'ರಾಹುಲ್ ದ್ರಾವಿಡ್ ಆಟ ನೆನಪಿಸುವಂತಿತ್ತು': ಕನ್ನಡಿಗ ಕೆಎಲ್ ರಾಹುಲ್ಗೆ ಹರ್ಭಜನ್ ಮೆಚ್ಚುಗೆ!
Harbhajan Singh Praised KL Rahul: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಶತಕ ಸಿಡಿಸಿದರು. ಈ ಇಬ್ಬರು ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಕನ್ನಡಿಗ ರಾಹುಲ್ ಅವರ ಆಟವನ್ನು ರಾಹುಲ್ ದ್ರಾವಿಡ್ಗೆ ಹೋಲಿಸಿದ್ದಾರೆ.

ಕೆಎಲ್ ರಾಹುಲ್ರನ್ನು ದ್ರಾವಿಡ್ಗೆ ಹೋಲಿಸಿದ ಹರ್ಭಜನ್ ಸಿಂಗ್!

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಕರ್ಷಕ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರ ಬ್ಯಾಟಿಂಗ್ ಪ್ರದರ್ಶನವನ್ನು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರಥಮ ಇನಿಂಗ್ಸ್ನಲ್ಲಿ 42 ರನ್ ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿದ್ದ ರಾಹುಲ್, ದ್ವಿತೀಯ ಇನಿಂಗ್ಸ್ ನಲ್ಲಿ ಶತಕ (137 ರನ್) ಸಿಡಿಸಿ ಸಂಭ್ರಮಿಸಿದರು. ಆ ಮೂಲಕ ತಮ್ಮ ಬ್ಯಾಟಿಂಗ್ ಕೌಶಲ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಮೂಲಕ ರಾಹುಲ್ ದ್ರಾವಿಡ್ ಅವರ ಆಟವನ್ನು ನೆನಪಿಸಿದ್ದಾರೆಂದು ಹೇಳಿದ್ದಾರೆ.
ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 247 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್, 18 ಬೌಂಡರಿ ಸಹಿತ 137 ರನ್ ಗಳಿಸಿ ಬ್ರೈಡನ್ ಕಾರ್ಸ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ದ್ವಿತೀಯ ಇನಿಂಗ್ಸ್ನಲ್ಲಿ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೆಎಲ್ ರಾಹುಲ್ ಅವರು ನನಗೆ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ನೋಡುವಂತಹ ಅನುಭವ ನೀಡಿದ್ದಾರೆ ಎಂದು ಹರ್ಭಜನ್ ಸಿಂಗ್ ಶ್ಲಾಘಿಸಿದ್ದಾರೆ.
ENG vs IND: ಟೆಸ್ಟ್ನಲ್ಲಿ ಮೊದಲ ಬಾರಿಗೆ ಪಂದ್ಯದಲ್ಲಿ 5 ಶತಕ ದಾಖಲಿಸಿದ ಭಾರತ
ರಾಹುಲ್ ಆಟವನ್ನು ಶ್ಲಾಘಿಸಿದ ಟರ್ಬನೇಟರ್
ತಮ್ಮದೇ ಆದ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೊದಲ್ಲಿ ಹರ್ಭಜನ್ ಸಿಂಗ್, ದ್ವಿತೀಯ ಇನಿಂಗ್ಸ್ನಲ್ಲಿ ರಾಹುಲ್ ತೋರಿದ ಪ್ರದರ್ಶನವನ್ನು ಶ್ಲಾಘಿಸಲೇಬೇಕು ಎಂದಿದ್ದಾರೆ.
"ನಾವು ಕೆಎಲ್ ರಾಹುಲ್ ಅವರ ಪ್ರದರ್ಶನವನ್ನು ನಿಜಕ್ಕೂ ಶ್ಲಾಘಿಸಲೇಬೇಕು. ಶಾಂತ, ಸಂಯಮ, ದೃಢ, ರಕ್ಷಣಾ ಆಟವನ್ನು ಹೊಂದಿರುವ ಕೆಎಲ್ ರಾಹುಲ್ಗೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಹೇಗೆ ಆಡಬೇಕು ಎಂಬುದನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ನಾಲ್ಕನೇ ದಿನದ ಆರಂಭಿಕ ಒಂದು ಗಂಟೆಯಲ್ಲಿ ಚೆಂಡು ದೇಹದ ಮಟ್ಟದಲ್ಲಿ ಹೆಚ್ಚು ಬೌನ್ಸ್ ಆಗುತ್ತಿತ್ತು. ಆದರೂ ಕೆಲವು ಎಸೆತಗಳಿಗೆ ತುಂಬಾ ಚೆನ್ನಾಗಿ ಪ್ರತಿಕ್ರಿಯಿಸಿ ರನ್ ಗಳಿಸಿದ್ದಾರೆ. ಅವರ ಪ್ರದರ್ಶನವು ನನಗೆ ರಾಹುಲ್ ದ್ರಾವಿಡ್ ಅವರ ಆಟ ನೆನಪಿಸುವಂತಿತ್ತು. ನಿಜಕ್ಕೂ ಅದ್ಭುತ ಶತಕ ಸಿಡಿಸಿದ್ದಾರೆ," ಎಂದು ಹರ್ಭಜನ್ ಸಿಂಗ್ ಶ್ಲಾಘಿಸಿದ್ದಾರೆ.
IND vs ENG: ಕೆಎಲ್ ರಾಹುಲ್, ರಿಷಭ್ ಪಂತ್ ಶತಕ, ಇಂಗ್ಲೆಂಡ್ಗೆ 371 ರನ್ ಗುರಿ ನೀಡಿದ ಭಾರತ!
ರಿಷಭ್ ಪಂತ್ ಲಯಕ್ಕೆ ಮರಳಿದ್ದಾರೆ: ಭಜ್ಜಿ
2025ರ ಐಪಿಎಲ್ ಟೂರ್ನಮೊಯ ತಮ್ಮ ಅಂತಿಮ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್ ಶತಕ ಸಿಡಿಸಿದ್ದರು. ಆದರೆ, ಅವರು ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆ ಬರೆದ ರಿಷಭ್ ಪಂತ್ ಆಟವನ್ನು ಹರ್ಭಜನ್ ಸಿಂಗ್ ಶ್ಲಾಘಿಸಿದ್ದಾರೆ.
"ಸತತ ಎರಡು ಶತಕ ಸಿಡಿಸುವ ಮೂಲಕ ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರನ್ ಗಳಿಸದೆ ಇರುವುದು ದೊಡ್ಡ ಸಂಗತಿಯಾಗುವುದಿಲ್ಲ. ಆದರೆ ಭಾರತ ತಂಡದ ಪರ ಆಡುವಾಗ ಸಂಗತಿಗಳು ವಿಭಿನ್ನವಾಗಿರುತ್ತವೆ. ಅವರು ತನ್ನ ಜವಾಬ್ದಾರಿಯನ್ನು ಅರಿತು ತುಂಬಾ ಚೆನ್ನಾಗಿ ರನ್ ಗಳಿಸಿದ್ದಾರೆ ಹಾಗೂ ತಂಡಕ್ಕೆ ಆಸರೆಯಾಗಿದ್ದರಿಂದ ನನಗೆ ತುಂಬಾ ಸಂತಸವಾಗಿದೆ," ಎಂದು ಹರ್ಭಜನ್ ಸಿಂಗ್ ಶ್ಲಾಘಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ಪ್ರಥಮ ಇನಿಂಗ್ಸ್ನಲ್ಲಿ 134 ರನ್ ಗಳಿಸಿದ್ದ ರಿಷಭ್ ಪಂತ್, ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ (137 ರನ್) ಜೊತೆಗೂಡಿ 4ನೇ ವಿಕೆಟ್ಗೆ 195 ರನ್ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಇಂಗ್ಲೆಂಟ್ಗೆ 371 ರನ್ ಗುರಿ ನೀಡಲು ನೆರವು ನೀಡಿದ್ದರು. 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿರುವ ಇಂಗ್ಲೆಂಡ್, ಅಂತಿಮ ದಿನದಲ್ಲಿ ಪಂದ್ಯ ಗೆಲ್ಲಲು 351 ರನ್ ಗಳಿಸಬೇಕಾಗಿದೆ.