Sneha School: ಕೇರಳವೇ ಮೊದಲಲ್ಲ, ಸುಳ್ಯದ ಸ್ನೇಹ ಶಾಲೆಯಲ್ಲಿ 30 ವರ್ಷಗಳಿಂದ ಇದೆ ವೃತ್ತಾಕಾರದ ತರಗತಿ ಕೊಠಡಿಗಳು!
Sneha School: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶಿಷ್ಟ ಮಾದರಿಯ ಕ್ಲಾಸ್‌ರೂಮ್‌ಗಳು ಮೂರು ದಶಕಗಳಿಂದಲೂ ಕಾರ್ಯಾಚರಿಸುತ್ತಿವೆ. ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವೃತ್ತಾಕಾರದ ತರಗತಿ ಕೊಠಡಿಗಳಲ್ಲಿ ಮಕ್ಕಳಿಗೆ ಕಲಿಸುತ್ತಿದ್ದಾರೆ.

ಸ್ನೇಹ ಪ್ರಾಥಮಿಕ ಶಾಲೆ, ಸುಳ್ಯ

ಸುಳ್ಯ: ಕೇರಳದಲ್ಲಿ ಇಂಗ್ಲಿಷ್‌ನ 'U' ಆಕಾರದ ತರಗತಿ ಕೊಠಡಿಗಳಲ್ಲಿ ಅಧ್ಯಾಪಕರು ಪಾಠ ಮಾಡುತ್ತಿರುವ ಚಿತ್ರಗಳು ಇತ್ತೀಚೆಗೆ ವೈರಲ್ ಆಗಿದ್ದವು. ಇದೊಂದು ಹೊಸ ಮಾದರಿಯಾಗಿದ್ದು, ಇಂಥ ಕ್ರಮದ ಮೂಲಕ ಎಲ್ಲ ಮಕ್ಕಳಿಗೂ ಅಧ್ಯಾಪಕರ ಸಮಾನವಾದ ಗಮನ ಸಿಕ್ಕಿ, ಕಲಿಕೆಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ವಿಶ್ಲೇ಼ಷಿಸಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ (Sneha school) ಇಂಥ ಕ್ಲಾಸ್‌ರೂಮ್‌ಗಳು ಮೂರು ದಶಕಗಳಿಂದಲೂ ಕಾರ್ಯಾಚರಿಸುತ್ತಿವೆ. ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವೃತ್ತಾಕಾರದ ತರಗತಿ ಕೊಠಡಿಗಳಲ್ಲಿ (Circular class room) ಮಕ್ಕಳಿಗೆ ಕಲಿಸುತ್ತಿದ್ದಾರೆ.
ಸುಳ್ಯದ ಎನ್‌ಎಂಸಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರೊಫೆಸರ್ ಆಗಿದ್ದ ಚಂದ್ರಶೇಖರ ದಾಮ್ಲೆ ಅವರು ಈ ಶಾಲೆಯನ್ನು 1996ರಲ್ಲಿ ಆರಂಭಿಸಿದರು. ಶಿಕ್ಷಣ ಚಿಂತಕರೂ ಆಗಿರುವ ಅವರು ಸುಳ್ಯದ ಇನ್ನೂ ಹಲವರ ಜತೆ ಸೇರಕೊಂಡು ಈ ಶಾಲೆಯನ್ನು ಸ್ಥಾಪಿಸಿದ್ದು, ಸಾಹಿತಿ ಯುಆರ್ ಅನಂತಮೂರ್ತಿ ಅವರು ಇದನ್ನು ಉದ್ಘಾಟಿಸಿದ್ದರು. ದಾಮ್ಲೆ ಅವರ ಮನೆಯಲ್ಲಿ ಪುಟ್ಟದಾಗಿ ಆರಂಭವಾದ ಈ ಶಾಲೆ ಇಂದು ವಿಸ್ತೃತವಾಗಿ ಬೆಳೆದಿದ್ದು, ಮುಖ್ಯವಾಹಿನಿಯ ದುಬಾರಿ ಶಾಲೆಗಳ ನಡುವೆ ಪರ್ಯಾಯ ಶಿಕ್ಷಣ ಮಾದರಿಯ ಶಾಲೆಯಾಗಿ ಯಶಸ್ವಿಯಾಗಿದೆ. ಇಲ್ಲಿ ಮೂರು ದಶಕಗಳಿಂದ ಕಲಿತವರು ಇಂದು ಸಮಾಜದ ಹಲವು ಧಾರೆಗಳಲ್ಲಿ ಮಾದರಿ ವ್ಯಕ್ತಿಗಳಾಗಿ ಹೊಮ್ಮಿದ್ದಾರೆ.

ಸ್ನೇಹ ಶಾಲೆ ಮತ್ತು ಸ್ಥಾಪಕಾಧ್ಯಕ್ಷ ಚಂದ್ರಶೇಖರ ದಾಮ್ಲೆ
ವೃತ್ತಾಕಾರದ ತರಗತಿಗಳ ಪ್ರಯೋಗದ ಬಗ್ಗೆ ಸ್ವತಃ ಸ್ನೇಹ ಪ್ರಾಥಮಿಕ ಶಾಲೆಯ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅವರು ತಮ್ಮ ಇತ್ತೀಚೆಗಿನ ಎಫ್‌ಬಿ ಪೋಸ್ಟ್‌ನಲ್ಲಿ ಈಕೆಳಗಿನಂತೆ ವಿವರಿಸಿದ್ದಾರೆ:
"ವೃತ್ತಾಕಾರದಲ್ಲಿ ತರಗತಿಗಳು ಕರ್ನಾಟಕದಲ್ಲಿ ಮೊದಲು- ಸ್ನೇಹ ಶಾಲೆಗೆ ಮೂರು ದಶಕಗಳ ಅನುಭವ"
ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು 1996 ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ 29 ವರ್ಷಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಒಂದು ತರಗತಿಗೆ 30 ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ನೀತಿ ಇದ್ದು, ಇಪ್ಪತ್ತು ಅಡಿಗಳ ವ್ಯಾಸದ ಈ ಕೊಠಡಿಗಳಲ್ಲಿ ಒಂದೇ ವೃತ್ತದಲ್ಲಿ ಗೋಡೆಯ ಪರಿಧಿಯಲ್ಲಿ 30 ಮಕ್ಕಳನ್ನು ಕೂರಿಸಲು ಸಾಧ್ಯವಾಗಿದೆ. ಯಾವುದೇ ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವುದು ಇತ್ಯಾದಿ ಸಮಸ್ಯೆಗಳು ಈತನಕ ಬಂದಿಲ್ಲ. Back Bencher ಸಮಸ್ಯೆಯನ್ನು ನೀಗಿಸಿದ್ದಲ್ಲದೆ ಇದರಿಂದಾದ ಇತರ ಪ್ರಯೋಜನಗಳು ಈ ಕೆಳಗಿನಂತಿವೆ.
1) ಮಧ್ಯದಲ್ಲಿ ಏನೂ ಅಡಚಣೆ ಇಲ್ಲದ್ದರಿಂದ ಶಿಕ್ಷಕಿಗೆ ನೇರವಾಗಿ ಕ್ಷೀಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆಯನ್ನು ಪರಿಶೀಲಿಸಲು ಸಾಧ್ಯ.
2) ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಪರಸ್ಪರ ಮುಖಮುಖಿಯಾಗಿರುವುದರಿಂದ ಅವರಿಗೆ ಸಭಾ ಕಂಪನವು ಈ ಹಂತದಲ್ಲೇ ಮಾಯವಾಗುತ್ತದೆ.

3) ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕಗಳ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.
4) ಗೋಡೆಯು ನಿಮ್ನ ಆಕಾರದಲ್ಲಿದ್ದು ಕರಿಹಲಗೆಯನ್ನು ಗೋಡೆಯಲ್ಲೇ ಮಾಡಿರುವುದರಿಂದ ಅದರಲ್ಲಿ ಬರೆದುದೆಲ್ಲವೂ ಮಕ್ಕಳಿಗೆ ಕಾಣುತ್ತದೆ. ಎಲ್ಲೇ ಕುಳಿತ ಮಗುವಿಗೆ ಬೋರ್ಡಿನ ಯಾವುದೇ ಮೂಲೆಯಲ್ಲಿ ಬರೆದದ್ದು ಕಾಣಿಸುತ್ತದೆ.
5) ಮಕ್ಕಳಿಗೂ ಬರೆಯುವ ಅವಕಾಶ ನೀಡುವ ಉದ್ದೇಶದಿಂದ ಕರಿಹಲಗೆಯನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ.
6) ಸಾಕಷ್ಟು ಕಿಟಕಿಗಳಿರುವುದರಿಂದ ವಾತಾಯನ ವ್ಯವಸ್ಥೆ ಸುಖದಾಯಕವಾಗಿದೆ. ಮಾಡು ಸುಮಾರು 18 ಅಡಿಗಳಷ್ಟು ಎತ್ತರವಿದ್ದು ಬಿಸಿಗಾಳಿ ಮೇಲಕ್ಕೆ ಸಾಗಿ ತರಗತಿಯಲ್ಲಿ ಮಕ್ಕಳು ಇಡೀ ದಿನ ಉಲ್ಲಾಸದಿಂದ ಇರುತ್ತಾರೆ.
7) ವೃತ್ತಾಕಾರದ ಕೊಠಡಿ ಎಂಬುದರಲ್ಲಿ ಸೌಂದರ್ಯ ಮತ್ತು ಉತ್ಸಾಹದ ಪ್ರೇರಣೆ ಇದೆ.
8) ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು 1990ರ ದಶಕದ ಕೊನೆಗೆ 'ಚೈತನ್ಯ' ಎಂಬ ಹೆಸರಿನಲ್ಲಿ ವೃತ್ತಾಕಾರದ ತರಗತಿಗಳನ್ನು ಅನುಮೋದಿಸಿತ್ತು. ಇದರ ಭಾಗವಾಗಿ 1999ರಲ್ಲಿ ಸುಳ್ಯದ ಸ್ನೇಹ ಶಾಲೆಯಲ್ಲಿ ಕರಾವಳಿ ಶಾಲೆಗಳ ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
9) ನಮ್ಮ ಶಾಲೆಯಲ್ಲಿ ಇಂತಹ ಮೂರು ಕೊಠಡಿಗಳಿದ್ದು, ಒಂದರಿಂದ ಮೂರನೆಯವರೆಗಿನ ತರಗತಿಗಳು ಅಲ್ಲಿ ನಡೆಯುತ್ತವೆ.
10) ಪ್ರಸ್ತುತ U ಮಾದರಿಯ ತರಗತಿಗಳ ಫೋಟೋಗಳನ್ನು ಹಾಕಿ ಇದು ಕೇರಳ ಮಾದರಿ ಎಂದು ಪ್ರಚಾರ ಪಡೆಯುತ್ತಿರುವ ಹಾಗೂ ಅಂತಹ ಶಾಲೆಗಳನ್ನು ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಇಂದಿಗಿಂತ ಮೂರು ದಶಕಗಳ ಹಿಂದೆ ಸುಳ್ಯದ ಪ್ರಕೃತಿ ಸಂಪತ್ಭರಿತ ಸ್ನೇಹ ಶಾಲೆಯಲ್ಲಿ ಈ ಮಾದರಿಯನ್ನು ಅಳವಡಿಸಿ ಪ್ರಯೋಜನ ಪಡೆದಿದ್ದೇವೆ. ಆಸಕ್ತರು ಯಾವಾಗ ಬೇಕಿದ್ದರೂ ಬಂದು ಈ ಮಾದರಿಯನ್ನು ನೋಡಬಹುದು. ನಮ್ಮ ವೆಬ್ಸೈಟ್: www.snehaschool.in