ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಜಾತಿಯ ವಿಷಯದಲ್ಲಿ ಮೌನವೇ ಲೇಸೆಂದ ಬಿಜೆಪಿ

ಜಾತಿಗಣತಿಯನ್ನು ವಿರೋಧಿಸಿ ಮಾತನಾಡಿದರೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಮೇಲ್ಜಾತಿಯನ್ನು ‘ಮೆಚ್ಚಿ’ಸಬಹುದು. ಆದರೆ ಈ ಜಾತಿಗಣತಿ ಪರವಾಗಿರುವ ಹಲವು ಸಮು ದಾಯದ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಬಿಜೆಪಿಯೊಂದಿಗೆ ಮೊದಲಿ ನಿಂದಲೂ ಗುರುತಿಸಿಕೊಂಡಿರುವ ಪರಿಶಿಷ್ಟ ಪಂಗಡ, ಸಣ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ಇರುವ ಕುರುಬರು ಸೇರಿದಂತೆ ಹಲವು ಹಿಂದುಳಿದ ವರ್ಗಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಜಾತಿಯ ವಿಷಯದಲ್ಲಿ ಮೌನವೇ ಲೇಸೆಂದ ಬಿಜೆಪಿ

ಅಶ್ವತ್ಥಕಟ್ಟೆ

ranjith.hoskere@gmail.com

ಸಾರ್ವಜನಿಕ ಜೀವನದಲ್ಲಿ ಮಾತನಾಡುವುದು ಎಷ್ಟು ಮುಖ್ಯವೋ, ಕೆಲವೊಂದಷ್ಟು ಸಮಯ ದಲ್ಲಿ ‘ಜಾಣ ಮೌನ-ಜಾಣ ಕುರುಡು-ಜಾಣ ಕಿವುಡು’ ಸಹ ಅಷ್ಟೇ ಮುಖ್ಯವಾಗುತ್ತವೆ. ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ರಾಜಕೀಯ ಪಕ್ಷಗಳು ಎಲ್ಲವನ್ನೂ ವಿರೋಧಿಸುವುದರಿಂದ ‘ಸಕ್ರಿಯ’ ಎನ್ನುವ ಬಿರುದು ಸಿಗುವುದು ಎಷ್ಟು ಸತ್ಯವೋ, ಕೆಲವೊಂದಷ್ಟು ಸಮಯದಲ್ಲಿ ‘ಮೌನ’ ವಾಗಿರುವು ದರಿಂದಲೂ ಅಷ್ಟೇ ಲಾಭವಾಗುತ್ತದೆ. ಅದರಲ್ಲಿಯೂ ಜಾತಿ ಎನ್ನುವ ‘ಗೂಡಿ’ಗೆ ಕೈ ಹಾಕುವ ಯಾವುದೇ ಸರಕಾರದ ನಡೆಯನ್ನು ವಹಿಸಿಕೊಳ್ಳುವ ಅಥವಾ ವಿರೋಧಿಸುವ ಬದಲು ತಟಸ್ಥ ವಾಗುವುದರಿಂದಲೇ ಹೆಚ್ಚು ಲಾಭ ಎನ್ನುವುದು ನಿಶ್ಚಿತ. ರಾಜ್ಯ ರಾಜಕೀಯದಲ್ಲಿ ಕಳೆದ ಕೆಲದಿನ ಗಳಿಂದ ಭುಗಿಲೆದ್ದಿದ್ದ ಮುಖ್ಯಮಂತ್ರಿಗಳ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಿತ್ಯ ಬಳಕೆ ವಸ್ತುಗಳ ಮೇಲಿನ ದರ ಏರಿಕೆಯ ಬಿಸಿ ಸೇರಿದಂತೆ ಹತ್ತಾರು ವಿವಾದ ಹಾಗೂ ಗೊಂದಲಗಳು ಸರಕಾರದ ಸುತ್ತಾ ಗಿರಕಿ ಹೊಡೆಯುತ್ತಿದ್ದವು.

ಈ ಎಲ್ಲ ವಿಷಯದಲ್ಲಿಯೂ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿಯಾದರೂ, ಬಿಜೆಪಿ ಹಾಗೂ ಜೆಡಿಎಸ್‌ನವರು ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಆದರೆ ಇಡೀ ರಾಜ್ಯದಲ್ಲಿಯೇ ಭಾರಿ ವಿವಾದಕ್ಕೆ ಕಾರಣವಾಗಿರುವ, ಬ್ರಾಹ್ಮಣರೂ ಸೇರಿದಂತೆ ಒಕ್ಕಲಿಗ-ಲಿಂಗಾಯತರು ಒಕ್ಕೊರಲಿನಿಂದ ವಿರೋಧಿಸುತ್ತಿರುವ ಜಾತಿಗಣತಿಯ ವಿಷಯದಲ್ಲಿ ಮಾತ್ರ ಈ ಪ್ರತಿಪಕ್ಷಗಳು ‘ಮೌನ’ವಾಗಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: Ranjith H Ashwath Column: ಜಾತಿಗಣತಿ ಎಂಬ ಜೇನುಗೂಡು

ರಾಜ್ಯ ಸರಕಾರದ ವಿರುದ್ಧ ಎದ್ದಿರುವ ಈ ಮಟ್ಟಿಗಿನ ಸಮುದಾಯಗಳ ಆಕ್ರೋಶದ ಬೆಂಕಿಯನ್ನು ಪ್ರತಿಪಕ್ಷಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವೇ ಎನ್ನುವ ಸಹಜ ಅನುಮಾನ ಸಾರ್ವಜನಿಕ ವಲಯ ದಲ್ಲಿ ಶುರುವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಲ್ಲೊಂದು, ಇಲ್ಲೊಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು, ಈ ವಿವಾದದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಈ ರೀತಿಯ ನಿರ್ಲಕ್ಷ್ಯ ‘ಜಾಣತನ’ದ ನಡೆಯಾಗಿದೆ ಎನ್ನುವುದು ಸದ್ಯದ ರಾಜಕೀಯ ಮಾತಾಗಿದೆ.

ಹೌದು, ಜಾತಿಗಣತಿಯನ್ನು ವಿರೋಧಿಸಿ ಮಾತನಾಡಿದರೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಮೇಲ್ಜಾತಿಯನ್ನು ‘ಮೆಚ್ಚಿ’ಸಬಹುದು. ಆದರೆ ಈ ಜಾತಿಗಣತಿ ಪರವಾಗಿರುವ ಹಲವು ಸಮು ದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಬಿಜೆಪಿಯೊಂದಿಗೆ ಮೊದಲಿ ನಿಂದಲೂ ಗುರುತಿಸಿಕೊಂಡಿರುವ ಪರಿಶಿಷ್ಟ ಪಂಗಡ, ಸಣ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ಇರುವ ಕುರುಬರು ಸೇರಿದಂತೆ ಹಲವು ಹಿಂದುಳಿದ ವರ್ಗಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಮೇಲ್ಜಾತಿಗಳ ಮತಗಳೊಂದಿಗೆ ಈ ಮತಗಳು ಸೇರಿದರೆ ಮಾತ್ರ ಹಲವು ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ಸಾಧ್ಯ ಎನ್ನುವ ‘ರಾಜಕೀಯ ಗಣಿತ’ ಅರ್ಥೈಸಿಕೊಂಡಿರುವ ಬಿಜೆಪಿ ನಾಯಕರು ಸದ್ಯಕ್ಕೆ ಮೌನ ವಾಗಿರಲು ತೀರ್ಮಾನಿಸಿದ್ದಾರೆ.

ಹಾಗೆ ನೋಡಿದರೆ, ಜಾತಿಗಣತಿಯ ವಿಷಯದಲ್ಲಿ ಬಿಜೆಪಿಗರು ವಿರೋಧಿಸುವ ಮೊದಲೇ ಕಾಂಗ್ರೆಸ್‌ನ ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಅದರಲ್ಲಿಯೂ ಒಕ್ಕಲಿಗ ಸಮುದಾಯದಿಂದ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಈಗಾಗಲೇ ವಿರೋಧಿಸಿದ್ದಾರೆ.

ಸಚಿವ ಸಂಪುಟದಲ್ಲಿಯೇ ‘ಏರು’ಧ್ವನಿಯಲ್ಲಿ ‘ಸೌಹಾರ್ದಯುತ’ ಚರ್ಚೆಯನ್ನು ಮಾಡುವ ಮೂಲಕ ಜಾತಿಗಣತಿಗೆ ವಿರೋಧಿಸಿ, ಜಾರಿಯಾಗಬಾರದು ಎನ್ನುವ ಪಟ್ಟನ್ನು ಹಿಡಿದಿದ್ದಾರೆ. ಆದ್ದರಿಂದ ಕಾಂಗ್ರೆಸ್ ನಿಂದಲೇ ಇದಕ್ಕೆ ವಿರೋಧವಿರುವಾಗ, ನಾವೇಕೆ ವಿರೋಧಿಸಿ ಜಾತಿಗಣತಿಯ ಪರವಾಗಿರುವ ಸಮುದಾಯದ ‘ವಿರೋಧ’ ಕಟ್ಟಿಕೊಳ್ಳಬೇಕು ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಅಥವಾ ಅಹಿಂದ ಸಮುದಾಯದ ‘ಮಾಸ್ ಲೀಡರ್’ ಎನ್ನುವುದನ್ನು ಸಾಬೀತುಪಡಿಸಲು ಈ ರೀತಿಯ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದರಿಂದ ಭವಿಷ್ಯದಲ್ಲಿ ಜಾತಿಗಣತಿಯಿಂದ ಲಾಭ ಪಡೆಯುವ ಅಹಿಂದ ಸಮುದಾಯಗಳು ಕಾಂಗ್ರೆಸ್‌ನೊಂದಿಗೆ ಇನ್ನಷ್ಟು ಗಟ್ಟಿಯಾಗಿ ನಿಲ್ಲುವುದು ಖಚಿತ (ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕುತ್ತುಬಂದರೆ ಈ ಬೆಂಬಲ ಕಾಂಗ್ರೆಸ್ ಬದಲಿಗೆ, ಸಿದ್ದರಾಮಯ್ಯ ಅವರತ್ತ ತಿರುಗಲಿದೆ ಎನ್ನುವುದು ಬೇರೆ ಮಾತು). ಆದರೆ ಉತ್ತರ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ಕೇವಲ ಅಹಿಂದಗಳನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲುವು ಸಾಧ್ಯವಿಲ್ಲ. ಈ ಸಮುದಾಯಗಳೊಂದಿಗೆ ಒಕ್ಕಲಿಗ, ಲಿಂಗಾಯತ ಮತಗಳು ಅನಿವಾರ್ಯ.

ಆದರೀಗ ಈ ಜಾತಿಗಣತಿಯ ಮೂಲಕ ಈ ಎರಡೂ ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಬಿಜೆಪಿಯತ್ತ ವಾಲದಿದ್ದರೂ ತಟಸ್ಥವಾದರೆ ಅದರ ನೇರ ಲಾಭವನ್ನು ಬಿಜೆಪಿ ಅನುಭವಿಸಬಹುದು. ಇದರೊಂದಿಗೆ ಮಂಡನೆಯಾಗಿರುವ ಜಾತಿಗಣತಿಗೆ ತಾರ್ಕಿಕ ಅಂತ್ಯವಾಗುವುದಿಲ್ಲ ಎನ್ನುವ ಸಂಪೂರ್ಣ ಅರಿವು ಇರುವುದರಿಂದ, ಇಡೀ ಪ್ರಹಸನದಿಂದಾಗುವ ‘ಲಾಭ’ವನ್ನು ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ.

ಹಾಗೆ ನೋಡಿದರೆ, ರಾಜಕೀಯವಾಗಿ ಜಾತಿಗಣತಿ ಎನ್ನುವುದು ‘ಬೆದರು ಬೊಂಬೆ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. 2018ರ ವೇಳೆಗೆ ಸಜ್ಜಾಗಿದ್ದ ಜಾತಿಗಣತಿ ಎನ್ನುವ ‘ಸೆರಗಿನ ಕೆಂಡ’ದ ಸಮಸ್ಯೆ ತಿಳಿದ ಕಾರಣಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದೂಡಿದರು. ಆದರೆ ಈ ಸಮೀಕ್ಷೆಯ ಕಾರಣದ ಜತೆಜತೆಗೆ ಒಳ ಮೀಸಲು ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೈಹಾಕಿದ್ದರಿಂದ ಅಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಮತಚಲಾವಣೆಯಾಗಿದ್ದವು.

ಇದನ್ನು ಗಮನಿಸಿಯೇ ಮುಂದಿನ ಜೆಡಿಎಸ್-ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರಗಳು ಈ ವಿಷಯ ದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ‘ಕೋಲ್ಡ್ ಸ್ಟೋರೇಜ್’ನಲ್ಲಿ ಅದನ್ನು ಇಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಗಣತಿಯ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಆದರೆ, ಜಾತಿಗಣತಿಯನ್ನು ಮಂಡಿಸಲು ಮುಂದಾಗಿದ್ದು ಮಾತ್ರ ‘ಚೆಕ್‌ಮೇಟ್’ ನೀಡುವ ಉದ್ದೇಶ ದಿಂದಲೇ ಎನ್ನುವುದು ಸ್ಪಷ್ಟ.

ಜಾತಿಗಣತಿಯನ್ನು ಒಪ್ಪಿಕೊಳ್ಳುವುದು, ಶಿಫಾರಸುಗಳನ್ನು ಜಾರಿಗೊಳಿಸುವುದು ಬಿಡುವುದು ಸಚಿವ ಸಂಪುಟ ಹಾಗೂ ರಾಜಕೀಯ ತೀರ್ಮಾನಗಳ ಮೇಲೆ ನಿಂತಿದೆ. ಆದರೆ ಸಂಪುಟದಲ್ಲಿ ಈ ವಿಷಯ ವನ್ನು ಮಂಡಿಸುವ ಮೂಲಕ ತಾವು ‘ಅಹಿಂದ ಪರ’ ಎನ್ನುವುದನ್ನು ಮತ್ತೊಮ್ಮೆ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ. ಒಂದು ವೇಳೆ ಸಂಪುಟದಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತವಾಗಿ ಅನುಮೋದನೆ ಯಾಗದಿದ್ದರೆ, ವೈಯಕ್ತಿಕವಾಗಿ ಈ ಸಮೀಕ್ಷೆ ಜಾರಿಗೊಳಿಸಬೇಕು ಎನ್ನುವ ಮನಸ್ಸಿದ್ದರೂ, ಪಕ್ಷದಲ್ಲಿ ಇದಕ್ಕೆ ಬೆಂಬಲ ಸಿಕ್ಕಿಲ್ಲ ಎನ್ನುವ ಮೂಲಕ ತಮ್ಮೊಂದಿಗೆ ಅಹಿಂದ ಮತಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರವಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

ಈ ನಡುವೆ ಜಾತಿಗಣತಿಯನ್ನು ಮಂಡಿಸುವ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಪದೇ ಪದೆ ಕೇಳಿ ಬರುವ ‘ಪವರ್ ಶೇರಿಂಗ್’ ವಿಷಯಕ್ಕೆ ಬಹುತೇಕ ಬ್ರೇಕ್ ಹಾಕುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಒಂದು ವೇಳೆ ಈ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವ ಪ್ರಸ್ತಾಪ ಮಾಡಿದರೆ, ಕಾಂಗ್ರೆಸ್‌ನಿಂದಲೇ ಅಹಿಂದ ಸಮುದಾಯ ದೂರಾಗಿ, ಸಿದ್ದರಾಮಯ್ಯ ಪರ ನಿಲ್ಲುವ ಸಾಧ್ಯತೆಯಿದೆ.

ಇದರಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಪರಿಣಾಮ ಆಗದಿದ್ದರೂ ಮುಂದಿನ ಚುನಾವಣೆಯ ಲ್ಲಾಗುವ ಡ್ಯಾಮೇಜ್‌ನ ಅರಿವು ಪಕ್ಷದ ಹೈಕಮಾಂಡ್‌ಗಿದೆ. ಆದ್ದರಿಂದ ಜಾತಿಗಣತಿಯನ್ನು ಸಂಪುಟ ದಲ್ಲಿ ತರುವ ಮೂಲಕ ಕೇವಲ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತ್ರವಲ್ಲದೆ ಅವರು ಕಾಂಗ್ರೆಸ್ ಹೈಕಮಾಂಡ್‌ಗೂ ‘ಚೆಕ್ ಮೇಟ್’ ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಅಂತಿಮವಾಗಿ ಹೇಳುವು ದಾದರೆ, ಜಾತಿಗಣತಿಯ ಸುದೀರ್ಘ ವರದಿಯಲ್ಲಿ ಯಾವೆಲ್ಲ ಅಂಶಗಳಿವೆ ಎನ್ನುವ ಗೊಂದಲ ಸ್ವತಃ ಹಲವು ಸಚಿವರಲ್ಲಿದೆ.

ಈ ಸಮೀಕ್ಷೆಯೂ ಕೇವಲ ರಾಜ್ಯದಲ್ಲಿರುವ ಜಾತಿಗಳ ಸಂಖ್ಯೆ ಹಾಗೂ ಆ ಜಾತಿಯಲ್ಲಿರುವ ಜನರ ಸಂಖ್ಯೆಯನ್ನು ಮಾತ್ರ ತಿಳಿಯುವುದಕ್ಕೆ ಮಾಡಿಸಿದ್ದಲ್ಲ. ಬದಲಿಗೆ ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತಿಳಿಯುವುದಕ್ಕೆ ಮಾಡಿಸಿದ ಸಮೀಕ್ಷೆಯಾಗಿತ್ತು. ಆದರೆ ಮನೆ-ಮನೆ ಸಮೀಕ್ಷೆಯಾಗಿಲ್ಲ ಎನ್ನುವ ಆರೋಪ ಹಾಗೂ ಸಮೀಕ್ಷೆ ಸಿದ್ಧಪಡಿಸಿ 10 ವರ್ಷದ ಬಳಿಕ ಅನುಷ್ಠಾ ನಕ್ಕೆ ಅದೇ ಜನಸಂಖ್ಯೆಯ ಅನುಗುಣವಾಗಿ ಮುಂದಾಗಿರುವುದು ವಿರೋಧಕ್ಕಿರುವ ಮತ್ತೊಂದು ಕಾರಣ.

ಜಾತಿ ಗಣತಿ ವಿಷಯದಲ್ಲಿ ಸಮುದಾಯಗಳೇ ತಿರುಗಿಬೀಳಲು, ಕೇವಲ ಕಡಿಮೆ ಜನಸಂಖ್ಯೆ ತೋರಿಸಲಾಗಿದೆ ಎನ್ನುವುದಷ್ಟೇ ಕಾರಣವಲ್ಲ. ಬದಲಿಗೆ ಒಂದೇ ರೀತಿಯ ಬದುಕನ್ನು ಕಟ್ಟಿಕೊಂಡಿ ರುವ ಕೆಲ ಸಮುದಾಯಗಳನ್ನು ಪ್ರತ್ಯೇಕ ಪ್ರವರ್ಗದಲ್ಲಿ ಸೇರಿಸಲಾಗಿದೆ. ಉದಾಹರಣೆಗೆ, ಕುರುಬ ಸಮುದಾಯದವರು ಕುರಿ ಸಾಕಾಣಿಕೆಯಲ್ಲಿರುವವರು. ಆದರೆ ಲಿಂಗಾಯತ ಕುರುಬರನ್ನು ‘3-ಎ’ಗೆ ಸೇರಿಸಿ, ಹಿಂದೂ ಕುರುಬರನ್ನು ‘1-ಎ’ಗೆ ಸೇರಿಸಲಾಗಿದೆ. ಇದೇ ರೀತಿ ಲಿಂಗಾಯತ ಭಜಂತ್ರಿ, ಹಿಂದೂ ಭಜಂತ್ರಿ ಸೇರಿದಂತೆ ಹಲವು ಕುಲಕಸುಬಿನಲ್ಲಿರುವವರನ್ನು ಭಿನ್ನ ಪ್ರವರ್ಗಗೆ ಸೇರಿಸಲಾಗಿದೆ. ಆದರೆ ಅವರೆಲ್ಲರೂ ಒಂದೇ ಕುಲಕಸುಬನ್ನು ಮಾಡಿಕೊಂಡಿದ್ದಾರೆ.

ಈ ರೀತಿ ಲಿಂಗಾಯತ ಎನ್ನುವ ಪದ ಸೇರಿಸಿದ ಕಾರಣಕ್ಕೆ ಮುಂದುವರಿದ ಸಮುದಾಯ ಎಂದು ತೀರ್ಮಾನಿಸಲು ಹೇಗೆ ಸಾಧ್ಯ? ಅದಕ್ಕೂ ಮುಖ್ಯವಾಗಿ ಜಯಪ್ರಕಾಶ್ ಹೆಗ್ಡೆ ಅವರ ಆಯೋಗ ದಲ್ಲಿರುವ ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಎನ್ನುವ ವರ್ಗಗಳನ್ನು ಮಾಡಿಕೊಂಡು, ಅದಕ್ಕೆ ಅಂಕಗಳನ್ನು ಸಿದ್ಧಪಡಿಸಿದ್ದರೂ ಲಿಂಗಾಯತ ಭಜಂತ್ರಿಯನ್ನು ಒಂದು ಪ್ರವರ್ಗಕ್ಕೆ, ಹಿಂದೂ ಭಜಂತ್ರಿಯನ್ನು ಮತ್ತೊಂದು ಪ್ರವರ್ಗಕ್ಕೆ ಸೇರಿಸುವ ಶಿಫಾರಸು ‘ವೈಜ್ಞಾನಿಕ’ ಹೇಗಾಗುತ್ತದೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಈ ಎಲ್ಲ ಲೆಕ್ಕಾಚಾರಗಳ ಹೊರತಾಗಿಯೂ ಜಾತಿಗಣತಿಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ ಎನ್ನುವುದು ಅದನ್ನು ಸಿದ್ಧಪಡಿಸಿರುವ, ಅದಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಿರುವ ನಾಯಕರಿಗೆ ತಿಳಿದಿರುವ ಅಂಶ. ಆದರೆ ರಾಜ್ಯದಲ್ಲಿರುವ ಹಲವು ವಿವಾದಗಳನ್ನು ‘ಡೈವರ್ಟ್’ ಮಾಡಲು ಹೋಗಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಸದ್ಯ ಕಾಂಗ್ರೆಸ್‌ನಲ್ಲಿಯೇ ಸೃಷ್ಟಿಯಾಗಿರುವ ಆಂತರಿಕ ಸಂಘರ್ಷದ ಕಾರಣಕ್ಕೆ ಹಾಗೂ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲದೇ ಸಮುದಾಯಗಳೇ ಹೋರಾಟಕ್ಕೆ ಅನುವಾಗುತ್ತಿರುವಾಗ, ನಾವೇಕೆ ‘ಮಾತಾಡಿ’ ಜಾತಿಗಣತಿ ಪರವಿರುವ ಸಮುದಾಯಗಳನ್ನು ಎದುರು ಹಾಕಿಕೊಳ್ಳಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಾಯಕರು ‘ಮೌನ’ಕ್ಕೆ ಶರಣಾಗಿದ್ದಾರೆ. ಪ್ರತಿಪಕ್ಷಗಳ ಮೌನ ಹಾಗೂ ಆಡಳಿತ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟ ಯಾವ ಹಂತಕ್ಕೆ ತಲುಪಲಿದೆ? ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.