ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಹೀಗೆ ಮಾಡಿ

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಇದು ಮರೀಚಿಕೆಯಂತೆ ಕಾಣುತ್ತದೆ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬಂದೊದಗುತ್ತದೆ. ಇದಕ್ಕೆ ಕೆಲವೊಮ್ಮೆ ವಾಸ್ತು ದೋಷಗಳೂ ಕಾರಣವಾಗಬಹುದು. ಮನೆಯಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕೆಲವೊಂದು ಪರಿಹಾರ ಪ್ರಯತ್ನಗಳನ್ನು ಸಹಾಯ ಮಾಡುತ್ತದೆ. ಅದು ಯಾವುದು ಎನ್ನುವುದರ ಕುರಿತು ವಾಸ್ತು ಶಾಸ್ತ್ರ ಹೇಳಿರುವ ಮಾಹಿತಿ ಇಲ್ಲಿದೆ.

ಮನೆಯ ಶಾಂತಿ ಕಾಪಾಡಲು ಈ ನಿಯಮ ಪಾಲಿಸಿ

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮನೆಯಲ್ಲಿ ಒಂದಲ್ಲ ಒಂದು ರೀತಿಯ ಅನಗತ್ಯ ಸಮಸ್ಯೆಗಳು ಕಾಣಿಸುತ್ತಿದ್ದರೆ, ಇದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದರೆ ಕೆಲವೊಂದು ಪರಿಹಾರಗಳನ್ನು ಮಾಡಬೇಕಾಗುತ್ತದೆ. ಹಲವು ಬಾರಿ ಮನೆಯಲ್ಲಿನ ಸಮಸ್ಯೆಗಳಿಗೆ ವಾಸ್ತು ದೋಷಗಳೇ ಮುಖ್ಯ ಕಾರಣವಾಗಿರುತ್ತದೆ. ಕಾಣದಂತಿರುವ ಈ ಸಮಸ್ಯೆಯನ್ನು ಹುಡುಕುವುದು ಕಷ್ಟ. ಆದರೆ ಕೆಲವೊಂದು ಪರಿಹಾರಗಳನ್ನು ಮಾಡುವುದರಿಂದ ಈ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಮನೆಯಲ್ಲಿ ಯಾವುದಾದರೂ ಕಾರಣದಿಂದ ಅಶಾಂತಿ ಉಂಟಾಗಿದ್ದರೆ ಅದಕ್ಕಾಗಿ ವಾಸ್ತುವಿನ ಕೆಲವು ಸುಲಭ ಪರಿಹಾರಗಳನ್ನು ಪ್ರಯತ್ನಿಸಿ ನೋಡಬಹುದು.

ಈಗಾಗಲೇ ಮನೆ ನಿರ್ಮಾಣವಾಗಿದ್ದರೆ ಸ್ನಾನಗೃಹ, ಅಡುಗೆ, ಮಲಗುವ ಕೋಣೆಯಲ್ಲಿ ವಾಸ್ತು ಸಮಸ್ಯೆಗಳಿದ್ದು, ಅದನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿರುವ ನಕಾರಾತ್ಮಕ ಸಮಸ್ಯೆಗಳನ್ನು ದೂರ ಮಾಡಬಹುದು. ಅಲ್ಲದೇ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು. ಇದರಿಂದ ಮನೆಯಲ್ಲಿ ಎಲ್ಲರೂ ಮಾನಸಿಕ ಶಾಂತಿಯನ್ನು ಪಡೆಯಬಹುದು.

ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಸಿದ್ಧ ಜ್ಯೋತಿಷಿ ಪ್ರದುಮಾನ್ ಸೂರಿ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

vas1

ಮನೆಯ ಬಾಗಿಲಿನಲ್ಲಿ ಸ್ವಸ್ತಿಕ ಅಥವಾ ಓಂ ಚಿಹ್ನೆ ರಚಿಸಿ

ಮನೆಯ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ್ ಅಥವಾ ಓಂ ಚಿಹ್ನೆಯನ್ನು ಅಳವಡಿಸಿದರೆ ಅದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಅಲ್ಲದೇ ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಹಿಂದೂ ಧರ್ಮದಲ್ಲಿ ಸ್ವಸ್ತಿಕವನ್ನು ಶುಭ, ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಓಂ ಮತ್ತು ಅದರ ಚಿಹ್ನೆಯ ಉಚ್ಚಾರಣೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ವಸ್ತಿಕ ಮತ್ತು ಓಂ ಚಿಹ್ನೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದನ್ನು ರಚಿಸಲು ಅರಿಶಿನ ಅಥವಾ ರೋಲಿಯನ್ನು ಬಳಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಹಾಸಿಗೆಯ ಮುಂದೆ ಟಿವಿ, ಕನ್ನಡಿ ಇಡಬೇಡಿ

ಮಲಗುವ ಕೋಣೆಯಲ್ಲಿ ಹಾಸಿಗೆಯ ಮುಂದೆ ದೂರದರ್ಶನ ಅಥವಾ ಕನ್ನಡಿಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮಾನಸಿಕ ಅಶಾಂತಿ, ಒತ್ತಡ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಸ್ನಾನಗೃಹದಲ್ಲಿ ಪಾಲಿಸಿ ನಿಯಮ

ಸ್ನಾನಗೃಹದ ಬಾಗಿಲನ್ನು ಮರದಿಂದ ಮಾಡಿರಬೇಕು. ಯಾವುದೇ ಲೋಹದ ಬಾಗಿಲು ಸ್ನಾನಗೃಹಕ್ಕೆ ಸೂಕ್ತವಲ್ಲ. ಸ್ನಾನಗೃಹದಲ್ಲಿ ಎಂದಿಗೂ ಖಾಲಿ ಬಕೆಟ್ ಅನ್ನು ಇಡಬಾರದು. ಮನೆಯ ಸ್ನಾನಗೃಹದಲ್ಲಿ ಯಾವಾಗಲೂ ನೀರಿನಿಂದ ತುಂಬಿದ ಬಕೆಟ್ ಅನ್ನು ಇಟ್ಟುಕೊಳ್ಳಿ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಮನೆಯಲ್ಲಿ ಹೆಚ್ಚು ಬಕೆಟ್‌ಗಳಿದ್ದರೆ ಅವುಗಳನ್ನು ತಲೆಕೆಳಗಾಗಿ ಇರಿಸಿ ಅಥವಾ ನೀರಿನಿಂದ ತುಂಬಿಸಿಡಿ.

ಎರಡು ಪೊರಕೆಗಳನ್ನು ಒಟ್ಟಿಗೆ ಇಡಬೇಡಿ

ಮನೆಯಲ್ಲಿ ಎರಡು ಪೊರಕೆಗಳನ್ನು ಎಂದಿಗೂ ಒಟ್ಟಿಗೆ ಇಡಬಾರದು. ಇದು ಆರ್ಥಿಕ ಸಮಸ್ಯೆಗಳನ್ನು ಆಹ್ವಾನಿಸಬಹುದು. ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆ ಸ್ವಚ್ಛವಾಗಿರುವುದಲ್ಲದೆ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೊರಕೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೊರಕೆಯನ್ನು ಎಂದಿಗೂ ತೆರೆದ ಜಾಗದಲ್ಲಿಅಂದರೆ ಎಲ್ಲರಿಗೂ ಕಾಣುವಂತೆ ಇಡಬಾರದು. ಅವುಗಳನ್ನು ಪಾದಗಳಿಂದ ಮುಟ್ಟಬಾರದು. ಅಲ್ಲದೇ ರಾತ್ರಿಯಲ್ಲಿ ಮನೆಯ ಕಸ ಹೊರಗೆ ಹಾಕಬಾರದು. ಯಾಕೆಂದರೆ ಇದು ಆರ್ಥಿಕ ನಷ್ಟ ಮತ್ತು ದುರದೃಷ್ಟಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Vastu Tips: ಮಕ್ಕಳ ಏಕಾಗ್ರತೆ ಹೆಚ್ಚಿಸಲು ಅಧ್ಯಯನ ಕೊಠಡಿ ಹೇಗಿರಬೇಕು ಗೊತ್ತೇ?

ಇವುಗಳ ಬಗ್ಗೆಯೂ ಗಮನವಿರಲಿ

  • ಮನೆಯಲ್ಲಿ ಎಂದಿಗೂ ಊಟದ ಮೇಜನ್ನು ಮುಖ್ಯ ಬಾಗಿಲಿನ ಬಳಿ ಇಡಬಾರದು. ಮನೆಯ ಎಲ್ಲಾ ಕೊಠಡಿಗಳಿಗೆ ಗಾಳಿ ಬೆಳಕು ಚೆನ್ನಾಗಿ ಬರುವಂತಿರಬೇಕು. ಮನೆಯ ಕೊಠಡಿಗಳು ಚೌಕಾಕಾರ ಅಥವಾ ಆಯತಾಕಾರದಲ್ಲಿರಬೇಕು.
  • ಮನೆಯ ಮುಖ್ಯ ಬಾಗಿಲು ಎಂದಿಗೂ ಕಪ್ಪು ಬಣ್ಣದ್ದಾಗಿರಬಾರದು. ಕಪ್ಪು ಬಣ್ಣವು ನಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.
  • ಮನೆಯ ಮುಖ್ಯ ದ್ವಾರದ ಬಳಿ ಕಾರಂಜಿ ಅಥವಾ ನೀರಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಇಡಬೇಡಿ. ಮುಖ್ಯ ದ್ವಾರದ ಸುತ್ತಲೂ ಕತ್ತಲೆ ಇರಬಾರದು.