ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಟಿಸಿಎಸ್‌ಗೆ 12,760 ಕೋಟಿ ರೂ. ಲಾಭ; ಪ್ರತಿ ಷೇರಿಗೆ 11 ರೂ. ಡಿವಿಡೆಂಡ್‌ ಘೋಷಣೆ: ಐಟಿ ಷೇರುಗಳ ಒತ್ತಡ, ಸೆನ್ಸೆಕ್ಸ್‌ ಇಳಿಕೆ

TCS: ದೇಶದ ಅತಿ ದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಅಥವಾ ಟಿಸಿಎಸ್‌ ತನ್ನ ಏಪ್ರಿಲ್-ಜೂನ್‌ ಅವಧಿಯ ತ್ರೈಮಾಸಿಕ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಟಿಸಿಎಸ್‌ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 12,760 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಮಾರುಕಟ್ಟೆ ಪಂಡಿತರ ಅಂದಾಜನ್ನೂ ಮೀರಿ ಲಾಭ ಗಳಿಸಿರುವುದು ವಿಶೇಷ.

ಟಿಸಿಎಸ್‌ಗೆ 12,760 ಕೋಟಿ ರೂ. ಲಾಭ; ಪ್ರತಿ ಷೇರಿಗೆ 11 ರೂ. ಡಿವಿಡೆಂಡ್‌

Profile Siddalinga Swamy Jul 10, 2025 9:06 PM

-ಕೇಶವ ಪ್ರಸಾದ್‌ ಬಿ.

ಮುಂಬೈ: ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಅಥವಾ ಟಿಸಿಎಸ್‌ ತನ್ನ ಏಪ್ರಿಲ್-ಜೂನ್‌ ಅವಧಿಯ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಟಿಸಿಎಸ್‌ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 12,760 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಮಾರುಕಟ್ಟೆ ಪಂಡಿತರ ಅಂದಾಜನ್ನೂ ಮೀರಿ ಲಾಭ ಗಳಿಸಿರುವುದು ವಿಶೇಷ (Stock Market). ಮಾರುಕಟ್ಟೆಯಲ್ಲಿ ಟಿಸಿಎಸ್‌ಗೆ 12,205 ಕೋಟಿ ರೂ. ನಿವ್ವಳ ಲಾಭವನ್ನು ನಿರೀಕ್ಷಿಸಲಾಗಿತ್ತು. ಟಿಸಿಎಸ್‌ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 11 ರೂ. ಡಿವಿಡೆಂಡ್‌ ಘೋಷಿಸಿದೆ. ಟಿಸಿಎಸ್‌ ಆದಾಯದಲ್ಲಿ ಶೇ. 3.8 ಹೆಚ್ಚಳವಾಗಿದೆ. 63,437 ಕೋಟಿ ರೂ. ಆದಾಯ ಲಭಿಸಿದೆ.



ಇಂದು ಟಿಸಿಎಸ್‌ ಷೇರಿನ ದರ 3,382 ರೂ. ಮಟ್ಟದಲ್ಲಿ ಇತ್ತು. ಟಿಸಿಎಸ್‌ ಲಾಭವು ನಿರೀಕ್ಷೆಗೂ ಮೀರಿದ್ದರೂ, ಆದಾಯ ಮಾತ್ರ ಮಾರುಕಟ್ಟೆಯ ಅಂದಾಜಿನಷ್ಟಿರಲಿಲ್ಲ. ಮಾರುಕಟ್ಟೆಯಲ್ಲಿ 64,538 ಕೋಟಿ ರೂ. ಆದಾಯವನ್ನು ಅಂದಾಜಿಸಲಾಗಿತ್ತು. ಸ್ಟಾಕ್‌ ಮಾರ್ಕೆಟ್‌ ವಹಿವಾಟು ಮುಗಿದ ಬಳಿಕ ಟಿಸಿಎಸ್‌ ರಿಸಲ್ಟ್‌ ಪ್ರಕಟವಾಯಿತು. ಟಿಸಿಎಸ್‌ನಲ್ಲಿ 6 ಲಕ್ಷದ 13 ಸಾವಿರ ಉದ್ಯೋಗಿಗಳು ದುಡಿಯುತ್ತಿದ್ದಾರೆ. ವಲಸೆಯ ದರ 13.8% ಇದೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿಯ ಮಂದಗತಿ ಇವತ್ತು ಕೂಡ ಮುಂದುವರಿಯಿತು. ಐಟಿ ಮತ್ತು ಫಾರ್ಮಾ ಸೆಕ್ಟರ್‌ ಷೇರುಗಳು ಒತ್ತಡದಲ್ಲಿ ಇತ್ತು. ಭಾರತ- ಅಮೆರಿಕ ನಡುವಣ ಟ್ರೇಡ್‌ ಡೀಲ್‌ ಕುರಿತ ಸಸ್ಪೆನ್ಸ್‌ ಇನ್ನೂ ಮುಂದುವರಿದಿರುವುದರಿಂದ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 346 ಅಂಕ ಕಳೆದುಕೊಂಡು 83,190ಕ್ಕೆ ಸ್ಥಿರವಾಯಿತು. ನಿಫ್ಟಿ 120 ಅಂಕ ಕಳೆದುಕೊಂಡು 25,355ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ಮುಖ್ಯವಾಗಿ ಐಟಿ ಸ್ಟಾಕ್ಸ್‌ಗಳ ನಷ್ಟ ಪ್ರಭಾವ ಬೀರಿತು.

ಸೆಕ್ಟರ್‌ಗಳ ಪೈಕಿ ನಿಫ್ಟಿ ಐಟಿ ಹೆಚ್ಚು ನಷ್ಟಕ್ಕೀಡಾಯಿತು. ವಿಪ್ರೊ ಮತ್ತು ಇನ್ಫೋಸಿಸ್‌ ಷೇರುಗಳ ದರ ಇಳಿಯಿತು. ಆಟೊಮೊಬೈಲ್‌, ಫಾರ್ಮಾ ಮತ್ತು ಎಫ್‌ಎಂಸಿಜಿ ವಲಯದ ಇಂಡೆಕ್ಸ್‌ಗಳೂ ಮಂದಗತಿಯಲ್ಲಿತ್ತು. ಹೀಗಿದ್ದರೂ, ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳು ಲಾಭದಲ್ಲಿತ್ತು. ಫೊರೆಕ್ಸ್‌ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ ಇವತ್ತು 85 ರೂ. 63 ಪೈಸೆಯಲ್ಲಿತ್ತು.

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮುಂದಿನ ವಾರ ತನ್ನ 25,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಅಥವಾ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ಗೆ ಮಾರಾಟ ಮಾಡಲಿದೆ. ಈ ಕ್ವಾಲಿಫೈಡ್‌ ಇನ್‌ಸ್ಟಿಟ್ಯೂಷನಲ್‌ ಪ್ಲೇಸ್‌ಮೆಂಟ್‌ ಸಂಪೂರ್ಣವಾಗಿ ಸಬ್‌ಸ್ಕ್ರೈಬ್‌ ಆದರೆ, ಭಾರತದ ಇತಿಹಾಸದಲ್ಲಿ ಅತಿ ದೊಡ್ಡ QIP ಆಗಲಿದೆ.

ಗುರುವಾರ ಲಾಭ ಗಳಿಸಿದ ಷೇರುಗಳು

ಲೆಮೆನ್‌ ಟ್ರೀ ಹೋಟೆಲ್ಸ್‌: 158/-

ಗ್ಲೆನ್ಮಾರ್ಕ್‌ ಫಾರ್ಮಾ ಸ್ಯುಟಿಕಲ್ಸ್‌: 1904/-

ಎನ್‌ವಿರೊ ಇನ್‌ಫ್ರಾ ಷೇರು ದರದಲ್ಲಿ ಶೇ. 6ಕ್ಕೆ ಏರಿಕೆ ಆಯಿತು. ಕಂಪನಿಯು ಮಹಾರಾಷ್ಟ್ರದಲ್ಲಿ 395 ಕೋಟಿ ರೂ.ಯ ಮಾಲಿನ್ಯ ನಿಯಂತ್ರಣ ಪ್ರಾಜೆಕ್ಟ್‌ ಗುತ್ತಿಗೆ ಪಡೆದಿರುವುದು ಇದಕ್ಕೆ ಕಾರಣ. ವಾರಿ ಎನರ್ಜೀಸ್‌ ಷೇರು ದರದಲ್ಲಿ 2% ಹೆಚ್ಚಳವಾಯಿತು. ಇಂಡಿಯನ್‌ ರಿನೆವಬಲ್‌ ಎನರ್ಜಿ ಡೆವಲಪ್‌ಮೆಂಟ್‌ ಏಜೆನ್ಸಿ ಅಥವಾ IREDA ಷೇರು ದರ 3% ಹೆಚ್ಚಳವಾಯಿತು.

ಗುರುವಾರ ನಷ್ಟಕ್ಕೀಡಾದ ಷೇರುಗಳು

ಭಾರತ್‌ ಡೈನಾಮಿಕ್ಸ್‌: 1,892/-

ಮೆಟ್ರೊಪಾಲಿಸ್‌ ಹೆಲ್ತ್‌ ಕೇರ್‌: 1,974/-

ಏರ್‌ ಟೆಲ್:‌ 1,964/-

ಏಷ್ಯನ್‌ ಪೇಂಟ್ಸ್: 2,447/-

ಬಿಇಎಲ್‌: 413/-

ಟೆಕ್‌ ಮಹೀಂದ್ರಾ: 1,602/-

ಇನ್ಫೋಸಿಸ್‌: 1,618/-

ಎಚ್‌ಸಿಎಲ್‌ ಟೆಕ್ನಾಲಜೀಸ್:‌ 1,660/-

ಕೆನರಾ ಬ್ಯಾಂಕ್‌ ಇವತ್ತು ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಸಾಲದ ಅಕೌಂಟ್‌ ಅನ್ನು ʼಭ್ರಷ್ಟʼ ಎಂಬ ಕೆಟಗರಿಯಿಂದ ತೆರವುಗೊಳಿಸಿರುವುದಾಗಿ ಬಾಂಬೆ ಹೈಕೋರ್ಟಿಗೆ ತಿಳಿಸಿದೆ. 2017ರಲ್ಲಿ ಬ್ಯಾಂಕ್‌, ರಿಲಯನ್ಸ್‌ ಕಮ್ಯುನಿಕೇಶನ್ಸ್‌ ಕಂಪನಿಗೆ ನೀಡಿದ್ದ 1,050 ಕೋಟಿ ರುಪಾಯಿ ಸಾಲವು ದುರ್ಬಳಕೆಯಾಗಿದೆ ಎಂದು ಆರೋಪಿಸಿ ಭ್ರಷ್ಟ ಸಾಲ ಖಾತೆ ಎಂದು ವರ್ಗೀಕರಿಸಿತ್ತು.

ಇಂದು ಡಿಫೆನ್ಸ್‌ ವಲಯದ ಸ್ಟಾಕ್ಸ್‌ 5% ತನಕ ಇಳಿಕೆ ದಾಖಲಿಸಿತು. ಅಂದರೆ ಹೂಡಿಕೆದಾರರು ಪ್ರಾಫಿಟ್‌ ಬುಕಿಂಗ್‌ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಡಿಫೆನ್ಸ್‌ ಸ್ಟಾಕ್ಸ್‌ 84% ತನಕ ಏರಿಕೆಯಾಗಿತ್ತು. ಇಂದು ಬಿಟ್‌ ಕಾಯಿನ್‌ ದರ ದಾಖಲೆಯ 1 ಲಕ್ಷದ 12 ಸಾವಿರ ಡಾಲರ್‌ಗೆ ಏರಿಕೆಯಾಗಿದೆ. ಕಚ್ಚಾ ತೈಲ ದರ ಇಳಿಕೆಯಾಗಿದೆ.

ಈ ಸುದ್ದಿಯನ್ನೂ ಓದಿ | Ashada Sale 2025: ಆಫರ್‌... ಆಫರ್‌! ಆಷಾಡಕ್ಕೆ ಭರ್ಜರಿ ಸೇಲ್‌