CM Siddaramaiah: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ, ಸುಳ್ಳು- ಸಿದ್ದರಾಮಯ್ಯ
CM Siddaramaiah: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ ಮತ್ತು ಸುಳ್ಳು. ದಲಿತರು, ಶೂದ್ರರ ಮೇಲೆ ಕೇಸುಗಳು ಬೀಳುವಂತೆ ಮಾಡುವುದು ಇದೇ ಬಿಜೆಪಿ ಮತ್ತು ಆರ್‌ಎಸ್‌ಎಸ್. ಆಮೇಲೆ ಅವರನ್ನು ಜೈಲಿನಿಂದ ಕರೆದುಕೊಂಡು ಬರುವುದೂ ಇವರೇ. ಇದೇ ನಾಟಕ ಆಡಿಕೊಂಡೇ ಅವರು ಕಾಲಕಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.


ಬೆಂಗಳೂರು: ನೆಹರೂ ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅಪಾರ ಶಿಕ್ಷಣ ಮತ್ತು ಜ್ಞಾನ ಹೊಂದಿದ್ದ ನೆಹರೂ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಹಾಕಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಧುನಿಕ ಭಾರತದ ನಿರ್ಮಾತೃ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭಾರತೀಯರ ಕಣ್ಣೀರು ಒರೆಸುವ, ನೋವುಗಳಿಗೆ ಪರಿಹಾರ ಒದಗಿಸುವುದು ನಮ್ಮ ಕೆಲಸ ಎಂದು ಆರಂಭದಲ್ಲಿ ಘೋಷಣೆ ಮಾಡಿ ನೆಹರೂ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು.
ಆಹಾರ ಕ್ರಾಂತಿ, ಹಸಿರು ಕ್ರಾಂತಿಯ ಜತೆಗೆ ವಿಜ್ಞಾನ-ತಂತ್ರಜ್ಞಾನದ ಪ್ರಗತಿಗೆ ಕಾರ್ಯಕ್ರಮಗಳು, ತಾಂತ್ರಿಕ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಮೂಲಕ, ತಾಂತ್ರಿಕ ಕ್ಷೇತ್ರ ಪ್ರಗತಿ ಮೂಲಕ ವೈಜ್ಞಾನಿಕ ಭಾರತದ ನಿರ್ಮಾತೃ ಕೂಡ ಆದ ನೆಹರೂ ಅವರ ಕೊಡುಗೆಯನ್ನು ಬಿಜೆಪಿ , ಆರ್‌ಎಸ್‌ಎಸ್ ಎಷ್ಟೇ ಅಳಿಸಲು ಹೆಣಗಾಡಿದರೂ ಅದು ಸಾಧ್ಯವಾಗುತ್ತಿಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸದೆ ಬ್ರಿಟೀಷರ ಜತೆಗಿದ್ದ ಆರ್‌ಎಸ್‌ಎಸ್, ಬಿಜೆಪಿಯವರು ಈಗ ದೇಶಭಕ್ತಿ ಬಗ್ಗೆ ಬರಿ ಭಾಷಣ ಮಾಡುವುದು ಡೋಂಗಿತನ ಎಂದು ಸಿಎಂ ಟೀಕಿಸಿದರು. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲದ ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿದ್ದ ಅಂಬೇಡ್ಕರ್, ನೆಹರೂ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್ ಸಹಸ್ರ ಸಹಸ್ರ ಸುಳ್ಳುಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಡಾಂಗೆ ಮತ್ತು ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಪತ್ರ ಬರೆದಿದ್ದಾರೆ. ಆದರೂ ಬಿಜೆಪಿ, ಆರ್‌ಎಸ್‌ಎಸ್ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಹಸಿ ಹಸಿ ಸುಳ್ಳುಗಳನ್ನು ಹಂಚುತ್ತಾ ತಿರುಗುತ್ತಿದ್ದಾರೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕೋವಿಡ್: ವೃದ್ಧರು, ಕಾಯಿಲೆಯಿರುವವರಿಗೆ ಮಾಸ್ಕ್ ಕಡ್ಡಾಯ: ಸಿಎಂ ಸಿದ್ದರಾಮಯ್ಯ
ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ ಮತ್ತು ಸುಳ್ಳು. ದಲಿತರು, ಶೂದ್ರರ ಮೇಲೆ ಕೇಸುಗಳು ಬೀಳುವಂತೆ ಮಾಡುವುದು ಇದೇ BJP ಮತ್ತು RSS. ಆಮೇಲೆ ಅವರನ್ನು ಜೈಲಿನಿಂದ ಕರೆದುಕೊಂಡು ಬರುವುದೂ ಇವರೇ. ಇದೇ ನಾಟಕ ಆಡಿಕೊಂಡೇ ಅವರು ಕಾಲಕಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.