ಕ್ರಿಕೆಟ್ನಲ್ಲಿ ಡಿಆರ್ಎಸ್, ನೋ ಬಾಲ್ ಸೇರಿ ಹಲವು ನಿಯಮ ತಿದ್ದುಪಡಿ ಮಾಡಿದ ಐಸಿಸಿ
icc new rules: ಈ ಮೊದಲು ಬೌಲಿಂಗ್ ತಂಡ ನೋ ಬಾಲ್ ಎಸೆದಿದ್ದು ಕಂಡುಬಂದರೆ ಆಗ ಕ್ಯಾಚನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ನೋ ಬಾಲ್ ವೇಳೆಯೂ ಕ್ಯಾಚ್ ನ್ಯಾಯಸಮ್ಮತವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಹೊಸ ನಿಯಮದ ಕ್ಯಾಚ್ ಕ್ಲೀನ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ನೋಬಾಲ್ನ 1 ರನ್ ಮಾತ್ರ ನೀಡಲಾಗುತ್ತದೆ. ಆ ಕ್ಯಾಚ್ ಕ್ಲೀನ್ ಆಗಿರದಿದ್ದರೆ, ಆ ಎಸೆತದಲ್ಲಿ ಬ್ಯಾಟರ್ಗಳು ಓಡಿರುವ (ರನ್ ಓಡಿದ್ದರೆ) ರನ್ಗಳನ್ನೂ ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.


ದುಬೈ: ಸೀಮಿತ ಓವರ್ ಕ್ರಿಕೆಟ್ನಲ್ಲಿ ಇರುವಂತೆ ನಿಧಾನಗತಿ ಬೌಲಿಂಗ್ಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಟೆಸ್ಟ್ ಕ್ರಿಕೆಟ್ನಲ್ಲೂ ಓವರ್ಗಳ ಮಧ್ಯೆ 60 ಸೆಕೆಂಡ್ಗಳ ಸ್ಟಾಪ್ ಕ್ಲಾಕ್(Stop clock for Tests) ನಿಯಮ ಜಾರಿಗೆ ತಂದಿದೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚರಣದಲ್ಲಿ ಈಗಾಗಲೇ ಸ್ಟಾಪ್ ಕ್ಲಾಕ್ ಅಳವಡಿಕೆ ಮಾಡಲಾಗಿದೆ ಎಂದು ಐಸಿಸಿ ಮಾಹಿತಿ ಹಂಚಿಕೊಂಡಿದೆ. ಇದಲ್ಲದೆ ಎಂಜಲು ಬಳಕೆ, ಡಿಆರ್ಎಸ್(DRS protocols), ಕ್ಯಾಚ್, ಶಾರ್ಟ್ ರನ್ಗೆ ಸಂಬಂಧಿಸಿಯೂ ಐಸಿಸಿ ಹೊಸ ನಿಯಮಗಳನ್ನು(icc new rules) ಘೋಷಿಸಿದೆ.
ಹೊಸ ನಿಯಮದ ಪ್ರಕಾರ, ಬೌಲಿಂಗ್ ಮಾಡುವ ತಂಡಕ್ಕೆ ಒಂದು ಓವರ್ ಮುಗಿದ ಬಳಿಕ ಮತ್ತೊಂದು ಓವರ್ ಆರಂಭಿಸಲು 60 ಸೆಕೆಂಡ್ ಕಾಲಾವಕಾಶವಿರಲಿದೆ. ಓವರ್ ಮುಗಿಯುತ್ತಿದ್ದಂತೆ ಕ್ರೀಡಾಂಗಣದಲ್ಲಿರುವ ದೊಡ್ಡ ಪರದೆಯ ಮೇಲೆ ಬಾಕಿ ಇರುವ ಸಮಯವನ್ನು ತೋರಿಸಲಾಗುತ್ತದೆ. ಒಂದು ವೇಳೆ 60 ಸಕೆಂಡ್ಗಳೊಳಗೆ ಹೊಸ ಓವರ್ ಆರಂಭಿಸದಿದ್ದರೆ ಬೌಲಿಂಗ್ ಮಾಡುತ್ತಿರುವ ತಂಡಕ್ಕೆ ಎಚ್ಚರಿ ನೀಡಲಾಗುತ್ತದೆ. 80 ಓವರ್ಗಳ ಅವಧಿಯಲ್ಲಿ 3 ಬಾರಿ ನಿಯಮ ಉಲ್ಲಂಘಿಸಿದರೆ, ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿ ರನ್ ದೊರೆಯಲಿದೆ.
ಡಿಆರ್ಎಸ್ನಲ್ಲಿ ಬದಲಾವಣೆ
ಡಿಆರ್ಎಸ್ನಲ್ಲಿಯೂ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಬ್ಯಾಟರ್ ವಿರುದ್ಧ ಕ್ಯಾಚ್ ತೀರ್ಪಿಗಾಗಿ ಡಿಆರ್ಎಸ್ ಮೊರೆ ಹೋದಾಗ ತೃತೀಯ ಅಂಪೈರ್ ಅಲ್ಟ್ರಾಎಡ್ಜ್ ಪರಿಶೀಲಿಸುತ್ತಾರೆ. ಡಿಆರ್ಎಸ್ ವೇಳೆ ಚೆಂಡು ಬ್ಯಾಟಿಗೆ ತಾಗಿಲ್ಲ ಎನ್ನುವುದು ಕಂಡು ಬಂದರೆ ಅದನ್ನು ಈ ಮೊದಲು ನಾಟೌಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇಂಥ ಸಂದರ್ಭಗಳ ವೇಳೆ ಟಿವಿ ಅಂಪೈರ್ ಎಲ್ಬಿಡಬ್ಲ್ಯು ಸಾಧ್ಯತೆಯನ್ನೂ ಪರಿಶೀಲಿಸಲಿದ್ದಾರೆ. ಈ ವೇಳೆ ಎಲ್ಬಿಡಬ್ಲ್ಯು ತೀರ್ಪಿನ ಬಾಲ್-ಟ್ರಾಕಿಂಗ್ನಲ್ಲಿ ಅಂಪೈರ್ಸ್ ಕಾಲ್ ಬಂದರೆ ಇದುವರೆಗೆ ಅದನ್ನು ನಾಟೌಟ್ ಎಂದೇ ಪರಿಗಣಿಸಲಾಗುತಿತ್ತು. ಆದರೆ ಇನ್ನು ಮುಂದೆ ಅದು ಔಟ್ ಆಗಲಿದೆ.
ಎಂಜಲು ಬಳಸಿದರೆ ಚೆಂಡು ಬದಲಾಗದು
ಕಳೆದ ಐಪಿಎಲ್ನಲ್ಲಿ ಚೆಂಡಿಗೆ ಎಂಜಲು ಹಚ್ಚಿ ಶೈನ್ ಮಾಡಲು ಯತ್ನಿಸುವ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಅದರಂತೆ ಎಂಜಲು ಬಳಸಲು ಅವಕಾಶ ನೀಡಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೆಂಡಿಗೆ ಎಂಜಲು ಹಚ್ಚುವುದರ ಮೇಲಿನ ರ್ನಿಬಂಧ ಮುಂದುವರಿಯಲಿದೆ. ಹಾಗೆಂದು ಇನ್ನು ಮುಂದೆ, ಚೆಂಡಿಗೆ ಎಂಜಲು ಹಚ್ಚಿರುವುದು ಕಂಡು ಬಂದ ತಕ್ಷಣ ಅದನ್ನು ಬದಲಾಯಿಸಲಾಗುವುದಿಲ್ಲ. ಕೆಲ ತಂಡಗಳು ಚೆಂಡು ಬದಲಾವಣೆಗಾಗಿ, ಉದ್ದೇಶಪೂರ್ವಕವಾಗಿ ಎಂಜಲು ಹಚ್ಚುತ್ತಿದ್ದವು. ಇದೀಗ ಚೆಂಡನ್ನು ಬದಲಾಯಿಸಬೇಕು ಎಂಬುದು ಕಡ್ಡಾಯವೇನಲ್ಲ ಎಂದು ಐಸಿಸಿ ಹೇಳಿದೆ.
ಪೂರ್ಣ ಬದಲಿ ಆಟಗಾರ
ಈ ಹಿಂದೆ ಆಟಗಾರನೊಬ್ಬನ ತಲೆಗೆ ಚೆಂಡೇಟು ಬಿದ್ದಾಗ(ಕನ್ಕಷನ್) ಮಾತ್ರ ಬದಲಿಯಾಗಿ ಬರುವ ಆಟಗಾರನಿಗೆ ಬ್ಯಾಟಿಂಗ್ ಬೌಲಿಂಗ್ ಅವಕಾಶ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಆಟಗಾರನೊಬ್ಬ ಗಂಭೀರ ಬಾಹ್ಯ ಗಾಯದಿಂದ ಮೈದಾನ ತೊರೆದಾಗ ಬರುವ ಬದಲಿ ಆಟಗಾರನಿಗೂ ಈ ಅವಕಾಶ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಐಸಿಸಿ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ದೇಶೀಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಇದನ್ನು ಜಾರಿಗೊಳಿಸಲು ಸೂಚಿಸಿದೆ. ಗಂಭೀರ ಬಾಹ್ಯ ಗಾಯಗೊಂಡ ಆಟಗಾರನಿಗೆ ಬದಲಿಯಾಗಿ ಕನ್ಕಷನ್ ಬದಲಿಯಂತೆ, ವೇಗಿಗೆ ವೇಗಿ, ಸ್ಪಿನ್ನರ್ಗೆ ಸ್ಪಿನ್ನರ್, ಬ್ಯಾಟರ್ಗೆ ಬ್ಯಾಟರ್, ಆಲ್ರೌಂಡರ್ಗೆ ಆಲ್ರೌಂಡರ್, ಕೀಪರ್ಗೆ ಕೀಪರ್ ಬದಲಿಗರಾಗಿ ಆಡಬಹುದು. ಅಲ್ಲದೆ ಇದಕ್ಕೆ ಮ್ಯಾಚ್ ರೆಫ್ರಿ ಒಪ್ಪಿಗೆಯೂ ಅಗತ್ಯ.
ನೋ ಬಾಲ್ ಪರಿಶೀಲನೆ
ಈ ಮೊದಲು ಬೌಲಿಂಗ್ ತಂಡ ನೋ ಬಾಲ್ ಎಸೆದಿದ್ದು ಕಂಡುಬಂದರೆ ಆಗ ಕ್ಯಾಚನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ನೋ ಬಾಲ್ ವೇಳೆಯೂ ಕ್ಯಾಚ್ ನ್ಯಾಯಸಮ್ಮತವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಹೊಸ ನಿಯಮದ ಕ್ಯಾಚ್ ಕ್ಲೀನ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ನೋಬಾಲ್ನ 1 ರನ್ ಮಾತ್ರ ನೀಡಲಾಗುತ್ತದೆ. ಆ ಕ್ಯಾಚ್ ಕ್ಲೀನ್ ಆಗಿರದಿದ್ದರೆ, ಆ ಎಸೆತದಲ್ಲಿ ಬ್ಯಾಟರ್ಗಳು ಓಡಿರುವ (ರನ್ ಓಡಿದ್ದರೆ) ರನ್ಗಳನ್ನೂ ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.