ಭಾರತ ತಂಡದ ಲಾರ್ಡ್ಸ್ ಟೆಸ್ಟ್ ಸೋಲಿಗೆ ಕಾರಣರಾದ ಆಟಗಾರನನ್ನು ಆರಿಸಿದ ರವಿ ಶಾಸ್ತ್ರಿ!
Ravi Shastri on India's Lords test loss: ಭಾರತ ತಂಡ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಭಾರತ ತಂಡ ಮೂರನೇ ಹಾಗೂ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 22 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ತಂಡ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆ ಪಡೆಯಬೇಕಿತ್ತೆಂದ ರವಿ ಶಾಸ್ತ್ರಿ.

ನವದೆಹಲಿ: ಭಾರತ ತಂಡಕ್ಕೆ ಸ್ವಲ್ಪ ಅದೃಷ್ಟವಿದ್ದಿದ್ದರೆ ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ(IND vs ENG) 3-0 ಅಂತರದಲ್ಲಿ ಮುನ್ನಡೆ ಪಡೆಯುತ್ತಿತ್ತು ಎಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. ಭಾರತ ತಂಡ (India) ಎಜ್‌ಬಾಸ್ಟನ್ ರೀತಿಯಲ್ಲಿಯೇ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿಯೂ ಗೆಲ್ಲಬೇಕಾಗಿತ್ತು. ಆದರೆ, ಕೆಲವೊಂದು ನಿರ್ಣಾಯಕ ಸನ್ನಿವೇಶಗಳು ಟೀಮ್ ಇಂಡಿಯಾ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಭಾರತ ತಂಡ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿಯೂ ಗೆಲ್ಲಬೇಕಾಗಿತ್ತು, ಆದರೆ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ತಂಡ ಸಾಧಾರಣ ಗುರಿಯನ್ನು ಹಿಂಬಾಲಿಸಿತ್ತು, ಆದರೆ ಕೆಲವು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಸೋಲು ಅನುಭವಿಸಬೇಕಾಗಿತ್ತು. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಹಿನ್ನಡೆ ಅನುಭವಿಸಿದೆ.
ಐಸಿಸಿ ರಿವ್ಯೂವ್‌ನಲ್ಲಿ ಸಂಜನಾ ಗಣೇಶನ್ ಅವರ ಸಂದರ್ಶನದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಭಾರತ ತಂಡ ಕೆಲವು ನಿರ್ಣಾಯಕ ಸನ್ನಿವೇಶಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
"ಭಾರತ ತಂಡಕ್ಕೆ ಸ್ವಲ್ಪ ಅದೃಷ್ಟವಿದಿದ್ದರೆ, ಈ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆ ಪಡೆಯುತ್ತಿತ್ತು. ಲಾರ್ಡ್ಸ್ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಔಟ್ ಆಗಿದ್ದು, ನನ್ನ ಪ್ರಕಾರ ಟರ್ನಿಂಗ್ ಪಾಯಿಂಟ್ ಆಗಿದೆ. ಬೆನ್ ಸ್ಟೋಕ್ಸ್ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದರು ಹಾಗೂ ಅವರು ಭೋಜನ ವಿರಾಮಕ್ಕೂ ಮುನ್ನ ರನ್‌ಔಟ್ ಮಾಡಿದ್ದರು. ಪಂತ್ ಔಟ್ ಆಗುವುದಕ್ಕೂ ಮುನ್ನ ಭಾರತ ತಂಡ ಉತ್ತಮ ಸ್ಥಿತಿಯಲ್ಲಿತ್ತು," ಎಂದು ತಿಳಿಸಿದ್ದಾರೆ.
IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಪ್ರಥಮ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ 74 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದರು ಹಾಗೂ ಶತಕದ ಸನಿಹದಲ್ಲಿದ್ದರು. ಆದರೆ, ಭೋಜನ ವಿರಾಮಕ್ಕೂ ಮುನ್ನ ಕೆಎಲ್ ರಾಹುಲ್ ಶತಕ ಗಳಿಸಬೇಕೆಂಬ ಉದ್ದೇಶದಿಂದ ಪಂತ್ ಸಿಂಗಲ್ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಬೆನ್ ಸ್ಟೋಕ್ಸ್ ಅದ್ಭುತವಾಗಿ ರನ್‌ಔಟ್ ಮಾಡಿದ್ದರು. ಆ ಮೂಲಕ ಪಂದ್ಯಕ್ಕೆ ಟರ್ನಿಂಗ್ ಪಾಯಿಂಗ್ ತಂದುಕೊಟ್ಟಿದ್ದರು. ಭೋಜನ ವಿರಾಮದ ಬಳಿಕ ಕೆಎಲ್ ರಾಹುಲ್ ಶತಕ ಸಿಡಿಸಿದ ಬಳಿಕ ಔಟ್ ಆಗಿದ್ದರು.
ಇನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ 193 ರನ್‌ಗಳನ್ನು ಗುರಿ ಹಿಂಬಾಲಿಸಿತ್ತು ಹಾಗೂ 40 ರನ್‌ಗೆ ಒಂದು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿತ್ತು. ಆದರೆ, ಕರುಣ್ ನಾಯರ್ ವಿಕೆಟ್ ಒಪ್ಪಿಸಿದರು ಹಾಗೂ ಇಂಗ್ಲೆಂಡ್ ಬೌಲರ್‌ಗಳನ್ನು ಕಮ್‌ಬ್ಯಾಕ್ ಮಾಡಿದ್ದರು. ಆಕಾಶ ದೀಪ್ ಕೂಡ ನಾಲ್ಕನೇ ದಿನದ ಅಂತ್ಯದಲ್ಲಿ ವಿಕೆಟ್ ಒಪ್ಪಿಸಿದ್ದರು.
IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ, ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ಭಾರತ!
"ಏಕಾಗ್ರತೆಯಲ್ಲಿ ಕುಸಿತ ಕಂಡಿತ್ತು. ಈ ಕಾರಣದಿಂದ ಸಂಗತಿಗಳು ಬದಲಾಗಿದ್ದವು. ಒಮ್ಮೆ ಚೆಂಡು ಹಳೆಯದಾದ ಬಳಿಕ ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಹೇಗೆ ಡಿಫೆನ್ಸ್ ಆಡಿದ್ದರು ಎಂಬುದನ್ನು ನೀವು ನೋಡಬಹುದಾಗಿದೆ. ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಾಲ್ಕನೇ ಕೊನೆಯ ಸೆಷನ್‌ನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಆಡಿದ್ದರೆ, ಐದನೇ ದಿನ ಭಾರತ ತಂಡ ಗೆಲುವು ಪಡೆಯುತ್ತಿತ್ತು," ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಸಹಾಯದಿಂದ ಐದನೇ ದಿನ ಕಠಿಣ ಹೋರಾಟವನ್ನು ನಡೆಸಿತ್ತು. ಅದರಲ್ಲಿಯೂ ವಿಶೇಷವಾಗಿ ರವೀಂದ್ರ ಜಡೇಜಾ ಏಕಾಂಗಿ ಹೋರಾಟ ನಡೆಸಿ ಅಜೇಯ 61 ರನ್ ಗಳಿಸಿದ್ದರು ಹಾಗೂ ತಂಡದ ಮೊತ್ತವನ್ನು 170ಕ್ಕೆ ತಂದಿದ್ದರು. ಮೊಹಮ್ಮದ್ ಸಿರಾಜ್ ಅವರು ಅನಿರೀಕ್ಷಿತವಾಗಿ ಬೌಲ್ಡ್ ಆಗಿಲ್ಲವಾಗಿದ್ದರೆ ಟೀಮ್ ಇಂಡಿಯಾ ಲಾರ್ಡ್ಸ್ ಟೆಸ್ಟ್‌ನಲ್ಲಿ ಗೆಲುವು ಪಡೆಯುತ್ತಿತ್ತು.