Murder Case: ಕೌಟುಂಬಿಕ ಕಲಹ; ಪತ್ನಿಯ ತಲೆಯನ್ನೇ ಕಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು ಪೊಲೀಸರ ಮುಂದೆ ಶರಣಾಗಿರುವ ಘಟನೆ ಶನಿವಾರ ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಡೆದಿದೆ. ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿಯ ಶಿರಚ್ಛೇದನ ಮಾಡಿದ್ದಾನೆ.


ದಿಸ್ಪುರ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ, ಆಕೆಯ ಕತ್ತರಿಸಿದ ತಲೆಯನ್ನು (Murder Case) ಹೊತ್ತುಕೊಂಡು ಪೊಲೀಸರ ಮುಂದೆ ಶರಣಾಗಿರುವ ಘಟನೆ ಶನಿವಾರ ಅಸ್ಸಾಂನ ಚಿರಾಂಗ್ ಜಿಲ್ಲೆಯಲ್ಲಿ ನಡೆದಿದೆ. ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿಯ ಶಿರಚ್ಛೇದನ ಮಾಡಿದ್ದಾನೆ. ಆತ ಆಕೆಯ ತಲೆ ಕತ್ತರಿಸಲು ಹರಿತವಾದ ಆಯುಧವನ್ನು ಬಳಸಿದ್ದು, ಕತ್ತರಿಸಿದ ತಲೆಯನ್ನು ತನ್ನ ಸೈಕಲ್‌ನಲ್ಲಿ ಹೊತ್ತುಕೊಂಡು ಬಲ್ಲಾಮ್‌ಗುರಿ ಹೊರಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಚಿರಾಂಗ್ ಜಿಲ್ಲೆಯ ಉತ್ತರ ಬಲ್ಲಂಗುರಿಯ ದಿನಗೂಲಿ ಕೆಲಸಗಾರನಾಗಿದ್ದು, ಅವರ ನಡುವಿನ ಕೌಟುಂಬಿಕ ಸಮಸ್ಯೆಗಳಿಂದಾಗಿ ಅವನು ತನ್ನ ಹೆಂಡತಿಯ ಶಿರಚ್ಛೇದ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ ಬಿತೀಶ್ ಹಜೋಂಗ್ ಕೆಲಸದಿಂದ ಮನೆಗೆ ಹಿಂದಿರುಗಿದ ನಂತರ ಈ ಘಟನೆ ನಡೆದಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತಿದಿನ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು ಎಂದು ಅವರು ಹೇಳಿದರು.
ನಾವು ಶವವನ್ನು ನಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ವಿಧಿವಿಜ್ಞಾನ ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಆರೋಪಿಯನ್ನು ನಾವು ಈಗಾಗಲೇ ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಕೊಲೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಚಿರಾಂಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿರೇಖಾ ಶರ್ಮಾ ಹೇಳಿದರು.
ಈ ಘಟನೆಯನೂ ಓದಿ: Muthappa Rai: ಮುತ್ತಪ್ಪ ರೈ ಮಗನ ಹತ್ಯೆಗೆ ಮಾಜಿ ಪತ್ನಿಯೇ ಸ್ಕೆಚ್ ಹಾಕಿದಳಾ? ಮೂವರ ಮೇಲೆ ದೂರು
ಪ್ರತ್ಯೇಕ ಘಟನೆಯಲ್ಲಿ ಕಳೆದ ತಿಂಗಳು ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ನಡುರಸ್ತೆಯಲ್ಲೇ ಪತ್ನಿಗೆ ಏಳೆಂಟು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. ತನ್ನ ಆರು ವರ್ಷದ ಮಗನನ್ನು ಶಾಲೆಗೆ ಬಿಡಲು ಬಂದಿದ್ದ 29 ವರ್ಷದ ಶ್ರೀಗಂಗಾಗೆ ಪತಿ 32 ವರ್ಷದ ಮೋಹನ್ ರಾಜ್ ರಸ್ತೆ ಮಧ್ಯೆ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ದಂಪತಿಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಶ್ರೀಗಂಗಾ ತನ್ನ ಸ್ನೇಹಿತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದಾಗಿ ಮೋಹನ್ ರಾಜ್ ಪದೇ ಪದೇ ಜಗಳವಾಡುತ್ತಿದ್ದನು. ಹೀಗಾಗಿ ಶ್ರೀಗಂಗೆ 8 ತಿಂಗಳಿನಿಂದ ಪತಿಯಿಂದ ದೂರವಾಗಿದ್ದಳು. ಪತ್ನಿಯನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದ ಮೋಹನ್ ರಾಜ್ ಚೂರಿ ಸಮೇತ ಬಂದಿದ್ದು ಪತ್ನಿಯ ಮೇಲೆ ಬರ್ಬರವಾಗಿ ದಾಳಿ ಮಾಡಿದ್ದಾನೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಗಂಗಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.