ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು: ಡಿ.ಕೆ. ಶಿವಕುಮಾರ್

DK Shivakumar: ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ಸಣ್ಣಪುಟ್ಟ ರಾಷ್ಟ್ರಗಳು ನಮ್ಮ ಜತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಪರಿಣಾಮ ನಮ್ಮ ಸುತ್ತಮುತ್ತ ವಿರೋಧಿಗಳೇ ತುಂಬಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನೆಹರೂ ಅವರು ದೇಶ ಕಂಡ ಶ್ರೇಷ್ಠ ನಾಯಕ: ಡಿಕೆಶಿ

Profile Siddalinga Swamy May 27, 2025 3:29 PM

ಬೆಂಗಳೂರು: ನೆಹರೂ ಅವರು ತಮ್ಮ ಅವಧಿಯಲ್ಲಿ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮೂಲಕ ಈ ದೇಶಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು, ಇದರ ಮೇಲೆ ನಮ್ಮ ದೇಶವನ್ನು ನಿರ್ಮಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನೆಹರೂ ಅವರು ದೇಶ ಕಂಡ ಶ್ರೇಷ್ಠ ನಾಯಕ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ, ಆಗ ಎಲ್ಲವು ತನಗೆ ತಾನೇ ಮುಂದುವರಿಸಿಕೊಂಡು ಹೋಗುತ್ತದೆ. ಆಗ ದೇಶದ ಜನ ನಿನ್ನ ಜತೆ ಗುರುತಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಗಡಿಯಾರ ನೋಡಿ ಸಮಯ ಲೆಕ್ಕ ಹಾಕಬೇಡ, ನಿನಗೆ ಸಿಕ್ಕ ಸಮಯದಲ್ಲಿ ನೀನು ಏನು ಸಾಧನೆ ಮಾಡುತ್ತೀಯಾ ಎಂಬುದನ್ನು ಲೆಕ್ಕ ಹಾಕು ಎಂದು ನೆಹರೂ ಅವರು ಸಂದೇಶ ನೀಡಿದ್ದಾರೆ. ಅವರ ಕುಟುಂಬದ ಇತಿಹಾಸ, ಅವರ ಶ್ರೀಮಂತಿಕೆ ನಮಗೆ ತಿಳಿದಿದೆ. ಅಲಹಬಾದಿನಲ್ಲಿ ಅವರಿದ್ದ ಮನೆ, ಜಮೀನು ಸುಮಾರು 30 ಎಕರೆ ಜಾಗ ಅದೆಲ್ಲವನ್ನು ಅವರು ಸರ್ಕಾರಕ್ಕೆ ಬರೆದಿಟ್ಟಿದ್ದಾರೆ. ಜತೆಗೆ ದೆಹಲಿ ಸೇರಿದಂತೆ ಇತರೆ ಆಸ್ತಿಗಳನ್ನು ದಾನ ಮಾಡಿದ್ದಾರೆ. ತಮ್ಮ ಆಸ್ತಿಗಳು ದೇಶದ ಸ್ವತ್ತು ಎಂದು ನಂಬಿದ್ದವರು ನೆಹರೂ ಅವರು. ಅಂತಹ ಕುಟುಂಬದವರ ಮೇಲೆ ಬಿಜೆಪಿಯವರು ಅನೇಕ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ನೆಹರೂ ಇಲ್ಲದೇ ಈ ದೇಶವಿಲ್ಲ. ಉದಾಹರಣೆಗೆ ನಮ್ಮ ರಾಜ್ಯವನ್ನೇ ತೆಗೆದುಕೊಳ್ಳಿ. ಇಲ್ಲಿರುವ ಬಿಎಚ್ಇಎಲ್, ಐಟಿಐ, ಎಚ್ಎಎಲ್, ಇಸ್ರೋ, ಬೆಮೆಲ್ ಸೇರಿದಂತೆ ಯಾವುದೇ ಸಾರ್ವಜನಿಕ ಸಂಸ್ಥೆ ತೆಗೆದುಕೊಂಡರೂ ಇವುಗಳನ್ನು ಸ್ಥಾಪಿಸಿದವರು ನೆಹರೂ ಅವರು. ಆಗಿನ ಕಾಲದಲ್ಲೇ ಬೆಂಗಳೂರಿನ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದವರು ನೆಹರೂ ಎಂದು ತಿಳಿಸಿದ ಅವರು, ಆಹಾರಕ್ಕೆ ಅಭಾವದಿಂದ ಕೂಡಿದ್ದ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದ್ದು ನೆಹರೂ ಅವರು. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮಾಡಿದರು ಎಂದು ತಿಳಿಸಿದರು.

ಬಿಜೆಪಿಯವರು ಏನೇ ಟೀಕೆ ಮಾಡಿದರೂ ನಾವು ಈ ವಿಚಾರಗಳ ಮೂಲಕ ಅವರಿಗೆ ಪ್ರತ್ಯುತ್ತರ ನೀಡಬೇಕು. ಈ ದೇಶಕ್ಕೆ ನಾವು ಏನು ಮಾಡಿದ್ದೇವೆ, ಅವರು ಏನು ಮಾಡಿದ್ದಾರೆ ಎಂದು ಚರ್ಚೆ ಮಾಡಲಿ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು, ಆಹಾರ ಹಕ್ಕು, ಉದ್ಯೋಗ ಖಾತರಿ, ಆಹಾರ ಭದ್ರತೆ, ಅರಣ್ಯ ಭೂಮಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಮೂಲಕ ರೈತರಿಗೆ ಶಕ್ತಿ ತುಂಬಲಾಯಿತು. ಕಾರ್ಮಿಕರಿಗೆ ಶಕ್ತಿ ತುಂಬುವ ಕಾಯ್ದೆ ತಂದಿದ್ದು ಕಾಂಗ್ರೆಸ್ ಸರ್ಕಾರಗಳು. ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ನೆಹರೂ ಅವರು. ಭಾರತೀಯ ವಿಮಾನಯಾನ ಆರಂಭಿಸಿದ್ದು, ದೊಡ್ಡ ನೀರಾವರಿ ಯೋಜನೆಗಳನ್ನು ಜಾರಿಗೆ ಮಾಡಿದ್ದು ನೆಹರೂ. ಅವರು ಹಾಕಿದ್ದ ಅಡಿಪಾಯದ ಮೇಲೆ ನಾವು ಈ ದೇಶವನ್ನು ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಕೆಜಿಎಫ್ ಹೊರತಾಗಿ ಇತರೆ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು ಆಗಿದ್ದರೆ ಅದು ನೆಹರೂ ಅವರ ದೂರದೃಷ್ಟಿಯ ಫಲ ಎಂದು ತಿಳಿಸಿದರು.

ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ಸಣ್ಣಪುಟ್ಟ ರಾಷ್ಟ್ರಗಳು ನಮ್ಮ ಜತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಪರಿಣಾಮ ನಮ್ಮ ಸುತ್ತ ಮುತ್ತ ವಿರೋಧಿಗಳೇ ತುಂಬಿದ್ದಾರೆ ಎಂದು ಆರೋಪಿಸಿದ ಅವರು, ನೆಹರೂ ಅವರು ತಮ್ಮ ಅವಧಿಯಲ್ಲಿ ವಿದ್ಯಾಸಂಸ್ಥೆಗಳು, ಆಣೆಕಟ್ಟುಗಳನ್ನು ಕಟ್ಟಿದ್ದಾರೆ. ಆ ಮೂಲಕ ನಮ್ಮ ಆರ್ಥಿಕತೆಗೆ ಶಕ್ತಿ ತುಂಬಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಿದರು. ನೆಹರೂ ಅವರ ಆಚಾರ ವಿಚಾರಗಳನ್ನು ನೀವೆಲ್ಲರೂ ಪ್ರಚಾರ ಮಾಡಬೇಕು ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | CM Siddaramaiah: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ, ಸುಳ್ಳು- ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮೊನ್ನೆ ರಾಹುಲ್ ಗಾಂಧಿ ಅವರು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಯು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು. ಜನಪರ ಆಡಳಿತ ಮಾಡುವುದು ನಮ್ಮ ಕೆಲಸ, ಅದನ್ನು ಜನರಿಗೆ ತಲುಪಿಸುವುದು ಕಾರ್ಯಕರ್ತರ ಕೆಲಸ. ಬುಧವಾರ ಬೆಳಗ್ಗೆ 9 ಗಂಟೆಗೆ ಟೌನ್‌ಹಾಲ್‌ನಲ್ಲಿ ಜೈ ಹಿಂದ್ ಸಭೆಯನ್ನು ಕರೆಯಲಾಗಿದೆ. ಪಕ್ಷಾತೀತ ಕಾರ್ಯಕ್ರಮ ಇದಾಗಿದ್ದು, ಸಿಎಂ, ನಾನು, ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ನಮನ ಸಲ್ಲಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.