International Tea Day 2025: ಇಂದು ಅಂತಾರಾಷ್ಟ್ರೀಯ ಚಹಾ ದಿನ; ಏನಿದರ ವೈಶಿಷ್ಟ್ಯ?
ಹೆಚ್ಚಿನವರಿಗೆ ದಿನದ ಆರಂಭ ಒಂದು ಸಿಪ್ ಚಹಾದಿಂದಲೇ ಆಗುತ್ತದೆ. ಇನ್ನು ಕೆಲವರಿಗೆ ದಿನದ ಅಂತ್ಯ ಕೂಡ ಚಹಾದೊಂದಿಗೆ ಕೊನೆಯಾಗುತ್ತದೆ. ಗ್ರೀನ್ ಟೀ, ಶುಂಠಿ ಟೀ, ಏಲಕ್ಕಿ ಟೀ, ಮಸಾಲಾ ಟೀ... ಹೀಗೆ ನಾನಾ ರೀತಿಯ ಚಹಾಗಳಿದ್ದರೂ ಪ್ರತಿಯೊಬ್ಬರೂ ತಮ್ಮತಮ್ಮ ಇಷ್ಟಕ್ಕೆ ಅನುಗುಣವಾಗಿ ಚಹಾ ಸವಿಯುತ್ತಾರೆ. ಮೇ 21 ಅಂದರೆ ಬುಧವಾರ ಅಂತಾರಾಷ್ಟ್ರೀಯ ಚಹಾ ದಿನ (International Tea Day 2025). ಹೀಗಾಗಿ ಇವತ್ತು ಒಂದು ಕಪ್ ಹೆಚ್ಚು ಚಹಾ ಸೇವಿಸುತ್ತಾ ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.



ಪ್ರತಿವರ್ಷ ಅಂತಾರಾಷ್ಟ್ರೀಯ ಚಹಾ ದಿನವನ್ನು ಮೇ 21ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಕೋಟ್ಯಂತರ ಜನರು ಸೇವಿಸುವ ಈ ಚಹಾ ದಿನಾಚರಣೆಯನ್ನು ಕೇವಲ ಪಾನೀಯ ದಿನವಾಗಿ ಆಚರಿಸುವುದಲ್ಲ. ಬದಲಾಗಿ ಚಹಾದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ಮಹತ್ವವನ್ನು ತಿಳಿಸಲು ನಡೆಸುವ ಆಚರಣೆ ಎನಿಸಿಕೊಂಡಿದೆ.

ಪ್ರತಿ ವರ್ಷ ಮೇ 21ರಂದು ಪ್ರಪಂಚದಾದ್ಯಂತ ಚಹಾದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ಮಹತ್ವವನ್ನು ಗುರುತಿಸಲು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಭಾರತೀಯರಿಗೆ ಚಹಾ ಕೇವಲ ಪೇಯವಲ್ಲ. ಇದು ದೈನಂದಿನ ಆಚರಣೆ ಮತ್ತು ಆತಿಥ್ಯದ ಸಂಕೇತ.

ಚಹಾವು ಕ್ರಿ.ಪೂ. 2737ರ ಸುಮಾರಿಗೆ ಚೀನಾದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಚಕ್ರವರ್ತಿ ಶೆನ್ ನಂಗ್ ಮತ್ತು ಅವನ ಸೈನಿಕರು ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಕುದಿಯುವ ನೀರಿಗೆ ಕೆಲವು ಚಹಾ ಎಲೆಗಳು ಗಾಳಿಯಿಂದಾಗಿ ಬಿದ್ದಿತ್ತು. ಇದರಿಂದ ನೀರಿನ ರುಚಿ ಬದಲಾಗಿದ್ದು ಹೆಚ್ಚು ಸ್ವಾದ ಮತ್ತು ಆಹ್ಲಾದವನ್ನು ಉಂಟು ಮಾಡಿತ್ತು. ಬಳಿಕ ಅವರು ನೀರನ್ನು ಇದೇ ರೀತಿ ಚಹಾದ ಎಲೆಗಳನ್ನು ಹಾಕಿ ಕುದಿಸಿ ಕುಡಿಯಲು ಪ್ರಾರಂಭಿಸಿದರು. ಅಂತಿಮವಾಗಿ ಇದು ಜಗತ್ತಿನಲ್ಲಿ ಅತೀ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.

ವಿಶ್ವಸಂಸ್ಥೆಯ ಪ್ರಕಾರ ಚೀನಾದಲ್ಲಿ 5,000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಚಹಾವನ್ನು ಸೇವಿಸಲಾಗುತ್ತಿದೆ. ಅಲ್ಲಿ ಇದನ್ನು ಆರಂಭದಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು ಮತ್ತು ಅನಂತರ ಅದು ಔಷಧೀಯ ಗುಣಗಳಿಂದಾಗಿ ಮೌಲ್ಯವನ್ನು ಪಡೆದುಕೊಂಡಿತ್ತು.

ಚಹಾ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿಯಲು ಬ್ರಿಟಿಷರು 1824ರಲ್ಲಿ ಭಾರತದಲ್ಲಿ ವಾಣಿಜ್ಯ ಚಹಾ ಕೃಷಿಯನ್ನು ಪರಿಚಯಿಸಿದರು. ಅಂದಿನಿಂದ ಭಾರತವು ಪ್ರಮುಖ ಚಹಾ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಡಾರ್ಜಿಲಿಂಗ್, ನೀಲಗಿರಿ ಮತ್ತು ಅಸ್ಸಾಂನಂತಹ ಪ್ರದೇಶಗಳು ಚಹಾಕ್ಕೆ ಹೆಸರುವಾಸಿ. ಇಂದು ಭಾರತವು ವಾರ್ಷಿಕವಾಗಿ ಸುಮಾರು 9,00,000 ಟನ್ ಚಹಾವನ್ನು ಉತ್ಪಾದಿಸುತ್ತದೆ.

ಚಹಾದ ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಮಹತ್ವವನ್ನು ಗುರುತಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2019ರ ಡಿಸೆಂಬರ್ನಲ್ಲಿ ಮೇ 21 ಅನ್ನು ಅಂತಾರಾಷ್ಟ್ರೀಯ ಚಹಾ ದಿನವೆಂದು ಘೋಷಿಸಿತು. ಇದು ಸಾಂಪ್ರದಾಯಿಕ ಪಾನೀಯವಾಗಿ ಚಹಾದ ಪಾತ್ರ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನೋಪಾಯಕ್ಕೆ ಅದರ ಪ್ರಮುಖ ಕೊಡುಗೆಯನ್ನು ಗುರುತಿಸುತ್ತದೆ.

ಚಹಾವು ಅನೇಕ ದೇಶಗಳಲ್ಲಿ ಸಾಂಸ್ಕೃತಿಕ ಸಂಪ್ರದಾಯ, ಸಾಮಾಜಿಕ ಪದ್ಧತಿ ಮತ್ತು ಆತಿಥ್ಯದ ಭಾಗವಾಗಿದೆ. ಅಲ್ಲದೇ ಇದು ಲಕ್ಷಾಂತರ ಜನರಿಗೆ ಪ್ರಮುಖ ಜೀವನೋಪಾಯವಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಚಹಾ ದಿನವು ಚಹಾ ಉದ್ಯಮದ ಆರ್ಥಿಕ ಮಹತ್ವವನ್ನು ಗುರುತಿಸುತ್ತದೆ. ಇದರೊಂದಿಗೆ ಸುಸ್ಥಿರ ಉತ್ಪಾದನೆ ಮತ್ತು ನ್ಯಾಯಯುತ ವ್ಯಾಪಾರಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಚಹಾ ದಿನವು ಪರಿಸರ ಸ್ನೇಹಿ ಕೃಷಿಯ ಮೂಲಕ ನ್ಯಾಯಯುತ ವೇತನ ಮತ್ತು ಸಮುದಾಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ. ಹಸಿರು ಮತ್ತು ಗಿಡಮೂಲಿಕೆ ಚಹಾಗಳು ಮಾನವನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಇದು ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಜಾಗೃತಿಯನ್ನು ಮೂಡಿಸುತ್ತದೆ.