Test cricket: ಟೆಸ್ಟ್ ಕ್ರಿಕೆಟ್‌ನಲ್ಲಿ ಕಡಿಮೆ ರನ್‌ಗೆ ಆಲೌಟ್ ಆದ ತಂಡಗಳ ಪಟ್ಟಿ ಹೀಗಿದೆ
Lowest Team Totals In Tests: 2020ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 26ರನ್‌ಗೆ 8 ವಿಕೆಟ್ ಉದುರಿಸಿಕೊಂಡಿತ್ತು. ಈ ವೇಳೆ ಭಾರತ ಕೂಡ ನ್ಯೂಜಿಲ್ಯಾಂಡ್ ಜತೆ ಜಂಟಿ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಳ್ಳಲಿದೆ ಎಂಬ ಸಾಧ್ಯತೆ ಕಂಡುಬಂದಿತ್ತು. ಆದರೆ ಕೊನೆಗೆ 36 ರನ್ ತನಕ ಸಾಗಿದ ಭಾರತ ಈ ಕಂಟಕದಿಂದ ಪಾರಾಗಿತ್ತು.


ಕಿಂಗ್ಸ್‌ಟನ್: 27 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್(Test cricket) ಇತಿಹಾಸದಲ್ಲಿ ಅತ್ಯಧಿಕ ಕಡಿಮೆ ಮೊತ್ತಕ್ಕೆ ಆಲೌಟ್ ಆದ ವಿಶ್ವದ 2ನೇ ತಂಡ ಎಂಬ ಅನಗತ್ಯ ದಾಖಲೆ(Lowest Team Totals In Tests) ವೆಸ್ಟ್ ಇಂಡೀಸ್(AUS vs WI) ತಂಡದ ಪಾಲಾಗಿದೆ. ತವರಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ ವಿಂಡೀಸ್ 27 ರನ್‌ಗೆ ಸರ್ವಪತನ ಕಂಡಿತು. ಟೆಸ್ಟ್ ಇತಿಹಾಸದಲ್ಲಿ ಕನಿಷ್ಠ 26 ರನ್ನಿಗೆ ಆಲೌಟಾದ ಕಳಂಕವನ್ನು ನ್ಯೂಜಿಲ್ಯಾಂಡ್ ತಂಡ ಕಳೆದ 70 ವರ್ಷಗಳಿಂದಲೂ ಮೆತ್ತಿಕೊಂಡಿದೆ.
ಹೌದು, 1955 ರಲ್ಲಿ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಮಾರ್ಚ್ 25 ರಿಂದ 28 ರವರೆಗೆ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಡಲಿಳಿದಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಸರಿಯಾಗಿ 200 ರನ್ನಿಗೆ ಆಲೌಟ್ ಆಯಿತು. ಜವಾಬಿತ್ತ ಇಂಗ್ಲೆಂಡ್ 246 ರನ್ ಗಳಿಸಿತು. ಆಂಗ್ಲರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಕಿವೀಸ್ ಬ್ಯಾಟರ್‌ಗಳ ವಿಕೆಟ್‌ಗಳು ತರಗೆಲೆಯಂತೆ ಹಾರಿಹೋದವು. 27 ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್ 26 ರನ್ನಿಗೆ ಆಲೌಟ್ ಆಗಿತ್ತು!. ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 20 ರನ್ ಗೆಲುವು ಸಾಧಿಸಿ ಮೆರೆದಾಡಿತು. ಬಾಬ್ ಆ್ಯಪಲ್‌ಯಾರ್ಡ್ 4 ಹಾಗೂ ಬ್ರಿಯಾನ್ ಸ್ಟೆಥಂ 3 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
11 ರನ್ ಮಾಡಿದ ಆರಂಭಕಾರ ಬರ್ಟ್ ಸಟ್‌ಕ್ಲಿಫ್ ಅವರದೇ ಹೆಚ್ಚಿನ ಗಳಿಕೆ. ಉಳಿದವರ್ಯಾರೂ ಎರಡಂಕೆಯ ಗಡಿ ದಾಟಿರಲಿಲ್ಲ. ಇಂದಿಗೂ ಇದು ನ್ಯೂಜಿಲ್ಯಾಂಡ್ ಕ್ರಿಕೆಟಿನ ಕರಾಳ ದಿನವಾಗಿ ದಾಖಲಾಗಿದೆ.
2020ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 26ರನ್‌ಗೆ 8 ವಿಕೆಟ್ ಉದುರಿಸಿಕೊಂಡಿತ್ತು. ಈ ವೇಳೆ ಭಾರತ ಕೂಡ ನ್ಯೂಜಿಲ್ಯಾಂಡ್ ಜತೆ ಜಂಟಿ ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಳ್ಳಲಿದೆ ಎಂಬ ಸಾಧ್ಯತೆ ಕಂಡುಬಂದಿತ್ತು. ಆದರೆ ಕೊನೆಗೆ 36 ರನ್ ತನಕ ಸಾಗಿದ ಭಾರತ ಈ ಕಂಟಕದಿಂದ ಪಾರಾಗಿತ್ತು.
ಟೆಸ್ಟ್‌ನಲ್ಲಿ ಅತಿ ಕಡಿಮೆ ಆಲೌಟ್ ಆದ ತಂಡಗಳು
ನ್ಯೂಜಿಲ್ಯಾಂಡ್-26 ರನ್ ( ಇಂಗ್ಲೆಂಡ್ ವಿರುದ್ಧ)
ವೆಸ್ಟ್ ಇಂಡೀಸ್-27 ರನ್ (ಆಸ್ಟ್ರೇಲಿಯಾ ವಿರುದ್ಧ)
ದಕ್ಷಿಣ ಆಫ್ರಿಕಾ- 30 ರನ್ (ಇಂಗ್ಲೆಂಡ್ ವಿರುದ್ಧ)
ದಕ್ಷಿಣ ಆಫ್ರಿಕಾ- 35 ರನ್(ಇಂಗ್ಲೆಂಡ್ ವಿರುದ್ಧ)
ದಕ್ಷಿಣ ಆಫ್ರಿಕಾ- 36 ರನ್(ಆಸ್ಟ್ರೇಲಿಯಾ ವಿರುದ್ಧ)
ಆಸ್ಟ್ರೇಲಿಯಾ- 36 ರನ್(ಇಂಗ್ಲೆಂಡ್ ವಿರುದ್ಧ)
ಭಾರತ- 36 ರನ್(ಆಸ್ಟ್ರೇಲಿಯಾ ವಿರುದ್ಧ)
ಇದನ್ನೂ ಓದಿ WI vs AUS: ಸ್ಟಾರ್ಕ್ ಘಾತಕ ದಾಳಿ; 27 ರನ್‌ಗೆ ಸರ್ವಪತನ ಕಂಡ ವಿಂಡೀಸ್