Prajwal Revanna Case: ಪ್ರಜ್ವಲ್ ರೇವಣ್ಣ ಮೊಬೈಲಿನಲ್ಲಿತ್ತು 2000 ಅಶ್ಲೀಲ ಫೋಟೋ, ವಿಡಿಯೋ: ಸಿಕ್ಕಿದ್ದು ಹೇಗೆ?
Prajwal Revanna Case: 2018ರಿಂದ ಪ್ರಜ್ವಲ್ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಪ್ರಜ್ವಲ್ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು. ನಾನು ಅವರತ್ತ ನೋಡಿದರೆ ಮೊಬೈಲ್ ತಿರುಗಿಸಿಕೊಳ್ಳುತ್ತಿದ್ದರು ಎಂದು ಕಾರ್ತಿಕ್ ಸಾಕ್ಷ್ಯ ಹೇಳಿದ್ದಾನೆ.

ಪ್ರಜ್ವಲ್ ರೇವಣ್ಣ

ಬೆಂಗಳೂರು: ಸರಣಿ ಅತ್ಯಾಚಾರ (Physical Abuse) ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Ex MP Prajwal Revanna case) ಪ್ರಕರಣದ ವಿಚಾರಣೆಯ (Trial) ವೇಳೆ, ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಸ್ಫೋಟಕ ಸಾಕ್ಷ್ಯ ನುಡಿದಿದ್ದಾನೆ. ಪ್ರಜ್ವಲ್ ಮೊಬೈಲ್‌ನಲ್ಲಿ ಸುಮಾರು 2 ಸಾವಿರ ಅಶ್ಲೀಲ ಫೋಟೋಗಳು ಹಾಗೂ 40ರಿಂದ 50 ವಿಡಿಯೋಗಳಿದ್ದವು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾನೆ. ನ್ಯಾಯಾಲಯದಲ್ಲಿ ಸೋಮವಾರ ಪ್ರಕರಣದ ವಿಚಾರಣೆಗೆ ಹಾಜರಾದ ಕಾರ್ತಿಕ್, ಪ್ರಜ್ವಲ್ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋ, ಫೋಟೋಗಳು ತಮಗೆ ಹೇಗೆ ಸಿಕ್ಕಿದವು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ʼ2009ರಿಂದ ಎಚ್.ಡಿ. ರೇವಣ್ಣ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ನಂತರ ರೇವಣ್ಣರ ಪತ್ನಿ ಭವಾನಿ ಮತ್ತು ಮಗ ಸೂರಜ್ ಅವರ ಕಾರಿಗೆ ಚಾಲಕನಾಗಿದ್ದೆ. 2018ರಿಂದ ಪ್ರಜ್ವಲ್ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಪ್ರಜ್ವಲ್ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು. ನಾನು ಅವರತ್ತ ನೋಡಿದರೆ ಮೊಬೈಲ್ ತಿರುಗಿಸಿಕೊಳ್ಳುತ್ತಿದ್ದರುʼ ಎಂದು ಕಾರ್ತಿಕ್ ಸಾಕ್ಷ್ಯ ಹೇಳಿದ್ದಾನೆ.
ʼಪ್ರಜ್ವಲ್ ಮೊಬೈಲ್‌ನ ಪಾಸ್‌ವರ್ಡ್ ನನಗೆ ತಿಳಿದಿತ್ತು. ಒಂದು ದಿನ ಅವರು ಜಯನಗರದಲ್ಲಿನ ಗೆಳತಿ ಮನೆಗೆ ಹೋದಾಗ ಕಾರಿನಲ್ಲೇ ಮೊಬೈಲ್ ಬಿಟ್ಟಿದ್ದರು. ಮೊಬೈಲ್ ತೆಗೆದು ನೋಡಿದಾಗ ಸುಮಾರು 2 ಸಾವಿರ ಅಶ್ಲೀಲ ಫೋಟೋ ಮತ್ತು 50 ವಿಡಿಯೋಗಳು ಇರುವುದು ಗೊತ್ತಾಯಿತು. ನಂತರ ಅವುಗಳನ್ನು ನನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡು ಭವಾನಿ ಅವರಿಗೆ ಮಾಹಿತಿ ನೀಡಿದ್ದೆ' ಎಂದು ಕಾರ್ತಿಕ್ ಕೋರ್ಟ್‌ನಲ್ಲಿ ಹೇಳಿದ್ದಾರೆ.
'ಭವಾನಿ ಅವರು ಆ ಫೋಟೋ, ವಿಡಿಯೋಗಳನ್ನು ತಮಗೆ ಕಳುಹಿಸುವಂತೆ ಹಾಗೂ ಎಲ್ಲಿಯೂ ಬಹಿರಂಗಪಡಿಸದಂತೆ ಸೂಚಿಸಿದ್ದರು. ಬಳಿಕ ಭವಾನಿ ಅವರು ಪ್ರಜ್ವಲ್ ಜೊತೆ ಮಾತು ಬಿಟ್ಟಿದ್ದರು. ವಿಡಿಯೋ, ಫೋಟೋಗಳ ವಿಚಾರ ತಿಳಿಸಿದ್ದು ಯಾರೆಂದು ಪ್ರಜ್ವಲ್ ಕೇಳಿದಾಗ ಭವಾನಿ ನನ್ನ ಹೆಸರು ಹೇಳಿದ್ದರು. ಆ ನಂತರ ಪ್ರಜ್ವಲ್ ನನಗೆ ಕರೆ ಮಾಡಿ ಬೈದಿದ್ದರು' ಎಂದು ಕಾರ್ತಿಕ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
'ಪ್ರಜ್ವಲ್ ಮತ್ತು ನನ್ನ ನಡುವೆ ಜಗಳವಾಗಿ 2022ರಲ್ಲಿ ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಿಸಿದ್ದೆ. ಬಳಿಕ ಪ್ರಜ್ವಲ್ ಅವರೇ ಆಸ್ತಿ ವಿವಾದ ಬಗೆಹರಿಸುವುದಾಗಿ ಹೇಳಿ ಕೆಲಸಕ್ಕೆ ಕರೆದಿದ್ದರು. ಆದರೆ, ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಬಹಿರಂಗಪಡಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ. ಸಾಕ್ಷಿಯಾಗಿ ಫೋಟೋ, ವಿಡಿಯೋಗಳನ್ನು ಕೊಡುವಂತೆ ಸೂಚಿಸಿದ್ದರಿಂದ ಪೆನ್‌ಡ್ರೈವ್‌ಗೆ ಹಾಕಿ ಅವರಿಗೆ ಕೊಟ್ಟೆ' ಎಂದು ಕಾರ್ತಿಕ್ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದಿದ್ದಾರೆ.
ಇದನ್ನೂ ಓದಿ: Prajwal Revanna case: ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಅತ್ಯಾಚಾರ ಕೇಸ್ ವಿಚಾರಣೆ ನಾಳೆ ಆರಂಭ