Actress Ramya: ದೇವನಹಳ್ಳಿ ರೈತರ ಹೋರಾಟಕ್ಕೆ ನಟಿ ರಮ್ಯಾ ಬೆಂಬಲ; ಸಿಎಂ ಕರುಣೆ ತೋರಲಿ ಎಂದು ಟ್ವೀಟ್
Actress Ramya: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1777 ಎಕರೆ ಕೃಷಿ ಭೂಮಿಯನ್ನು ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ರೈತರು ನಡೆಸುತ್ತಿದ್ದಾರೆ.


ಬೆಂ.ಗ್ರಾಮಾಂತರ: ಭೂಸ್ವಾಧೀನ ವಿರುದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ಬೆಂಬಲ ಸೂಚಿಸಿದ್ದು, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕರುಣೆ ತೋರಬೇಕು ಎಂದು ಮನವಿ ಮಾಡಿದ್ದಾರೆ. ದೇವನಹಳ್ಳಿ ರೈತರ ಹೋರಾಟಕ್ಕೆ ಸಂಬಂಧಿಸಿ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಟಿ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ, ಅವರಿಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಕರ್ನಾಟಕದ ರೈತರ ವ್ಯಥೆ ಮಾತ್ರವಲ್ಲ ದೇಶಾದ್ಯಂತ ಇದೇ ಈ ರೀತಿಯ ಪರಿಸ್ಥಿತಿ ಇದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಆದರೆ ರೈತರ ಜೀವನೋಪಾಯವನ್ನೂ ನಾವು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
I hope @CMofKarnataka @siddaramaiah avru will show the farmers some compassion and do them good. This story is not just of the farmers here in Karnataka it’s the same all over the country- while industries creates jobs we need to ensure the livelihoods of the farmers are also… pic.twitter.com/snAyTji2Kb
— Ramya/Divya Spandana (@divyaspandana) July 2, 2025
ಏನಿದು ರೈತ ಹೋರಾಟ?
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1777 ಎಕರೆ ಕೃಷಿ ಭೂಮಿಯನ್ನು ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1180ಕ್ಕೂ ಹೆಚ್ಚು ದಿನಗಳಿಂದ 13 ಗ್ರಾಮಗಳ ರೈತರು ಹೋರಾಟ ನಡೆಸುತ್ತಿದ್ದಾರೆ. ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಜುಲೈ 2ರಂದು ಕೂಡ ಎರಡು ಪ್ರಮುಖ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಸಂತ್ರಸ್ತ ರೈತರು, ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿಯ ನಾಡ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅದೇ ರೀತಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ 'ಭೂಮಿ ಸತ್ಯಾಗ್ರಹ'ದಲ್ಲಿ ಖ್ಯಾತ ನಟ ಪ್ರಕಾಶ್ ರೈ ಸೇರಿ ನಾಡಿನ ಅನೇಕ ಕಲಾವಿದರು, ರಂಗಕರ್ಮಿಗಳು ಉಪವಾಸ ನಿರತ ರೈತರನ್ನು ಬೆಂಬಲಿಸಿ ಬೆಂಬಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.