ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World No Tobacco Day: ವಿಶ್ವ ತಂಬಾಕು ರಹಿತ ದಿನ: ಧೂಮಲೀಲೆಯ ಜಾಲದಿಂದ ಕಳಚಿಕೊಳ್ಳಿ

ಎಷ್ಟೋ ಸಾರಿ ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ನಾವು. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ.

ವಿಶ್ವ ತಂಬಾಕು ರಹಿತ ದಿನ ಇಂದು

Profile Vishakha Bhat May 31, 2025 6:00 AM

ಬೆಂಗಳೂರು: ಎಷ್ಟೋ ಸಾರಿ ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ನಾವು. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳಲ್ಲಿ ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ಮುಕ್ತವಾದ ವಿಶ್ವದ ಅಗತ್ಯವನ್ನು ಜಗತ್ತಿಗೆ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ (World No Tobacco Day ) ದಿನವನ್ನಾಗಿ ಆಚರಿಸಲಾಗುತ್ತದೆ.

ಈ ವರ್ಷ, ಅಂದರೆ 2025 ರ ಸಾಲಿನ ಘೋಷಣೆ- ʻತಂಬಾಕು ಮತ್ತು ನಿಕೋಟಿನ್‌ ಉತ್ಪನ್ನಗಳ ಮಾರಾಟ ಹೆಚ್ಚಿಸುವ ಉದ್ದಿಮೆಯ ತಂತ್ರಗಳನ್ನು ಬಯಲಿಗೆಳೆಯುವುದುʼ. ಅದರಲ್ಲೂ ಹದಿಹರೆಯದವರನ್ನು ಮತ್ತು ಯುವ ಜನತೆಯನ್ನು ಸೆಳೆಯಲು ಈ ಉದ್ದಿಮೆ ಅನುಸರಿಸುತ್ತಿರುವ ಕುತಂತ್ರಗಳ ಮೇಲಿನ ತೆರೆ ಸರಿಸುವ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಘೋಷವಾಕ್ಯ ಮಹತ್ವವನ್ನು ಪಡೆದಿದೆ. ತನ್ನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಏನೆಲ್ಲ ಸುಳ್ಳು ಮತ್ತು ಭ್ರಮೆಗಳನ್ನು ಈ ಉದ್ದಿಮೆ ಸೃಷ್ಟಿಸುತ್ತಿದೆ ಎಂಬುದರತ್ತ ಆಳುವ ಸರಕಾರಗಳ ಗಮನ ನೀಡಬೇಕು ಎಂದೂ ವಿಶ್ವಸಂಸ್ಥೆ ಕರೆನೀಡಿದೆ.

ಏನಿದರರ್ಥ?

ಪ್ರತಿ ವರ್ಷ ತಂಬಾಕಿಗೆ ಜೀವ ಕಳೆದುಕೊಳ್ಳುವ ಮತ್ತು ಚಟದಿಂದ ದೂರವಾಗುವ ಲಕ್ಷಗಟ್ಟಲೆ ಜನಕ್ಕೆ ಬಲಿಯಾಗಿ ಗ್ರಾಹಕರನ್ನು ತಂಬಾಕು ಉದ್ದಿಮೆ ಹುಡುಕುತ್ತಲೇ ಇರುತ್ತದೆ. ವಯಸ್ಕರಿಗೆ ಈ ಚಟವನ್ನು ಹೊಸದಾಗಿ ಅಂಟಿಸುವುದು ಸುಲಭವಲ್ಲ. ಆದರೆ ಇನ್ನೂ ಅರಿವು ಮೂಡದ ಮಕ್ಕಳನ್ನು, ಹೊಸ ಹರೆಯದ ಯುವಜನತೆಯನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು ಮಾರಾಟಗಾರರಿಗೆ ಸುಲಭ. ಇದಿಷ್ಟೇ ಅಲ್ಲ, ವಯಸ್ಕರಲ್ಲಿ ತಂಬಾಕಿನಿಂದ ದೂರವಾಗುವ ಅಥವಾ ಚಟದಿಂದ ಬಿಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಕಿರಿಯರಲ್ಲಾದರೆ ಒಮ್ಮೆ ಅಂಟಿಸಿದರೆ ದೀರ್ಘ ಕಾಲ ಅವರನ್ನು ಗ್ರಾಹಕರನ್ನಾಗಿ ಇರಿಸಿಕೊಳ್ಳಬಹುದೆಂಬುದು ಉದ್ದಿಮೆಯ ಲೆಕ್ಕ. ಹಾಗಾಗಿ ಹದಿವಯಸ್ಸಿನ ಮಕ್ಕಳನ್ನು ಇದರಿಂದ ಕಾಯ್ದುಕೊಳ್ಳುವ ಅಗತ್ಯ ಎಂದಿಗಿಂತ ಇಂದು ಹೆಚ್ಚಿದೆ.

ಹಿನ್ನೆಲೆ:

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ 1987 ರಿಂದ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ನಿಕೋಟಿನ್‌ ವ್ಯಸನಕ್ಕೆ ಬಿದ್ದು, ಜೀವ ಕಳೆದುಕೊಳ್ಳುವ ಲಕ್ಷಾಂತರ ಮಂದಿಯ ದಾರುಣ ಕಥೆಗಳು ಎದುರಿಗಿದ್ದರೂ, ಮತ್ತೆ ತಂಬಾಕಿನ ಚಟಕ್ಕೆ ಅಂಟಿಕೊಳ್ಳುವವರನ್ನು ಇದರಿಂದ ಹೊರ ತರುವ ಅಗತ್ಯವನ್ನು ಮನಗಂಡು, ಈ ಅರಿವಿನ ದಿನವನ್ನು ಅಚರಿಸಲಾಗುತ್ತಿದೆ. ವಿಶ್ವದಾದ್ಯಂತ 12 ರಿಂದ 15 ವರ್ಷ ವಯಸ್ಸಿನ 37 ದಶಲಕ್ಷ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದಾರೆ. ಈ ಕುರಿತಾದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಹೆಚ್ಚಿನವು ಗಾಬರಿ ಹುಟ್ಟಿಸುವಂತಿವೆ.

ಈ ಸುದ್ದಿಯನ್ನೂ ಓದಿ: Free Tobacco: ಕ್ಯಾನ್ಸರ್ ಕಾರಕ ತಂಬಾಕು ಬಳಕೆಯಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ

ಸಂಖ್ಯೆಗಳು ಏನೆನ್ನುತ್ತವೆ?

20 ನೇ ಶತಮಾನದಲ್ಲಿ ಸುಮಾರು 10 ಕೋಟಿ ಮಂದಿ ಧೂಮಪಾನದ ಚಟಕ್ಕೆ ಬಲಿಯಾಗಿದ್ದಾರೆ. ಇಡೀ ವಿಶ್ವದ ಒಟ್ಟಾರೆ ಮೃತ್ಯುಗಳಲ್ಲಿ ಶೇ. 15 ರಷ್ಟು ಸಾವುಗಳು ಸಂಭವಿಸಿದ್ದು ತಂಬಾಕಿನ ಚಟದಿಂದ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸಿಗರೇಟ್‌ಗೆ ಬಲಿಯಾಗುವುದಕ್ಕೆ ಕಾರಣವೆಂದರೆ ಜಗತ್ತಿನ ಐವರು ವಯಸ್ಕರ ಪೈಕಿ ಒಬ್ಬರಿಗೆ ಧೂಮಪಾನದ ಚಟವಿರುವುದು. ಜೊತೆಗೆ, 12 ಲಕ್ಷ ಮಂದಿ ಇನ್ನೊಬ್ಬರು ಸೇದುವ ಸಿಗರೇಟ್‌ ಹೊಗೆಗೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಶೇ. 28 ರಷ್ಟು ಮಕ್ಕಳಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾದ ಅಗತ್ಯವಿದೆ. ತಂಬಾಕು ಉಪಯೋಗಿಸುವವರಲ್ಲಿ ಶೇ. 80 ರಷ್ಟು ಮಂದಿ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವರು. ಈ ನಿಟ್ಟಿನಲ್ಲಿ ಬಡತನ ನಿವಾರಣೆಗೂ ತಂಬಾಕು ಉಪಯೋಗ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಹೇಳಬಹುದು.