Su From So Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ರಾಜ್ ಬಿ ಶೆಟ್ಟಿ ನಿರ್ಮಾಣದ ʼಸು ಫ್ರಮ್ ಸೋʼ ಚಿತ್ರ ಜು.25ಕ್ಕೆ ರಿಲೀಸ್
Su From So Movie: ರಾಜ್ ಬಿ ಶೆಟ್ಟಿ ಅವರು ನಿರ್ಮಾಣ ಮಾಡಿರುವ ಹಾಗೂ ಜೆಪಿ ತುಮಿನಾಡು ನಿರ್ದೇಶನದ, ಕಾಮಿಡಿ ಹಾರಾರ್ ಕಥಾಹಂದರ ಹೊಂದಿರುವ ʼಸು ಫ್ರಮ್ ಸೋʼ ಚಿತ್ರ ಜುಲೈ 25 ರಂದು ತೆರೆಗೆ ಬರಲಿದೆ.


ಬೆಂಗಳೂರು: ಖ್ಯಾತ ನಟ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ಹಾಗೂ ರಾಜ್ ಬಿ ಶೆಟ್ಟಿ ಅವರು ನಿರ್ಮಾಣ ಮಾಡಿರುವ ಹಾಗೂ ಜೆಪಿ ತುಮಿನಾಡು ನಿರ್ದೇಶನದ ʼಸು ಫ್ರಮ್ ಸೋʼ ಚಿತ್ರದ (Su From So Movie) ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ʼಡ್ಯಾಂಕ್ಸ್ ಅಂಥಮ್; ಹಾಡಿಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕಾಮಿಡಿ ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರ ಜುಲೈ 25 ರಂದು ತೆರೆಗೆ ಬರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಗೆಳೆಯ ಜೆಪಿ ತುಮಿನಾಡ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರವಿದು. ಆರು ವರ್ಷಗಳ ಹಿಂದೆಯೇ ಅವರು ಸಿದ್ದ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ನಾನು ಬಹಳ ಇಷ್ಟಪಡುವ ಕಾಮಿಡಿ ಜಾನರ್‌ನ ಚಿತ್ರವಿದು. ʼಸು ಫ್ರಮ್ ಸೋʼ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂಬ ಪಾತ್ರ ಹಾಗೂ ಸ್ಥಳದ ಹೆಸರು. ಬಹುತೇಕ ಹೊಸತಂಡವೇ ಸೇರಿ ಮಾಡಿರುವ ಈ ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50 ದಿನಗಳ ಚಿತ್ರೀಕರಣ ನಡೆದಿದೆ.
ನಿರ್ದೇಶನ ಮಾಡಿರುವ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ನಿರ್ದೇಶನ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಹಿನ್ನಲೆ ಸಂಗೀತ ಸಂದೀಪ್ ತುಳಸಿದಾಸ್ ಅವರದು. ಶಶಿಧರ್ ಶೆಟ್ಟಿ ಬರೋಡಾ ಹಾಗೂ ರವಿ ರೈ ಕಳಸ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ʼಡ್ಯಾಂಕ್ಸ್ ಅಂಥಮ್ʼ ಹಾಡು ಹಾಗೂ ಟ್ರೇಲರ್ ಈಗಾಗಲೇ ಜನರ ಮನ ತಲುಪಿದೆ. ಚಿತ್ರ ಜುಲೈ 25ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ, ಪ್ರೋತ್ಸಾಹ ನೀಡಿ ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.
ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ. ಈಗ ಕೆಲವು ವರ್ಷಗಳ ನಂತರ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಇನ್ನೂ ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು. ಚಿತ್ರತಂಡದ ಸಹಕಾರದಿಂದ ಇದೇ ಜುಲೈ 25 ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುತ್ತಿದೆ. ನೋಡಿ. ಹಾರೈಸಿ ಎಂದರು ನಿರ್ದೇಶಕ ಜೆಪಿ ತುಮಿನಾಡು.
ಈ ಸುದ್ದಿಯನ್ನೂ ಓದಿ | Monsoon Nail Art 2025: ಈ ಸೀಸನ್‌ನಲ್ಲಿ ಟ್ರೆಂಡಿಯಾದ ಮಾನ್ಸೂನ್ ನೇಲ್ ಆರ್ಟ್‌ಗಳಿವು!
ನಿರ್ಮಾಪಕ ರವಿ ರೈ ಕಳಸ ಮಾತನಾಡಿ, ನಮ್ಮ ಚಿತ್ರಕ್ಕೆ ಎಲ್ಲರ ಬೆಂಬಲವಿರಲಿ ಎಂದರು. ಚಿತ್ರದಲ್ಲಿ ಆರು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಸುಮೇಧ್ ತಿಳಿಸಿದರು. ಕಲಾವಿದರಾದ ದೀಪಕ್ ರೈ ಪಣಜೆ, ಶನೀಲ್ ಗೌತಮ್, ಸಂಧ್ಯಾ ಅರ್ಕೆರೆ, ಮೈಮ್ ರಾಮದಾಸ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಪ್ರೊಡಕ್ಷನ್ ಡಿಸೈನರ್ ಸುಷ್ಮ ಹಾಗೂ ಸಂಕಲನಕಾರ ನವೀನ್ ಶೆಟ್ಟಿ, ಎಕ್ಸಕ್ಯೂಟಿವ್ ಪ್ರೊಡ್ಯೂಸರ್ ಬಾಲು ಕುಮಟಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.