ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suresh Balachandran Column: ಉತ್ತರ ಇಲ್ಲದಾದಾಗ ವಿಷಯಾಂತರದ ಕಸರತ್ತು

ತಾವು ಪ್ರಸ್ತುತವಾಗಿರಬೇಕೆಂಬ ಕಾರಣಕ್ಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ, ತಲೆಬುಡವಿರದ, ಗೊಂದಲ ಉಂಟುಮಾಡುವ, ವೃಥಾ ವಿವಾದ ಸೃಷ್ಟಿಸುವ ಹೇಳಿಕೆ ನೀಡುವ, ಕೊನೆಗೆ ಅದನ್ನು ಸಮರ್ಥಿಸಿಕೊಳ್ಳಲು ಒಂದರ ಹಿಂದೆ ಮತ್ತೊಂದು ಸಂದರ್ಭೋಚಿತವಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ವಿರೋಧಿಗಳನ್ನು ಮತ್ತು ಜನರನ್ನು ಅನವಶ್ಯಕ ವಿಷಯಗಳಲ್ಲಿ ತೊಡಗಿಸುವುದು ರಾಜಕಾರಣದ ಒಂದು ತಂತ್ರವೇ ಸರಿ!

ಉತ್ತರ ಇಲ್ಲದಾದಾಗ ವಿಷಯಾಂತರದ ಕಸರತ್ತು

Profile Ashok Nayak Jul 15, 2025 9:34 AM

ಸಂಘದಕ್ಷ

ಸುರೇಶ್‌ ಬಾಲಚಂದ್ರನ್

ತಾವು ಪ್ರಸ್ತುತವಾಗಿರಬೇಕೆಂಬ ಕಾರಣಕ್ಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ, ತಲೆಬುಡವಿರದ, ಗೊಂದಲ ಉಂಟುಮಾಡುವ, ವೃಥಾ ವಿವಾದ ಸೃಷ್ಟಿಸುವ ಹೇಳಿಕೆ ನೀಡುವ, ಕೊನೆಗೆ ಅದನ್ನು ಸಮರ್ಥಿಸಿಕೊಳ್ಳಲು ಒಂದರ ಹಿಂದೆ ಮತ್ತೊಂದು ಸಂದರ್ಭೋಚಿತವಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ವಿರೋಧಿಗಳನ್ನು ಮತ್ತು ಜನರನ್ನು ಅನವಶ್ಯಕ ವಿಷಯಗಳಲ್ಲಿ ತೊಡಗಿಸುವುದು ರಾಜಕಾರಣದ ಒಂದು ತಂತ್ರವೇ ಸರಿ!

ವಿಶೇಷವಾಗಿ, ತಮ್ಮಲ್ಲಿರುವ ಹುಳುಕನ್ನು ಮುಚ್ಚಿಕೊಳ್ಳಲು ಸಾಧ್ಯವಾಗದಾಗ ಅಥವಾ ವಿರೋಧಿ ಗಳು, ಸಂಘಟನೆಗಳು, ಜನರು ಎತ್ತಬಹುದಾದ ಔಚಿತ್ಯಪೂರ್ಣ ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದಾಗ ವಿಷಯಾಂತರ ಮಾಡಲು ಹೀಗೆಲ್ಲಾ ಮಾಡುವುದುಂಟು. ಭಾರತ ದಂಥ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಮಾನ್ಯ ಸಂಗತಿಯಾದರೂ, ಸತ್ಯಾಸತ್ಯತೆಗಳನ್ನು ಸಕಾಲದಲ್ಲಿ ತಿಳಿಯಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ.

1925ರ ವಿಜಯದಶಮಿಯಂದು ಸಂಸ್ಥಾಪನೆಗೊಂಡು ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಈವರೆಗೆ ಬೆಳೆದಿರುವ ರೀತಿಯೇ ಅದ್ಭುತ ಮತ್ತು ಅಮೋಘ. ನಿರಂತರ ಶಾಖಾ ವ್ಯವಸ್ಥೆಯ ಮೂಲಕ ‘ದೇಶಸೇವೆಯೇ ಪರಮೋಚ್ಚ ಕರ್ತವ್ಯ’ ಎಂದು ತಿಳಿದಿರುವ ಸ್ವಯಂಸೇವಕರನ್ನು ತಯಾರು ಮಾಡುತ್ತಿರುವ ಪ್ರಪಂಚದ ಏಕಮೇವಾದ್ವಿತೀಯ ಸಂಘಟನೆಯಿದು.

ಇದನ್ನೂ ಓದಿ: Raghav Sharma Nidle Column: ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

ಹೆಸರೇ ಹೇಳುವ ಹಾಗೆ, ಲಕ್ಷಾಂತರ ಸ್ವಯಂಸೇವಕರು ಸ್ವಯಂಪ್ರೇರಿತರಾಗಿ, ಯಾವುದೇ ಪ್ರತಿ-ಲಾಪೇಕ್ಷೆಯಿಲ್ಲದೆ ದೇಶಕಟ್ಟಲು ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರಚುರಪಡಿಸಲು ತಮ್ಮ ಅತ್ಯಮೂಲ್ಯ ಸಮಯವನ್ನು ಮೀಸಲಿಟ್ಟು, ಭೇದಭಾವವಿಲ್ಲದೆ ಸಮಾಜದ ಎಲ್ಲಾ ಸ್ತರದ ಜನರ ಒಳಿತಿಗಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿವಿಧ ಸೇವಾ ಪ್ರಕಲ್ಪಗಳಲ್ಲಿ ತೊಡಗಿಸಿ ಕೊಂಡಿರುವ ಸಂಘಟನೆಯಿದು.

ಇಲ್ಲಿ ಸ್ವಯಂಸೇವಕರಾಗಲು ಯಾವುದೇ ನೋಂದಣಿಯ ಅಗತ್ಯವಿಲ್ಲ, ಶುಲ್ಕ ಕೊಡಬೇಕಾಗಿಲ್ಲ, ಜಾತಿ-ಮತ-ಪಂಥಗಳನ್ನು ಹೇಳಬೇಕಾಗಿಲ್ಲ. ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡರಷ್ಟೇ ಸಾಕು. ಈ ಪರಿಪಾಠದಿಂದಾಗಿ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುವುದಲ್ಲದೆ, ರಾಷ್ಟ್ರೀಯ ಚಿಂತನೆ ತನ್ನಷ್ಟಕ್ಕೆ ತಾನೇ ಬೆಳೆದು ಬಲಗೊಂಡುಬಿಡುತ್ತದೆ. ಇಲ್ಲಿ ಸಂಘಟನೆಯ ಮುಖಸ್ತುತಿ ಮಾಡಲಾಗುತ್ತಿದೆ ಎಂದೇನೂ ತಿಳಿಯುವುದು ಬೇಡ; ಇದು ಒರೆ ಹಚ್ಚಿ ಪರೀಕ್ಷಿಸಿ ಕಾರ್ಯರೂಪಕ್ಕೆ ಇಳಿಸಲಾದ ಒಂದು ಸಿದ್ಧಸೂತ್ರ.

ಕಳೆದ ಒಂದು ಶತಮಾನದಿಂದ ಅನೂಚಾನವಾಗಿ ತಾನು ಮಾಡಿಕೊಂಡು ಬಂದಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ‘ಡಾಣಾ-ಡಂಗುರ’ ಬಾರಿಸುತ್ತ ಹೇಳದೆ, ಸಮಾಜದ ಒಳಿತಿಗಾಗಿ ನಿರಂತರವಾಗಿ ಪ್ರವಹಿಸುತ್ತಾ ಬಂದಿರುವಂಥದ್ದು ಆರೆಸ್ಸೆಸ್. ಇದರ ಒಂದು ಗೀತೆಯಲ್ಲಿ ಹೇಳುವ ಹಾಗೆ, ‘ಸೇವೆಯೆಂಬ ಯಜ್ಞದಲ್ಲಿ ಒಂದು ಸಮಿತ್ತಿನ ಹಾಗೆ ಉರಿಯಬೇಕು, ಖ್ಯಾತಿ-ಪ್ರಚಾರ-ಪ್ರಶಂಸೆಗೆ ವಿಮುಖರಾಗಿ ಸಹಜವಾಗಿ ಕಾರ್ಯಕ್ಷೇತ್ರಕ್ಕೆ ಬರಬೇಕು, ತೊಡಗಿಸಿಕೊಂಡಿರುವ ವ್ಯಕ್ತಿ ನೈಜ ರಾಷ್ಟ್ರ ಸೇವಕನಾಗಬೇಕು’ ಎನ್ನುವ ಅಭಿಲಾಷೆ ವ್ಯಕ್ತವಾಗುತ್ತದೆ.

62 R

ಇದಕ್ಕೆ ಪುಷ್ಟಿಕೊಡುವ ರೀತಿಯಲ್ಲಿ ಯಾವುದೇ ಒಂದು ಕಾರ್ಯಕ್ರಮವನ್ನು ಶಿಸ್ತಿನಿಂದ, ಅಚ್ಚು ಕಟ್ಟಾಗಿ, ಪೂರ್ವ ತಯಾರಿಯೊಂದಿಗೆ ನಡೆಸುವ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಯನ್ನು ಕೊಡದೆ ಸಮಯಪಾಲನೆ ಮಾಡುತ್ತ ನಿರ್ದಿಷ್ಟವಾಗಿ ನಿಭಾಯಿಸುವ ಈ ಸಂಘಟನೆಯ ವೈಖರಿ ನಿಜಕ್ಕೂ ಅನುಕರಣೀಯ.

ಹಿಂದೆ ಆರೆಸ್ಸೆಸ್ ಶಾಖೆಗಳಿಗೆ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರು ಭೇಟಿ ಕೊಟ್ಟಿರುವ ನಿದರ್ಶನಗಳಿವೆ; ಅಲ್ಲಿನ ಸ್ವಯಂಸೇವಕರಲ್ಲಿ ಕಾಣಬಂದ ಸಾಮರಸ್ಯವನ್ನು ಗಮನಿಸಿ, ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ವರ್ಗ ಶಿಕ್ಷಾರ್ಥಿಗಳಲ್ಲಿ ಕೇಳಿ ಈ ಮಹನೀಯರು ಉದ್ಗಾರ ತೆಗೆದದ್ದು ಇತಿಹಾಸದಲ್ಲಿ ದಾಖಲಾಗಿದೆ.

ಸಮಾಜ ಸೇವಾ ಕೈಂಕರ್ಯದಲ್ಲಿ ಆರೆಸ್ಸೆಸ್ ತೊಡಗಿಸಿಕೊಳ್ಳುವ ರೀತಿಯೇ ವಿಶಿಷ್ಟವಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಸಂದಿಗ್ಧ ಪರಿಸ್ಥಿತಿಗಳು ಎದುರಾಗಿರಲಿ, ಪ್ರಕೃತಿ ವಿಕೋಪ ಅಪ್ಪಳಿಸಿರಲಿ, ಪರಿಹಾರಕಾರ್ಯಕ್ಕೆ ವಿಪತ್ತು ನಿರ್ವಹಣಾ ಪಡೆ ಮತ್ತು ಸರಕಾರ ಮುಂದಾಗುವವರೆಗೆ ಆರೆಸ್ಸೆಸ್ ಕಾಯುತ್ತ ಕೋರದೆ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಪ್ರಪ್ರಥಮವಾಗಿ ಹಾಜರಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ಮೃತರಾದವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರೇ ಹಿಂಜರಿದಾಗ ಆರೆಸ್ಸೆಸ್‌ನವರು ಮುಂದೆ ನಿಂತು ಆ ಕಾರ್ಯವನ್ನು ನಡೆಸಿಕೊಟ್ಟಿದ್ದು ಸ್ಮರಣೀಯ. ಭೀಕರ ಮಳೆ, ನೆರೆಹಾವಳಿಯ ಸಮಯದಲ್ಲಿ ಟೊಂಕ ಕಟ್ಟಿ ಪರಿಹಾರ ಕಾರ್ಯಗಳಿಗೆ ನಿಲ್ಲುವುದು ಇದೇ ಆರೆಸ್ಸೆಸ್. ಕಳೆದ ತಿಂಗಳು ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿಮಾನ ಪತನವಾದಾಗಲೂ ಪರಿಹಾರಕಾರ್ಯಕ್ಕೆ ಆರೆಸ್ಸೆಸ್ ಮುಂದಾಗಿದ್ದು ಸತ್ಯಸಂಗತಿ.

ಆದರೆ, ‘ಒಳ್ಳೆಯ ಕೆಲಸಕ್ಕೆ ಅಡ್ಡಗಾಲು ಅರವತ್ತು’ ಎನ್ನುವಂತೆ ಆರೆಸ್ಸೆಸ್ ಅನ್ನು ಈವರೆಗೆ ಮೂರು ಬಾರಿ ನಿಷೇಧಿಸಲಾಗಿದೆ. 1948ರಲ್ಲಿ ಮಹಾತ್ಮ ಗಾಂಽಯವರ ಹತ್ಯೆಯಾದಾಗ ಹೀಗೆ ನಿಷೇಧ ಹೇರಲಾಗಿತ್ತು ಮತ್ತು ಅಂದಿನ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಲ್ಕರ್‌ರನ್ನು ಬಂಧನದಲ್ಲಿ ಇರಿಸಲಾಗಿತ್ತು. ಆದರೆ ಯಾವುದೇ ಪುರಾವೆಗಳಿಲ್ಲದ ಕಾರಣಕ್ಕೆ 1949ರಲ್ಲಿ ನಿಷೇಧ ವನ್ನು ಹಿಂಪಡೆಯಲಾಯಿತು.

ಇನ್ನು 1975ರ ತುರ್ತುಪರಿಸ್ಥಿತಿ ಅವಽಯಲ್ಲೂ ಆರೆಸ್ಸೆಸ್ ಅನ್ನು ನಿಷೇಧಿಸಲಾಗಿತ್ತು ಹಾಗೂ 1977ರಲ್ಲಿ ಈ ನಿಷೇಧ ವನ್ನು ಹಿಂಪಡೆಯಲಾಗಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ವಾದಾಗಲೂ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತಾದರೂ, ಕೆಲವೇ ವಾರಗಳಲ್ಲಿ ನಿಷೇಧವನ್ನು ಹಿಂಪಡೆಯಲಾಯಿತು. ನಿಷೇಧ ಹೇರುವುದು ಆ ಕಾಲಘಟ್ಟದಲ್ಲಿ ಸುಲಭವಾಗಿತ್ತು, ಆದರೆ ಕಾನೂನುಬಾಹಿರವಾದ ಕೃತ್ಯಗಳಲ್ಲಿ ಆರೆಸ್ಸೆಸ್ ಭಾಗಿಯಾಗದೆ ಇರುವ ಕಾರಣದಿಂದ ನಿಷೇಧವನ್ನು ಹಿಂಪಡೆಯಲಾಯಿತು.

ಹಾಗೇನಾದರೂ ಗಟ್ಟಿಯಾದ ಸಾಕ್ಷ್ಯಾಧಾರಗಳು ಇದ್ದಿದ್ದರೆ ನಿಷೇಧವನ್ನು ಹಿಂಪಡೆಯುವ ಪ್ರಮೇಯವೇ ಬಂದೊದಗುತ್ತಿರಲಿಲ್ಲ. ಇನ್ನು, ‘ನಿಷೇಧ ಹಿಂಪಡೆಯಿರಿ’ ಎಂದು ಅಂದಿನ ಕೇಂದ್ರ ಸರಕಾರವನ್ನು ಆರೆಸ್ಸೆಸ್ ಗೋಗರೆದು, ಕೈಕಾಲು ಹಿಡಿದು, ಇನ್ನು ಮುಂದೆ ಹೀಗಾಗದಂತೆ ಆಶ್ವಾಸನೆ ಗಳನ್ನು ಕೊಟ್ಟಿತ್ತು ಎನ್ನುವುದು ನಿರಾಧಾರ ಮತ್ತು ಸತ್ಯಕ್ಕೆ ದೂರವಾದ ಸಂಗತಿ.

ಇದಕ್ಕೆ ಸಾಕಷ್ಟು ಪುರಾವೆಗಳು ಸಾರ್ವಜನಿಕ ವಲಯದಲ್ಲಿ ಲಭ್ಯವಿವೆ. ಭಾರತದಲ್ಲಿ ಯಾವುದೇ ಸಂಘ-ಸಂಸ್ಥೆ ಮತ್ತು ಸಂಘಟನೆಗಳನ್ನು ‘ಕಾನೂನುಬಾಹಿರ ಚಟುವಟಿಕೆ (ಪ್ರತಿಬಂಧಕ)ಅಧಿ ನಿಯಮ, 1967’ರ (UAPA) ಅಡಿಯಲ್ಲಿನ ನಿಯಮಾವಳಿಗಳ ಅನುಸಾರ ನಿಷೇಧಿಸಲು ಕೇಂದ್ರ ಸರಕಾರಕ್ಕಷ್ಟೇ ಅಧಿಕಾರವಿದೆ.

ಈ ಅಧಿನಿಯಮದ ಪ್ರಕಾರ, ಯಾವುದೇ ಸಂಘಟನೆ ದೇಶದ ಅಖಂಡತೆ-ಭದ್ರತೆಗೆ ಕಂಟಕವಾದಾಗ, ಭಯೋತ್ಪಾದಕ-ಹಿಂಸಾತ್ಮಕ-ನಿಷಿದ್ಧ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ, ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳಲ್ಲಿ ಭಾಗಿಯಾದಾಗ, ಅಂಥ ಸಂಘಟನೆಗಳನ್ನು ಸೂಕ್ತ ಸಾಕ್ಷ್ಯಾಧಾರ ಗಳೊಂದಿಗೆ, ಗುಪ್ತಚರ ವರದಿಯ ಆಧಾರದ ಮೇಲೆ, ರಾಜ್ಯ ಮತ್ತು ಕೇಂದ್ರ ಸರಕಾರಗಳ ವರದಿಗಳ ಅನುಸಾರ ಹಾಗೂ ಶಿಫಾರಸಿನ ಮೇಲೆ ‘ಅನಧಿಕೃತ ಸಂಘಟನೆ’ ಎಂಬುದಾಗಿ ಕೇಂದ್ರ ಸರಕಾರದ ಗೆಜೆಟ್ ಅಧಿಸೂಚನೆಯ ಮೂಲಕ ನಿಷೇಧಿಸಬಹುದು.

ಹೀಗಿದ್ದಾಗ್ಯೂ, ಅಂಥ ಸಂಘಟನೆಯು ಸದರಿ ನಿಷೇಧವನ್ನು ತೆರವುಗೊಳಿಸುವಂತೆ ಸ್ಥಾನಿಕ ನ್ಯಾಯಮಂಡಳಿಗೆ 30 ದಿನಗಳ ಒಳಗೆ ಮೊರೆ ಹೋಗಬಹುದು. ಅದು ತಿರಸ್ಕೃತವಾದರೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಜಬೂತಾದ ಸಾಕ್ಷ್ಯಾಧಾರಗಳಿಲ್ಲದೆ ಯಾವುದೇ ಸಂಘಟನೆ ಯನ್ನು ಕಾನೂನುಬಾಹಿರವಾಗಿ/ಮನಬಂದಂತೆ ನಿಷೇಧಗೊಳಿಸುವುದು ಅಸಾಧ್ಯ ಎಂಬುದು.

ಹೀಗಿರುವಾಗ, ರಾಷ್ಟ್ರಸೇವೆಗೆ ಕಟಿಬದ್ಧವಾಗಿ ನಿಂತಿರುವ ಈ ಸಂಘಟನೆ ಮತ್ತು ಅದರ ಸ್ವಯ ಸಂಸೇವಕ ಪಡೆಯನ್ನು ನಿಷೇಧಿಸುವುದು ಸರಿಯೇ? ಎಂಬುದು ಮೂಲಭೂತ ಪ್ರಶ್ನೆ. ಯುಗಧರ್ಮ ಸಾರುವ ಸುಭಾಷಿತವೊಂದು ‘ಸಂಘಶಕ್ತಿ ಕಲೌ ಯುಗೇ’ ಎಂದು ಹೇಳುತ್ತದೆ. ಅಂದರೆ, ಕಲಿಯುಗ ದಲ್ಲಿ ಸಂಘಟನೆಯೇ ಶಕ್ತಿ, ಒಗ್ಗಟ್ಟು ಶಕ್ತಿಯ ಮೂಲ. ರಾಷ್ಟ್ರ ಮತ್ತು ಸಮಾಜದ ಅಭಿವೃದ್ಧಿಗೆ ಏಕತೆಯೇ ಶಕ್ತಿ. ಅರ್ಥಹೀನ ಬಾಲಿಶ ಮಾತುಗಳಿಗೆ, ಗಾಳಿಮಾತುಗಳಿಗೆ ಸೊಪ್ಪುಹಾಕಿ ವಿಚಲಿತ ವಾಗುವ ಜಾಯಮಾನವಂತೂ ಆರೆಸ್ಸೆಸ್‌ಗೆ ಇಲ್ಲ.

ಟೀಕೆ ಮಾಡುವುದು ಸಂವಿಧಾನ ಕೊಟ್ಟಿರುವ ಹಕ್ಕು. ಟೀಕೆಯ ಸತ್ಯ-ಮಿಥ್ಯತೆಯನ್ನು ತುಲನಾತ್ಮಕ ವಾಗಿ ಪರಿಶೀಲಿಸಿದ ಬಳಿಕ ಟೀಕಾಕಾರರ ಮತ್ತು ವಿಮರ್ಶಕರ ಕೊಂಕುಮಾತುಗಳನ್ನು ಲೆಕ್ಕಿಸದೆ, ‘ಮಾತಿಗಿಂತ ಕೃತಿ ಲೇಸು’ ಎಂಬ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ಕೊಡುತ್ತ, ಸಮಾಜೋ ದ್ಧಾರ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಮೂಲಕ ಹೊಸದಿಗಂತದೆಡೆಗೆ ಹಾರುವ ಶಕ್ತಿಯನ್ನು ಆರೆಸ್ಸೆಸ್ ಬೆಳೆಸಿಕೊಂಡಿದೆ. ಇದು ಇನ್ನಷ್ಟು ಎತ್ತರಕ್ಕೆ ಏರಲಿ, ಬಲಿಷ್ಠವಾಗಿ ಬೆಳೆದು ದೇಶಕಲ್ಯಾಣ ಮತ್ತು ವಿಶ್ವಕಲ್ಯಾಣಕ್ಕೆ ನಾಂದಿಹಾಡಲಿ ಎಂಬುದು ನಮ್ಮ ನಿಮ್ಮೆಲ್ಲರ ಶುಭಹಾರೈಕೆಯಾಗಿರಲಿ.

(ಲೇಖಕರು ಹವ್ಯಾಸಿ ಬರಹಗಾರರು)