ಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲಲು ನೆರವಾದ ಇಬ್ಬರು ಆಟಗಾರರನ್ನು ಹೆಸರಿಸಿದ ತೆಂಬಾ ಬವೂಮ!
ಆಸ್ಟ್ರೇಲಿಯಾ ವಿರುದ್ಧ 2023-25ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸತತ ಬರೋಬ್ಬರಿ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಚಾಂಪಿಯನ್ ಆದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವೂಮ, ಏಡೆನ್ ಮಾರ್ಕ್ರಮ್ ಮತ್ತು ವೇಗಿ ಕಗಿಸೊ ರಬಾಡ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಏಡೆನ್ ಮಾರ್ಕ್ರಮ್, ಕಗಿಸೊ ರಬಾಡ ಅವರನ್ನು ಶ್ಲಾಘಿಸಿದ ತೆಂಬಾ ಬವೂಮ.

ಲಂಡನ್: ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ (South Africa) ತಂಡ 2023-25ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC 2023-25) ಮುಡಿಗೇರಿಸಿಕೊಂಡಿತು. ಆ ಮೂಲಕ ಬರೋಬ್ಬರಿ 27 ವರ್ಷಗಳ ಬಳಿಕ ಹರಿಣೆ ಪಡೆ ಐಸಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್ ಪಂದ್ಯದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮ(Temba Bavuma), ತಮ್ಮ ಸಹ ಆಟಗಾರರಾದ ಕಗಿಸೊ ರಬಾಡ ಮತ್ತು ಏಡೆನ್ ಮಾರ್ಕ್ರಮ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ನಾವು ಈ ಟೂರ್ನಿಯಲ್ಲಿ ಯಶಸ್ವಿಯಾಗಲು ಈ ಇಬ್ಬರ ಕೊಡುಗೆ ತುಂಬಾ ಮುಖ್ಯ ಎಂದು ಹೇಳಿದ್ದಾರೆ.
ಕಗಿಸೊ ರಬಾಡ ಮತ್ತು ಏಡೆನ್ ಮಾರ್ಕ್ರಮ್ ಅವರು 2014ರ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದಲ್ಲಿ ಜೊತೆಯಾಗಿ ಆಡಿದ್ದರು. ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಕಗಿಸೊ ರಬಾಡ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್ ಸಾಧನೆ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಿತ್ತಿದ್ದರು. ನಂತರ ಪ್ರಥಮ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ಏಡೆನ್ ಮಾರ್ಕ್ರಮ್, ದ್ವಿತೀಯ ಇನಿಂಗ್ಸ್‌ನಲ್ಲಿ 136 ರನ್‌ಗಳ ಮೂಲಕ ಶತಕವನ್ನು ಬಾರಿಸಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮಾದಕ ವಸ್ತು ಸೇವೆನೆಯಿಂದ ಒಂದು ತಿಂಗಳ ಕಾಲ ಅಮಾನತು ಶಿಕ್ಷೆಯನ್ನು ಅನುಭವಿಸಿದ್ದ ಕಗಿಸೊ ರಬಾಡ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿದ್ದರು. ಆಸ್ಟ್ರೇಲಿಯಾ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಬಾಡ ಅವರನ್ನು ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಶ್ಲಾಘಿಸಿದರು.
WTC Final: ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದು 96 ವರ್ಷಗಳ ಹಳೆಯ ದಾಖಲೆ ಮುರಿದ ತೆಂಬಾ ಬವೂಮ!
ರಬಾಡ, ಮಾರ್ಕ್ರಮ್‌ರನ್ನು ಶ್ಲಾಘಿಸಿದ ಬವೂಮ
"ಕಗಿಸೊ ರಬಾಡ ದೊಡ್ಡ ಆಟಗಾರ. ಕಳೆದ ಕೆಲ ದಿನಗಳ ಹಿಂದೆ ಅವರು ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದರು. ಮುಂದಿನ ಇನ್ನೂ ಹಲವು ವರ್ಷಗಳ ಕಾಲ ಅವರು ನಮಗೆ ಸಿಗಲಿದ್ದಾರೆ. ವಿವಾದದ ಬಳಿಕ ಅವರು ನಮ್ಮ ತಂಡಕ್ಕೆ ಬಂದಿದ್ದರು ಹಾಗೂ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಏಡೆನ್ ಮಾರ್ಕ್ರಮ್ ಅಸಾಧಾರಣ ಆಟಗಾರ. ಜನರು ಅವರ ಸ್ಥಾನವನ್ನು ಪ್ರಶ್ನೆ ಮಾಡಿದ್ದರು. ಆದರೆ, ಅವರು ತಮ್ಮ ಪಾತ್ರವೇನೆಂದು ಸಾಬೀತುಪಡಿಸಿದ್ದಾರೆ. ನಿಜವಾದ ಉತ್ಸಾಹದಲ್ಲಿ ಅವರು ಆಡಿದ್ದಾರೆ. ರಬಾಡ ಮತ್ತು ಮಾರ್ಕ್ರಮ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾವು ಫೈನಲ್‌ಗೆ ತಲುಪಿದೆವು, ನಾವು ಆಯ್ಕೆ ಮಾಡಿಕೊಂಡ ಹಾದಿಯಲ್ಲಿ ಕೆಲವು ಸಂದೇಹಗಳಿದ್ದವು ಮತ್ತು ಈ ಗೆಲುವು ಅದನ್ನು ಸಂಪೂರ್ಣವಾಗಿ ಹತ್ತಿಕ್ಕಿತು. ನಾವು ವಿಭಜನೆಗೊಂಡಿದ್ದರೂ, ಒಂದು ರಾಷ್ಟ್ರವಾಗಿ ಒಂದಾಗಲು ಇದು ಒಂದು ಅವಕಾಶ. ನಾವು ಒಂದಾಗಿ ಆಚರಿಸುತ್ತೇವೆ ಎಂದು ನೀವು ಖಚಿತವಾಗಿ ಹೇಳಬಹುದು," ಎಂದು ತೆಂಬಾ ಬವೂಮ ತಿಳಿಸಿದ್ದಾರೆ.
The moment all of South Africa had been waiting for 🇿🇦🏆#WTC25 #SAvAUS pic.twitter.com/tmgZGbkFFy
— ICC (@ICC) June 14, 2025
ಕಗಿಸೊ ರಬಾಡ ಹೇಳಿದ್ದೇನು?
ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ತಮಗೆ ಬೆಂಬಲ ನೀಡಿದ್ದ ಅಭಿಮಾನಿಗಳ ಬಗ್ಗೆ ಕಗಿಸೊ ರಬಾಡ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಒಂದು ರೀತಿ ತವರು ಅಂಗಣ ಎಂಬ ಭಾವನೆ ನನಗೆ ಉಂಟಾಗಿತ್ತು ಎಂದು ದಕ್ಷಿಣ ಆಫ್ರಿಕಾ ವೇಗಿ ಹೇಳಿದ್ದಾರೆ.
"ಒಂದು ತಂಡವಾಗಿ ಇದು ನಮಗೆ ವಿಶೇಷ ಕ್ಷಣ, ಮನೆಗೆ ಹಿಂದಿರುಗಿದ ವಿಶೇಷ ಕ್ಷಣ, ಅದನ್ನು ಅರ್ಥಮಾಡಿಕೊಳ್ಳಲು ಒಂದೆರಡು ದಿನಗಳು ಬೇಕಾಗುತ್ತದೆ. ಶಕ್ತಿ ಇತ್ತು, ನಾವು ಒಂದು ತಂಡವಾಗಿ ಇದನ್ನೇ ಬಯಸುತ್ತಿದ್ದೆವು, ನಾವು ಬಾಗಿಲು ತಟ್ಟುತ್ತಿದ್ದೆವು, ನಮ್ಮ ಹೃದಯದಲ್ಲಿ ನೋವಿತ್ತು, ನಿರಾಶೆಗಳನ್ನು ಎದುರಿಸಿದ್ದೇವೆ, ಹಿಂದಿನ ಆಟಗಾರರೊಂದಿಗೆ ಇದನ್ನು ನೋಡಿದ್ದೇವೆ ಮತ್ತು ಸೂರ್ಯ ನಮ್ಮ ಮೇಲೆ ಇದ್ದಾನೆ. ನಾವು ಇನ್ನು ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತೇವೆಂದು ಆಶಿಸುತ್ತೇವೆ," ಎಂದು ಕಗಿಸೊ ರಬಾಡ ತಿಳಿಸಿದ್ದಾರೆ.