಸಹ ನನ್ನ ಜತೆ ಯಲ್ಲೇ ಶಾಲೆಗೆ ಹೋಗುವವರು - ಅವರ ತಾಯಿ ಲಕ್ಷ್ಮಮ್ಮ ಎಂಬುವವರು ಓಡಿ ಬಂದು, ತೋಡಿ ನಿಂದ ಎದ್ದು ಮೇಲೆ ಬರಲು ಸಹಾಯ ಮಾಡಿ, ಅವರ ಮನೆಗೆ ಕರೆದುಕೊಂಡು ಹೋದರು.

‘ಬಿದ್ದದ್ದಕ್ಕೆ ಗಾಯ ಎಂತ ಆಗಿಲ್ಲ ಅಲ್ದಾ? ಜಾಸ್ತಿ ನೀರಿರಲಿಲ್ಲ, ಒಳ್ಳೆದಾಯಿತು. ಇರಲಿ.. ನೀನು ಯಾವ ಕಾಲು ಎಡವಿ ಬಿದ್ದದ್ದು?’ ಎಂದು ಕೇಳಿದರು. ‘ಬಲಗಾಲು’ ಎಂದೆ. ‘ಓ, ಹಾಗಾದರೆ ನಿನಗೆ ಇವತ್ತು ಒಂದು ಒಳ್ಳೆಯ ಸುದ್ದಿ ಇರತ್. ಬಿದ್ದಿದ್ದೂ ಒಳ್ಳೆಯದಕ್ಕೇ. . . ನೀ ಏನೂ ಬೇಜಾರ್ ಮಾಡ್ಕಂಬುದೇ ಬೇಡ’ ಎಂದು ಹುರಿದುಂಬಿಸಿದರು - ಬಿದ್ದ ನೋವನ್ನು ಮರೆಸುವ, ಸಕಾರಾತ್ಮಕ ಪ್ರೋತ್ಸಾಹದ ಮಾತುಗಳು ಅವು.

ಅದೇ ಸಂಜೆ, ನಮ್ಮ ಶಾಲೆಯ ಅಧ್ಯಾಪಕರು, ಸ್ವಾತಂತ್ರ್ಯೋತ್ಸವದ ಆಚರಣೆಗೆ ಗೌರಿ ಎಂಬ ನಾಟಕ ಆಡಲು ಪಾತ್ರಧಾರಿಗಳನ್ನಾಗಿ ಆಯ್ಕೆ ಮಾಡುವಾಗ, ನನ್ನನ್ನು ಗೌರಿ ನಾಟಕದ ನಾಯಕನಟಿ ಪಾತ್ರಕ್ಕೆ ಆಯ್ಕೆ ಮಾಡಿದರು! ಅಂತೂ, ಸಂಕದ ಮೇಲೆ ಬಲಗಾಲು ಎಡವಿ ಕೆಳಗೆ ಬಿದ್ದರೂ, ಲಕ್ಷ್ಮಮ್ಮ ಹೇಳಿದಂತೆ, ನಾಟಕದಲ್ಲಿ ನಟಿಸುವ ಅವಕಾಶದ ಒಳ್ಳೆಯ ಸುದ್ದಿ ಅದೇ ದಿನ ಸಿಕ್ಕಿದ್ದಂತೂ ನಿಜ.

ಅಕಸ್ಮಾತ್ ಆ ದಿನ ಜಾಸ್ತಿ ಮಳೆ ಬಂದಿದ್ದರೆ, ನೆರೆ ಇದ್ದಿದ್ದರೆ, ಸ್ವಲ್ಪ ದೂರವಾದರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಬೇಕಿತ್ತು! ಗೋರಾಜಿ ಶಾಲೆಗೆ ಹೋಗಬೇಕಾದಾಗ, ಆ ಮೊದಲ ಸಂಕವನ್ನು ದಾಟಿದ ತಕ್ಷಣ ಒಂದಷ್ಟು ಮಕ್ಕಿಗದ್ದೆಗಳು, ನಂತರ ದಟ್ಟವಾಗಿ ಬೆಳೆದ ಹಕ್ಕಲು, ಗುಡ್ಡೆದಾರಿ. ಆ ಗುಡ್ಡೆಯನ್ನು ಇಳಿಯುವಾಗ ಇನ್ನೊಂದು ಮರದ ಸಂಕ - ಈ ತೋಡಿನ ಅಗಲ ಕಡಿಮೆ. ಆದರೆ ಸಂಕ ಇಳಿಜಾರಾಗಿತ್ತು - ದಾಟುವಾಗ ಸಣ್ಣಗೆ ಬೆದರುವಂತೆ ಮಾಡುತ್ತಿತ್ತು. ಆ ಸಂಕ ದಾಟಿದ ನಂತರ ಒಂದು ಬತ್ತದ ಗದ್ದೆ, ಅದರ ಅಂಚಿನಲ್ಲೇ ಸಾಗಿ ಎಡಕ್ಕೆ ತಿರುವಿದಾಗ, ಇನ್ನೊಂದು ತೋಡು ಎದುರಾಗುತ್ತದೆ. ಅದನ್ನು ದಾಟಲು ನಾಲ್ಕಾರು ಅಡಕೆ ಮರದ ದಬ್ಬೆಗಳನ್ನು ಜೋಡಿಸಿರುತ್ತಿದ್ದರು.

ಅಷ್ಟೇನೂ ಅಗಲವಿಲ್ಲದ ತೋಡು ಅದು. ನಡೆಯುವಾಗ ಭಯ ಇರಲಿಲ್ಲ. ಆದರೆ, ಮುಂಡುಕನ ಮುಳ್ಳುಗಳು ಮೈಗೆ ತಾಗದಂತೆ ನಡೆಯುವ ಜಾಗ್ರತೆ ವಹಿಸಬೇಕಿತ್ತು. ಈ ಮೂರು ಸಂಕಗಳನ್ನು ದಾಟಿ, ಹಾಡಿ ಗುಡ್ಡಗಳಲ್ಲಿ ನಡೆದು ಗೋರಾಜಿ ಶಾಲೆ ತಲುಪಿ, ಆ ಏಕೋಪಾಧ್ಯಾಯ, ಏಕ ಕೊಠಡಿ ಯ, ಗುಡಿಸಲು ಶಾಲೆಯಲ್ಲಿ ನಮ್ಮೆಲ್ಲರ ವಿದ್ಯಾಭ್ಯಾಸ. ಮಧ್ಯಾಹ್ನ ಊಟಕ್ಕೆ ಅದೇ ದಾರಿಯಲ್ಲಿ ವಾಪಸು; ಊಟ ಮುಗಿಸಿ, ಪುನಃ ಅದೇ ದಾರಿ ಹಿಡಿದು ನಡಿಗೆ; ಸಂಜೆ ಶಾಲೆ ಬಿಟ್ಟ ನಂತರ, ಅದೇ ದಾರಿಯಲ್ಲಿ, ಮೂರು ಸಂಕಗಳನ್ನು ದಾಟಿ ಮನೆಗೆ ವಾಪಸು.

ದಾರಿಯುದ್ದಕ್ಕೂ ಗೋವೆಮರಗಳು (ಗೋಡಂಬಿ ಮರಗಳು) ಬೆಳೆದಿದ್ದ ಮಕ್ಕಿಗದ್ದೆಯ ಅಂಚು, ಅಲ್ಲಲ್ಲಿ ಬೃಹದಾಕಾರದ ಕಾಟುಮಾವಿನ ಮರಗಳು, ಕೆಲವು ಕಡೆ ದಟ್ಟ ಹಾಡಿ, ಆ ಹಾಡಿಯಲ್ಲಿ ಸಂಚರಿಸುವ ಹಕ್ಕಿಗಳು, ಮಂಗಗಳು, ಹಕ್ಕಲಿನ ಮರಗಳ ಮೇಲೆ ಓತಿಕ್ಯಾತಗಳ ಆಟ, ಅವುಗಳಿಗೆ ಕಲ್ಲೆಸೆಯುವ ಶಾಲಾ ಮಕ್ಕಳು - ಇವೆಲ್ಲವೂ ಗೋರಾಜೆ ಶಾಲೆಯ ಅನುಭವಗಳಲ್ಲಿ ಸೇರಿ ಹೋಗಿವೆ. ಪರಿಸರ, ಪ್ರಕೃತಿಯ ನಡುವೆಯೇ ಇದ್ದ ಆ ‘ಕಿರಿಯ ಪ್ರಾಥಮಿಕ ಶಾಲೆ’ಗೆ ಪ್ರತಿ ದಿನ ನಡೆದು ಹೋಗು ವುದೆಂದರೆ, ಆ ಕಿರಿವಯಸ್ಸಿನಲ್ಲೇ ಪರಿಸರದ ಪಾಠಗಳನ್ನು ಪಡೆದಂತೆ.

ಕರಡ ಬೆಳೆಯುತ್ತಿದ್ದ ಪುಟ್ಟ ಮೈದಾನದಲ್ಲಿದ್ದ ಗೋರಾಜೆ ಶಾಲೆಯಲ್ಲಿ ನಾಲ್ಕನೆಯ ಇಯತ್ತೆ ಪಾಸು ಮಾಡಿ, ಐದನೆಯ ತರಗತಿಗೆ ಹಾಲಾಡಿ ಶಾಲೆಗೆ ಸೇರಿದೆ. ಮೂರು ಕಿ.ಮೀ.ದೂರದಲ್ಲಿದ್ದ ಆ ಶಾಲೆಗೆ ಸಾಗಲು ಮೂರು ದಾರಿಗಳಿದ್ದು, ಎಲ್ಲಾ ದಾರಿಗಳಲ್ಲೂ ಸಂಕಗಳು! ಸಾಮಾನ್ಯವಾಗಿ ಅನುಸರಿಸುವ ದಾರಿ ಎಂದರೆ ನಮ್ಮ ಮನೆ ಎದುರಿನ ಅರ್ಧ ಕಿ.ಮೀ. ಉದ್ದನೆಯ ಬೈಲುದಾರಿಯಲ್ಲಿ ಸಾಗಿ, ಅದರ ತುದಿಯಲ್ಲಿರುವ ತೋಡನ್ನು ದಾಟಿ ಹಾಡಿದಾರಿಯನ್ನು ಅನುಸರಿಸುವುದು. ಈ ತೋಡನ್ನು ದಾಟಲು ಮರದ ‘ಸಾರ’ ಇತ್ತು.

ಸುಮಾರು ಎರಡು ಅಡಿ ಉದ್ದದ ಹಲಗೆಯ ಚೂರುಗಳನ್ನು ಎರಡು ಮರದ ಮೋಪುಗಳಿಗೆ ಭದ್ರವಾಗಿ ಜೋಡಿಸಿ ಮಾಡಲಾಗಿದ್ದ ಈ ಸಾರದ ಮೇಲಿನ ನಡಿಗೆ ಸಾಕಷ್ಟು ಸುರಕ್ಷಿತ. ಒಂದೇ ಮರದ ಕಾಂಡದ ಸಂಕದ ಮೇಲಿನ ನಡಿಗೆಗಿಂತ, ಮರದ ಸಾರದ ಮೇಲಿನ ನಡಿಗೆ ಎಷ್ಟೋ ಉತ್ತಮ. ಒಮ್ಮೊಮ್ಮೆ ಆ ತೋಡಿನಲ್ಲಿ ನೆರೆ ಬಂದಾಗ, ನಾವೆಲ್ಲಾ ಮಕ್ಕಳು ಆ ಮರದ ಸಾರದ ಮೇಲೆ ನಿಂತು ಕೆಂಪನೆಯ ನೀರನ್ನು, ಅದು ರಭಸದಿಂದ ಹರಿಯುವ ಶೈಲಿಯನ್ನು ನೋಡುತ್ತಿದ್ದುದುಂಟು.

ಇದೇ ದಾರಿಯಲ್ಲಿ ಮುಂದುವರಿದು, ಹಂದಿಕೊಡ್ಲು ಹಾಡಿಯನ್ನು ದಾಟಿ ಇನ್ನೇನು ಮುಖ್ಯ ರಸ್ತೆಯ ಹತ್ತಿರ ಬಂದು ತಲುಪುತ್ತಿದ್ದೇವೆ ಎನ್ನುವಷ್ಟರಲ್ಲಿ ಒಂದು ತೋಡು; ಅದನ್ನು ದಾಟಲು ಒಂದು ದಪ್ಪನೆಯ ಮರದ ಕಾಂಡವನ್ನು ಹಾಕಿರುತ್ತಿದ್ದರು. ಆದರೆ, ಆ ತೋಡಿನ ಒಂದು ದಡಕ್ಕೂ ಇನ್ನೊಂದು ದಡಕ್ಕೂ ಎತ್ತರದ ವ್ಯತ್ಯಾಸ ಇದ್ದುದರಿಂದ, ಈ ಸಂಕವು ತುಸು ಇಳಿಜಾರಾಗಿತ್ತು; ಆ ಇಳಿಜಾರಿನ ಸಂಕವನ್ನು ತುಸು ಜಾಗ್ರತೆಯಿಂದಲೇ ದಾಟಬೇಕಿತ್ತು.

ನಮ್ಮ ಶಾಲೆಗೆ ಹೋಗಲು ಇನ್ನೊಂದು ದಾರಿಯಿತ್ತು; ವಾಸ್ತವವಾಗಿ ಈ ದಾರಿಯಲ್ಲಿ ನಡೆದು ಹೋದರೆ, ಸುಮಾರು ಅರ್ಧ ಕಿ.ಮೀ. ಕಡಿಮೆ ದೂರ. ಆದರೆ, ದಾರಿಯುದ್ದಕ್ಕೂ ಗುಡ್ಡ, ಕಾಡು, ತುಸು ನಿರ್ಜನ ಪ್ರದೇಶ ಇದ್ದುದರಿಂದ, ಇಲ್ಲಿ ಹೆಚ್ಚು ಜನ ಹೋಗುತ್ತಿರಲಿಲ್ಲ. ಜತೆಗೆ, ವಿಶಾಲವಾದ ಬತ್ತದ ಬಯಲಿದ್ದ ‘ಹೆರಬೈಲಿ’ನ ಆ ದಾರಿಗಡ್ಡಲಾಗಿ ಸಣ್ಣಹೊಳೆಯೊಂದು ಹರಿಯುತ್ತಿತ್ತು.

ಅದನ್ನು ದಾಟಲು ಒಂದೇ ಮರದ ಕಾಂಡದ ಸಂಕ. ಸುಮಾರು ಇಪತ್ತೈದು ಅಡಿ ಅಗಲದ ಆ ಸಣ್ಣಹೊಳೆಯುಲ್ಲಿ ಸದಾ ಕಾಲ ನೀರು; ಮಳೆಗಾಲದಲ್ಲಿ ತುಂಬಾ ನೀರು, ಚಳಿಗಾಲದಲ್ಲಿ ಹದವಾದ ನೀರು, ಬೇಸಗೆಯಲ್ಲಿ ತುಸು ನೀರು. ಅದಕ್ಕೆ ಅಡ್ಡಲಾಗಿದ್ದ ಉದ್ದನೆಯ ಸಂಕವನ್ನು ದಾಟಲು, ಮಕ್ಕಳಿಗೆ ನಿಜವಾಗಿಯೂ ತುಸು ಭಯ. ಒಂದೇ ಆ ಮರದ ಆ ಸಂಕದ ಮಧ್ಯ ಭಾಗ ತಲುಪಿದಾಕ್ಷಣ ಅದು ಸಣ್ಣಗೆ ಅಲುಗಾಡಲು ಆರಂಭವಾಗುತ್ತಿತ್ತು!

ಆಧಾರ ಕ್ಕೆಂದು ಅದಕ್ಕೊಂದು ಕೈಪಿಡಿಯಂತಹ ರಚನೆಯನ್ನು ಮಾಡುವ ಪ್ರಯತ್ನ ನಡೆಸು ತ್ತಿದ್ದರು; ಆದರೆ ಅದು ಹೆಚ್ಚಿನ ಅವಧಿಯಲ್ಲಿ ಬಿದ್ದು ಹೋಗಿರುತ್ತಿದ್ದುದೇ ಜಾಸ್ತಿ. ಆದ್ದರಿಂದ ಆ ಸಂಕದ ಮೇಲಿನ ನಡಿಗೆ ಎಂದರೆ, ಮಕ್ಕಳಿಗಂತೂ ಹಗ್ಗದ ಮೇಲಿನ ನಡಿಗೆ. ಸಣ್ಣ ಮಕ್ಕಳು ಅದನ್ನು ದಾಟುವಾಗ ದೊಡ್ಡ ಮಕ್ಕಳು ಕೈ ಹಿಡಿದುಕೊಳ್ಳಲೇಬೇಕಿತ್ತು.

ಮಳೆಗಾಲದಲ್ಲಿ ಆ ತೋಡಿನಲ್ಲಿ ತುಂಬಾ ನೀರು ಇರುತ್ತಿದ್ದುದರಿಂದ, ಯಾವುದೇ ಕಾರಣಕ್ಕೂ ಆ ದಾರಿಯಲ್ಲಿ ಹೋಗಬಾರದೆಂದು ಮನೆಯವರು ತಾಕೀತು ಮಾಡುತ್ತಿದ್ದರು. ಸಣ್ಣಗೆ ಅಲುಗಾಡು ತ್ತಿದ್ದ ಆ ಹೆರಬೈಲು ಸಂಕದ ಮೇಲಿನ ನಡಿಗೆಯನ್ನು ನೆನಪಿಸಿಕೊಂಡರೆ ಈಗಲೂ ಅಂಗೈ ಹಿಂದಿನ ರೋಮ ನೆಟ್ಟಗೆ ನಿಲ್ಲುತ್ತದೆ - ಸಂಕದ ಮೇಲಿನ ನಡಿಗೆಯ ರೋಚಕತೆಯನ್ನು ಮತ್ತೊಮ್ಮೆ ಅನುಭವಿಸಿದಂತಾಗುತ್ತದೆ.