Akanksha Nair Case: ಧರ್ಮಸ್ಥಳದ ಯುವತಿ ಸಾವು; ಆತ್ಮಹತ್ಯೆ ಅಂತ ಮುಚ್ಚಿಹಾಕಲು ನೋಡಿದ್ರಾ?
ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೇ ಅಲ್ಲ. ಕಾಲೇಜಿನವರು ನನ್ನ ಮಗಳ ಸಾವಿನ ವಿಚಾರದಲ್ಲಿ ನಾಟಕ ಮಾಡಿದ್ದಾರೆ. ನನ್ನ ಮಗಳದ್ದು ಆತ್ಮಹತ್ಯೆ ಅಂತ ಮುಚ್ಚಿಸೋಕೆ ನೋಡಿದ್ದಾರೆ ಎಂದು ಮೃತ ಆಕಾಂಕ್ಷ ನಾಯರ್ ಅವರ ತಂದೆ ಆರೋಪ ಮಾಡಿದ್ದಾರೆ.


ಮಂಗಳೂರು: ಪಂಜಾಬ್‌ನಲ್ಲಿ ಧರ್ಮಸ್ಥಳದ ಯುವತಿ ಅಕಾಂಕ್ಷ ನಾಯರ್ (Akanksha Nair Case) ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಆತ್ಮಹತ್ಯೆ (Self harming) ಮಾಡಿಕೊಳ್ಳುವ ಹುಡುಗಿ ಅಲ್ಲ, ಇದರ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕು ಎಂದಿದ್ದಾರೆ. ಧರ್ಮಸ್ಥಳದ (Dharmasthala) ಬೋಳಿಯಾರ್ನಲ್ಲಿ ಆಕಾಂಕ್ಷ ಅಂತ್ಯಸಂಸ್ಕಾರ ನಡೆದಿದ್ದು, ಅಕಾಂಕ್ಷ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮಗಳ ಅಂತ್ಯಕ್ರಿಯೆ ಬಳಿಕ ಮಾತಾಡಿದ ಆಕಾಂಕ್ಷ ತಂದೆ, ನನ್ನ ಮಗಳ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ. ತುಂಬಾ ಕಷ್ಟಪಟ್ಟು ಮಗಳನ್ನು ಓದಿಸಿದ್ದೇನೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೇ ಅಲ್ಲ. ಕಾಲೇಜು ಅಷ್ಟೇ ಅಲ್ಲ, ತಾನು ಉದ್ಯೋಗ ಮಾಡುವ ಕಂಪನಿಯಲ್ಲೂ ಆಕೆ ಒಳ್ಳೆಯ ಹೆಸರು ಮಾಡಿದ್ದಳು. ಕಾಲೇಜಿನವರು ನನ್ನ ಮಗಳ ಸಾವಿನ ವಿಚಾರದಲ್ಲಿ ನಾಟಕ ಮಾಡಿದ್ದಾರೆ. ನನ್ನ ಮಗಳದ್ದು ಆತ್ಮಹತ್ಯೆ ಅಂತ ಮುಚ್ಚಿಸೋಕೆ ನೋಡಿದ್ದಾರೆ ಎಂದು ಆಕಾಂಕ್ಷ ತಂದೆ ಆರೋಪ ಮಾಡಿದ್ದಾರೆ.
ಮೊದಲ ಎಫ್ ಐ ಆರ್ ನಲ್ಲಿ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಅಂತ ಮರಾಠಿಯಲ್ಲಿ ಬರೆಯಿಸಿ ಸಹಿ ಹಾಕಿಕೊಂಡಿಸಿದ್ದರು. ಮತ್ತೆ ಗೊತ್ತಾಗಿ ಗಲಾಟೆ ಮಾಡಿದಾಗ ಬೇರೆ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಜರ್ಮನಿಗೆ ಹೋಗಿ ಕೆಲಸ ಮಾಡುವ ಆಸೆಯನ್ನು ಅಕಾಂಕ್ಷ ಇಟ್ಟುಕೊಂಡಿದ್ದಳು. ಪ್ರತಿದಿನ ಮನೆಗೆ ಕಾಲ್ ಮಾಡಿ ಖುಷಿಯಿಂದ ಮಾತಾಡುತ್ತಿದ್ದಳು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ ಮಗಳ ಸಾವಿಗೆ ನಮಗೆ ನ್ಯಾಯ ಬೇಕು ಎಂದು ಆಕಾಂಕ್ಷ ತಂದೆ ಸುರೇಂದ್ರ ನಾಯರ್ ಹೇಳಿಕೆ ನೀಡಿದ್ದಾರೆ.
ಆಕಾಂಕ್ಷ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ, ಮಾಧ್ಯಮಗಳ ಜೊತೆ ಮಾತಾಡಿದರು. ಆಕಾಂಕ್ಷ ಸಾವಿನ ಬಗ್ಗೆ ಮನೆ ಮಂದಿಗೆ ಅನುಮಾನವಿದೆ. ಈಗಾಗಲೇ ಪಂಜಾಬ್ನ ಜಲಂಧರ್ ಪೊಲೀಸರ ಜೊತೆ ಮಾತುಕತೆ ಮಾಡಿದ್ದೇವೆ. ನಿಷ್ಪಕ್ಷಪಾತವಾದ ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಸಾವಿಗೆ ಕಾರಣ ಎನ್ನಲಾದ ಫ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾವಿಗೆ ಕಾರಣದ ಬಗ್ಗೆ ತನಿಖೆ ಮಾಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಬೇಕು. ಆಕಾಂಕ್ಷ ಹೆತ್ತವರ ಜೊತೆ ಕಾನೂನು ಹೋರಾಟಕ್ಕೆ ನಿಲ್ಲುತ್ತೇವೆ ಎಂದು ಹರೀಶ್ ಪೂಂಜಾ ಹೇಳಿದ್ದಾರೆ.
ಇದನ್ನೂ ಓದಿ: Young Woman Death: ಧರ್ಮಸ್ಥಳದ ಯುವತಿ ಪಂಜಾಬ್‌ನಲ್ಲಿ ಸಾವಿನ ಹಿನ್ನೆಲೆಯಲ್ಲಿದ್ದಾನೆ ಇನ್ನೊಬ್ಬ ವ್ಯಕ್ತಿ