ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nadoja N Manu Baligar Column: ಮರೆಯಬಾರದ ಮಹಾನುಭವ: ಫ.ಗು.ಹಳಹಟ್ಟಿ

ಹಳಕಟ್ಟಿಯವರು ಮಧ್ಯಮ ವರ್ಗದಿಂದ ಬಂದವರು. ಇವರ ತಂದೆ ಗುರುಬಸಪ್ಪನವರು ಶಾಲಾ ಶಿಕ್ಷಕರಾಗಿದ್ದರು. ಸ್ವತಃ ಲೇಖಕರಾಗಿದ್ದ ಇವರು ಇಂಗ್ಲಿಷ್‌ನ ಕೆಲವೊಂದು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದವರೂ, ಪ್ರಗತಿಪರ ವಿಚಾರವಂತರೂ ಆಗಿದ್ದರು. ತಂದೆ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇಬ್ಬರೂ ವಿದ್ವಾಂಸರಾಗಿದ್ದರಿಂದ ಅವರ ಪ್ರಭಾವವು -ಕೀರಪ್ಪನವರ ಮೇಲೆ ತುಂಬಾ ಆಯಿತು.

ಮರೆಯಬಾರದ ಮಹಾನುಭವ: ಫ.ಗು.ಹಳಹಟ್ಟಿ

Profile Ashok Nayak Jul 2, 2025 11:21 AM

ತನ್ನಿಮಿತ್ತ

ನಾಡೋಜ ನಾ.ಮನು ಬಳಿಗಾರ್

ವಚನ ಪಿತಾಮಹ, ಕರ್ನಾಟಕದ ಮ್ಯಾಕ್ಸ್‌ಮುಲ್ಲರ್, ಆಧುನಿಕ ಶರಣ, ವಚನ ಗುಮ್ಮಟ, ರಾವ್ ಸಾಹೇಬ್ ಇತ್ಯಾದಿ ಪದವಿ ಪುರಸ್ಕಾರಗಳಿಗೆ ಭಾಜನರಾದ ಏಕಮೇವ ವ್ಯಕ್ತಿ ಪೂಜ್ಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು. ಇಂದಿಗೆ 145 ವರ್ಷಗಳ ಹಿಂದೆ (1880ರ ಜುಲೈ 9ರಂದು) ಧಾರವಾಡ‌ದಲ್ಲಿ ಹುಟ್ಟಿದ ಶ್ರೀಯುತರು ಮಾಡಿದ ಕಾರ್ಯಗಳು ಅದ್ಭುತ ಹಾಗೂ ಅಷ್ಟೇ ಉತ್ಕೃಷ್ಟವಾದಂಥವು. 12ನೇ ಶತಮಾನದಲ್ಲಿ ರಚನೆಯಾದ ಸಾವಿರಾರು ವಚನಗಳನ್ನು, ನೂರಾರು ವಚನಕಾರರನ್ನು ಬೆಳಕಿಗೆ ತಂದ ಶ್ರೇಯಸ್ಸು ಹಳಕಟ್ಟಿ ಅವರಿಗೆ ಸಲ್ಲುತ್ತದೆ.

ಈವರೆಗೆ ದೊರೆತ ಅಂದಾಜು 22000 ವಚನಗಳಲ್ಲಿ ಸರಿಸುಮಾರು 16000 ವಚನಗಳನ್ನು ಹಳಕಟ್ಟಿ ಯವರೊಬ್ಬರೇ ಹೆಕ್ಕಿ ತೆಗೆದು, ಪರಿಷ್ಕರಿಸಿ, ಸಂಪಾದಿಸಿ, ಮುದ್ರಿಸಿ, ಪ್ರಕಟಿಸಿ ಜನರ ಕೈಗೆ ಸಿಗುವಂತೆ ಮಾಡಿದರು. ಈ ಪುಣ್ಯಾತ್ಮರು ಇಂಥ ಕಾರ್ಯವನ್ನು ಕೈಗೊಳ್ಳುವ ಮೊದಲು ಅಂದಾಜು 50 ವಚನಕಾರರು ಮಾತ್ರ ಲೋಕದ ಕಣ್ಣಿಗೆ ಬಿದ್ದಿದ್ದರು. ಆದರೆ ಹಳಕಟ್ಟಿ ಅವರ ಅಹರ್ನಿಶಿ ದುಡಿತ, ಶ್ರಮ, ಶ್ರದ್ಧಾ ಭಕ್ತಿ ಇವೆಲ್ಲವುಗಳಿಂದಾಗಿ 250 ವಚನಕಾರರು ಈ ಜಗಕ್ಕೆ ಹೊಸದಾಗಿ ತಲುಪುವಂತಾ ಯಿತು.

ಹಳಕಟ್ಟಿಯವರು ಮಧ್ಯಮ ವರ್ಗದಿಂದ ಬಂದವರು. ಇವರ ತಂದೆ ಗುರುಬಸಪ್ಪನವರು ಶಾಲಾ ಶಿಕ್ಷಕರಾಗಿದ್ದರು. ಸ್ವತಃ ಲೇಖಕರಾಗಿದ್ದ ಇವರು ಇಂಗ್ಲಿಷ್‌ನ ಕೆಲವೊಂದು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದವರೂ, ಪ್ರಗತಿಪರ ವಿಚಾರವಂತರೂ ಆಗಿದ್ದರು. ತಂದೆ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇಬ್ಬರೂ ವಿದ್ವಾಂಸರಾಗಿದ್ದರಿಂದ ಅವರ ಪ್ರಭಾವವು -ಕೀರಪ್ಪನವರ ಮೇಲೆ ತುಂಬಾ ಆಯಿತು.

ಇದನ್ನೂ ಓದಿ: Roopa Gururaj Column: ನವಗುಂಜರದ ಭಕ್ತಿ ಸಾರ

ಪರಿಚಯದ ಒಬ್ಬರ ಮನೆಗೆ ಊಟಕ್ಕೆ ಹೋದಾಗ ಅಕಸ್ಮಾತ್ ಅಲ್ಲಿದ್ದ ತಾಳೆಗರಿಗಳ ಮೇಲೆ ಇವರ ಗಮನ ಬಿದ್ದು ಅವು 12ನೇ ಶತಮಾನದ ಸಾಹಿತ್ಯದ ಅನರ್ಘ್ಯ ರತ್ನಗಳಾದ ವಚನಗಳ ಕಟ್ಟುಗಳು ಎಂಬುದು ಫಕೀರಪ್ಪನವರ ತೀಕ್ಷ್ಣಮತಿಗೆ ಹೊಳೆಯಿತು. ಊಟವನ್ನು ಮರೆತು ಆ ವಚನಗಳ ಕಟ್ಟುಗಳು ತಮಗೆ ಬೇಕೆಂದು ಮನೆಯ ಮಾಲೀಕರನ್ನು ಕೇಳಿ ತೆಗೆದುಕೊಂಡು ಬಂದ ಫಕೀರಪ್ಪ ಅವುಗಳ ಅಧ್ಯಯನದಲ್ಲಿ ತೊಡಗಿಕೊಂಡರರು.

ಅವುಗಳನ್ನು ಸಂಸ್ಕರಿಸಿ ಪರಿಷ್ಕರಿಸಿ ಅವುಗಳ ಮಹಿಮೆಯನ್ನು ಕಂಡುಕೊಂಡ ಇವರು, ಈ ಅಪೂರ್ವ ಸಾಹಿತ್ಯವು ಯಾವುದೇ ಕಾರಣಕ್ಕೂ ಕಳೆದುಹೋಗಲು ಬಿಡಬಾರದು ಎಂದು ನಿರ್ಧರಿಸಿ ಬಿಟ್ಟರು. ಹೀಗೆ ಶುರುವಾದ ಫಕೀರಪ್ಪನವರ ವಚನಗಳ ಸಂಶೋಧನೆ ಅವರ ವಕೀಲಿ ವೃತ್ತಿಯನ್ನು ಬದಿಗೆ ಸರಿಸುವಂತೆ ಮಾಡಿತು.

ಮನೆಮನೆಗಳಿಗೆ ಅಲೆದು ತಾಳೆಗರಿಗಳನ್ನು, ಓಲೆ ಸಂಪುಟಗಳನ್ನು ಸಂಗ್ರಹಿಸುವಾಗ ಅನೇಕ ಕಡೆ ಸ್ವಂತ ಹಣವನ್ನೇ ಕೊಟ್ಟು ತೆಗೆದುಕೊಂಡು ಬರುವಂತಾಗಿತ್ತು. ಮುಂದೆ ಅವುಗಳನ್ನು ಸಂಪಾದನೆ ಮಾಡಿ ಮುದ್ರಣ ಮಾಡಲು ಬಿಜಾಪುರದಲ್ಲಿ ಅಥವಾ ಸಮೀಪದ ಜಿಲ್ಲಾ ಕೇಂದ್ರಗಳಲ್ಲಿ ಅಚ್ಚು ಕೂಟಗಳು ಇರಲಿಲ್ಲವಾದ್ದರಿಂದ ಅವುಗಳನ್ನು ಮಂಗಳೂರಿನ ಕ್ರಿಶ್ಚಿಯನ್ ಮಿಶನರಿ ಮುದ್ರಣಾಲ ಯಕ್ಕೆ ಕಳಿಸಿಕೊಟ್ಟರು.

‘ತಾನೊಂದು ಬಗೆದರೆ, ದೈವ ಒಂದು ಬಗೆಯಿತು’ ಎಂಬಂತೆ ಹೀಗೆ ಮಂಗಳೂರಿಗೆ ಕಳಿಸಿದ ವಚನದ ಕರಡು ಪ್ರತಿಗಳು ಅಚ್ಚಾಗದೆ ಹಾಗೆಯೇ ತಿರುಗಿ ಕಳಿಸಲ್ಪಟ್ಟವು. ಕಳಿಸಿದ ಕಾರಣ ಏನೇ ಆಗಿರಲಿ ಅವುಗಳನ್ನು ತಾವೇ ಮುದ್ರಣ ಮಾಡಬೇಕೆಂದು ಛಲ ತೊಟ್ಟು ಫಕೀರಪ್ಪನವರು ಸ್ವಂತ ಮುದ್ರಣಾ ಲಯವನ್ನು ಹಾಕಬೇಕೆಂದು ನಿರ್ಧರಿಸಿಬಿಟ್ಟರು.

ಇದಕ್ಕಾಗಿ ಕೈಯಲ್ಲಿ ಹಣವಿಲ್ಲದ್ದರಿಂದ ತಾವು ವಾಸಿಸುತ್ತಿದ್ದ ಮನೆಯನ್ನೇ ಮಾರಾಟ ಮಾಡಿ ಬಿಟ್ಟರು. ಅವರಿಗೆ ಬಾಡಿಗೆ ಮನೆಯೇ ಮಹಾಮನೆ ಆಯಿತು. ಆ ಮುದ್ರಣಾಲಯಕ್ಕೆ ‘ಹಿತ ಚಿಂತಕ’ ಎಂದು ಹೆಸರಿಟ್ಟು ತಮ್ಮ ಮಹತ್ಕಾರ್ಯವನ್ನು ಹಳಕಟ್ಟಿಯವರು ಪೂರೈಸಿಕೊಂಡರು.

ವಚನಸಾಹಿತ್ಯದ ಕೆಲಸ ಕಾರ್ಯಗಳ ಜತೆಜತೆಗೆ ಹರಿಹರನ ರಗಳೆಗಳ ಸಂಪಾದನೆ, ‘ನವಕರ್ನಾಟಕ’ ಎಂಬ ವಾರಪತ್ರಿಕೆ ಮತ್ತು ‘ಶಿವಾನುಭವ’ ಎಂಬ ಮಾಸಪತ್ರಿಕೆಯನ್ನು ಸ್ವತಃ ಸಂಪಾದಿಸಿ ನಿಯತ ವಾಗಿ ಹೊರತರತೊಡಗಿದರು. ವಚನ ಸಾಹಿತ್ಯವು ವಿಶ್ವವ್ಯಾಪಿ ಆಗಬೇಕೆಂದು ಹಳಕಟ್ಟಿಯವರು ಸ್ವತಃ ಹಲವಾರು ವಚನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ ‘ಇಂಡಿಯನ್ ಆಂಟಿಕ್ವರಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು.

ಸಮಾಜದ ಮೌಢ್ಯವನ್ನು ಅಳಿಸಿಹಾಕಲು, ಅಂತರಂಗವನ್ನು ಅರಳಿಸಲು, ಒಟ್ಟಿನಲ್ಲಿ ಮನುಕುಲ ವನ್ನು ಉದ್ಧರಿಸಲು ವಚನ ಸಾಹಿತ್ಯವು ಪಂಡಿತ-ಪಾಮರ ಎಲ್ಲರಿಗೂ ತಲುಪಬೇಕೆಂದು ದೃಢ ನಿಶ್ಚಯ ಮಾಡಿದ ಹಳಕಟ್ಟಿಯವರು ತಮ್ಮ ಪುಸ್ತಕಗಳು ಹಾಗೂ ಪತ್ರಿಕೆಗಳು ಮನೆ ಮನೆಗಳಲ್ಲಿ ದೊರಕಬೇಕೆಂದು ಅಲ್ಲಿಗೆ ತಲುಪಿಸುವ ಕೆಲಸವನ್ನು ಕೈಗೊಂಡರು. ಇದರಿಂದಾಗಿ ವಿಪರೀತ ಖರ್ಚು ವೆಚ್ಚಗಳು ಬರತೊಡಗಿ ಆರ್ಥಿಕ ಸ್ಥಿತಿ ದಿನೇ ದಿನೆ ಕುಸಿಯತೊಡಗಿತು, ಆರೋಗ್ಯವೂ ಹದಗೆಡ ತೊಡಗಿತು.

ಇಂಥ ವಿಷಮ ಪರಿಸ್ಥಿತಿಯಲ್ಲಿಯೂ ಇವರು ಎದೆಗುಂದದೆ ಮುನ್ನಡೆಯತೊಡಗಿದರು. ಹಾನಗಲ್ಲ ಕುಮಾರಸ್ವಾಮಿಗಳು, ಕೆಲವೊಂದು ವಚನ ಸಾಹಿತ್ಯ ಅಭಿಮಾನಿಗಳು ಹಳಕಟ್ಟಿಯವರ ಸಹಾಯಕ್ಕೆ ಬಂದರು. ಇದರಿಂದಾಗಿ ಶ್ರೀಯುತರು ವಚನ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ನೀಡುವಂತಾ ಯಿತು. ವಚನ ಸಾಹಿತ್ಯದ ಬೆಳಕು ಎಡೆ ಹರಡುವಂತಾಯಿತು. ಇಡೀ ಸಮಾಜ ಹಳಕಟ್ಟಿಯವರನ್ನು ಬಹಳ ಅಭಿಮಾನದಿಂದ ‘ವಚನ ಪಿತಾಮಹ’ ಎಂದು ಸಂಬೋಧಿಸತೊಡಗಿತು.

ಉತ್ತಂಗಿ ಚನ್ನಪ್ಪ, ರಂಗನಾಥ ದಿವಾಕರ, ಅನಕೃ, ಎಂ.ಆರ್.ಶ್ರೀನಿವಾಸಮೂರ್ತಿ ಮುಂತಾದವರು ಹಳಕಟ್ಟಿಯವರನ್ನು ಅವರ ಕಾರ್ಯಗಳನ್ನು ತುಂಬು ಹೃದಯದಿಂದ ಮೆಚ್ಚಿ ಹೊಗಳುವಂತೆ ಆಯಿತು. ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ನವರು ಒಮ್ಮೆ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬಿಜಾಪುರಕ್ಕೆ ಬಂದಿದ್ದರು. ಅಲ್ಲಿನ ಜನ ಅವರಿಗೆ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ತೋರಿಸು ತ್ತೇವೆ ಅಂದಾಗ ಅವರು, “ಅದೇನೋ ಸರಿಯೇ, ಆದರೆ ಅದರಷ್ಟೇ ಮಹತ್ವದ್ದಾದ ‘ವಚನ ಗುಮ್ಮಟ’ ಒಂದು ನಿಮ್ಮ ಊರಿನಲ್ಲಿದೆ.

ಅದನ್ನು ನಾನು ಮೊದಲು ನೋಡಬೇಕು" ಎಂದು ಹೇಳಿ ಹಳಕಟ್ಟಿ ಅವರನ್ನು ನೋಡಲು ಅವರ ಮನೆಗೆ ಬಂದರು. ಹಳಕಟ್ಟಿಯವರ ಕಾರ್ಯಗಳು ವಚನ ಸಾಹಿತ್ಯಕ್ಕೆ ಮಾತ್ರವಲ್ಲದೆ ಶಿಕ್ಷಣ, ಕೃಷಿ ಹಾಗೂ ಸಹಕಾರ ಕ್ಷೇತ್ರಗಳಿಗೂ ವಿಸ್ತರಿಸಿದ್ದವು. ಅವರು ಹಲವಾರು ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅವುಗಳಲ್ಲಿ ಮುಖ್ಯವಾಗಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಹೆಸರಿಸಬಹುದು. ಇಂದು ಈ ಶಿಕ್ಷಣ ಸಂಸ್ಥೆಯು ಸುಮಾರು 90 ವಿವಿಧ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ.

ಪ್ರಸ್ತುತ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳ ಇಲಾಖೆಯ ಸಚಿವರಾದ ಎಂ.ಬಿ.ಪಾಟೀಲ್ ಅವರು ಇದರ ಕಾರ್ಯಾಧ್ಯಕ್ಷರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಅಧ್ಯಾಪಕರು ಅಲ್ಲಿ ಹಳಕಟ್ಟಿಯವರ ಧ್ಯೇಯೋದ್ದೇಶಗಳನ್ನು ಪೂರೈಸುತ್ತಿದ್ದಾರೆ. ಕೃಷಿಕರು, ಕೃಷಿ ಕಾರ್ಮಿಕರು, ನೇಕಾರರು ಇವರೆಲ್ಲರಿಗಾಗಿ ಹಲವಾರು ಸಹಕಾರಿ ಸಂಘಗಳನ್ನು ಹಳಕಟ್ಟಿಯವರು ಸ್ಥಾಪಿಸಿದರು.

ಕುಶಲಕರ್ಮಿಗಳಿಗಾಗಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದರು. ಬರಗಾಲ ನಿವಾರಣೆಗಾಗಿ ಅಠಿಜಿ ಊZಞಜ್ಞಿಛಿ ಐoಠಿಜಿಠ್ಠಿಠಿಛಿ ಅನ್ನು ಪ್ರಾರಂಭಿಸಿದರು. ಬಿಜಾಪುರ ನಗರದ ಕುಡಿಯುವ ನೀರಿನ ಕೊರತೆಯನ್ನು ಹೋಗಲಾಡಿಸಲು ಭೂತನಾಳ ಕೆರೆಯನ್ನು ಅಭಿವೃದ್ಧಿಪಡಿಸಿ ಅಲ್ಲಿಂದ ನಗರಕ್ಕೆ ನೀರು ಬರುವಂತೆ ಮಾಡಿದರು. ಇದಕ್ಕಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ಸಹಾಯ, ಮಾರ್ಗ ದರ್ಶನಗಳೂ ಇವರಿಗೆ ದೊರೆತಿತ್ತು.

ಸ್ವಾತಂತ್ರ್ಯ ಆಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳವಳಿ ಇವುಗಳಲ್ಲಿಯೂ ಹಳಕಟ್ಟಿ ಯವರ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ ಇವರದಾಗಿತ್ತು. ಹಾಗೆಯೇ, ಸಾಹಿತ್ಯ ಕ್ಷೇತ್ರಕ್ಕೆ ಹಳಕಟ್ಟಿಯವರು ನೀಡಿದ ಗಣನೀಯ ಕೊಡುಗೆಯನ್ನು ಗಮನಿಸಿ ಇವರಿಗೆ 1926ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯು ಒಲಿದುಬಂದಿತು.

ಮುಂಬೈಯಲ್ಲಿ ಉನ್ನತ ವ್ಯಾಸಂಗ ಮಾಡುವಾಗ ಆಲೂರು ವೆಂಕಟರಾಯರ ಗೆಳೆತನವಾಗಿ ಕನ್ನಡ ಹೋರಾಟಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂಬ ವಾಂಛೆ ಹಳಕಟ್ಟಿಯವರಲ್ಲಿ ತೀವ್ರ ವಾಯಿತು. ಮುಂದೆ ಇದನ್ನು ಅವರು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವಲ್ಲಿ, ಕನ್ನಡ ಪತ್ರಿಕೆಗಳನ್ನು ಪ್ರಾರಂಭಿಸಿ ಮುನ್ನಡೆಸುವಲ್ಲಿ, ಅಂಕಣಗಳನ್ನು ಬರೆಯುವುದರಲ್ಲಿ ಸಾಕಾರಗೊಳಿಸಿ ಕೊಂಡರು. ಅವರ ಜನ್ಮದಿನವಾದ ಇಂದು ನಾವೆಲ್ಲರೂ ಅವರನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನೆನೆದು ನಮ್ಮ ಗೌರವವನ್ನು ಸಲ್ಲಿಸೋಣ.

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು)