Fact Check: ಕನ್ನಡಿಗರನ್ನು ಮತ್ತೆ ಕೆಣಕಿದರಾ ಸೋನು ನಿಗಮ್? ವೈರಲ್ ಪೋಸ್ಟ್ ಹಿಂದೆ ಏನಿದೆ?
ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕರೊಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ವಿವಾದದ ಹಿನ್ನೆಲೆಯಲ್ಲಿ ʼಸೋನು ನಿಗಮ್ʼ ಎಂಬ ಎಕ್ಸ್ ಖಾತೆಯಿಂದ ಮಾಡಲಾದ ಒಂದು ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ಕನ್ನಡ ಫಿಲಂ, ಹೀರೋಗಳನ್ನು ಟೀಕಿಸಿ ಅಭಿಪ್ರಾಯ ಪೋಸ್ಟ್ ಮಾಡಲಾಗಿದೆ.

ಸೋನು ನಿಗಮ್, ತೇಜಸ್ವಿ ಸೂರ್ಯ

ಬೆಂಗಳೂರು: ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕರೊಬ್ಬರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ವಿವಾದದ ಹಿನ್ನೆಲೆಯಲ್ಲಿ ʼಸೋನು ನಿಗಮ್ʼ (Sonu Nigam) ಎಂಬ ಹೆಸರಿನ ಎಕ್ಸ್ ಖಾತೆಯಿಂದ ಮಾಡಲಾದ ಒಂದು ಟ್ವೀಟ್ ಇದೀಗ ವೈರಲ್ ಆಗಿದೆ. ಇದರಲ್ಲಿ ಕನ್ನಡ ಫಿಲಂ, ಹೀರೋಗಳನ್ನು ಹಾಗೂ ಸಂಸದರನ್ನು ಟೀಕಿಸಿ ಅಭಿಪ್ರಾಯ ಪೋಸ್ಟ್ ಮಾಡಲಾಗಿದೆ. "ಕನ್ನಡ ಫಿಲಂಗಳನ್ನು ಹಿಂದಿಗೆ ಡಬ್ ಮಾಡಬೇಡಿ, ಪ್ಯಾನ್ ಇಂಡಿಯಾ ರಿಲೀಸ್ ಮಾಡಬೇಡಿ. ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯಾ?" ಎಂದು ಆತ ಪೋಸ್ಟ್ ಮಾಡಿದ್ದಾನೆ.
ಈ ಹಿಂದೆ ತಮ್ಮ ಸಂಗೀತ ಕಛೇರಿಯಲ್ಲಿ ಕನ್ನಡಾಭಿಮಾನಿಗಳನ್ನು ಪಹಲ್ಗಾಮ್ ಭಯೋತ್ಪಾದಕರಿಗೆ (Pahalgam attack) ಹೋಲಿಸಿ ಸೋನು ನಿಗಮ್ ರಾದ್ಧಾಂತ ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ, ಈ ಪೋಸ್ಟನ್ನೂ ಅವರೇ ಹಾಕಿದ್ದಾರೆ ಎಂದು ಭಾವಿಸಲಾಗಿತ್ತು. ಈ ಪೋಸ್ಟನ್ನು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಹಾಕಿದ ಒಂದು ಪ್ರತಿಕ್ರಿಯೆಗೆ ಕಾಮೆಂಟ್ ಆಗಿ ಹಾಕಲಾಗಿತ್ತು. ಚಂದಾಪುರದ ಎಸ್ಬಿಐ (State Bank Of India) ಬ್ಯಾಂಕ್ನ ಕನ್ನಡೇತರ ಸಿಬ್ಬಂದಿಯ ಉದ್ಧಟ ವರ್ತನೆಯನ್ನು ಇದರಲ್ಲಿ ಸಮರ್ಥಿಸಲಾಗಿತ್ತು.
"ಸಾರ್ವಜನಿಕ ವಲಯದ ಸಿಬ್ಬಂದಿ, ವಿಶೇಷವಾಗಿ ಬ್ಯಾಂಕಿಂಗ್ನಲ್ಲಿರುವವರು ಸ್ಥಳೀಯ ಭಾಷೆಯನ್ನು ಕಲಿಯಬೇಕು" ಎಂದು ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಶಾಖಾ ವ್ಯವಸ್ಥಾಪಕರು ಗ್ರಾಹಕರೊಂದಿಗೆ ವಾಗ್ವಾದ ನಡೆಸುತ್ತಿರುವ ವೈರಲ್ ವೀಡಿಯೊವನ್ನು ಸೂರ್ಯ ಹಂಚಿಕೊಂಡಿದ್ದರು. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಸ್ಥಳೀಯ ಸಿಬ್ಬಂದಿಯನ್ನು ನಿಯೋಜಿಸುವ ವಿಷಯವನ್ನು ಎತ್ತಿದ್ದರು. "ನೀವು ಕರ್ನಾಟಕದಲ್ಲಿ, ವಿಶೇಷವಾಗಿ ಬ್ಯಾಂಕಿಂಗ್ನಂತಹ ವಲಯದಲ್ಲಿ ಗ್ರಾಹಕ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಿದ್ದರೆ, ಗ್ರಾಹಕರಿಗೆ ಅವರಿಗೆ ತಿಳಿದಿರುವ ಭಾಷೆಯಲ್ಲಿ ಸಂವಹನ ನಡೆಸುವುದು ಮುಖ್ಯ. ಈ ರೀತಿ ಒರಟಾಗಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕೆಲಸ ಮಾಡುವ ಬ್ಯಾಂಕುಗಳು ಕನ್ನಡದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು" ಎಂದು ಸೂರ್ಯ ಪೋಸ್ಟ್ ಮಾಡಿದ್ದರು.
Don't dub Kannada movies in Hindi!
— Sonu Nigam (@SonuNigamSingh) May 21, 2025
Don't release Kannada movies pan-India!
Do you have the guts to say this to Kannada film stars, Mr. @Tejasvi_Surya, or you are just another language warrior?
ತೇಜಸ್ವಿ ಸೂರ್ಯ ಅವರನ್ನು ಈ ಸೋನು ಅಕೌಂಟ್ನಿಂದ ಟ್ಯಾಗ್ ಮಾಡಲಾಗಿದ್ದು, ಭಾಷಾ ಚರ್ಚೆಯ ಬಗ್ಗೆ ಒಂದೆರಡು ಟ್ವೀಟ್ ಮಾಡಲಾಗಿದೆ. ಇದನ್ನು ಹಿಂದಿಯಲ್ಲಿ ಬರೆದಿದ್ದು, ತೇಜಸ್ವಿ ಅವರ ಅಭಿಪ್ರಾಯವನ್ನು ಪ್ರಶ್ನಿಸಲಾಗಿದೆ. “ಹಾಗಾದರೆ ಸಾಫ್ಟ್ವೇರ್ ಕಂಪನಿಗಳಲ್ಲಿ ಸಹ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಅಮೇರಿಕನ್ ಕ್ಲೈಂಟ್ಗಳು ತಮ್ಮ ಯೋಜನೆಗಳನ್ನು ಕರ್ನಾಟಕದಲ್ಲಿ ಪೂರ್ಣಗೊಳಿಸಲು ಬಯಸಿದರೆ, ಅವರು ಕನ್ನಡದಲ್ಲಿಯೂ ಮಾತನಾಡಬೇಕು. ಇದರಲ್ಲಿ ಯಾವುದೇ ರಾಜಿ ಇರಬಾರದು. ಸರಿಯೇ ತೇಜಸ್ವಿ ಅವರೇ?" ಎಂದು ಬರೆದಿದ್ದಾನೆೆ.
Xನಲ್ಲಿ ಹಾಕಿದ ಮತ್ತೊಂದು ಪೋಸ್ಟ್ನಲ್ಲಿ ಈತ, ಸೂರ್ಯ ಅವರನ್ನು "ನೀವು ಇನ್ನೊಬ್ಬ ಭಾಷಾ ಯೋಧರೇ?" ಎಂದು ಪ್ರಶ್ನಿಸಿದ್ದಾನೆೆ. "ಹಾಗಿದ್ದರೆ ನೀವು ಕನ್ನಡ ಫಿಲಂಗಳನ್ನು ಹಿಂದಿಗೆ ಡಬ್ ಮಾಡಬಾರದು. ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಮಾಡಬಾರದು. ಈ ಮಾತನ್ನು ಕನ್ನಡ ಸಿನಿಮಾದವರಿಗೆ ಹೇಳೋ ಗಟ್ಸ್ ನಿಮಗೆ ಇದೆಯಾ? ಸಾಫ್ಟ್ವೇರ್ ಕಂಪನಿಗಳಲ್ಲೂ ಕನ್ನಡ ಬಲ್ಲವರನ್ನು ಮಾತ್ರ ನಿಯೋಜಿಸಬೇಕು" ಎಂದು ಈ ʼಸೋನು ನಿಗಮ್ ಸಿಂಗ್ʼ ಅಕೌಂಟ್ನಿಂದ ಟ್ವೀಟ್ ಮಾಡಲಾಗಿದೆ.
ಈ ಪೋಸ್ಟ್ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ, ಇದು ಬಾಲಿವುಡ್ ಗಾಯಕ ಸೋನು ನಿಗಮ್ ಅವರ ಪೋಸ್ಟ್ ಅಲ್ಲವೆಂಬುದು ತಿಳಿದುಬಂದಿದೆ. ಇದು ಬಿಹಾರ ಮೂಲದ ʼಸೋನು ನಿಗಮ್ ಸಿಂಗ್ʼ ಎಂಬಾತನದಾಗಿದ್ದು, ಈತ ತಾನೊಬ್ಬ ಕ್ರಿಮಿನಲ್ ಲಾಯರ್ ಎಂದು ಹಾಕಿಕೊಂಡಿದ್ದಾನೆ. ಈತ ಕಾಂಗ್ರೆಸ್ ಕಾರ್ಯಕರ್ತನೂ ಹೌದು ಎನ್ನುವ ಅಭಿಪ್ರಾಯ ಮೂಡುವಂತೆ ಈತ ಕಾಂಗ್ರೆಸ್ ಧ್ವಜ ಹಾಕಿಕೊಂಡಿದ್ದಾನೆ. ಆದರೆ, ಅಸಲಿ ಸೋನು ನಿಗಮ್ ಅವರ ಚಿತ್ರಗಳನ್ನೂ ತನ್ನ ಅಕೌಂಟ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ನೋಡುಗರು ತಪ್ಪು ಭಾವಿಸುವಂತೆ ಮಾಡಲಾಗಿದೆ.
ಈ ನಕಲಿ ಅಕೌಂಟ್ ಬಗ್ಗೆ ಸೋನು ನಿಗಮ್ ಕೆಲವು ವಾರಗಳ ಹಿಂದೆಯೇ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ವಿಷಯ ಶೇರ್ ಮಾಡಿಕೊಂಡಿದ್ದರು. "ಅದು ನನ್ನ ಅಕೌಂಟ್ ಅಲ್ಲ. ನಾನು ಎಕ್ಸ್ನಲ್ಲಿ ಅಕೌಂಟ್ ಹೊಂದಿಲ್ಲ. ಈತ ವಿವಾದಾತ್ಮಕ ಪೋಸ್ಟ್ಗಳನ್ನು ಮಾಡುತ್ತ, ನನ್ನ ಹೆಸರು ಹಾಗೂ ಖ್ಯಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ವಿಶ್ವಾಸಾರ್ಹತೆಗೆ ಕಳಂಕ ತರುತ್ತಿದ್ದಾನೆ. ನನ್ನ ಹಾಗೂ ನನ್ನ ಕುಟುಂಬವನ್ನು ಅಪಾಯಕ್ಕೆ ತಳ್ಳುತ್ತಿದ್ದಾನೆ" ಎಂದು ಸೋನು ನಿಗಮ್ ಪೋಸ್ಟ್ ಮಾಡಿದ್ದರು.
ಬೆಂಗಳೂರಿನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಕನ್ನಡಿಗರ ಬಗ್ಗೆ ಸೋನು ಅಸಭ್ಯ ಹೇಳಿಕೆ ನೀಡಿದ್ದರು. ಕನ್ನಡಾಭಿಮಾನಿಗಳ ವಿನಂತಿಗಳನ್ನು ಪಹಲ್ಗಾಮ್ ದಾಳಿಗೆ ಅವರು ಲಿಂಕ್ ಮಾಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾದ ಬಳಿಕ ಸೋನು ನಿಗಮ್ ಕ್ಷಮೆ ಕೇಳುವ ನಾಟಕವಾಡಿದ್ದರು. ಜೊತೆಗೆ ಕನ್ನಡಾಭಿಮಾನಿಗಳನ್ನು ಇನ್ನಷ್ಟು ಕೆಣಕಿದ್ದರು. ಕನ್ನಡಿಗರು ಇದರಿಂದ ಇನ್ನಷ್ಟು ಆಕ್ರೋಶಕ್ಕೀಡಾಗಿದ್ದರು. ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸೋನು ನಿಗಮ್ ಹಾಡುಗಳನ್ನು ಕನ್ನಡದಲ್ಲಿ ಹಾಡಿಸದಂತೆ ನಿರ್ಬಂಧಿಸಿತ್ತು. ನಂತರ ಸೋನು ನಿಗಮ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಇದನ್ನೂ ಓದಿ: Sonu Nigam Case: ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಸೋನು ನಿಗಮ್ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ