ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Tips: ಧಗೆಯಲ್ಲಿ ತ್ವಚೆಯ ಕಿರಿಕಿರಿಯಿಂದ ಪಾರಾಗುವುದು ಹೇಗೆ?

ಬೇಸಿಗೆಯಲ್ಲಿನ ಚರ್ಮದ ಸಮಸ್ಯೆಗಳೂ ಹೆಚ್ಚುತ್ತಿವೆ. ಎಲ್ಲೋ ಕೆಲವರನ್ನಷ್ಟೇ ಕಾಡುತ್ತಿದ್ದ ತ್ವಚೆಯ ಬೇಗೆ, ಈಗ ಬಹಳಷ್ಟು ಜನರನ್ನು ಸತಾಯಿಸುತ್ತಿದೆ. ಅದರಲ್ಲೂ ಎಳೆಯರು, ವೃದ್ಧರು, ಸೂಕ್ಷ್ಮ ಚರ್ಮದವರು ಮತ್ತು ಹೊರಾಂಗಣದಲ್ಲಿ ಕೆಲಸ ಮಾಡು ವವರಿಗೆ ತರಹೇವಾರಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇದರಿಂದ ಪಾರಾಗುವುದು ಹೇಗೆ? ಇಲ್ಲಿದೆ ಟಿಪ್ಸ್‌.

ಬೇಸಿಗೆಯಲ್ಲಿ ತ್ವಚೆ ಕಾಪಾಡಿಕೊಳ್ಳುವುದು ಹೇಗೆ?

summer skin tips

Profile Pushpa Kumari Apr 29, 2025 6:00 AM

ನವದೆಹಲಿ: ಬಿಸಿಲಿನ ದಿನಗಳಲ್ಲಿ ಬೆವರು ಮತ್ತು ಬೆವರುಸಾಲೆ ಸಾಮಾನ್ಯ ವಿಷಯಗಳು. ಹಾಗೆಂದರೆ ಚರ್ಮದ ಮೇಲಿನ ಕೆಂಪು ಗುಳ್ಳೆಗಳು, ತುರಿಕೆ, ಉರಿ, ಕಿರಿಕಿರಿ ಮುಂತಾದವೆಲ್ಲ ಬೇಸಿಗೆಯ ಸಾಮಾನ್ಯ ವಿಷಯಗಳೆಂದು ಬಿಟ್ಟುಬಿಡುವ ಹಾಗೂ ಇಲ್ಲ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೇಸಿಗೆಯಲ್ಲಿನ ಚರ್ಮದ ಸಮಸ್ಯೆಗಳೂ ಹೆಚ್ಚುತ್ತಿವೆ. ಎಲ್ಲೋ ಕೆಲವರನ್ನಷ್ಟೇ ಕಾಡುತ್ತಿದ್ದ ತ್ವಚೆಯ ಬೇಗೆ, ಈಗ ಬಹಳಷ್ಟು ಜನರನ್ನು ಸತಾಯಿಸುತ್ತಿದೆ. ಅದರಲ್ಲೂ ಎಳೆಯರು, ವೃದ್ಧರು, ಸೂಕ್ಷ್ಮ ಚರ್ಮದವರು (Skin Tips) ಮತ್ತು ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ತರಹೇವಾರಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಇದರಿಂದ ಪಾರಾಗುವುದು ಹೇಗೆ?

ಶಿಶುಗಳ ಕಾಳಜಿ: ಎಳೆಗೂಸುಗಳಿಗೆ ಬೇಸಿಗೆಯಲ್ಲಿ ಮೈಯೆಲ್ಲಾ ಕೆಂಪಾಗಿ, ಗುಳ್ಳೆಗಳೆದ್ದು, ದದ್ದಾಗಿ ರಚ್ಚೆ ಹಿಡಿಯುವಂತಾ ಗುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ವಯಸ್ಕರಿಗಿಂತ ಶಿಶುಗಳ ಚರ್ಮ ಶೇ. ೩೦ರಷ್ಟು ತೆಳ್ಳಗಿರುವುದು. ಬದಲಿಗೆ, ಚರ್ಮ ದಪ್ಪಗಿದ್ದಷ್ಟೂ ವಾತಾವರಣದ ಏರುಪೇರುಗಳು ಪರಿಣಾಮ ಬೀರುವುದು ಕಡಿಮೆಯಾಗುತ್ತದೆ. ಎಳೆಗೂಸುಗಳ ತ್ವಚೆ ವಯಸ್ಕರಿಗಿಂತ ತೆಳ್ಳಗಿರುವುದಕ್ಕಾಗಿ ಬೇಸಿಗೆಯ ಬೇಗೆ ಬೇಗನೇ ಬಿಸಿಯೇರಿಸುತ್ತದೆ. ಹಾಗಾಗಿ ಚರ್ಮದ ಸಮಸ್ಯೆಗಳು ಹೆಚ್ಚು ಕಾಡುತ್ತವೆ.

ಬೆವರಿನ ಗ್ರಂಥಿಗಳು ಸಂಪೂರ್ಣ ಕ್ಷಮತೆಯನ್ನು ಗಳಿಸದೇ ಇರುವುದು ಕೂಡಾ ಪುಟಾಣಿಗಳ ಸಂಕಷ್ಟಕ್ಕೆ ಇನ್ನೊಂದು ಕಾರಣ. ಈ ಕಾರಣದಿಂದ ಧಗೆಯನ್ನು ತಡೆದು, ದೇಹದ ತಾಪಮಾನವನ್ನು ನಿರ್ವಹಿಸಲು ಚಿಣ್ಣರ ದೇಹಗಳು ಬಹಳ ಶ್ರಮಿಸ ಬೇಕಾಗುತ್ತದೆ. ಹಾಗಾಗಿ ಪುಟ್ಟ ಮಕ್ಕಳ ಕುತ್ತಿಗೆ, ಬೆನ್ನು, ಎದೆ, ತೊಡೆ ಅಥವಾ ಚರ್ಮದ ಮಡಿಕೆಗಳಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣದ ಗುಳ್ಳೆಗಳಂತೆ ಗೋಚರಿಸುತ್ತವೆ. ಈ ಭಾಗಗಳಲ್ಲೇ ಇನ್ನಷ್ಟು ಬೆವರು ನಿಂತು, ಉರಿಯೂತ ಕಾಣಿಸಿಕೊಂಡು, ಪುಟಾಣಿಗಳ ಸಂಕಷ್ಟಕ್ಕೆ ಕಾರಣವಾಗುತ್ತವೆ.

ಬೇಸಿಗೆಯೆಂಬ ಕಾರಣಕ್ಕೆ ಶಿಶುಗಳು ಮತ್ತು ಪುಟ್ಟ ಮಕ್ಕಳ ಚರ್ಮಕ್ಕೆ ಹೆಚ್ಚುವರಿ ತೈಲದಂಶವನ್ನು ನೀಡುವುದನ್ನು ನಿಲ್ಲಿ ಸುವಂತಿಲ್ಲ. ಅಂದರೆ, ಚಳಿಗಾಲದಲ್ಲಿ ಘನವಾದ ಮಾಯಿಶ್ಚರೈಸರ್‌ ಹಚ್ಚಿ, ಬೇಸಿಗೆಯಲ್ಲಿ ಏನೂ ಹಚ್ಚದೆ ನಿಲ್ಲಿಸುವುದು ಸಹ ಇಂಥ ತೊಂದರೆಗಳನ್ನು ಹೆಚ್ಚಿಸುತ್ತದೆ. ಬದಲಿಗೆ, ಲಘುವಾದ ಕ್ರೀಮ್‌ಗಳನ್ನು ಪುಟಾಣಿಗಳಿಗೆ ಹಚ್ಚಿ. ಆದಷ್ಟು ಪರಿಮಳ ರಹಿತವಾದ ಕ್ರೀಮ್‌ಗಳನ್ನು ಬಳಸಿ. ಇದರಿಂದ ಇನ್ನಷ್ಟು ಕಿರಿಕಿರಿ ಆಗುವುದನ್ನು ತಪ್ಪಿಸಬಹುದು. ಆಗೀಗ ತೈಲದ ಅಭ್ಯಂಗ ಮಾಡಿಸುವುದು ಸಹ ಚರ್ಮದ ತೊಂದರೆಗಳನ್ನು ನಿವಾರಿಸಲು ಹೆಚ್ಚಿನ ನೆರವು ನೀಡುತ್ತದೆ.

ಉಡುಪು: ಮಕ್ಕಳಿಗೆ ಕಡ್ಡಾಯವಾಗಿ ಆರಾಮದಾಯಕವಾದ ಹತ್ತಿಯ ವಸ್ತ್ರಗಳನ್ನೇ ತೊಡಿಸಿ. ನಿಮ್ಮ ಕಣ್ಣಿಗೆ ಚಂದ ಕಾಣ ಬೇಕೆಂದು ಚುಚ್ಚುವ, ತರೆಯುವ, ಭಾರದ, ಒರಟಾದ ವಸ್ತ್ರಗಳನ್ನು ಮಕ್ಕಳಿಗೆ ಎಂದಿಗೂ ಹಾಕಬೇಡಿ. ಶಿಶುಗಳಿಗೆ ದಿನವಿಡೀ ಡೈಪರ್‌ ಹಾಕುವುದರಿಂದ ನ್ಯಾಪಿ ರ್ಯಾಶ್‌ ಬಹಳ ಹೆಚ್ಚಾಗುತ್ತದೆ. ಹಾಗಾಗಿ ಮೃದುವಾದ ಬಟ್ಟೆಯ ನ್ಯಾಪಿಗಳನ್ನು ಹಾಕಿ, ದೇಹದ ಆ ಭಾಗಗಳಿಗೆ ಸಾಕಷ್ಟು ಗಾಳಿಯಾಡುವಂತೆ ಮಾಡುವುದು ಅಗತ್ಯ. ಸ್ನಾನಕ್ಕೆ ಉಗುರು ಬಿಸಿ ನೀರು ಸಾಕಾಗುತ್ತದೆ. ಧಗೆ ತೀರಾ ಹೆಚ್ಚಿದಾಗ ಒದ್ದೆ ಬಟ್ಟೆಯಿಂದ ಮೈಯನ್ನೆಲ್ಲ ಒರೆಸಿ, ಗಾಳಿಗೆ ಆರಲು ಬಿಡಿ. ಇದರಿಂದ ಚರ್ಮದ ಕಿರಿಕಿರಿಯನ್ನು ಬೇಗನೇ ಕಡಿಮೆ ಮಾಡಲು ಸಾಧ್ಯ.

ವಯಸ್ಕರ ಕಾಳಜಿ: ಬೇಸಿಗೆಯ ದಿನಗಳಲ್ಲಿ ಮಾತ್ರವೇ ಕಾಣುತ್ತಿದ್ದ ಬೆವರಸಾಲೆಯಂಥ ತೊಂದರೆಗಳು, ಇತ್ತೀಚಿನ ವರ್ಷಗಳಲ್ಲಿ ವರ್ಷದ ಬಹಳಷ್ಟು ದಿನಗಳಲ್ಲಿ ವಯಸ್ಕರನ್ನೂ ಸತಾಯಿಸುತ್ತಿವೆ. ಚಳಿಗಾಲ ಬೇಗನೇ ಮುಗಿದು, ಬೇಸಿಗೆ ಬೇಗನೆ ಪ್ರಾರಂಭವಾಗುತ್ತಿರುವುದು; ಮಳೆ ತನ್ನ ಸಮಯಕ್ಕೆ ಬಾರದೆ ಬೇಸಿಗೆ ಮುಂದುವರಿಯುವುದು- ಇಂಥ ಕಾರಣಗಳಿಂದ ಮೂರು-ನಾಲ್ಕು ತಿಂಗಳಲ್ಲಿ ಮುಗಿಯಬೇಕಿದ್ದ ಬೆವರಿನ ತುರಿಕೆಯಂಥ ತೊಂದರೆಗಳು ಆರು ತಿಂಗಳು ಕಾಡುತ್ತಿವೆ. ಇವುಗಳ ಜೊತೆಗೆ, ಚೆನ್ನಾಗಿ ಗಾಳಿಯಾಡದಂಥ ಸ್ಥಳಗಳಲ್ಲಿ ದೀರ್ಘ ಕಾಲ ಕಳೆಯುವುದು ಸಹ ಸಾಕಷ್ಟು ಕೆಟ್ಟ ಪರಿಣಾಮವನ್ನು ಚರ್ಮದ ಮೇಲೆ ಬೀರುತ್ತಿದೆ.

ಬೆವರಿನ ಗ್ರಂಥಿಗಳು ಕಟ್ಟಿಕೊಂಡಂತಾದಾಗ, ದೇಹದಿಂದ ಹೊರಗೆ ಹೋಗಬೇಕಾದ ಬೆವರು ಚರ್ಮದಡಿಯಲ್ಲೇ ಉಳಿದು ಸಮಸ್ಯೆಗೆ ಮೂಲವಾಗುತ್ತದೆ. ತುರಿಕೆ, ದದ್ದುಗಳು, ಉರಿ, ಸನ್ಣದಾಗಿ ಊದಿಕೊಂಡಂತೆ ಕಾಣುವುದು- ಇವೆಲ್ಲ ಜೀವಘಾತುಕ ಅಲ್ಲದಿದ್ದರೂ ಸಾಕಷ್ಟು ಕಿರಿಕಿರಿಯನ್ನಂತೂ ಉಂಟುಮಾಡಬಲ್ಲವು. ಕುತ್ತಿಗೆ, ಎದೆ, ಬೆನ್ನು, ಕಂಕುಳು, ತೊಡೆ ಮುಂತಾದ ಎಡೆಗಳಲ್ಲಿ ತಡೆಯಲಾರದ ನವೆಯು ಸಾಕಷ್ಟು ಮುಜುಗರ ತಂದು, ಹೈರಾಣಾಗಿಸುತ್ತದೆ.

ಇದನ್ನು ಓದಿ: Skin Care: ಪ್ರತಿದಿನ ಮುಖಕ್ಕೆ ಅಲೋವೆರಾ ಜೆಲ್ ಹಚ್ಚುವುದರಿಂದ ಈ ಅದ್ಭುತ ಲಾಭ ಸಿಗಲಿದೆ!

ಉಪಶಮನ: ಆಹಾರದಲ್ಲಿ ಕೆಲವು ಬದಲಾವಣೆಗಳು ಬೇಕಾಗಬಹುದು. ಉದಾ, ಚನ್ನಾಗಿ ನೀರು ಕುಡಿಯುವುದು, ಜಿಡ್ಡಿನ ಮತ್ತು ಮಸಾಲೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು, ಬದಲಿಗೆ ರಸಭರಿತ ಹಣ್ಣು-ತರಕಾರಿಗಳ ಸೇವನೆ ಹೆಚ್ಚಿಸುವುದು, ತಂಪಾದ ನೀರಿನ ಸ್ನಾನ ಇತ್ಯಾದಿಗಳು ಬೇಸಿಗೆಯಲ್ಲಿ ಜೀವಕ್ಕೆ ತಂಪೆರೆಯಬಲ್ಲವು; ತ್ವಚೆಯ ಆರೋಗ್ಯ ವನ್ನೂ ಕಾಪಾಡಬಲ್ಲವು. ಲಘುವಾದ ಕ್ರೀಮ್‌ಗಳನ್ನು ಬಳಸಿ, ತೀರಾ ಜಿಡ್ಡಿನ ಕ್ರೀಮ್‌ಗಳ ಅಗತ್ಯವಿಲ್ಲ. ಸಡಿಲವಾದ, ಗಾಳಿಯಾಡುವಂಥ ಹತ್ತಿಯ ವಸ್ತ್ರಗಳು ಸಹ ತ್ವಚೆಯ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.